ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಂಡಳಿ, ವರ್ತಕರು, ರೈತರ ಸಭೆ… ಸಮಸ್ಯೆ ಕುರಿತು ಚರ್ಚೆ!

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಚಿಲ್ಕುಂದ ಹರಾಜು ಮಾರುಕಟ್ಟೆಯಲ್ಲಿ ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಎಫ್‌ಸಿವಿ ತಂಬಾಕು ಹರಾಜಿಗೆ ಸಂಬಂಧಿಸಿದ ವಿಷಯಗಳ ಕುರಿತು ತಂಬಾಕು ಮಂಡಳಿ ವತಿಯಿಂದ ಕರ್ನಾಟಕ ತಂಬಾಕು ಬೆಳೆಗಾರರು ಮತ್ತು ತಂಬಾಕು ವರ್ತಕರೊಂದಿಗೆ ಬುಧವಾರ ಸಭೆ ನಡೆಯಿತು. ಸಭೆಯಲ್ಲಿ ಮೊದಲು ಹಲವು ರೈತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ಮಂಡಳಿ ಸಹಕಾರದಿಂದ ರೈತರು ಇದ್ದೇವೆ ಹೆಚ್ಚು ಗಮನ ಹರಿಸದಿದ್ದರೆ ರೈತ ಉಳಿಯಲು ಸಾಧ್ಯವಿಲ್ಲ ರೈತರ ಮೇಲೆ ಹಾಗೂ ಕಂಪನಿಗಳ ಮೇಲೆ ಹೊಣೆಗಾರಿಕೆ ಬಿಟ್ಟು ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವುದು ಸೂಕ್ತ ಎಂದರೆ, ಮೋದೂರು ಮಹೇಶ್ ಮಾತನಾಡಿ ರೈತರ ಹಣ ತಂಬಾಕು ಮಂಡಳಿಯಲ್ಲಿ ಎಷ್ಟು ಇದೆ ಮೊದಲು ಮಾಹಿತಿ ನೀಡಿ ಮಧ್ಯವರ್ತಿಗಳ ಅಧೀನದಲ್ಲಿ ಮಂಡಳಿ ಕೆಲಸ ಮಾಡುತ್ತಿದೆ ಇದರಿಂದ ಮೊದಲು ಮಂಡಳಿ ಹೊರಬರಬೇಕು ಎಂದರು.

ಪಿರಿಯಾಪಟ್ಟಣ ತಾಲೂಕಿನ ಹಿಟ್ನಳ್ಳಿ ಪರಮೇಶ್ ಮಾತನಾಡಿ ತಂಬಾಕು ಬೆಳೆಯುವ ರೈತರನ್ನು ಮುಗಿಸಲು ಹೋದರೆ ತಂಬಾಕು ಮಂಡಳಿ ಅಧಿಕಾರಿಗಳು ಮುಗಿಯುತ್ತೀರಿ ಜೊತೆಗೆ ಕರ್ನಾಟಕದ ತಂಬಾಕು ಹರಾಜು ಮಾರುಕಟ್ಟೆ ಮುಗಿಯುವವರೆಗೂ ಆಂಧ್ರದ ಮಾರುಕಟ್ಟೆಯನ್ನು ಪ್ರಾರಂಭಿಸಬಾರದು ಎಂದು ಒತ್ತಾಯಿಸಿದರು. ಹೊಸ ಕೊಪ್ಪಲು ಜಯಣ್ಣ ಮಾತನಾಡಿ ಭೂಮಿತಾಯಿ ರೈತರಿಗೆ ಮೋಸ ಮಾಡುವುದಿಲ್ಲ ನಮಗೆ ಮೋಸ ಮಾಡುತ್ತಿರುವುದು ಕಂಪನಿಗಳು ಮತ್ತು ಮಂಡಳಿ ಎಂದು ದೂರಿದರು.
ಹೀಗೆ ಹಲವಾರು ರೈತರ ಸಮಸ್ಯೆಯನ್ನು ಆಲಿಸಿದ ತಂಬಾಕು ಮಂಡಳಿಯ ಇಡಿ ವಿಶ್ವಶ್ರೀ ಮಾತನಾಡಿ ಬೆಲೆ ಇಳಿತವಾಗಿರುವ ಬಗ್ಗೆ ಈಗಾಗಲೇ ಮೈಸೂರಿನಲ್ಲಿ ಡಿಸಿ ಸಮ್ಮುಖದಲ್ಲಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ರಾಜ್ಯ ಮಂತ್ರಿಗಳಾದ ಕೆ. ವೆಂಕಟೇಶ್ ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸಂಪೂರ್ಣವಾಗಿ ಚರ್ಚೆಯಾಗಿದ್ದು ಕಳೆದ ವರ್ಷದಲ್ಲಿ ಪ್ರಾರಂಭವಾಗಿದ್ದ ಬೆಲೆಯಲ್ಲಿ ಸರಾಸರಿ ಬೆಲೆಯನ್ನು ಈ ವರ್ಷ ಕೊಟ್ಟೆ ಕೊಡುತ್ತೇವೆ ಕಡಿಮೆ ಬೆಲೆ ಮಾಡುವುದಿಲ್ಲ ಎಂಬ ಆಶ್ವಾಸನೆ ನೀಡಿದರು.

