LatestMysore

ಮಠಗಳ ಸಮಾಜಮುಖಿ ಕಾಯಕ, ಸೇವಾ ಕಾರ್ಯ ಶ್ಲಾಘನೀಯ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮಠಗಳು ಶಿಕ್ಷಣ, ಸಂಸ್ಕಾರ, ಅಕ್ಷರ  ದಾಸೋಹಗಳ ಮೂಲಕ ತಮ್ಮ ಸಮಾಜಮುಖಿ ಕಾಯಕ ಸೇವಾಕಾರ್ಯ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಮಾದಹಳ್ಳಿ ಗ್ರಾಮದ ಗುರುಬೂದಿ ಸ್ವಾಮಿಗಳ 397ನೇ ಆರಾಧನೆ 63 ಪ್ರಮಥರ ಪೂಜೆ ಶ್ರೀಮಠದ ನೂತನ ಕಟ್ಟಡ ಹರಿನಾರು ಗದ್ದುಗೆಗಳ ಶತಾಯುಷಿ ಶ್ರೀ ಸಿದ್ದಲಿಂಗಸ್ವಾಮಿಗಳ ಸಂಭಾಂಗಣ ಮತ್ತು ಬಸವದ್ವಾರ ಉದ್ಘಾಟಿಸಿ ಮಾತನಾಡಿದರು. ಶ್ರೀಮಠಕ್ಕೆ ಆರುನೂರು ವರ್ಷಗಳ ಇತಿಹಾಸವಿದ್ದು, ಮಠ ಎಲ್ಲಾ ದಿಕ್ಕಿನಲ್ಲೂ ತನ್ನದೇ ಪಾರಮ್ಯತೆ ಸಾಧಿಸಿಕೊಂಡಿದೆ. 2003 ರಲ್ಲಿ ಮಠ ಮುನ್ನಡೆಸಲು ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ ಸಾಂಬಸದಾಶಿವ ಸ್ವಾಮೀಜಿಗಳ ಶ್ರಮ ಅಪಾರ ಎಂದರು.

ಶ್ರೀಮಠ ಧಾರ್ಮಿಕ ಕಾರ್ಯಗಳಿಗೆ ಸೀಮಿತಗೊಳ್ಳದೆ ಗ್ರಾಮೀಣ ಪರಿಸರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ,ಸಂಸ್ಕಾರ ಮತ್ತು ಸಂಸ್ಕೃತಿ ನೀಡಿ ಭವಿಷ್ಯದ ಆಸ್ತಿಯನ್ನಾಗಿ ರೂಪಿಸುವ ಕೇಂದ್ರವಾಗಿದೆ. ಮಠ ಧಾರ್ಮಿಕ,ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

ಅನುದಾನ: ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಶ್ರೀಮಠದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿ ಮಠ ತನ್ನ ಹಳೆ ಸ್ವರೂಪ ಬದಲಿಸಿ ಹೊರ ರೂಪದಲ್ಲಿ ಸಾಗಿ ನಾಡಿಗೆ ಶಾಂತಿ, ನೆಮ್ಮದಿ ನೆಲಸಲು ಸಹಕಾರಿಯಾಗಿದೆ ಎಂದರು.

ದೇಶದ ಪ್ರಗತಿಗೆ ಕೇಂದ್ರದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು ಮತ್ತು ವಿಶ್ವದ ಎಲ್ಲರೊಂದಿಗಿನ ಸ್ನೇಹ ಭಾರತವನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಲು ಸಹಕಾರವಾಗಿದೆ. ಭವಿಷ್ಯದಲ್ಲೂ ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವದಲ್ಲಿ ಭಾರತ ತನ್ನದೇ ಶಕ್ತಿ ಸಾಮರ್ಥ್ಯವನ್ನು ಹೊಂದಲು ಸಹಕಾರವಾಗಲಿದ್ದು, ಮಠಮಾನ್ಯಗಳು ಅವರ ಶ್ರೇಯಸ್ಸು ಬಯಸಬೇಕು ಎಂದು ಮನವಿ ಮಾಡಿದರು.

ಬೇಬಿ ಮಠದ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸಂಸ್ಕೃತಿ , ಸಂಸ್ಕಾರ, ಜ್ಞಾನ ನೀಡುವ ಮಠ ಮತ್ತು ಮನೆ ಎರಡನ್ನು ಜೋಪಾನವಾಗಿ ಕಾದುಕೊಂಡಲ್ಲಿ ದೇಶ ಸಂವೃದ್ಧಿಯಾಗಿ ಉಳಿಯಲಿದೆ ಎಂದರು.. ಮಠಗಳು ಭಕ್ತರ ಸರ್ವತೋಮುಖ ಒಳಿತು ಬಯಸುತ್ತದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿಯಿಂದ ಮಾತನಾಡಿ ಸಂಬಂಧ ಬೆಸೆದುಕೊಂಡಲ್ಲಿ ಕೌಟುಂಬಿಕ ಜೀವನ ಸುಖವಾಗಲಿದೆ. ಪ್ರೀತಿ ಎಲ್ಲರ ಮನಸ್ಸು ಒಗ್ಗೂಡಿಸಿ ಬದುಕು ಎಲ್ಲರೊಂದಿಗೆ ಬಾಳುವ ಸಂಸ್ಕೃತಿ ತಿಳಿಸುತ್ತದೆ ಎಂದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಮಾತನಾಡಿ, ಕ್ಷೇತ್ರದ ಧಾರ್ಮಿಕ ಅಸ್ಮಿತೆಯಾದ ಮಾದಹಳ್ಳಿ ಶ್ರೀ ಮಠ ಭಕ್ತರ ನೆಮ್ಮದಿ ಶಾಂತಿ ನೀಡುವ ಕೇಂದ್ರವಾಗಿದೆ. ಶ್ರೀ ಮಠಕ್ಕೆ 600 ವರ್ಷಗಳ ಇತಿಹಾಸವಿದ್ದು, ಇತ್ತೀಚೆಗೆ ಮಠ ಅಭಿವೃದ್ಧಿ ದಿಕ್ಕಿನಲ್ಲಿ ದಾಪುಗಾಲು ಹಾಕಿ ಮತ್ತಷ್ಟು ಜನಸಾಮಾನ್ಯರ ಹತ್ತಿರವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗುರುಲಿಂಗ ಜಂಗಮಮಠದ ನಟರಾಜಸ್ವಾಮೀಜಿ ಆರ್ಶೀರ್ವಚನ ನೀಡಿದರು.

admin
the authoradmin

Leave a Reply

Translate to any language you want