ನೀರಿನ ಆವಿ ದೊಡ್ಡ ನೀರಿನ ಹನಿಗಳಾಗಿ ಘನೀಕರಣಗೊಂಡಾಗ ಮೋಡಗಳಲ್ಲಿ ಮಳೆಯು ರೂಪುಗೊಳ್ಳುತ್ತದೆ. ಹನಿಗಳು ಸಾಕಷ್ಟು ಭಾರವಾದಾಗ, ಅವು ಭೂಮಿಗೆ ಬೀಳುತ್ತವೆ…. ಇದು ನಾವೆಲ್ಲರೂ ಮಳೆಯ ಬಗ್ಗೆ ತಿಳಿದುಕೊಂಡ ಪಾಠವಾಗಿದೆ. ಮಳೆ ಸುರಿಯಲು ವೈಜ್ಞಾನಿಕ ಕಾರಣಗಳಿವೆ.. ಅದನ್ನು ವಿಜ್ಞಾನಿಗಳು ಅಧ್ಯಯನ ಮೂಲಕ ತೆರೆದಿಟ್ಟಿದ್ದಾರೆ. ಆದರೆ ನಾವು ಪ್ರಕೃತಿಯಲ್ಲಿಯೇ ದೇವರನ್ನು ಕಂಡವರು… ಮಳೆಯನ್ನು ವರುಣನೆಂದು ಕರೆದು ಪೂಜಿಸುವವರು.. ಹೀಗಾಗಿಯೇ ವೈಜ್ಞಾನಿಕತೆಯನ್ನು ಬದಿಗಿಟ್ಟು ಮಳೆಗಾಗಿ ನಾವು ದೇವರಲ್ಲಿ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದಿದೆ.. ಈಗಲೂ ಮುಂದುವರೆಯುತ್ತಿದೆ..
ಬೇಸಿಗೆ ಬರುತ್ತಿದ್ದಂತೆಯೇ ಮಳೆ ಯಾವಾಗ ಬರುತ್ತೋ? ಎಂದು ಆಕಾಶದತ್ತ ದೃಷ್ಠಿ ಹಾಯಿಸುವುದು ಮಾಮೂಲಿಯಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಆಗೊಮ್ಮೆ, ಈಗೊಮ್ಮೆ ಮಳೆಯಾಗುತ್ತದೆ. ಆದರೆ ಆ ಮಳೆಯೂ ಬಾರದೆ ಇದ್ದರೆ ಆತಂಕ ಶುರುವಾಗಿ ಬಿಡುತ್ತದೆ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಈ ವೇಳೆಗೆ ಮಳೆಯ ಅಗತ್ಯತೆಯಿದೆ. ಈ ಸಮಯದಲ್ಲಿ ಕಾಫಿ ಕೊಯ್ಲು ಆಗಿದ್ದು, ಮಳೆ ಸುರಿದರೆ ಹೂ ಅರಳಿ ಬೆಳೆಗಾರನಿಗೆ ಆಸರೆಯಾಗುತ್ತದೆ.. ನೀರಿನ ಸೌಲಭ್ಯವಿದ್ದವರು ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ. ನೀರಿನ ಸೌಲಭ್ಯವಿಲ್ಲದವರು ಮಳೆಯನ್ನು ಕಾಯುವುದು ಅನಿವಾರ್ಯವಾಗಿದೆ..

ಬೇಸಿಗೆಯಲ್ಲಿ ಮಲೆನಾಡು ಮಾತ್ರವಲ್ಲದೆ, ಎಲ್ಲ ಪ್ರದೇಶಗಳ ಜನರೂ ಮಳೆಯನ್ನು ನಿರೀಕ್ಷೆ ಮಾಡುವುದು ಸಾಮಾನ್ಯವಾಗಿದೆ. ಅದರಲ್ಲೂ ಅರಣ್ಯ ಪ್ರದೇಶಗಳು ಈಗಾಗಲೇ ಬಿಸಿಲ ಬೇಗೆಗೆ ಒಣಗಿ ಹೋಗುತ್ತಿದ್ದು, ಪ್ರಾಣಿ ಪಕ್ಷಿಗಳಿಗೆ ಆತಂಕ ಶುರುವಾಗಿದೆ. ಹಸಿರು ಮೇವನ್ನು ನಂಬಿರುವ ಪ್ರಾಣಿಗಳು ಮೇವು ಮತ್ತು ನೀರು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.. ಮಳೆಯೇ ಬಾರದೆ ಹೋದರೆ ಕೆರೆಕಟ್ಟೆಗಳಲ್ಲಿರುವ ನೀರಿನ ಪ್ರಮಾಣ ತಗ್ಗಿ ಕೊನೆಗೆ ನೀರಿಲ್ಲದೆ ಕೆರೆಕಟ್ಟೆಗಳು ಒಣಗುವ ಪರಿಸ್ಥಿತಿ ಬಂದು ಬಿಡುತ್ತದೆ.