ಯಾವ್ಯಾವ ಕಂಪನಿಗಳು ಮಂಡಳಿ ಜೊತೆ ತಂಬಾಕು ಖರೀದಿಗೆ ಒಪ್ಪಂದ ಮಾಡಿಕೊಂಡಿವೆ ಅಂತಹ ಕಂಪನಿಗಳು ಕಡ್ಡಾಯ ಭಾಗವಹಿಸಬೇಕು ಇಲ್ಲವಾದರೆ ಕಾನೂನಾತ್ಮಕ ಕಠಿಣ ಕ್ರಮ ವಹಿಸಲಾಗುವುದು. ಎನ್ಓಜಿ ತಂಬಾಕನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಬೆಳೆ ನಿಗದಿ ಪ್ರತಿ ವರ್ಷ ನಡೆಯುತ್ತದೆ ಈ ವರ್ಷ ಜಾಸ್ತಿ ಬೆಳೆಯಲು ನಿಗದಿ ಮಾಡುವ ಕೆಲಸವಾಗುತ್ತಿದೆ ಬೀಜ ವಿತರಣೆಯನ್ನು ಯಾವ ರೀತಿ ನೀಡಬೇಕು ಹರಾಜು ಮಾರುಕಟ್ಟೆಯ ಕಾಪ್ ಕಮಿಟಿ ಮೂಲಕ ಅರ್ಜಿ ನೀಡಿದಾಗ ಬೀಜ ವಿತರಣೆ ಮಾಡುತ್ತೇವೆ
ರೈತರ ಕ್ಷೇಮಾಭಿವೃದ್ಧಿ ಖಾತೆಯಲ್ಲಿರುವ ತಂಬಾಕು ಮಂಡಳಿ ಈ ತಿಂಗಳೊಳಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗುವುದು. ಅಬಕಾರಿ ಸುಂಕದ ತೆರಿಗೆ ಹಾಕಿರುವುದು ಯಾವ ಯಾವುದಕ್ಕೆ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿ ಮಾಹಿತಿ ಇಲ್ಲದ ಕಾರಣ ಈ ರೀತಿ ಬೆಲೆ ವ್ಯತ್ಯಾಸವಾಗಲು ಕಾರಣವಾಗಿದೆ. ಆದ್ದರಿಂದ ಕೇಂದ್ರ ಮಂತ್ರಿಯವರನ್ನು ರಾಜ್ಯದ ರೈತರು ಜನಪ್ರತಿನಿಧಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ತಂಬಾಕು ರೈತರಿಗೆ ಹಲವಾರು ವಿಚಾರಗಳನ್ನು ತಿಳಿಸಿದರು.

