ಪಾತಾಳಕ್ಕೆ ಕುಸಿದ ತಂಬಾಕು ಬೆಲೆ.. ತಂಬಾಕು ಸುಟ್ಟು, ರಸ್ತೆ ತಡೆ ಮಾಡಿ ಆಕ್ರೋಶ ಹೊರ ಹಾಕಿದ ರೈತರು

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮತ್ತೆ ತಂಬಾಕು ದರ ಪಾತಾಳಕ್ಕೆ ಕುಸಿತ ಕಂಡಿದ್ದರಿಂದ ರೊಚ್ಚಿಗೆದ್ದ ರೈತರು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯನ್ನು ಬಂದ್ ಮಾಡಿಸಿ, ತಂಬಾಕು ಸುಟ್ಟು ರಸ್ತೆ ತಡೆ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬುಧವಾರ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿತ ಕಂಡಿದ್ದರಿಂದ ರೈತರು ಕಟ್ಟೆಮಳಲವಾಡಿ ಡಿ.ದೇವರಾಜ ಅರಸು ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕಳೆದ 15 ದಿನಗಳ ಹಿಂದೆ ಇದೇ ರೀತಿ ತಂಬಾಕು ಖುಷಿತ ಕಂಡು ರೈತರು ಮಾರುಕಟ್ಟೆ ಬಂದ್ ಮಾಡಿದ್ದರು ಜೊತೆಗೆ ರಸ್ತೆ ತಡೆ ಮಾಡಿ ಜನ ಪ್ರತಿನಿಧಿಗಳು ಕೂಡ ರೈತರ ಸಮಸ್ಯೆಗಳನ್ನು ಆಲಿಸಿ ದರ ಏರಿಕೆ ಬಗ್ಗೆ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಲೆ ಕೊಡಿಸುವ ಭರವಸೆ ನೀಡಿದ್ದರು

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸಚಿವ ಕೆ. ವೆಂಕಟೇಶ್, ಸಂಸದ ಯದುವೀರ್ ಒಡೆಯರ್ ಶಾಸಕರಾದ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ವಾಲೆ ಮಂಜು, ರವಿಶಂಕರ್, ಮಾಜಿ ಶಾಸಕರು ಸಂಸದರು ಹಾಗೂ ತಂಬಾಕು ಮಂಡಳಿಯ ED, ನಿರ್ದೇಶಕರು, ಚೇರ್ಮನ್, ಹಾಗೂ ಟ್ರೇಡರ್ಸ್ ಗಳೊಂದಿಗೆ ಸಭೆ ನಡೆಸಿ ರೈತರಿಗೆ ಉತ್ತಮ ಬೆಲೆ ಕೊಡಿಸಲು ಕ್ರಮ ಕೈಗೊಳ್ಳುವಂತೆ ಸಭೆ ನಡೆಸಿ ಭರವಸೆ ನೀಡಿದರು

ನಂತರ ಮತ್ತೆ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ಇತ್ತೀಚೆಗೆ ರೈತರು ಟ್ರೇಡರ್ಸ್ ಹಾಗೂ ಮಂಡಳಿಯ ಅಧಿಕಾರಿಗಳ ಸಭೆ ನಡೆಸಿ ರೈತರು ಅವಹಾಲುಗಳನ್ನು ಸ್ವೀಕರಿಸಿ ರೈತರಿಗೆ ಉತ್ತಮ ಬೆಲೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ ಸಭೆಯ ನಂತರವೂ ಮತ್ತಷ್ಟು ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವುದು ರೈತರಿಗೆ ನೋವುಂಟು ಮಾಡಿದೆ.

ಸುಳ್ಳು ಆಶ್ವಾಸನೆ ನೀಡಿ ತಪ್ಪಿಸಿಕೊಂಡ ಅಧಿಕಾರಿಗಳು..
ಇನ್ನು ಚಿಲ್ಕುಂದ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಆಂಧ್ರ ಮಾರುಕಟ್ಟೆಯನ್ನು ಕರ್ನಾಟಕದ ಮಾರುಕಟ್ಟೆ ಮುಗಿಯುವವರಿಗೂ ಯಾವುದೇ ಕಾರಣಕ್ಕೂ ಪ್ರಾರಂಭಿಸಬಾರದು ಎಂದು ರೈತರು ಹೇಳಿದಾಗ ಮಂಡಳಿಯ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿ ಈಗಾಗಲೇ ಆಂಧ್ರಪ್ರದೇಶದಲ್ಲಿ ಫೆ.22ರಂದು ಮಾರುಕಟ್ಟೆ ಪ್ರಾರಂಭಿಸಲು ಆದೇಶ ಹೊರಡಿಸಿರುವುದು ರೈತರ ಆಕ್ರೋಶ ಹೆಚ್ಚಾಗಿದೆ.

