LatestLife style

ಕುಡಿತಕ್ಕೆ ದಾಸನಾದವನು ಹೆತ್ತವರ ಮಾತು ಕೇಳಲಿಲ್ಲ… ಆಮೇಲೆ ಏನಾಯಿತು?

*ಶ್ರೀಮಂತ ಹುಡ್ಗ 16 ವರ್ಷಕ್ಕೆ ಕುಡಿತದ ಚಟ ಶುರು ಮಾಡಿದ..

*ಕುಡಿತಕ್ಕೆ ಬಲಿಯಾದವನಿಗೆ ಮರುಜನ್ಮ ಕೊಟ್ಟ ಬಸವಮಾರ್ಗ

ವಂಶೋದ್ಧಾರಕನಾದ ನೀನು ಕುಡಿತದ ದಾಸ್ಯನಾದ ಚಿಂತೆಯಿಂದಲೇ ನಿನ್ನಪ್ಪ ಸಾವನ್ನಪ್ಪಿದರು… ನೋಡು  ಬೇಡ ಮಗ…, ನಾನು ಜೀವಂತವಾಗಿ ಇರುವಾಗಲೇ ಈ ಕುಡಿತವನ್ನು ಬಿಟ್ಟು ಒಳ್ಳೆಯ ಮನುಷ್ಯನಾಗಿ ಬದಲಾಗು. ಕೊನೆಗೆ ನಾನೂ ಇಲ್ಲದಿದ್ದರೆ ಈ ಜಗತ್ತಿನಲ್ಲಿ ನಿನ್ನವರೆನ್ನುವವರು ಯಾರೂ ಇಲ್ಲ..! ಬೇಡ ಮಗ ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ಹಾಳಾದ ಕುಡಿತ ಬಿಟ್ಟು ಒಳ್ಳೆಯ ವ್ಯಕ್ತಿಯಾಗಿ ಬದಲಾಗು….!  ಹೀಗೆ ಸದಾ ಬುದ್ದಿವಾದದ ಮಾತು ಹೇಳುತ್ತಾ… ಮನದಲ್ಲಿ ಕಣ್ಣೀರಿಡುತ್ತಾ ದಿನ ಕಳೆಯುತ್ತಿದ್ದರು…

ಹೌದು.., ಪ್ರತಿಷ್ಠಿತ ಮನೆಯ ಯುವಕನೊಬ್ಬ ಕುಡಿತಕ್ಕೆ ದಾಸನಾಗಿ, ಆ ಚಟ ನಶೆ ನೀಡುತ್ತಿಲ್ಲ ಎಂದು ಗಾಂಜಾದ ಮತ್ತೇರಿಸಿಕೊಂಡು ಜೀವನವನ್ನೇ ಸರ್ವನಾಶ ಮಾಡಿಕೊಂಡಿದ್ದವನ ನೋವಿನ ಕಣ್ಣೀರಿನ ಕಥೆ. ಈ ಕಥೆಯನ್ನು ನೀವು ಒಮ್ಮೆ ಕೇಳಬೇಕು. ನಿಜಕ್ಕೂ ಮಮ್ಮಲು ಮರುಗುತ್ತೀರಿ.! ಅಯ್ಯೋ ಪಾಪ ಎಂದು ನೊಂದುಕೊಳ್ಳುತ್ತೀರಿ. ಎಲ್ಲವೂ ಕೈ ಮೀರಿದಾಗ ಕೊನೆಗೆ ಅವನಿಗೆ ಆಸರೆಯಾಗಿ ಸಿಕ್ಕಿದ್ದು, ಬದುಕಿಗೆ ಹೊಸ ದಾರಿ ನಿರ್ಮಾಣ ಮಾಡಿಕೊಟ್ಟಿದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ. ಈಗ ಆ ಯುವಕ ಎಲ್ಲಿದ್ದಾನೆ? ಹೇಗಿದ್ದಾನೆ?  ಏನು ಮಾಡುತ್ತಿದ್ದಾನೆ? ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದೆಯಾ ? ಹಾಗಾದರೆ ಈ ನೈಜ್ಯಕಥೆಯನ್ನೊಮ್ಮೆ ನೋಡಿಕೊಂಡು ಬನ್ನಿ!.

