ಕೆ.ಆರ್.ನಗರ(ಜಿಟೆಕ್ ಶಂಕರ್): ಮಹಾ ಶಿವರಾತ್ರಿಯಿಂದ ಆರಂಭವಾಗಿ ಯುಗಾದಿಯ ವರೆಗೆ ನಡೆಯಲಿರುವ ತಾಲೂಕಿನ ಇತಿಹಾಸ ಪ್ರಸಿದ್ದ ಕಪ್ಪಡಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾದ ಮಹಾ ಮಾದಲಿ ಸೇವೆ ಮಾ, 12 ರಂದು ಗುರುವಾರ ನಡೆಯಲಿದೆ.
ಮಾ, 13 ರಂದು ಶುಕ್ರವಾರ ರಾಚಪ್ಪಾಜಿ, ಸಿದ್ದಪ್ಪಾಜಿ ಮತ್ತು ಚನ್ನಾಜಮ್ಮನವರ ಗದ್ದುಗೆಯನ್ನು ತೊಳೆದ ನಂತರ ಜಾತ್ರೆಯು ಮುಕ್ತಾಯಗೊಳ್ಳಲಿದ್ದು ಆದ್ದರಿಂದ ಜಾತ್ರೆಗೆ ನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಗದ್ದುಗೆ ಮತ್ತು ಸ್ವಾಮಿಗಳ ದರ್ಶನ ಪಡೆಯುತ್ತಿದ್ದಾರೆ.
ಕಳೆದ ಜಾತ್ರೆಗಳಿಗೆ ಹೋಲಿಸಿದರೆ ಈ ಬಾರಿ ಅತ್ಯಂತ ವ್ಯವಸ್ಥಿತ ಮತ್ತು ಪರಿಸರ ಸ್ನೇಹಿಯಾಗಿ ಜಾತ್ರೆಯನ್ನು ನಡೆಸಲು ಎಂ.ಎಲ್.ವರ್ಚಿಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಹೆಚ್ಚು ಜಾಗ್ರತೆ ವಹಿಸಿದ್ದು ಇದು ಭಕ್ತರ ಪ್ರಶಂಸೆಗೆ ಪಾತ್ರವಾಗಿದೆ.
ಜಾತ್ರೆಯ ಜತೆಗೆ ಕೃಷಿ ಮೇಳ, ಮುಡಿ ಸೇವೆ, ಸಿದ್ದಪ್ಪಾಜಿ ಸೇವೆ ಸೇರಿದಂತೆ ಇತರ ಪ್ರಮುಖ ಪೂಜೆ ಪುರಸ್ಕಾರ ನಡೆಯುತ್ತಿದ್ದಿಮಹಾ ಮಾದಲಿಯ ಕಡೆ ಸೇವೆಯೋಂದಿಗೆ ಜಾತ್ರೆಗೆ ವಿದ್ಯುಕ್ತ ತೆರೆ ಬೀಳಲಿದೆ.
ಜಾತ್ರೆಯ ಅಂಗವಾಗಿ ಶಾಸಕ ಡಿ.ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಯಶಸ್ವಿಗೆ ಹಲವು ತೀರ್ಮಾನಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಿಲ್ಲದೆ ಕಪ್ಪಡಿ ರಾಜಪ್ಪಾಜಿ ಯವರ ಜಾತ್ರೆ ಅಂತಿಮ ಹಂತ ತಲುಪಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾತ್ರೆಯ ಪೂಜೆ ಪುರಸ್ಕಾರಗಳ ಉಸ್ತುವಾರಿ ವಹಿಸಿರುವ ಮಂಟೇಸ್ವಾಮಿ ಮಠದ ಎಂ.ಎಲ್.ವರ್ಚಸ್ವಿ ಶ್ರೀಕಂಠೇ ಸಿದ್ದಲಿಂಗರಾಜೇ ಅರಸ್ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ ಮತ್ತು ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.
ಮಠದ ವ್ಯಾಪ್ತಿಗೆ ಒಳಪಡುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಗಳ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಒಂದೊಂದು ಶಾಲೆಯನ್ನಹ ದತ್ತು ಪಡೆದು ಅಭಿವೃದ್ಧಿ ಪಡಿಸಿಮಾದರಿಯನ್ನಾಗಿಸಲು ಚಿಂತಿಸಿದ್ದು ಒಂದು ಶಾಲೆಯನ್ನು ದತ್ತು ಪಡೆಯಲಾಗಿದ್ದು ಅದೇ ಮಾದರಿಯಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳನ್ನು ದತ್ತು ಪಡೆಯುವುದಾಗಿ ಪ್ರಕಟಿಸಿದರು.
ಕಪ್ಪಡಿ ಜಾತ್ರೆಯು ಯಶಸ್ವಿ ಮತ್ತು ಉತ್ತಮವಾಗಿ ನಡೆಯಲು ಸಹಕರಿಸಿದ ಕ್ಷೇತ್ರದ ಶಾಸಕರು, ಇತರೆ ಸಂಘ ಸಂಸ್ಥೆಗಳ ಪ್ರಮುಖರು ಆಗತ್ಯ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಿ ಜತೆಯಾಗಿ ನಿಂತವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶ್ರೀಗಳು ತಿಳಿಸಿದರು.
ಜಾತ್ರೆಗೆ ಬರುವ ಭಕ್ತರಿಗೆ ನಿರಂತರವಾಗಿ ಅನ್ನದಾಸೋಹ ನಡೆಸಿದ್ದು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಸಹಕಾರ ನೀಡುವುದರ ಜತೆಗೆ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕೇಳಿಕೊಂಡರು.ಮಠದ ವ್ಯವಸ್ಥಾಪಕ ಹೆಬ್ಬಾಳು ಲಿಂಗರಾಜು ಮತ್ತಿತರರು ಇದ್ದರು.