ಈ ಸಮಯದಲ್ಲಿ ಮಳೆ ಸುರಿದರೆ ಭೂಮಿ ತಂಪಾಗಿ ವಾತಾವರಣವೂ ಆಹ್ಲಾದಕರವಾಗುವುದಲ್ಲದೆ, ಜೀವ ಸಂಕುಲಕ್ಕೆ ಒಳಿತಾಗುತ್ತದೆ.. ಆದ್ದರಿಂದಲೇ ಜನ ಮಳೆ ಸುರಿದರೆ ಸಾಕಪ್ಪಾ ಎಂದು ಪ್ರಾರ್ಥಿಸುತ್ತಾರೆ. ಮೊದಲೆಲ್ಲ ಯುಗಾದಿ ವೇಳೆಗೆ ಮಳೆ ಬರುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ವಾತಾವರಣದಲ್ಲಿ ಏರುಪೇರುಗಳು ಮಾಮೂಲಿಯಾಗಿದ್ದು, ಯಾವಾಗ ಏನಾಗುತ್ತದೆ ಎಂಬುದನ್ನು ಹೇಳುವುದೇ ಕಷ್ಟವಾಗಿದೆ. ಆದ್ದರಿಂದ ಬಹುತೇಕ ಕಡೆಗಳಲ್ಲಿ ಮಳೆಗಾಗಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು, ವಿಶೇಷ, ಪೂಜೆ, ಅಭಿಷೇಕ ಮಾಡುವುದು ನಡೆಯುತ್ತದೆ.

ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ನಮ್ಮ ಪೂರ್ವಜರು ಹಲವು ರೀತಿಯ ಪೂಜಾ ಕ್ರಮಗಳೊಂದಿಗೆ ಯಜ್ಞಗಳನ್ನು ಮಾಡುತ್ತಿದ್ದರು. ಜತೆಗೆ ಕೆಲವೆಡೆ ಮಳೆಗಾಗಿ ವಿವಿಧ ಬಗೆಯ ಮದುವೆಗಳನ್ನು ಮಾಡುತ್ತಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ. ಇವತ್ತು ಇದು ಮೂಢನಂಬಿಕೆ ಎನಿಸದಿರದು.. ಆದರೂ ಮೂಢನಂಬಿಕೆಯಾಚೆಗೂ ಕಪ್ಪೆ, ಕತ್ತೆ, ಅರಳಿ ಬೇವಿಗೆ, ಗಂಡುಮಕ್ಕಳಿಗೆ ಮದುವೆ ಮಾಡುವುದು ಇವತ್ತಿಗೂ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಇದು ಸುದ್ದಿಯಾಗಿ ಮುನ್ನಲೆಗೆ ಬರುತ್ತದೆ. ಕಾಕತಾಳಿಯವೋ ಎಂಬಂತೆ ಈ ಮದುವೆ ನಡೆದಾಗ ಮಳೆಯೂ ಬರಬಹುದು.. ನಮ್ಮ ಹಿರಿಯರು ಏನನ್ನೇ ಮಾಡಿದ್ದರೂ ಅದನ್ನು ಅನುಭವದಿಂದಲೇ ಮಾಡಿರುತ್ತಾರೆ.. ಎನ್ನುವುದು ಅಷ್ಟೇ ಸತ್ಯ…
ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಬಾರದೆ ಇದ್ದಾಗ ನಮ್ಮ ರಾಜ್ಯದ ಹಲವೆಡೆ ವಿವಿಧ ರೀತಿಯ ಮದುವೆಗಳನ್ನು ಮಾಡಿದ್ದನ್ನು ನಾವು ನೋಡಿದ್ದೇವೆ. ಮಂಡ್ಯದಲ್ಲಿ ಗಂಡುಮಕ್ಕಳಿಗೆ ಮದುವೆ ಮಾಡುವ ಮೂಲಕ ಮಳೆಯ ಜಪ ಮಾಡಿದ್ದು ಬಹಳ ಸುದ್ದಿಯಾಗಿತ್ತು. ಈ ಮದುವೆ ಹೇಗೆ ನಡೆಯಿತು ಎನ್ನುವುದನ್ನು ಮೆಲುಕು ಹಾಕಿದ್ದೇ ಆದರೆ… ಇಬ್ಬರು ಗಂಡು ಮಕ್ಕಳಿಗೆ ಹೆಣ್ಣು-ಗಂಡಿನ ವೇಷ ತೊಡಿಸಿ ವಧು-ವರರನ್ನಾಗಿ ಸಿಂಗರಿಸಿ ಅವರಿಗೆ ವಿವಾಹ ಮಾಡಿ ಬೆಳದಿಂಗಳಲ್ಲಿ ಮೆರವಣಿಗೆ ಮಾಡಿ ಮಳೆಗಾಗಿ ಪೂಜಾ ಕೈಂಕರ್ಯ ನೆರವೇರಿಸಿ ರಾತ್ರಿಯಿಡೀ ಮಳೆಗಾಗಿ ಹಾಡುಗಳನ್ನು ಹಾಡುತ್ತಾ ವರುಣನನ್ನು ಪ್ರಾರ್ಥಿಸಿದ್ದರು.