ಈ ಕಥೆಯ ನಾಯಕನ ಹೆಸರು ವಿಜಯ್. ಚಿನ್ನದ ಸ್ಪೂನ್ ನ್ನು ಬಾಯಲ್ಲಿ ಇಟ್ಟುಕೊಂಡು, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗ. ಆದರೆ ತಾನು 16ನೇ ವಯಸ್ಸಿಗೆ ಬರುವಷ್ಟರ ವೇಳೆಗೆ ಕೆಟ್ಟ ಸ್ನೇಹಿತರ ಸಹವಾಸದಿಂದ ವಿಜಯ್ ಹಾದಿತಪ್ಪಿದ್ದ. ಆಗ  ಹತ್ತಿಸಿಕೊಂಡ ಕುಡಿತ, ತನಗೆ ತಿಳಿಯದಂತೆ ವ್ಯಸನವಾಗಿ ಬದಲಾಯಿತು. ವ್ಯಸನ ಆತ ಮತ್ತು ಆತನ ಕುಟುಂಬವನ್ನು ಕಣ್ಣೀರಿನ ಕೋಡಿಯಲ್ಲಿ ಮುಳುಗಿಸಿತ್ತು.

ವಿಜಯ್ ತಂದೆ, ತಾಯಿ, ತಮ್ಮಿಬ್ಬರ ಮಕ್ಕಳಿಗೆ ಒಂದು ಒಳ್ಳೆಯ ಭವಿಷ್ಯ ಕಲ್ಪಿಸಿ ಕೊಡಬೇಕೆಂದು ದಾವಣಗೆರೆಯಿಂದ ಬೆಂಗಳೂರಿಗೆ ಬಂದವರು. ಬೆಂಗಳೂರಿನಲ್ಲಿ ಸ್ವಂತ ಕಂಪನಿಯೊಂದನ್ನು ಕಟ್ಟಿ, ಬೆಳೆಸಿದರು. ನೂರಾರು ಜನರಿಗೆ ಉದ್ಯೋಗ ನೀಡಿದ್ದರು. ನಾಲ್ಕೈದು ತಲೆಮಾರಿಗಾಗುವಷ್ಟು ಆಸ್ತಿ-ಪಾಸ್ತಿಯನ್ನೂ ಕೂಡ ಮಾಡಿಟ್ಟಿದ್ದರು.

ವಿಜಯ್ ಮನೆಯವರನ್ನು ಸಹಜವಾಗಿಯೇ ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ವಿಜಯ್ ತಂದೆ, ತಾಯಿಗೆ ಅವರ ಸಂಬಂಧಿಕರು, ಸ್ನೇಹಿತರು ವಿಶೇಷವಾದ ಗೌರವ, ಮರ್ಯಾದೆಗಳನ್ನು ನೀಡುತ್ತಿದ್ದರು. ಇತ್ತ ತಮ್ಮಿಬ್ಬರ ಮಕ್ಕಳನ್ನು ಪ್ರೀತಿಯಿಂದಲೇ ಸಾಕಿ, ಸಲಹಿದ್ದರು. ಮಕ್ಕಳ ಬಗ್ಗೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಮನೆಯಲ್ಲೂ ನೆಮ್ಮದಿಗೆ ಯಾವುದೇ ಕೊರತೆ ಇರಲಿಲ್ಲ. ಇವರ ಈ ಸುಖ ಸಂಸಾರಕ್ಕೆ ಪಾರವೇ ಇರಲಿಲ್ಲ. ಆದರೆ ಈ ಕುಟುಂಬಕ್ಕೆ ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ವಿಜಯ್ ಹತ್ತಿಸಿಕೊಂಡ ವ್ಯಸನಕ್ಕೆ ಇಡೀ ಕುಟುಂಬದ ಸಂತೋಷ, ನೆಮ್ಮದಿಯೇ ನುಚ್ಚು ನೂರಾಯಿತು. ವಿಜಯ್ ಮೇಲೆ ಪಾಲಕರು ಕಟ್ಟಿಕೊಂಡಿದ್ದ ಆಶಾ ಗೋಪುರ ಕುಸಿದು ಬಿದ್ದಿತ್ತು.

ಇದನ್ನೂ ಓದಿ: ಕುಡಿತದ ಚಟಕ್ಕೆ ಬಿದ್ದವನಿಗೆ ತಪ್ಪು ಅರಿವಾಗುವ ವೇಳೆಗೆ ಕಾಲಮಿಂಚಿತ್ತು..

