CrimeLatestMysore

ಕರಿಮುದ್ದನಹಳ್ಳಿ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಡರೋಡೆಕೋರರ ಬಂಧನ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಕರಿಮುದ್ದನಹಳ್ಳಿಯಲ್ಲಿರುವ ಪೆಟ್ರೋಲ್ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ ಮಾಡಿದ್ದ ಐವರ ಪೈಕಿ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಬಿಳಿಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಈಗಾಗಲೇ ಪ್ರಕರಣವೊಂದರಲ್ಲಿ ಬಂಧಿತರಾಗಿರುವುದು ಬೆಳಕಿಗೆ ಬಂದಿದೆ.

ಹಾಸನ ಮೂಲದ ಕಿರಣ್ (30), ಮಂಡ್ಯದ ಲಕ್ಷ್ಮಣ (32), ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಉಮೇಶ (32), ಚನ್ನಪಟ್ಟಣ ಮೂಲದ ರಕ್ಷಿತ್ @ ರಕ್ಷಿ ಹಾಗೂ ಜಯಂತ್ @ ಅಭಿ @ ಚೌ ಚೌ ಬಂಧಿತ ದರೋಡೆಕೋರರಾಗಿದ್ದಾರೆ.

ಇವರು ಫೆಬ್ರವರಿ 12ರಂದು ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರಿನಲ್ಲಿ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿರುವ ಸ್ವಾಮಿ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ನುಗ್ಗಿ ಪೆಟ್ರೋಲ್ ಬಂಕ್ ನಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಅವರ ಬಳಿಯಿದ್ದ ರೂ 15.300 ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ  ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರಿಗೆ ಮೊಕದ್ದಮೆ ಸಂಖ್ಯೆ 53/2026, ಕಲಂ 310(2) ಬಿ ಎನ್ ಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದು, ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಆದೇಶದ ಮೇರೆಗೆ  ಎಎಸ್ ಪಿ ಮಲ್ಲಿಕ್.ಸಿ ಹಾಗೂ ನಾಗೇಶ್.ಎಲ್   ಹುಣಸೂರು ಉಪ ವಿಭಾಗದ ವೈಎಸ್ಪಿ ಡಿ ರವಿ ಅವರ ಮಾರ್ಗದರ್ಶನದಲ್ಲಿ ಬಿಳಿಕೆರೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್  ಪೆಕ್ಟರ್ ಟಿ.ಎಂ.ಪುನೀತ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು.

ಈ ಸಂಬಂಧ ಮಾಹಿತಿ ಕಲೆ ಹಾಕಿದ ತನಿಖಾ ತಂಡಕ್ಕೆ ಸುಳಿವುಗಳು ಲಭಿಸಿದ್ದು ಅದರಂತೆ ಮಾ.6ರಂದು ಆರೋಪಿಗಳ ಪೈಕಿ ಕಿರಣ್, ಲಕ್ಷ್ಮಣ, ಉಮೇಶ ಅವರುಗಳು ಮೈಸೂರಿನ ಹಿನಕಲ್ ಫ್ಲೈ ಓವರ್ ಬಳಿಯ ಗೌಡ್ರು ಫೋರ್ಕ್ ಹೋಟೆಲ್ ಕಟ್ಟಡದಲ್ಲಿರುವುದು ಗೊತ್ತಾದ ಹಿನ್ನಲೆಯಲ್ಲಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ವೇಳೆ ಇನ್ನಿಬ್ಬರಾದ ರಕ್ಷಿತ್ ಹಾಗೂ ಜಯಂತ್  ಅವರು ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದಾರೆ.

ಬಂಧಿತರಿಂದ ಕೃತಕ್ಕೆ ಉಪಯೋಗಿಸಿದ ರೂ 3.75000 ಅಂದಾಜು ಮೌಲ್ಯದ KA-51 MD-9565 ನಂಬರಿನ ಸ್ಕೋಡಾ ಕಾರು, ರೂ 3200 ನಗದು ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಇಷರತ್ ಬೇಗಂ, ಸಿಬ್ಬಂದಿ  ಪ್ರತಾಪ್, ಶಶಿಕುಮಾರ್, ಜಯರಾಮ, ನಾಗಾರ್ಜುನ, ಅಶೋಕ್ ಕುಮಾರ್, ಶಿವಕುಮಾರ, ಪ್ರಸಾದ್ ಧರ್ಮಾಪುರ, ಜಿಲ್ಲಾ ಟೆಕ್ನಿಕಲ್ ಶಾಖೆಯ ವಸಂತ್ ಕುಮಾರ್, ಸುನೀತಾ ಹಾಗೂ ಜೀಪ್ ಚಾಲಕ ಗೋವಿಂದ ರವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want