ಚಾಮರಾಜನಗರ: ಸಂತೆಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದ ಗ್ರಾಮ ದೇವತೆಯಾದ ಉರುಕಾತೇಶ್ವರಿ ಹಾಗೂ ಶಂಭುಲಿಂಗೇಶ್ವರ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಕೊಂಡೋತ್ಸವ ಹತ್ತು ಹಲವು ವಿಶೇಷತೆಯನ್ನು ಹೊಂದಿದ್ದು, ಪ್ರಮುಖ ಗ್ರಾಮ ದೇವತೆ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಹಬ್ಬದಲ್ಲಿ ಗ್ರಾಮದ ಗ್ರಾಮಸ್ಥರು ಜಾತಿ ಬೇಧ ಮರೆತು ಒಂದಾಗಿ ವರ್ಷದ ಕೊನೆಯಲ್ಲಿ ಮಾಡುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು.

ಹಬ್ಬದ ಪ್ರಯುಕ್ತ ಗ್ರಾಮದ ಬೀದಿ ಬೀದಿಗಳಲ್ಲೂ ಮಹಿಳೆಯರು ರಂಗೋಲಿಯಿಟ್ಟು ದೇವರ ದರ್ಶನ ಮಾಡುವುದರ ಮುಖಾಂತರ ಹಬ್ಬಕ್ಕೆ ಮೆರಗು ನೀಡುತ್ತಾರೆ. ಬೆಳಿಗ್ಗೆ 6 ಗಂಟೆಗೆ ಶಿವಲಿಂಗೇಶ್ವರ ಅರ್ಚಕರ ಮನೆ ಮುಂದೆ ಭಕ್ತರ ಜಮಾಯಿಸಿ ಸತ್ತಿಗೆ ಸುರಪಾನಿ , ವಾದ್ಯ, ತಮಟೆ ಜೊತೆ ಹೊರಟು ಉರುಕಾತೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತಾಧಿಗಳು ಜೈಕಾರ ಕೂಗುತ್ತಾ ಅಲ್ಲಿನ ಅರ್ಚಕರನ್ನು ಪ್ರೇರೇಪಿಸುವುದು ವಿಶೇಷವಾಗಿದೆ.

ಆ ನಂತರ ಅಲ್ಲಿನ ತೆಳ್ಳನೂರು ದೇವಾಲಯ ಅರ್ಚಕರು ಗ್ರಾಮದ ಯಲ್ಲಗೆ ಸೇರಿರುವ ಮರವನ್ನು ಓಡಿ ಹೋಗಿ ತಬ್ಬಿ ಕೊಳ್ಳುವುದರಿಂದ ಆ ಮರವನ್ನು ಗ್ರಾಮಸ್ಥರು ಜೊತೆ ಒಗ್ಗೂಡಿ ಅಂದೆ ಕಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿ ಊರುಕಾತೇಶ್ವರಿ ದೇವಾಲಯಕ್ಕೆ ತೆರಳಿ ಇದೆ ದಿನ ಮರಕ್ಕೆ ಬೆಂಕಿ ಹಾಕಿ ಕೆಂಡವನ್ನು ಮಾಡಿ ರಾಶಿ ಹಾಕುತ್ತಾರೆ.
ಇದಾದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಊರುಕಾತೇಶ್ವರಿ ದೇವಾಲಯದಕ್ಕೆ ತೆರಳಿ, ದೇವಾಲಯ ಮುಂದೆ ರಾಶಿಯಾಗಿರುವ ಕೆಂಡವನ್ನು ಕೊಳಗದಲ್ಲಿ ಎರಡು ಕೈ ಗಳಿಂದ ತುಂಬಿ ಮೈ ಮೇಲೆ ಹಾಕಿ ಕೊಳ್ಳುತ್ತಾರೆ. ಈ ದೃಶ್ಯ ಮೈಮನ ರೋಮಾಂನಗೊಳ್ಳುತ್ತದೆ.

ಇದನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಾದ ಬಾನಹಳ್ಳಿ, ಮೂಗೂರು ಅಲಹಳ್ಳಿ, ಕಮರವಾಡಿ ಸಂತೆಮರಹಳ್ಳಿ ಬಸವಟ್ಟಿ ಸೇರಿದಂತೆ ಜಿಲ್ಲೆ ಹಾಗೂ ಹೊರಗಿನಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.ಜಾತ್ರೆಗೆ ಆಗಮಿಸುವ ಭಕ್ತರಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.








