LatestNews

ಮೌಲಾನಾ ಶಾಲೆ ನಿರ್ಮಾಣ  ವಿರುದ್ಧ  ಪ್ರತಿಭಟನೆ…ಪರ್ಯಾಯ ಜಾಗ ಗುರುತಿಸಲು ಆಗ್ರಹ

ಕುಶಾಲನಗರ (ರಘುಹೆಬ್ಬಾಲೆ): ಇಲ್ಲಿನ ಪುರಸಭಾ ವ್ಯಾಪ್ತಿಯ ಬೈಚನಹಳ್ಳಿ  ಆರ್.ಸಿ. ಬಡಾವಣೆಯಲ್ಲಿ  ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಮೌಲನಾ ಆಜಾದ್ ಶಾಲಾ ಕಟ್ಟಡ ಕಾಮಗಾರಿಗೆ ಬಡಾವಣೆಗಳ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಬಡಾವಣೆ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕಣಿವೆ ನಾಗೇಂದ್ರ ನೇತೃತ್ವದಲ್ಲಿ ಸೇರಿದ ಬಡಾವಣೆಯ ನಿವಾಸಿಗಳು ಜನವಸತಿ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸಲು ಸಾಧ್ಯವಿಲ್ಲದಂತ ಜಾಗದಲ್ಲಿ ಶಾಲೆ ನಿರ್ಮಾಣಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿದರು.

ಈ ಹಿಂದೆ ಬಡಾವಣೆಯ ನಿವಾಸಿಗಳು ಶ್ರಮದಾನ ಮಾಡುವ ಮೂಲಕ ಹಾಗೂ ಮನೆ ಮನೆಗಳಲ್ಲಿ ಹಣ ಸಂಗ್ರಹಿಸಿ ಸಮತಟ್ಟು ಮಾಡಿ ಸ್ವಚ್ಛವಾಗಿಟ್ಟುಕೊಂಡಿರುವ ಉದ್ಯಾನವನ ಜಾಗದ 45 ಸೆಂಟು ಜಾಗದಲ್ಲಿ ಶಾಲೆ ತೆರೆಯ ಹೊರಟಿರುವುದು ಅವೈಜ್ಞಾನಿಕ ವಾಗಿದೆ. ಸರ್ಕಾರದ ವತಿಯಿಂದ ನಿರ್ಮಾಣವಾಗುವ  ಹೊಸ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಆಟದ ಮೈದಾನ, ವಾಹನಗಳ ಪಾರ್ಕಿಂಗ್, ವಿಶಾಲವಾದ ರಸ್ತೆ ಹೀಗೆ ಮೂಲ ಸೌಕರ್ಯಗಳು ಇರಬೇಕು.ಆದರೆ  ಕೊಡಗು ಅಲ್ಪಸಂಖ್ಯಾತ ಇಲಾಖೆ ಕಿರಿದಾದ ಜಾಗದಲ್ಲಿ ಶಾಲೆ ತೆರೆಯಲು ಯೋಜಿಸಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡಾವಣೆಯ ನಿವಾಸಿಗಳು ಒಂದೆಡೆ ಸೇರಿ  ಸಭೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿ ಸಂಸದರು, ಶಾಸಕರು ಹಾಗೂ ತಾಲ್ಲೂಕು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ್ದು,   ದೇಶದ ಗಡಿಗಳಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅನೇಕ ಮಂದಿಯ  ಮಾಜಿ ಸೈನಿಕರು ಇಲ್ಲಿ ಮನೆಗಳನ್ನು ನಿರ್ಮಿಸಿ ಶಾಂತಿ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಜೊತೆಗೆ ಬಡಾವಣೆಯಲ್ಲಿ ವಯೋ ವೃದ್ದರು ಹಾಗೂ ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರೆಲ್ಲದ ನೆಮ್ಮದಿಗೆ ಭಂಗ ವಾಗದ ರೀತಿಯಲ್ಲಿ ಉದ್ದೇಶಿತ  ಶಾಲೆಯ ಕಟ್ಟಡ  ಕಾಮಗಾರಿಯನ್ನು ಕೂಡಲೇ ಬೇರೆ ಜಾಗದಲ್ಲಿ ಆರಂಭಿಸಲಿ ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದರು.

ಒಂದು ವೇಳೆ ಇಲಾಖೆ ಅಧಿಕಾರಿಗಳು ಹಠಮಾರಿ ಧೋರಣೆ ಅನುಸರಿಸಿದಲ್ಲಿ ಒಗ್ಗಟ್ಟಿನಿಂದ  ಹೋರಾಟಕ್ಕೂ ಮುಂದಾಗುವುದಾಗಿ ನಾಗೇಂದ್ರ ಎಚ್ಚರಿಸಿದ್ದಾರೆ. ಈ ಸಂದರ್ಭ ಬಡಾವಣೆ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ರಾಣಿ, ಕಾರ್ಯದರ್ಶಿ ಕಮಲ್, ಖಜಾಂಚಿ ನಾಗರಾಜು,ಮುಖಂಡರಾದ ವಕೀಲ ಜಗದೀಶ್, ಇಂಜಿನಿಯರ್   ಸಂದೀಪ್,ಚೈತ್ರ, ಪುಷ್ಪ, ಮಂಜು, ನಾಗಮಣಿ, ಸುರೇಖಾ, ಶ್ಯಾಮಲಾ ಮತ್ತಿತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want