ಮಗ ದೊಡ್ಡವನಾದ ಮೇಲೆ ತಮ್ಮದೆ ಕಂಪನಿಯ ಉಸ್ತುವಾರಿ ವಹಿಸಿಕೊಳ್ಳುತ್ತಾನೆ. ಕಂಪನಿಯನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸುತ್ತಾನೆ. ಕೊನೆಗಾಲದಲ್ಲಿ ನಮಗೂ ಆಸರೆಯಾಗಿ ನಿಲ್ಲುತ್ತಾನೆ ಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಜಯ್ ಓದುವ ಸಮಯದಲ್ಲಿ ಮೋಜು, ಮಸ್ತಿ ಕಡೆಗೆ ಗಮನ ಹರಿಸಿದ್ದ. ತನ್ನ 16ನೇ ವಯಸ್ಸಿಗೆ ಬರುವ ವೇಳೆಗಾಗಲೇ ಹಾದಿ ತಪ್ಪಿದ್ದ. ಮನೆಯವರಿಗೆ ಗೊತ್ತಿಲ್ಲದ ರೀತಿಯಲ್ಲಿ ಕೆಟ್ಟ ಸ್ನೇಹಿತರ ಸಹವಾಸದಿಂದ ಕುಡಿತದ ಚಟಕ್ಕೆ ಬಲಿಯಾಗಿ ಹೋಗಿದ್ದ.

ಒಂದು ದಿನ ಈ ವಿಷಯ ವಿಜಯ್ ತಂದೆ, ತಾಯಿಗೆ ತಿಳಿದು ಬರ ಸಿಡಿಲು ಎರಗಿ ಬಂದಂತೆ ಆಯಿತು. ತಾವು ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಯಿತು. ಮಗ ಎಲ್ಲಿ ಕೈ ಬಿಟ್ಟು ಹೋಗುತ್ತಾನೋ. ಕುಟುಂಬದ ಘನತೆ, ಗೌರವ ಈತನ ಕಾರಣದಿಂದ ಎಲ್ಲಿ ಮಣ್ಣು ಪಾಲಾಗುತ್ತದೆಯೋ ಎಂದು ಆತಂಕಗೊಂಡು ಹತಾಶೆಯಿಂದಲೇ ಕುಸಿದು ಹೋದರು.  ಇದುವರೆಗೂ ತಮ್ಮ ಮುದ್ದು ಮಗನ ಮೇಲೆ ಕೈ ಮಾಡದ, ಕಿಂಚಿತ್ತು ಕೋಪಿಸಿಕೊಳ್ಳದ ತಂದೆಗೆ ಈ ಉದ್ವೇಗ, ಆವೇಶಗಳನ್ನು ತಡೆದುಕೊಳ್ಳಲು ಆಗಲಿಲ್ಲ. ಪರಿಣಾಮ ವಯಸ್ಸಿಗೆ ಬಂದ ಮಗನ ಮೇಲೆ  ಮನಸ್ಸೋ ಇಚ್ಛೆ ಥಳಿಸಿ ಬಿಟ್ಟರು. ಅತ್ತುಕರೆದರು.

ಕೊನೆಗೆ ಬುದ್ದಿ ಮಾತು ಹೇಳಿ ಸರಿದಾರಿಗೆ ತರಲು ತಂದೆ, ತಾಯಿ ತೀರ್ಮಾನಿಸಿದರು. ಆದರೆ ಬುದ್ದಿವಾದದ ಮಾತು ಆತನ ಕಿವಿಗಳನ್ನು ತಾಗಲಿಲ್ಲ. ತಂದೆ, ತಾಯಿಯ ಕಣ್ಣಿರಿಗೆ ವಿಜಯ್ ಮನಸ್ಸು ಕಿಂಚಿತ್ತು ಕರಗಲಿಲ್ಲ. ಆ ಕ್ಷಣಕ್ಕೆ ತಂದೆ, ತಾಯಿಯ ಮಾತಿಗೆ ತಲೆಯಾಡಿಸಿದ ವಿಜಯ್, ಮರು ಕ್ಷಣವೆ ಕುಡಿದು ಬೀದಿಯಲ್ಲಿ ಬಿದ್ದಿದ್ದ. ಮಗನ ಈ ಸ್ಥಿತಿಯ ಸುದ್ದಿ ಸಮಾಚಾರ ಬಂಧು, ಬಳಗ, ವಿಜಯ್ ತಂದೆಯ ಸ್ನೇಹಿತರನ್ನು ಬಹುಬೇಗ ಮುಟ್ಟಿತು. ಈ ಸಂಗತಿ ವಿಜಯ್ ತಂದೆಯನ್ನು ಮತ್ತಷ್ಟು ಕುಗ್ಗಿಸಿ ಕಂಗೆಡಿಸಿತು. ಅವಮಾನ ತಾಳಲಾರದೆ ವಿಜಯ್ ತಂದೆ ನೊಂದು, ಬೆಂದು ಹೋದರು.

