ಮೈಸೂರು: ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿನ ವಚನ ಪಾಠಶಾಲೆಯಲ್ಲಿ ಶ್ರೀ ಜಡೇಸ್ವಾಮಿಗಳವರ ಜನ್ಮದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಚನ ಸಾಹಿತ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ವಚನ ಪಠಣ ಮತ್ತು ಅರ್ಥವಿವರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಶ್ರೀ ಜಡೇಸ್ವಾಮಿಗಳವರ ಜೀವನ ಮೌಲ್ಯಗಳು ಹಾಗೂ ಅವರ ಸಮಾಜಮುಖಿ ಚಿಂತನೆಗಳನ್ನು ಕೊಂಡಾಡುವ ಕವಿತೆಯನ್ನು ರಚಿಸಿ ವಾಚಿಸಿದರು. ಅವರ ಕಾವ್ಯಪಾಠವು ಕಾರ್ಯಕ್ರಮಕ್ಕೆ ವಿಶೇಷ ಭಾವಗರ್ಭಿತ ವಾತಾವರಣವನ್ನು ತಂದಿತು.
ನಂತರ ಅವರು ವಚನ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶರಣ ಜೇಡರ ದಾಸಿಮಯ್ಯನವರ ‘ಕಣ್ಣು ಮೀಸಲು ಶಿವನ; ಕೈ ಮೀಸಲು ಶಿವನ. ಕಾಲು ಮೀಸಲು ಶಿವನ; ನಾಲಗೆ ಮೀಸಲು ಶಿವನ. ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ. ತನು ಮನವೆಲ್ಲಾ ಮೀಸಲು ಶಿವನ. ಈ ಮೀಸಲು ಬೀಸರವಾಗದಂತಿರ್ದಡೆ ಆತನೇ ಜಗದೀಶ ಕಾಣಾ! ರಾಮನಾಥ.”

ಎಂಬ ವಚನವನ್ನು ಹೇಳಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಡಿಸಿದರು. ಬಳಿಕ ಈ ವಚನದ ಅರ್ಥವನ್ನು ಸರಳವಾಗಿ ವಿವರಿಸಿ, ಮಾನವನ ದೇಹದ ಪ್ರತಿಯೊಂದು ಅಂಗವೂ ಶಿವನಿಗೆ ಮೀಸಲಾಗಿರಬೇಕು ಎಂಬ ಶರಣರ ತತ್ವವನ್ನು ವಿದ್ಯಾರ್ಥಿಗಳ ಮನಗಳಲ್ಲಿ ಬಿತ್ತಿದರು.
ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಅವರು “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ.” ಎಂಬ ವಚನವನ್ನು ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಪಠಣ ಮಾಡಿಸಿ ಅದರ ತಾತ್ಪರ್ಯವನ್ನು ಅರ್ಥೈಸಿದರು. ದೇವರ ಅನುಗ್ರಹವೇ ನಮ್ಮ ಜೀವನದ ಆಧಾರ ಎಂಬ ಸಂದೇಶವನ್ನು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಜಡೇಸ್ವಾಮಿಗಳು, ವಚನ ಸಾಹಿತ್ಯವು ಕೇವಲ ಸಾಹಿತ್ಯವಲ್ಲ, ಅದು ಬದುಕನ್ನು ಬೆಳಗಿಸುವ ಜ್ಯೋತಿ ಎಂದು ಹೇಳಿದರು. ಬಸವಣ್ಣ ಮತ್ತು ಶರಣರ ವಚನಗಳು ಸಮಾಜಕ್ಕೆ ಸಮಾನತೆ, ಸತ್ಯ ಮತ್ತು ಧರ್ಮದ ದಾರಿಯನ್ನು ತೋರಿಸುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವಚನಗಳನ್ನು ಕಲಿತು ಅವುಗಳ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಚನ ಪಾಠಶಾಲೆಗಳ ಮೂಲಕ ಶರಣರ ತತ್ವಗಳು ಗ್ರಾಮಾಂತರ ಪ್ರದೇಶಗಳಿಗೂ ತಲುಪುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ವಚನ ಸಾಹಿತ್ಯ ಪ್ರಸಾರಕ್ಕಾಗಿ ಶರಣು ವಿಶ್ವವಚನ ಫೌಂಡೇಷನ್ ನಡೆಸುತ್ತಿರುವ ಕಾರ್ಯಗಳನ್ನು ಅವರು ಮೆಚ್ಚಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಹೇಮಂತಸ್ವಾಮೀಜಿ ಮತ್ತು ವಚನ ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