ಇನ್ನೊಂದೆಡೆ ಕಪ್ಪೆ ಮದುವೆ ಮಾಡುವ ಸಂಪ್ರದಾಯದಲ್ಲಿ ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಗಂಡು ಕಪ್ಪೆಗೆ ಯುವಕರು ಅಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪೆಗೆ ಶೃಂಗಾರ ಮಾಡಿ, ನಂತರ ಮುತ್ತೈದೆಯರು ಕಳಸ ಹೊತ್ತುಕೊಂಡು ಗಂಗೆ (ನೀರು) ತರುವ ಶಾಸ್ತ್ರ ಮಾಡುತ್ತಾರೆ ಇದರ ಜತೆಗೆ ಗಂಡು ಕಪ್ಪೆಗೆ ಯುವಕರು ಹಸೆಮಣೆ ಏರಿಸುವ ಶಾಸ್ತ್ರ ನಡೆಸುತ್ತಾರೆ. ಆ ನಂತರ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ಯುತ್ತಾರೆ.
ಆಗ ಹೆಣ್ಣು ಕಪ್ಪೆಯ ಕಡೆಯವರು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮಾಡುತ್ತಾರೆ. ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೈದೆಯರು ನವ ವಧು ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬಿ ಮದುವೆ ಶಾಸ್ತ್ರ ಮಾಡಿಸುತ್ತಾರೆ. ಆದಾದ ಬಳಿಕ ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸುತ್ತಾರೆ.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಮುತ್ತೈದೆಯರು ನೂತನ ವಧುವರರಿಗೆ ಶುಭ ಹಾರೈಸುತ್ತಾರೆ. ಆ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಅರತಕ್ಷತೆ ನಡೆಸುತ್ತಾರೆ ಆ ಮೂಲಕ ಮಳೆರಾಯನನ್ನು ಜಪಿಸುತ್ತಾರೆ.
ಕತ್ತೆಗಳಿಗೆ ನಡೆಯುವ ಮದುವೆಯಲ್ಲಿ ಗಂಡು ಹೆಣ್ಣು ಕತ್ತೆಗಳೊಂದಿಗೆ ದೇವಸ್ಥಾನಕ್ಕೆ ತೆರಳುವ ಹಿರಿಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶುಭಲಗ್ನದಲ್ಲಿ ದೇಗುಲದ ಪೂಜಾರಿ ಅರಿಶಿಣದ ಕೊಂಬಿನ ತಾಳಿಯನ್ನು ಗ್ರಾಮದ ವ್ಯಕ್ತಿಯೊಬ್ಬನ ಮೂಲಕ ಕತ್ತೆಗೆ ಕಟ್ಟಿಸಿ ಮದುವೆ ಮಾಡಿಸುತ್ತಾರೆ. ಇದೇ ವೇಳೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ನಂತರ ಎಲ್ಲರೂ ಒಂದೆಡೆ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭ ಪ್ರತಿ ಮನೆಯಲ್ಲೂ ಮಹಿಳೆಯರು ಕತ್ತೆಗಳಿಗೆ ಆರತಿ ಎತ್ತಿ ಪೂಜೆ ಸಲ್ಲಿಸುತ್ತಾರೆ. ದಾರಿಯುದ್ದಕ್ಕೂ ತಮಟೆ ಬಡಿಯುತ್ತಾ, ಕುಣಿಯುತ್ತಾ ಯುವಕರು ಮಕ್ಕಳು ಮದುವೆಯ ಮೆರವಣಿಗೆ ನಡೆಸುತ್ತಾರೆ.