ಎತ್ತಾಡಿಸಿದ ಮುದ್ದು ಮಗನಿಂದ ಈ ರೀತಿಯ ಅವಮಾನಗಳನ್ನು ನಿರೀಕ್ಷೆ ಮಾಡದ ವಿಜಯ್ ತಂದೆ, ಇದಕ್ಕೆ ಈಗಲೇ ಕಡಿವಾಣ ಹಾಕಬೇಕು. ಈಗ ಎಚ್ಚೆತ್ತುಕೊಳ್ಳದಿದ್ದರೆ ಮಗ ಕೈ ಬಿಟ್ಟು ಹೋಗುವುದು ಶತ ಸಿದ್ಧ ಎಂದು ಮನಗಂಡು, ವಿಜಯ್‌ನನ್ನು ಬೆಂಗಳೂರಿನಲ್ಲಿ ತಮಗೆ ಗೊತ್ತಿದ್ದ ಒಂದು ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ ಮಗನ ಚಿಂತೆಯಿಂದಲೇ ದಿನದಿಂದ ದಿನಕ್ಕೆ ಕುಗ್ಗುತ್ತ ಹೋದರು. ಪರಿಣಾಮ ತಮ್ಮ ಕೆಲಸದ ಕಡೆಗೆ ಗಮನ ಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಉದ್ಯಮದಲ್ಲೂ ಕೂಡ ನಷ್ಟವಾಯಿತು. ಕಂಪನಿಯ ಷೇರುಗಳು ಕುಸಿಯುವ ಹಂತಕ್ಕೆ ಬಂತು. ಇದೆಲ್ಲವನ್ನು ಮನಸ್ಸಿಗೆ ಹಚ್ಚಿಕೊಂಡ ವಿಜಯ್ ತಂದೆ ನಾನಾ ಆರೋಗ್ಯ ಕಾರಣಗಳಿಂದ ಕೊನೆಗೆ ಹಾಸಿಗೆ ಹಿಡಿದು ಬಿಟ್ಟರು.

ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆಸ್ಪತ್ರೆಗೆ ಸೇರಿದ ದಿನದಿಂದಲೂ ತಂದೆಗೆ ಮಗನನ್ನು ನೋಡಬೇಕು ಎನ್ನುವುದು ಬಿಟ್ಟರೆ ಮತ್ಯಾವುದೇ ಬಯಕೆಗಳು ಇರಲಿಲ್ಲ. ಪಕ್ಕದಲ್ಲೇ ಇದ್ದ ತನ್ನ ಮಡದಿಗೆ ಮಗನನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಆಕೆ “ನೀವು ಏನೂ ಯೋಚನೆ ಮಾಡಬೇಡಿ ! ಆರೋಗ್ಯದಲ್ಲಿ ಚೇತರಿಸಿಕೊಳ್ಳಿ, ಹುಷಾ ರಾದ ಬಳಿಕ ನಾವೇ ಆ ಪುನರ್ವಸತಿ ಕೇಂದ್ರಕ್ಕೆ ಹೋಗಿ ನೋಡಿಕೊಂಡು ಬರೋಣಾ “ ಎಂದು ಸಮಾಧಾನದ ಮಾತುಗಳನ್ನು ಹೇಳಿ ಸುಮ್ಮನಿರಿಸಿದರು. ಆದರೆ ವಿಜಯ್ ತಂದೆಗೆ ಮಗನನ್ನು ನೋಡಬೇಕು ಎನ್ನುವ ಇಚ್ಛೆ ಯಾವ ಮುನ್ಸೂಚನೆಯೋ ನಿಜಕ್ಕೂ ಗೊತ್ತಿಲ್ಲ. ಮಗನನ್ನು ನೋಡಬೇಕು ಎಂದು ಕನವರಿಸಿಕೊಂಡೆ ಚಿಕಿತ್ಸೆಗೆ ಸ್ಪಂದಿಸದೆ ಕೋಮಕ್ಕೆ ಹೋಗಿಬಿಟ್ಟರು.

