LatestMysore

ಚಲನಚಿತ್ರ ನಿರ್ಮಾಪಕ – ಸಂಕಲನಕಾರ ನರಹಳ್ಳಿ ಜ್ಞಾನೇಶ್ ಹೃದಯಾಘಾತದಿಂದ ವಿಧಿವಶ

ಮೈಸೂರು : ಇಲ್ಲಿನ ಬಿ.ಎಂ.ಶ್ರೀ. ನಗರದ ನಿವಾಸಿಯಾಗಿದ್ದ, ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ಹಾಗೂ ಸಂಘಟಕ ನರಹಳ್ಳಿ ಜ್ಞಾನೇಶ್ (48) ಅವರು ಕಾರ್ಯನಿಮಿತ್ತ ಸ್ವಗ್ರಾಮ ನರಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇತ್ತೀಚೆಗಷ್ಟೇ ನಡೆದಿದ್ದ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿ ಮೈಸೂರು-ಮಂಡ್ಯ ಜಿಲ್ಲೆಗಳ ಪ್ರತಿನಿಧಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡು ದಶಕಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ನರಹಳ್ಳಿ ಜ್ಞಾನೇಶ್ ಸುರೇಶ್ ಅರಸ್ ಅವರ ಬಳಿ ಸಂಕಲನ ಕಲಿತು ಹಲವಾರು ಧಾರವಾಹಿಗಳು, ಸಾಕ್ಷ್ಯ ಚಿತ್ರಗಳು, ಕಿರುಚಿತ್ರಗಳು, ಸಿನಿಮಾಗಳಿಗೆ ಸಂಕಲನಕಾರಾಗಿ ಕೆಲಸ ಮಾಡಿದ್ದರು. ಇವರು ಜಗ್ಗೇಶ್ ಅಭಿನಯದ ‘ಎದ್ದೇಳು ಮಂಜುನಾಥ’ ಸಿನಿಮಾದ ಸಂಕಲನಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಪಡೆದಿದ್ದರು.

ಹಸಿರುಭೂಮಿ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಜ್ಞಾನೇಶ್ ಅವರು ಮೈಸೂರು ಮಯ ಮಂಡ್ಯ ಜಿಲ್ಲೆಗಳಾದ್ಯಂತ ಪರಿಸರ, ಸಾಹಿತ್ಯ, ಜನಪದ, ನಾಟಕ, ಸಿನಿಮಾ, ರಂಗಭೂಮಿ ಸಂಬಂಧಿಯಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯೋನ್ಮುಖರಾಗುವ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದರು. ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರ ಜೊತೆಗೆ ನಿಕಟವಾದ ಸಂಪರ್ಕ ಹೊಂದಿದ್ದರು.

ರೈತ ಸಂಘಟನೆಯಲ್ಲಿ ಪತ್ನಿ ಕೋಕಿಲ ಅವರ ಜೊತೆಗೆ ಸಕ್ರಿಯರಾಗಿದ್ದ ಜ್ಞಾನೇಶ್ ಅವರು ರೈತ ಮುಖಂಡ, ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಆಪ್ತ ಒಡನಾಡಿಯಾಗಿದ್ದರು. ಮೇಲುಕೋಟೆಯ ಪುತಿನ ರಂಗಮಂದಿರದಲ್ಲಿ ಕಳೆದ ತಿಂಗಳಷ್ಟೇ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ರಂಗನಮನ ಸಲ್ಲಿಸುವ ‘ಹೊಂಬಾಳೆ ನಾಟಕೋತ್ಸವ’ ಆಯೋಜಿಸಿದ್ದರು. ಮೂರು ದಿನಗಳ ನಾಟಕೋತ್ಸವದಲ್ಲಿ ಅಪರಿಮಿತ ಉತ್ಸಾಹದಿಂದ ಓಡಾಡಿದ್ದರು.

ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಟಿ. ಸತೀಶ್ ಜವರೇಗೌಡ, ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಬಾಲರಾಜ್, ಚಲನಚಿತ್ರ ನಾಯಕ ನಟ ಜಯಪ್ರಕಾಶ್ (ಜೆಪಿ), ಸಂಕಲನಕಾರ ನಾಗೇಂದ್ರ ಅರಸ್, ವಿನ್ಯಾಸಕಾರ ಪ್ರಕಾಶ್ ಚಿಕ್ಕಪಾಳ್ಯ, ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ, ರಂಗಕರ್ಮಿ ಚಂದ್ರು ಮಂಡ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಕಟಪೂರ್ವ ನಿರ್ದೇಶಕ ಜೆ.ಬಿ. ಸಿದ್ದೇಗೌಡ, ಪತ್ರಕರ್ತ ಜೀವನ್ಮುಖಿ ಸುರೇಶ್ ರೈತ ಸಂಘದ ಮುಖಂಡರೂ ಸೇರಿದಂತೆ ನೂರಾರು ಗಣ್ಯರು ನರಹಳ್ಳಿ ಜ್ಞಾನೇಶ್ ಅವರ ಅಂತಿಮ ದರ್ಶನ ಪಡೆದರು.

ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಪಾಂಡವಪುರ ತಾಲ್ಲೂಕಿನ ನರಹಳ್ಳಿಯಲ್ಲಿ ನೆರವೇರಿತು. ಮೃತರಿಗೆ ಪಾಂಡವಪರ ತಾಲ್ಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೋಕಿಲ, ಪುತ್ರ ಚಿರಾಗ್, ಪುತ್ರಿ ಇಂಪನಾ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಪ್ಪ ದಳವಾಯಿ, ಬಿ.ಎಸ್. ಲಿಂಗದೇವರು, ಅಕ್ಷತಾ ಪಾಂಡವಪುರ, ಟಿ.ಎನ್. ಸೀತಾರಾಮ್ ಸೇರಿದಂತೆ ಸಿನಿಮಾ ಮತ್ತು ಸಾಹಿತ್ಯ ಲೋಕದ ಹಲವು ಗಣ್ಯರು ಕಂಬನಿಗೆರದಿದ್ದಾರೆ.

admin
the authoradmin

Leave a Reply

Translate to any language you want