ಮನುಷ್ಯ, ಪ್ರಾಣಿ, ಜೀವಚರಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಕೃತಿಯಲ್ಲಿರುವ ಅರಳಿಮರ ಮತ್ತು ಬೇವಿನಮರಕ್ಕೂ ಮದುವೆ ಮಾಡಿಸುವ ಸಂಪ್ರದಾಯವೂ ಇದೆ. ಈ ಮದುವೆಯಲ್ಲಿ ಮಹಿಳೆಯರು ಕಳಶಗಳನ್ನು ಹೊತ್ತು ತಂದು ಪೂಜೆ ಮಾಡಿ ಅರಳಿಮರ (ವರ) ಮತ್ತು ಬೇವಿನಮರ(ವಧು)ಗಳನ್ನು ಸಿಂಗಾರ ಮಾಡಿ ಮನೆತುಂಬಿಸುವ ಶಾಸ್ತ್ರವನ್ನು ಮಾಡಲಾಗುತ್ತದೆ. ಇದೇ ವೇಳೆ ಬಳೆ ತೊಡಿಸುವ ಶಾಸ್ತ್ರವೂ ನಡೆಯುತ್ತದೆ. ಬಳಿಕ ಮಂಗಳವಾದ್ಯದೊಂದಿಗೆ ತಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುತೈದೆಯರು ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಪುರೋಹಿತರು ಮಂತ್ರಗಳನ್ನು ಪಠಿಸಿ ಮಾಂಗಲ್ಯಧಾರಣೆಯೊಂದಿಗೆ ಮದುವೆ ಮಾಡಿಸುತ್ತಾರೆ. ಇಷ್ಟು ಆದ ಬಳಿಕ ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆಯೂ ಮಾಡಲಾಗುತ್ತದೆ.
ಮನುಷ್ಯ ಪ್ರಕೃತಿಯ ಒಡನಾಟದಲ್ಲಿ ಬೆಳೆದವನು ಹೀಗಾಗಿ ಅವತ್ತಿನ ದಿನಗಳಲ್ಲಿ ಇವತ್ತಿನಂತೆ ಪ್ರಕೃತಿಗೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಹೀಗಾಗಿ ಪ್ರಕೃತಿಯನ್ನು ನಂಬಿದ್ದ ಪೂರ್ವಜರು ತಮ್ಮ ನಂಬಿಕೆಯನುಸಾರ ಪದ್ಧತಿಗಳನ್ನು ಮಾಡಿಕೊಂಡು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಇವತ್ತು ಹಾಗಿಲ್ಲ ಮಳೆ ಕಾಲಕ್ಕೆ ಸರಿಯಾಗಿ ಸುರಿಯದಿರಲು ಪ್ರಕೃತಿ ನಾಶವೂ ಕಾರಣವಾಗಿದೆ.. ನಾವು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದಷ್ಟೂ ಅದರ ಪರಿಣಾಮಗಳು ಪ್ರಕೃತಿಯ ಮೇಲಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿ ಏರುಪೇರುಗಳು ಸಂಭವಿಸುತ್ತಿವೆ.. ಅದು ಏನೇ ಇರಲಿ… ಪ್ರಕೃತಿಯನ್ನು ಕಾಪಾಡುವ ಕೆಲಸವನ್ನು ನಾವು ಮಾಡಿದರೆ ಇಂತಹ ಮದುವೆಗಳನ್ನು ಮಾಡಬೇಕಾದ ಅನಿವಾರ್ಯತೆ ಬರಲಾರದೇನೋ?
B M Lavakumar
ಮನೆಯ ತಾರಸಿಯಲ್ಲಿ ಪುಷ್ಪಲೋಕ… ಆಸಕ್ತಿಯಿದ್ದರೆ ಇರುವ ಜಾಗದಲ್ಲಿಯೇ ಹೂಗಿಡ ಬೆಳೆಸುವುದು ಕಷ್ಟವೇನಲ್ಲ..!