ಕೊನೆಗೆ ಮಗ ಬಂದು ಕರೆದರೆ ಅವನ ಕೂಗಿಗೆ ಎಚ್ಚರಗೊಳ್ಳಬಹುದೇನೋ! ಮಗ ಕುಡಿಯುವುದನ್ನು ಬಿಟ್ಟು ಬದ ಲಾಗುತ್ತೇನೆ ಎಂದು ಒಂದು ಮಾತು ಹೇಳಿದರೆ. ಆರೋಗ್ಯದಲ್ಲಿ ಚೇತರಿಸಿಕೊಂಡು ಹುಷಾರಾಗಬಹುದೆನೋ ಎನ್ನುವ ಆಶಾ ಭಾವನೆಯಿಂದ ಪುನರ್ವಸತಿ ಕೇಂದ್ರದಲ್ಲಿದ್ದ ವಿಜಯ್‌ನನ್ನು ಅಲ್ಲಿಂದ ಸೀದಾ ಆಸ್ಪತ್ರೆಗೆ ಕರೆದುಕೊಂಡು ಬಂದರು ತಾಯಿಯ ಕಡೆಯವರು.

ತನ್ನ ತಂದೆಯ ಸ್ಥಿತಿಯ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದೆ ಇದ್ದಿದ್ದ ವಿಜಯ್, ಆಸ್ಪತ್ರೆಯ ಐಸಿಯುನಲ್ಲಿ ಮಲಗಿದ್ದ ತಂದೆಯನ್ನು ನೋಡಿ ಕಂಗಾಲಾಗಿ ಹೋದನು. ಅಪ್ಪನ ಈ ದುಸ್ಥಿತಿಯನ್ನು ಕಂಡು ಅವರನ್ನು ಬಿಗಿದಪ್ಪಿ ಬಿಕ್ಕಿ, ಬಿಕ್ಕಿ ಅತ್ತನು, ಗೋಳಾಡಿದನು. ಆಕ್ರಂದಿಸಿದನು. “ಅಪ್ಪ ಒಂದು ಬಾರಿ ಎದ್ದೇಳಪ್ಪ “ ಇನ್ನೆಂದು ಕುಡಿಯುವುದಿಲ್ಲ. ನೀನು ಹೇಳಿದಂತೆ ಕೇಳಿಕೊಂಡು ಹೋಗುತ್ತೇನೆ ಎಂದು ಅಂಗಲಾಚಿದನು. ಆದರೆ ಮಗನ ವ್ಯಾಕುಲತೆ ತಂದೆ ಸ್ಪಂದಿಸಲಿಲ್ಲ. ಜೀವ ಇದ್ದರೂ ಎದ್ದೇಳಲಿಲ್ಲ. ದುರ್ವಿಧಿ, ಕೋಮದಲ್ಲಿದ್ದ ತನ್ನ ತಂದೆ ವಾರ ತುಂಬುವ ವೇಳೆಗೆ ಆ ಸ್ಥಿತಿಯಲ್ಲೇ ಅದೃಶ್ಯರಾಗಿ ಹೋಗಿದ್ದರು.

ಯಾವಾಗ ವಿಜಯ್ ತಂದೆ ತೀರಿಕೊಂಡರೋ ಆ ದಿನವೇ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯೂ ಕೂಡ ಸತ್ತು ಹೋಗಿತ್ತು. ಮನೆಯ ಸದಸ್ಯರು ಜೀವಂತ ಶವವಾಗಿಬಿಟ್ಟರು. ವಿಜಯ್ ಅಂತೂ ಹತಾಶೆ, ಪಶ್ಯಾತಾಪಗಳಿಂದ ಬೆಂದುಹೋದ. ನಾನು ಸರಿಯಾಗಿದ್ದರೆ ನನ್ನ ತಂದೆ ಇಂದು ಜೀವಂತವಾಗಿ ಇರುತ್ತಿದ್ದರು ಎಂದು ಒಬ್ಬನೆ ಬಿಕ್ಕಿ, ಬಿಕ್ಕಿ ಅಳುತ್ತಿದ್ದ. ತಂದೆಯನ್ನು ಕಳೆದುಕೊಂಡ ಮೇಲಾದರೂ ವಿಜಯ್ ಕುಡಿತದ ಚಟವನ್ನು ಬಿಡುತ್ತಾನೆ. ಹೊಸ ಮನುಷ್ಯನಾಗಿ ಬದಲಾಗುತ್ತಾನೆ ಎಂದು ಎಷ್ಟೋ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ವಿಜಯ್ ಈ ಹಂತದಲ್ಲಿ ಮತ್ತೊಂದು ಅವಾಂತರ ಮಾಡಿಕೊಂಡಿದ್ದ.

