ಅನಾದಿ ಕಾಲದಿಂದ ಬಂಡವಾಳ ಶಾಹಿಗಳ ಐಷಾರಾಮ ಬದುಕನ್ನು ಕಟ್ಟಿಕೊಟ್ಟವರೇ ಕಾರ್ಮಿಕರು. ಹೀಗಾಗಿ ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು, ಬೆಳ್ಳಿಲೋಟದಲ್ಲಿ ಕುಡಿದು, ಸುಖದ ಸುಪ್ಪತ್ತಿಗೆಯಲ್ಲಿ ಮಲಗಿ, ಸುರಲೋಕದ ಜೀವನ ನಡೆಸಲು ಸಾಧ್ಯವಾಯ್ತು. ಹೀಗಾಗಲು ನೇರವಾಗಿ ಮೂಲ ಕಾರಣರಾದವರೆ ಈ ಶ್ರಮಿಕವರ್ಗ… ಈ ಶ್ರಮಿಕವರ್ಗಕ್ಕೊಂದು ದಿನ ಮೀಸಲಿಡಲಾಗಿದ್ದು ಅದುವೇ ಮೇ ಡೇ… ಈ ದಿನದ ಆರಂಭ ಹೇಗಾಯಿತು ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಹೇಳಿದ್ದಾರೆ…
ದುಡಿಯುವ ಶಾಪಕ್ಕೆ ಒಂದು ವರ್ಗವು ಬದ್ಧವಾಗಿದ್ದರೆ ಸುಖ ಪಡುವ ಯೋಗಕ್ಕೆ ಇನ್ನೊಂದು ವರ್ಗ ಸಿದ್ಧವಾಗಿರುತ್ತದೆ. “ಹಣೆಬರಹ, ವಿಧಿವಿಲಾಸ, ಪಾಲಿಗೆ ಬಂದದ್ದು ಪಂಚಾಮೃತ” ಮುಂತಾದ ಒಣವೇದಾಂತ ಮಾತುಗಳನ್ನು ಬದಿಗಿಟ್ಟು ಸೈದ್ಧಾಂತಿಕ, ಸಾಮಾಜಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರದ ಮೇಲೆ ಚಿಂತಿಸಿದಾಗ ಪ್ರಾಮಾಣಿಕ ಉತ್ತಮ ಫ಼ಲಿತಾಂಶ ಲಭಿಸಿ ಸತ್ಯವಾಗಿಯೂ ಪ್ರತಿಫಲ ದೊರಕುತ್ತದೆ?!

ದುಡಿಯುವವರ ಮತ್ತು ಕುಳಿತು ತಿನ್ನುವವರ ನಡುವೆ ಇರುವ ತಾರತಮ್ಯ ದೂರವಾಗಿ ಬಡವ ಬಲ್ಲಿದ ಎಂಬ ಭೇದ ಭಾವ ಮಾಯವಾಗುತ್ತದೆ. ಮಾನವೀಯ ಮೌಲ್ಯದ ಉನ್ನತ ಧರ್ಮವು ಉದಯವಾಗುತ್ತದೆ! ಹೀಗಾದಾಗ ಮಾತ್ರ ದುಡಿಯುವ ಬಳಗಕ್ಕೆ ನ್ಯಾಯವಾಗಿ ಸಿಗಬೇಕಾದ ಲಾಭಾಂಶದ ಪಾಲೂ ಸಹ ದೊರಕುತ್ತದೆ. “ಸರ್ವರಿಗೂ ಸಮಪಾಲು, ಸಕಲರಿಗೂ ಸಮಬಾಳು” ನಾಣ್ಣುಡಿ ಅನ್ವರ್ಥ ವಾಗುತ್ತದೆ? ಹಂಚಿ ತಿನ್ನುವವನೆ ಮಹಾತ್ಮ!
ಅಪ್ಪಹಾಕಿದ ಆಲದಮರಕ್ಕೆ ಜೋತುಬಿದ್ದು ನೇತಾಡುವುದನ್ನು ಬದಿಗಿಟ್ಟು ಈಗಲಾದರೂ ಇವತ್ತಿನ ನವಯುವ ಉದ್ಯಮಿಗಳು ಬದಲಾವಣೆ ಜಗತ್ತಿನ ನಿಯಮ ಎಂಬುದನ್ನ ಅರಿತು ತಮ್ಮನ್ನು ತಾವೇ ಬದಲಾಯಿಸಿ ಕೊಳ್ಳುವುದು ಸರ್ವರೀತಿ ಶ್ಲಾಘನೀಯ! ಕಾರ್ಮಿಕರು ತಮ್ಮ ಜೀವ ಮತ್ತು ಜೀವನವನ್ನು ಮುಡಿಪಾಗಿಟ್ಟು ಅವರ ಧಣಿಗಳು, ಮಾಲೀಕರು ಜಾಗತಿಕ ಮಟ್ಟದಲ್ಲಿ ಮೇಲೇರುವಂತೆ ಅಥವಾ ಸರ್ವತೋಮುಖ ಉದ್ಧಾರ ಆಗುವಂತೆ ಬೆವರು ಹರಿಸಿ, ರಕ್ತ ಸುರಿಸಿ, ಹಗಲಿರುಳು ದುಡಿಯುತ್ತಾರೆ. ಇಂಥ ಕಾರ್ಮಿಕರ ಜೀವನ ಶೈಲಿ ಮಾರ್ಪಡಿಸುವುದು ಪ್ರತಿಯೊಬ್ಬ ಮಾಲೀಕನ ಆದ್ಯ ಕರ್ತವ್ಯ? ಕಾರ್ಮಿಕರ ಮತ್ತು ಮಾಲೀಕರ ನಡುವೆ ಪರಸ್ಪರ understanding, cooperation, coordination ನಿರಂತರವಾಗಿ ಸಾಗಿದಾಗ ಮಾತ್ರ ಕಾರ್ಮಿಕ ಸಮಾಜವು ಸಂಪೂರ್ಣ ಪ್ರಗತಿ ಸಾಧಿಸುತ್ತದೆ ಇಡೀ ದೇಶವು ಉನ್ನತ ಅಭಿವೃದ್ಧಿ ಹೊಂದುತ್ತದೆ!

ಮೇ-ಡೇ … ಐತಿಹಾಸಿಕ ಹಿನ್ನೆಲೆ ಏನುಗೊತ್ತಾ?
ಕ್ರಿ.ಶ.108ರಲ್ಲಿ ರೋಮ್ ಸಾಮ್ರಾಜ್ಯದ ಕೊಮ್ಮೊಡಸ್ ಚಕ್ರವರ್ತಿಯು ಮೊಟ್ಟಮೊದಲ ಕಾರ್ಮಿಕ ದಿನಾಚರಣೆ ಮೇಯುಮ ವನ್ನು ತಿಂಗಳುಪೂರ್ತಿ ಆಚರಿಸಿದ ಉಲ್ಲೇಖವಿದೆ. ಕಾಲಕ್ರಮೇಣ ಏಪ್ರಿಲ್ 27ರಿಂದ ಮೇ 3 ರವರೆಗೆ 1 ವಾರ ಕಾಲ ಆಚರಿಸಲ್ಪಟ್ಟು 6ನೆ ಶತಮಾನದಿಂದ ಕೇವಲ 3 ದಿನಗಳಿಗೆ ಸೀಮಿತವಾಯಿತು. ಈ ದಿನವನ್ನು ಯೂರೋಪ್ ರಾಷ್ಟ್ರಗಳಲ್ಲಿ ಹಬ್ಬವನ್ನಾಗಿ ಆಚರಿಸಲು ಪ್ರಾರಂಭವಾಯ್ತು. 17ನೇ ಶತಮಾನದ ಜರ್ಮನಿಯಲ್ಲಿ ಮೇ1ರಂದು-ಹಿಂದಿನ-ಮುಂದಿನ ದಿನಗಳಂದು ಅಮೋಘವಾಗಿ ಆಚರಿಸಲು ಪ್ರಾರಂಭಿಸಿದರೆ ಫ಼್ರಾನ್ಸ್ ಮತ್ತು ರಷ್ಯ ದೇಶಗಳಲ್ಲಿ ವರ್ಣರಂಜಿತವಾಗಿ ಆಚರಿಸಲು ಶುರುವಾಯ್ತು.

1889ರಲ್ಲಿ ಪ್ಯಾರಿಸ್‍ನಲ್ಲಿ ಜರುಗಿದ ಅಂತರ್ ರಾಷ್ಟ್ರ ಸಾಮಾಜಿಕ ಮತ್ತು ಕಾರ್ಮಿಕ ಕ್ಷೇಮಾಭಿವೃದ್ಧಿ ಮಂಡಳಿ ಸರ್ವಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಮೇ-1 ಇಂಟರ್ ನ್ಯಾಷನಲ್ ಲೇಬರ್ ಡೇ ಎಂದು ಅಧಿಕೃತ ಘೋಷಣೆಯಾದ ನಂತರ 1890ರಿಂದ 108 ದೇಶಗಳು ಮೇ-ಡೇ ಆಚರಣೆ ಮಾಡಲು ಆರಂಭಿಸಿದವು. 20ನೇ ಶತಮಾನದಿಂದ ಲೀಗ್ ಆಫ್ ನೇಶನ್ಸ್ ಸೂಚನೆಯಂತೆ ಪ್ರತಿ ವರ್ಷ ಮೇ1ರಂದು ವಿಶ್ವದ ಬಹುತೇಕ ಎಲ್ಲಾ ದೇಶಗಳು ಮೇ-ದಿನಾಚರಣೆ ಅಥವ ಕಾರ್ಮಿಕ ದಿನಾಚರಣೆಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿವೆ.
ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಅಂತಾರಾಷ್ಟ್ರೀಯ ಕಾರ್ಮಿಕರ ಸಮಸ್ಯೆಗಳಿಗೆ ಮೀಸಲಾದಂತೆ ವಿಶ್ವ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಶ್ವ ಕಾರ್ಮಿಕರ ನ್ಯಾಯಾಲಯ, ವಿಶ್ವ ಕಾರ್ಮಿಕರ ಕಾಯಿದೆ/ನಿಯಮಾವಳಿ/ಕಾನೂನು, ಮುಂತಾದವು ಜಾರಿಗೆ ಬಂದವು. ತತ್ಪರಿಣಾಮ, ಇತೀಚಿನ ವರ್ಷಗಳಲ್ಲಿ ಕಾರ್ಮಿಕನೂ ಸಹ ಆಡಳಿತ ವರ್ಗದ/ಮಾಲೀಕತ್ವ ಮಂಡಲಿಯ ಕಷ್ಟ ಸುಖ, ಲಾಭ-ನಷ್ಟ, ಮುಂತಾದವುಗಳಲ್ಲಿ ಪಾಲುದಾರ ನಾಗಿರುವುದು ಎಲ್ಲರೂ ಮೆಚ್ಚುವಂತಾದ್ದು.

ಭಾರತದಲ್ಲಿ ಮೊಟ್ಟಮೊದಲ ಆಚರಣೆ…
“ಲೇಬರ್ ಕಿಸಾನ್ ಪಾರ್ಟಿ ಆಫ಼್ ಹಿಂದೂಸ್ತಾನ್” ವತಿಯಿಂದ 1.5.1923ರಂದು ಮದ್ರಾಸ್[ಚೆನ್ನೈ]ನಲ್ಲಿ ಆಚರಿಸಲ್ಪಟ್ಟಿತು! ಇದೇ ದಿನ ಪ್ರಥಮ ಬಾರಿಗೆ ಕಾರ್ಮಿಕರ ಚಿಹ್ನೆಯಾಗಿ ಕೆಂಪು ಬಾವುಟವನ್ನು ಉಪಯೋಗಿಸಲಾಯ್ತು. ತದನಂತರವಷ್ಟೆ ಕಮ್ಯುನಿಸ್ಟ್ ಪಕ್ಷಗಳು ಇದೇ ಕೆಂಪು ಬಾವುಟವನ್ನು ತಮ್ಮ ರಾಜಕೀಯ ಪಕ್ಷದ ಗುರುತನ್ನಾಗಿ ಮಾಡಿಕೊಂಡವು.
ಮೇ ದಿನಾಚರಣೆಯಂದು ಪ್ರತಿಯೊಬ್ಬ ಕಾರ್ಮಿಕರ ಶ್ರಮವನ್ನು ಅವರ ಮಡದಿ ಮಕ್ಕಳ ಸಾಧನೆ ಮುಂತಾದವುಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಿ, ಬಹುಮಾನಿಸಿ ಗೌರವಿಸುವ ಪದ್ಧತಿಯೂ ಪ್ರಾರಂಭವಾಯ್ತು. ಭಾರತ ದೇಶದಲ್ಲು ಸಹ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಂತರ್ರಾಷ್ಟ್ರೀಯ ಶ್ರಮಿಕ್ ದಿವಸ್ ಆಚರಿಸಲು ಮೇ1ರಂದು ಸಾರ್ವಜನಿಕ ರಜೆ ಘೋಷಿಸಿತು. ಕನ್ನಡದಲ್ಲಿ ‘ಕಾರ್ಮಿಕರ ದಿನಾಚರಣೆ’ ಹಿಂದಿಯಲ್ಲಿ ‘ಕಾಮ್ಗರ್ ದಿನ್’ ಎಂದೂ ಆಚರಿಸಲ್ಪಡುತ್ತಿದೆ. ಜೈಕಾರ್ಮಿಕ್! ಜೈಭಾರತ್!









