LatestMysore

‘ಕೈ’ ಬಲವರ್ಧನೆ… ಬೀಚನಹಳ್ಳಿಯಲ್ಲಿ  ಕಾಂಗ್ರೆಸ್ ಪಕ್ಷವನ್ನು ಸೇರಿದ 200ಕ್ಕೂ ಹೆಚ್ಚು ಕಾರ್ಯಕರ್ತರು

ಸರಗೂರು(ದಾಸೇಗೌಡ): ಬೀಚನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು 200 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.  ಶಾಸಕ ಅನಿಲ್ ಚಿಕ್ಕಮಾದು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ನಡೆದಿದ್ದು, ಜೆಡಿಎಸ್ ಬಿಜೆಪಿಗೆ ಆ ಮೂಲಕ ಟಾಂಗ್ ನೀಡಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಮಳ್ಳಿ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಸಿಎಂ ಕಾರ್ಯಕ್ರಮ ಮುಗಿಸಿಕೊಂಡು ತೆರಳಿದ ನಂತರ ಬೀಚನಹಳ್ಳಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದ್ದಾರೆ.

ಎಂ.ಸಿ ತಳಲು, ಎತ್ತಿಗೆ, ಕಲ್ಲಂಬಾಳು, ಕಟ್ಟೆಹುಣಸೂರು, ಲಂಕೆ, ಹುಣಸಹಳ್ಳಿ, ದಡದಹಳ್ಳಿ, ಮುಳ್ಳೂರು, ಮನುಗನಹಳ್ಳಿ ಹಾಗೂ ಶಾಂತಿಪುರ ಸೇರಿದಂತೆ ಹಲವು ಗ್ರಾಮಗಳಿಂದ ಬಂದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸ್ವಯಂಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಯಾದರು.

ಗ್ರಾಮವಾರು ವಿವರದಲ್ಲಿ ಎಂ.ಸಿ ತಳಲು ಗ್ರಾಮದಿಂದ 20 ಮಂದಿ, ಎತ್ತಿಗೆ 20 ಮಂದಿ, ಕಲ್ಲಂಬಾಳು 20 ಮಂದಿ, ಕಟ್ಟೆಹುಣಸೂರು 20 ಮಂದಿ, ಲಂಕೆ 15 ಮಂದಿ, ಹುಣಸಹಳ್ಳಿ 25 ಮಂದಿ, ದಡದಹಳ್ಳಿ 20 ಮಂದಿ, ಮುಳ್ಳೂರು 20 ಮಂದಿ, ಮನುಗನಹಳ್ಳಿ 20 ಮಂದಿ ಹಾಗೂ ಶಾಂತಿಪುರದಿಂದ 20 ಮಂದಿ ಸೇರಿದಂತೆ ವಿವಿಧ ಗ್ರಾಮಗಳಿಂದ ಒಟ್ಟು 200 ಕ್ಕೂ ಹೆಚ್ಚು ವೀರಶೈವ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ಧ್ವಜದಡಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸರ್ಕಾರದ ಕೆಲಸಗಳನ್ನು ನೋಡಿ ಜನರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪಕ್ಷದತ್ತ ಬರುತ್ತಿರುವುದು ಸಂತೋಷಕರ ಸಂಗತಿ ಎಂದು ಹೇಳಿದರು. ಪಕ್ಷಕ್ಕೆ ಸೇರ್ಪಡೆಯಾದ ಎಲ್ಲರನ್ನು ಅವರು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಟಿಪಿಎಸ್ ನ ಮುಖಂಡ ಮನುಗನಹಳ್ಳಿ ಗುರುಸ್ವಾಮಿ, ಪುರದಕಟ್ಟೆ  ಬಸವರಾಜು, ಗುತ್ತಿಗೆದಾರ ಪರಶಿವಮೂರ್ತಿ ಇನ್ನಿತರ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ರಾಜಕೀಯ ಉತ್ಸಾಹದಿಂದ ನೆರವೇರಿತು.

admin
the authoradmin

Leave a Reply

Translate to any language you want