ಕುಡಿತದ ಚಟದಿಂದ ಈಗಾಗಲೇ ತನ್ನ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ವಿಜಯ್, ತನ್ನ ತಂದೆಯ ಸಾವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮತ್ತೊಂದು ನಶೆಗೆ ಕೈಚಾಚಿದ್ದ. ತಂದೆಯ ಅಗಲಿಕೆ ನೋವನ್ನು ತಾಳಲಾರದೆ, ಆ ನೋವನ್ನು ಮರೆಯಲು ಗಾಂಜಾದ ವ್ಯಸನಕ್ಕೆ ದಾಸನಾಗಿಬಿಟ್ಟಿದ್ದ. ವಿಜಯ್ ಒಂದು ಸಾರಿ ಮನೆಯಿಂದ ಹೊರಗೆ ಹೋದರೆ ಮತ್ತೆ ಬರುತ್ತಿದ್ದದ್ದು ವಾರಗಟ್ಟಲೆ ಆಗುತ್ತಿತ್ತು.

ಮಲಗಲು ಸೂರಿಲ್ಲ. ತಿನ್ನಲು ಅನ್ನವಿಲ್ಲ. ಹಾಕಲು ಬಟ್ಟೆ ಇಲ್ಲ. ಹುಚ್ಚನಂತೆ ಬೀದಿ, ಬೀದಿ ಅಲೆದ. ಈ ವೇಳೆಗಾಗಲೇ ಬೆಂಗಳೂರಿನ ಕರಾಳ ರಾತ್ರಿಯ ದಿನಗಳು ವಿಜಯ್‌ನನ್ನು ಆಕರ್ಷಿಸಿ ಮತ್ತಷ್ಟು ಹಾಳು ಮಾಡಿತು. ಗಾಂಜಾ ಸೇದಲು ಹಣವಿಲ್ಲದೆ ವಿಜಯ್, ಅಡ್ಡದಾರಿ ಹಿಡಿದುಬಿಟ್ಟ. ಗಾಂಜಾ ಸೇವನೆ ಕಾರಣದಿಂದ ಎರಡು ಬಾರಿ ಜೈಲುವಾಸವನ್ನೂ ಅನುಭವಿಸಿದ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ವಿಜಯ್, ತನ್ನ ಸ್ಥಿತಿಯನ್ನು ತಾನೇ ಕಂಡು ರೋಧಿಸುತ್ತಿದ್ದ.

ವ್ಯಸನಕ್ಕೆ ದಾಸರಾದವರಿಗೆ ಹುಚ್ಚು, ಜೈಲು, ಸಾವು ಖಚಿತ ಎನ್ನುವುದು ಈ ಕ್ಷೇತ್ರದಲ್ಲಿ ಜನಜನಿತ. ಈ ಮೂರರಲ್ಲಿ ವಿಜಯ್ ಎರಡನ್ನು ಹೀಗಾಗಲೇ ಅನುಭವಿಸಿದ್ದ. ತನ್ನ ಸ್ಥಿತಿಯನ್ನು ಕಂಡು ತಾನೇ ಬೇಸತ್ತು ಹೋಗಿದ್ದ. ವಿಜಯ್ ಜೀವನದಲ್ಲಿ ಕೊನೆಗೂ ಬದಲಾವಣೆಯಾಗ ಬೇಕೆಂದು ಬಯಸಿದ. ‘ತನ್ನನ್ನು ಕಾಪಾಡು ಭಗವಂತ ಎಂದು ದೇವರಲ್ಲಿ ಕಣ್ಣೀರಿನ ಕೋಡಿ ಹರಿಸಿದ. ಬದಲಾಗಲು ಒಮ್ಮೆ ನನಗೆ ಅವಕಾಶ ಮಾಡಿಕೊಡು ಎಂದು ಪರಿಪರಿಯಾಗಿ ಬೇಡಿಕೊಂಡ.