ತಂಬಾಕು ಮಂಡಳಿಯ ನಿರ್ದೇಶಕ ಶ್ರೀನಿವಾಸ್ ಮಾತನಾಡಿ ಈ ವರ್ಷ 90 ಮಿಲಿಯನ್ ಖರೀದಿಗೆ ಆದೇಶವಾಗಿದ್ದು ಉಳಿದ ಹತ್ತು ಮಿಲಿಯನ್ ಈಗಾಗಲೇ ವರ್ತಕರ ಜೊತೆ ರೈತರಿಗೆ ಅನ್ಯಾಯವಾಗದಂತೆ ಚರ್ಚಿಸಿದ್ದೇವೆ, ನೊಂದಾಯಿತ ಕಂಪನಿಗಳು ಭಾಗವಹಿಸದಿರುವುದರಿಂದ ಕಂಪನಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ನಾವು ಯಾವುದೇ ಕಂಪನಿಗಳು ಟ್ರೇಡರ್ಸ್ ಜೊತೆ ಶಾಮೀಲಾಗುವುದಿಲ್ಲ. ನೋಂದಾಯಿತ ಕಂಪನಿಗಳು ಇದುವರೆಗೂ ಭಾಗವಹಿಸಿದಿರುವ ಕಂಪನಿಗಳು ಒಂದು ಕೆಜಿಯನ್ನು ಖರೀದಿ ಮಾಡಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹಲವು ಕಂಪನಿಗಳು ಇಂಡೆಂಟ್ ಕೊಟ್ಟು ನಮಗೆ ಇಷ್ಟೊಂದು ಬೇಕು ಎಂದು ಹೇಳಿ ಏಕೆ ಇದುವರೆಗೂ ಖರೀದಿಸಿಲ್ಲವೋ ಅಂಥವರ ವಿರುದ್ಧ ಕ್ರಮವಾಗುತ್ತದೆ ಎಂದರು.
ತಂಬಾಕು ಬೆಳೆಗೆ ಬೆಲೆ ನಿಗದಿ ಪಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಸ್ವಾಮಿನಾಥನ್ ವರದಿ ಪ್ರಕಾರ ಈಗಾಗಲೇ ಬೆಲೆ ಜಾಸ್ತಿ ಇದ್ದು ಅದು ಅನ್ವಯಿಸಲು ಸಾಧ್ಯವಾಗುವುದಿಲ್ಲ ರಾಗಿ ಜೋಳ ಇತರೆ ಬೆಳೆಗಳಿಗೂ ಅನ್ವಯವಾಗುವಂತೆ ಇದಕ್ಕೂ ಅನ್ವಯ ಇದೆ ರೈತರು ತಪ್ಪಾಗಿ ತಿಳಿದುಕೊಳ್ಳಬಾರದು ಎಂದರು.

ತಂಬಾಕು ಮಂಡಳಿಯ ಚೇರ್ಮನ್ ಯಶ್ವಂತ್ ಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ಶೇ .90ರಷ್ಟು ಮಾರುಕಟ್ಟೆ ಮುಗಿಯುವ ತನಕ ಆಂಧ್ರದಲ್ಲಿ ಯಾವುದೇ ಕಾರಣಕ್ಕೂ ಹರಾಜು ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದಿಲ್ಲ ಎಂದರು.
ಸಭೆಯಲ್ಲಿ ತಂಬಾಕು ಮಂಡಳಿಯ ಆಕ್ಷನ್ ಮ್ಯಾನೇಜರ್ ರಾಮಾನುಜಯ, ಆರ್ ಎಂ ಓ. ಗೋಪಾಲ್, ಪಿರಿಯಾಪಟ್ಟಣ ಆರ್ ಎಂ ಓ. ಮಾರಣ್ಣ, ಹಾಗೂ ಐದು ತಾಲೂಕಿನ ತಂಬಾಕು ಹರಾಜು ಮಾರುಕಟ್ಟೆಯ ವಿವಿಧ ಹರಾಜು ಮಾರುಕಟ್ಟೆಯ ಹರಾಜು ಅಧೀಕ್ಷಕರು ಹಾಗೂ ಅಧಿಕಾರಿಗಳು ಹಾಗೂ 500ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.







