ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಆದಿವಾಸಿ ಗಿರಿಜನರು ನೆಲೆ ಕಟ್ಟಿಕೊಂಡಿರುವ ಅರಣ್ಯದಂಚಿನ ಹೆಮ್ಮಿಗೆ ಹಾಡಿಗೆ 40 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜೀವನ ನಡೆಸುತ್ತಿದ್ದು, ಭರವಸೆಯಂತೆ ಈಗ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರ ಜೀವನ ಚಟುವಟಿಕೆಗೆ ಬೆಳಕು ನೀಡಲಾಗಿದೆ’ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ತಾಲ್ಲೂಕಿನ ಹನಗೋಡು ಹೋಬಳಿ ಹೆಮ್ಮಿಗೆ ಹಾಡಿಯಲ್ಲಿ ಗಿರಿಜನರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ದೀಪ ಬೆಳಗಿಸಿ ಗುರುವಾರ ಮಾತನಾಡಿ, ವಿಧಾನಸಭಾ ಚುನಾವಣೆ ಸಮಯದಲ್ಲಿ ಹಾಡಿಯ ಮತದಾರರನ್ನು ಭೇಟಿ ಮಾಡುವ ಸಮಯದಲ್ಲಿ ಮತದಾರರು ಹಾಡಿಗೆ ವಿದ್ಯುತ್ ಕಲ್ಪಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದೆ. 3 ವರ್ಷಗಳ ಹಿಂದೆ ಸೋಲಾರ್ ದೀಪ ಇದ್ದರೂ ಸಮರ್ಪಕವಾ-ಗಿರಲಿಲ್ಲ ನೀಡಿದ್ದ ಭರವಸೆ ಈಗ ಈಡೇರಿಸಿದಂತಾ-ಗಿದೆ ಎಂದರು.

ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಇದ್ದರೂ ಸರ್ಕಾರ ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡದೆ ಅಭಿವೃದ್ಧಿಗೆ ಅಡ್ಡವಾಗಿದೆ. ಈಗಾಗಲೇ ಹಲವು ಕ್ಷೇತ್ರದ ಶಾಸಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇಷ್ಟಲ್ಲದೆ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ರಾಜ್ಯದ ತೆರಿಗೆ ಹಣ ಪಕ್ಷದ ಭರವಸೆ ಕಾರ್ಯಕ್ರಮಕ್ಕೆ ಬಳಸಿ ಶ್ರೀಸಾಮಾನ್ಯರಿಗೆ ಮೂಲಭೂತ ಸವಲತ್ತು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಆದಿವಾಸಿ ಗಿರಿಜನ ಮುಖಂಡ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರ್ಷ ಮಾತನಾಡಿ, ‘ಗ್ರಾಮಕ್ಕೆ ವಿದ್ಯುತ್ ಇಲ್ಲದೆ ಅರಣ್ಯದಲ್ಲೇ ವಾಸಿಸುತ್ತಿದ್ದೇವೆ ಎಂದು ಭಾಸವಾಗುತ್ತಿತ್ತು. ಸೋಲಾರ್ ದೀಪ ಇದ್ದರೂ ಸಮರ್ಪಕವಾಗಿ ವಿದ್ಯುತ್ ಇಲ್ಲದೆ ಮನೆಗಳು ಕತ್ತಲಲ್ಲಿ ಕಾಲಕಳೆಯುವಂತಾ-ಗಿತ್ತು. ಹಾಡಿಗೆ ವಿದ್ಯುತ್ ದೀಪ ಕಲ್ಪಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಇಲಾಖೆ ಅಧಿಕಾರಿ ಜಗದೀಶ್, ಗ್ರಾಮದ ಹಿರಿಯ ಚಿಕ್ಕರಾಮಯ್ಯ, ಸುಭಾಷ್, ಜೆಡಿಎಸ್ ತಾ.ಘಟಕದ ಅಧ್ಯಕ್ಷ ಸುರೇಂದ್ರ ಹಾಜರಿದ್ದರು.