ಕೊನೆಗೂ ಭಗವಂತ ಅವನ ಕಣ್ಣೀರು, ಪಶ್ಚಾತಾಪಗಳಿಗೆ ಕಣ್ಣು ಬಿಟ್ಟ. ವಿಜಯ್ ತೊಳಲಾಟ, ಅವಸ್ಥೆಯನ್ನು ನೋಡಲಾರದೆ ಹೆತ್ತ ಕರುಳು, ವಿಜಯ್‌ನನ್ನು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲು ಮಾಡಿದರು. ಈ ಪುನರ್ವಸತಿ ಕೇಂದ್ರದಲ್ಲಿ ಸುಧೀರ್ಘವಾಗಿ ಚಿಕಿತ್ಸೆ ಪಡೆದ ವಿಜಯ್. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಹಂತ, ಹಂತವಾಗಿ ಹೊಸ ಮನುಷ್ಯನಾಗಿ ಬದಲಾವಣೆಯಾದ. ತನ್ನ ಚಿಕಿತ್ಸೆಯ ಸಮಯದಲ್ಲಿ ಸರಿಯಾದ ಮನಃಪರಿವರ್ತನೆ ಮಾಡಿಕೊಂಡ.

ಬಸವಮಾರ್ಗದಲ್ಲಿ ಸಿಗುತ್ತಿದ್ದ ಚಿಕಿತ್ಸೆಯನ್ನು ಸದ್ಬಳಕೆ ಮಾಡಿಕೊಂಡ. ದೈಹಿಕ ಹಾಗೂ ಮಾನಸೀಕವಾಗಿಯೂ ವಿಜಯ್ ಸದೃಢಗೊಂಡು ಇಲ್ಲಿಂದ ಹೊಸ ಕನಸು, ನಂಬಿಕೆಗಳೊಂದಿಗೆ ಸಮಾಜಕ್ಕೆ ಕಾಲಿಟ್ಟ. ಅದರಂತೆ ಈಗ ನಮ್ಮ ವಿಜಯ್ ಕೆಲವೇ ವರ್ಷದಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಿ ನಮ್ಮ ಕಣ್ಣ ಮುಂದೆ ಉದಾಹರಣೆಯಾಗಿ ನಿಂತಿದ್ದಾನೆ. ತನ್ನ ಕಾರಣದಿಂದ ಪಾತಾಳ ಬಿದ್ದಿದ್ದ ಕಂಪನಿಯ ಉಸ್ತುವಾರಿಯನ್ನು ವಹಿಸಿಕೊಂಡು, ಹಗಲು, ಇರುಳು ಎನ್ನದೆ ಶ್ರಮಿಸಿ ಕಂಪನಿಯನ್ನು ಮೇಲಕ್ಕೆ ಎತ್ತಿದ್ದಾನೆ

ತನ್ನ ತಂದೆಯ ಆಸೆಯಂತೆ ಕಂಪನಿಯನ್ನು 100 ಪಟ್ಟು ವಿಸ್ತಾರ ಮಾಡಿದ್ದಾನೆ ವಿಜಯ್. ಅಕ್ಕನಿಗೆ ಈತನೆ ಮುಂದೆ ನಿಂತು ಮದುವೆ ಮಾಡಿದ್ದಾನೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಹೆಂಡತಿ, ಮಕ್ಕಳೊಂದಿಗೆ ವಿಜಯ್ ಜೀವನದಲ್ಲಿ ತುಂಬಾ ಚೆನ್ನಾಗಿ ಇದ್ದಾನೆ. ವಿಜಯ್ ವ್ಯಸನ ತ್ಯೆಜಿಸಿದ ಮೇಲೆ ಆತನ ಬಾಳಲ್ಲಿ ಈಗ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ಆದರೆ ನನ್ನನ್ನು ಸ್ಥಾನದಲ್ಲಿ ನೋಡಬೇಕೆಂದುಕೊಂಡಿದ್ದ ಅಪ್ಪ ಮಾತ್ರ ಇಲ್ಲ ಎಂದು ಯಾವಾಗಲೂ ಪಶ್ಚಾತ್ತಾಪ ಪಡುತ್ತಲೇ ಇರುತ್ತಾನೆ.

ಕೊನೆಮಾತು: ವಿಜಯ್ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ !

admin
the authoradmin

Leave a Reply

Translate to any language you want