ಈ ವರ್ಷದ ಮಾರುಕಟ್ಟೆಯ ತಂಬಾಕು ಬೆಳೆಯ ವ್ಯತ್ಯಾಸ..
ಮಾರುಕಟ್ಟೆ ಪ್ರಾರಂಭವಾದಾಗ ಉತ್ತಮ ದರ್ಜೆಯ ತಂಬಾಕು 320 ರೂ ಇದ್ದ ಬೆಲೆ ಬುದುವಾರ 210ಗೆ ಬೆಲೆ ಪಾತಾಳಕ್ಕೆ ಇಳಿದಿದೆ. ಮಧ್ಯಮ ದರ್ಜೆಯ ತಂಬಾಕು 280 ರೂ ಇದ್ದ ಬೆಲೆ 165 ರೂಗೆ ಇಳಿದಿದೆ. ಇನ್ನು ಎನ್ ಓ ಜಿ ತಂಬಾಕನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವುದಕ್ಕೆ ಕಂಪನಿಗಳು ಹಿಂದೇಟು ಹಾಕುತ್ತಿವೆ.

ಕಟ್ಟೆಮಳಲವಾಡಿಯ ತಂಬಾಕು ಬೆಳೆಗಾರ ಅಶೋಕ್ ಮಾತನಾಡಿ ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಮಂಡಳಿಯ ಇಡಿ ರಾಜಕಾರಣಿಗಳು ಬರಬೇಕು ಎಂದು ಧರಣಿ ಮಾಡಿದ್ದೆವು. ಅದರಂತೆ ರಾಜಕಾರಣಿಗಳು ಡಿಸಿ ನೇತೃತ್ವದಲ್ಲಿ ಹಾಗೂ ಮಂಡಳಿಯ ಅಧಿಕಾರಿಗಳು ರೈತರೊಂದಿಗೆ ಸಭೆ ಮಾಡಿದರು ಪ್ರಯೋಜನವಿಲ್ಲ ಸಭೆ ಮಾಡಿದ ನಂತರ ಬೆಲೆ ಪಾತಾಳಕ್ಕೆ ಕುಸಿತವಾಗಿದೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದರು, ಕರ್ನಾಟಕದ ತಂಬಾಕುರೈತರ ಪರವಾಗಿ ಇದುವರೆಗೂ ಚಕಾರ ಎತ್ತಿಲ್ಲ ಕೇಂದ್ರ ಸಚಿವರಾದ ಕುಮಾರಸ್ವಾಮಿ ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಮನವಿ ಮಾಡಿದ್ದಾರೆ.

ಶಿರೇನಹಳ್ಳಿ ತಂಬಾಕು ಬೆಳೆಗಾರ ಮಹದೇವ್ ಮಾತನಾಡಿ ರೈತರಿಗೆ ರಾಜಕಾರಣಿಗಳು ಭರವಸೆ ನೀಡಿ ಹೋದರೆ ಸಾಲದು ಖುದ್ದು ನಿಂತು ತಂಬಾಕಿಗೆ ಬೆಲೆ ಕೊಡಿಸಿದಾಗ ನುಡಿದಂತೆ ನಡೆದುಕೊಂಡ ರಾಜಕಾರಣಿ ಎಂದು ಒಪ್ಪಿಕೊಳ್ಳ ಬಹುದು ಹೋದ ಪುಟ್ಟ ಬಂದ ಪುಟ್ಟ ಎನ್ನುವಂತಾಗಬಾರದು ಎಂದು ಹೇಳಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ತಂಬಾಕು ಬೆಲೆ ಕುಸಿಯುತ್ತಿದೆ. ಸಾಲ ಮಾಡಿ ಬೆಳೆ ಬೆಳೆದ ಬೆಳೆಗಾರರು ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ.. ಸರ್ಕಾರ ಇವರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.







