ಮೈಸೂರು: ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ನಿಗದಿತ ಎರಡನೇ ಕಾರ್ಯಕ್ರಮವಾಗಿ ಸರಗೂರು ತಾಲೂಕು ಬಿ ಮಟಕೆರೆ ಗ್ರಾಮದಲ್ಲಿ ಸುತ್ತೂರು ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಕೃಪಾಶೀರ್ವಾದ ಆಶೀರ್ವಾದ ಮತ್ತು ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ ಎಸ್ ಪಿ ಮಂಜುನಾಥ್ ರವರ ಮಾರ್ಗದರ್ಶನ ಮತ್ತು ಸಹಕಾರದಂತೆ ಜೆಎಸ್ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹ ಭಾಗಿತ್ವದಿಂದ ಬೃಹತ್ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಮಾರ್ಚ್ 15ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಹಿನ್ನಲೆಯಲ್ಲಿ ಪದಾಧಿಕಾರಿ ಸಮಿತಿ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಸಂಪರ್ಕಿಸಿ ಪೂರ್ಣ ಸಹಕಾರದ ಜೊತೆಗೆ ಶಿಬಿರದ ಉದ್ಘಾಟನೆಗೆ ವಿದ್ಯುಕ್ತವಾಗಿ ಆಹ್ವಾನಿಸಲಾಯಿತು.ಸಂಘದ ಈ ಸಾರ್ವಜನಿಕ ಉಪಯುಕ್ತ ಚಟುವಟಿಕೆಗೆ ತಮ್ಮ ಪೂರ್ಣ ಸಹಕಾರ ಬಯಸಿದ ಹಿನ್ನಲೆಯಲ್ಲಿ ಶಾಸಕರು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿ ವರ್ಗಕ್ಕೆ ತಕ್ಷಣವೇ ಸೂಚಿಸುವುದಾಗಿ ತಿಳಿಸಿದರಲ್ಲದೆ, ಖಂಡಿತವಾಗಿ ಪಾಲ್ಗೊಳ್ಳುವುದಾಗಿ ಸಂಘದ ಸಮಾಜಮುಖಿ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಇದೇ ವೇಳೆ ತಾಲೂಕಿನ ವಿವಿಧ ಮಠಾಧೀಶರು ಮತ್ತು ಗ್ರಾಮದ ಮುಖಂಡರನ್ನು ಭೇಟಿ ಮಾಡಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಧಿಕೃತವಾಗಿ ಆಹ್ವಾನಿಸಲಾಯಿತು. ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ ಎಸ್ ಪಿ ಮಂಜುನಾಥ್ ರವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರ್ಯಕ್ರಮದ ಉದ್ಘಾಟನೆಗೆ ವಿದ್ಯುಕ್ತವಾಗಿ ಆಹ್ವಾನಿಸಲಾಯಿತು. ಕಾರ್ಯಕ್ರಮದ ಪೂರ್ಣ ಸಿದ್ಧತೆ ಬಗ್ಗೆ ವಿವರ ನೀಡಿದ್ದು, ಉಪಯುಕ್ತ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಮುಖಂಡರಾದ ಅಣ್ಣಯ್ಯ ಸ್ವಾಮಿ ಗ್ರಾಮದ ವತಿಯಿಂದ ಈಗಾಗಲೇ ಕಾರ್ಯಕ್ರಮಕ್ಕೆ ಅಗತ್ಯವಿರುವ ಸ್ಥಳೀಯ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಪ್ರಮುಖ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದ್ದು, ತಪಾಸಣೆಗೆ ಬೇಕಾದ ಕಟ್ಟಡ ಶಾಮಿಯಾನ ಸ್ವಚ್ಛತೆ ಮತ್ತು ಪಾಲ್ಗೊಳ್ಳುವ ಸಿಬ್ಬಂದಿಗೆ ಬೆಳಗಿನ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಶಿಬಿರದ ಉಪಯುಕ್ತತೆ ಪಡೆದುಕೊಳ್ಳಲು ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಮನೆ ಮನೆಗೆ ಪ್ರಚಾರ ನಡೆಸುವುದು ಸೇರಿದಂತೆ ಇತರೆ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಗ್ರಾಮದ ಮುಖಂಡರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಅಣ್ಣಯ್ಯಸ್ವಾಮಿ ತಿಳಿಸಿದ್ದಾರೆ.

ಸರಗೂರು ತಾಲೂಕು ಮತ್ತು ಎಚ್ ಡಿ ಕೋಟೆ ತಾಲೂಕಿನ ಗೌರವಾನ್ವಿತ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಮಹಿಳಾ ಘಟಕದ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚುನಾಯಿತ ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘದ ಪರವಾಗಿ ವಿನಂತಿಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಕೊಳ್ಳೇಗಾಲದ ಸಿದ್ದಲಿಂಗಸ್ವಾಮಿ, ಸಿದ್ದಪ್ಪ ಬಾಗಳಿ, ಮಹೇಶ್ ಗಜೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು








