ಮೈಸೂರು: ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘ, ಸ್ಟೆಮ್ ಲ್ಯಾಬ್ ಹಾಗೂ ಅಗಸ್ತ್ಯ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ‘ವಿಜ್ಞಾನ ಮೇಳ’ವು ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು.
ವಿಜ್ಞಾನ ಮೇಳದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸ್ಟೆಮ್ ಲ್ಯಾಬ್ ನ ಮಾರ್ಗದರ್ಶಕ ಹನುಮಂತು ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಸಾಮಗ್ರಿಗಳನ್ನು ನೇರವಾಗಿ ನೋಡಿ, ಅವನ್ನು ಸ್ಪರ್ಶಿಸಿ, ಆ ಮೂಲಕ ಕಲಿಕೆಯನ್ನು ಅನುಭವಿಸಬೇಕು. ಆಗ ವಿಷಯ ಜ್ಞಾನ ಹೆಚ್ಚುತ್ತದೆ’ ಎಂದರು.
ಸಾಹಿತಿ ಹಾಗೂ ಶಿಕ್ಷಕ ಟಿ. ಸತೀಶ್ ಜವರೇಗೌಡ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕೆಯ ಪ್ರಗತಿ ಸಾಧಿತವಾಗಬೇಕಾದರೆ, ವಿಜ್ಞಾನ ಪಠ್ಯದಲ್ಲಿನ ಸಂಗತಿಗಳನ್ನು ಅರಿಯುವ ಕುತೂಹಲ ಬೆಳೆಸಿಕೊಳ್ಳಬೇಕು. ಇಂತಹ ಕುತೂಹಲ ಮನೋಭಾವಕ್ಕೆ ಶಿಕ್ಷಕರು ಉತ್ತೇಜನ ನೀಡುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದರು.
ಶಾಲೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿವಿಧ ತರಗತಿಗಳ ವಿದ್ಯಾರ್ಥಿಗಳು ಸುಮಾರು 59 ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳು ಮತ್ತು ಪ್ರತಿಕೃತಿಗಳನ್ನು ತಯಾರಿಸಿ ಪ್ರದರ್ಶಿಸಿದರು. ವೀಕ್ಷಣೆಗೆ ಬಂದಿದ್ದ ಅಕ್ಕಪಕ್ಕದ ಶಾಲೆಯ ವಿದ್ಯಾರ್ಥಿಗಳಿಗೆ ಈ ವಿಜ್ಞಾನ ಮಾದರಿಗಳ ಬಗ್ಗೆ ಅತ್ಯುತ್ಸಾಹದಿಂದ ಮಾಹಿತಿ ನೀಡಿದರು.

ವಿಜ್ಞಾನ ಮೇಳದಲ್ಲಿ ನವೀನ ರೀತಿಯ ವಿಶೇಷವಾದ ಅತ್ಯುತ್ತಮ ಮಾದರಿಗಳನ್ನು ತಯಾರಿಸಿದ್ದ ಕನ್ನಡ ಮಾಧ್ಯಮದ ಎನ್. ವಿಜಯಲಕ್ಷ್ಮಿ (ಪ್ರಥಮ), ನವೀನ್ (ದ್ವಿತೀಯ), ಸಮೃದ್ಧ್ (ತೃತೀಯ) ಹಾಗೂ ಆಂಗ್ಲ ಮಾಧ್ಯಮದ ಎಲ್. ಶ್ರೇಯಸ್ (ಪ್ರಥಮ), ಸಿದ್ದಪ್ಪ (ದ್ವಿತೀಯ), ಎಂ.ಎಸ್. ವರುಣ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.
ವಿಜ್ಞಾನ ಮೇಳವನ್ನು ಶಿಕ್ಷಣ ಸಂಯೋಜಕ ವಿ. ಶಂಕರ್ ಉದ್ಘಾಟನೆ ಮಾಡಿ, ಬಳಿಕ ವೀಕ್ಷಿಷಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕ್ರಿಯಾಶೀಲತೆಯ ಮೆಚ್ಚುಗೆ ವ್ಯಕ್ತಪಡಿಸಿದರು. ಮೆಲ್ಲಹಳ್ಳಿ ವಲಯದ ಸಂಪನ್ಮೂಲ ವ್ಯಕ್ತಿ ಜಿ.ಪಿ. ಮಂಜುನಾಥ್, ಮುಖ್ಯ ಶಿಕ್ಷಕಿ ಎನ್. ವೀಣಾ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿ ಎನ್.ಆರ್. ಸುಜಾತ, ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕ ಕೀರ್ತಿಕುಮಾರ್, ಜಿಪಿಟಿ ಶಿಕ್ಷಕ ಸುನೀಲ್ ಕುಮಾರ್, ಅಗಸ್ತ್ಯ ಫೌಂಡೇಶನ್ನಿನ ಮಾರ್ಗದರ್ಶಿ ಶಿಕ್ಷಕರಾದ ಸತೀಶ್ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.








