ಸರಗೂರು(ದಾಸೇಗೌಡ): ಇದೇ ಮಾರ್ಚ್ 19ರಿಂದ 21ರವರೆಗೆ ಇತಿಹಾಸ ಪ್ರಸಿದ್ಧ ನಾಡಿನ ಅಧಿದೇವತೆ ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಲಾಗುತ್ತಿದ್ದು ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಸಂಬಂಧ ಕಪಿಲ ನದಿಗೆ ಹೊಂದಿಕೊಂಡಂತಿರುವ ಹಾಲುಗಡು, ಇಟ್ನ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಸಮಿತಿ, ಇಟ್ನ ಗ್ರಾಮಸ್ಥರು ಹಲವು ರೀತಿಯ ಸಿದ್ಧತಾ ಕಾರ್ಯಕ್ರಮಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಾ.19 ರಂದು ಚಾಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರ ಉತ್ಸವಮೂರ್ತಿಯನ್ನು ತಂದು ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಪೂಜಿಸಲಾಗುವುದು. ನಂತರ ಭಕ್ತರು ಜಪ್ಪದಕಟ್ಟೆಯಲ್ಲಿನ ಚಿಕ್ಕದೇವಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ತಾಯಿ ದರ್ಶನ ಪಡೆದು, ಇಷ್ಟಾರ್ಥ ದೇವರಿಗೆ ಹರಕೆ ತೀರಿಸಲಿದ್ದಾರೆ. ಸಂಜೆ 3.30 ಕ್ಕೆ ಅಮ್ಮನವರನ್ನು ಗೂಳಿ ಮಂಟಪದಲ್ಲಿ ಪೂಜಿಸಿದ ಬಳಿಕ ಹಾಲಿನ ಮಂಟಪದಲ್ಲಿ ಪೂಜಿಸಲಾಗುವುದು.
ಸಂಜೆ 4ಕ್ಕೆ ಉತ್ಸವ ಮೂರ್ತಿಯು ಹಾಲುಗಡುವಿನಿಂದ ಇಟ್ನ ಗ್ರಾಮಕ್ಕೆ ವಾದ್ಯಗೋಷ್ಠಿಗಳೊಂದಿಗೆ ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗುವುದು. ರಾತ್ರಿ 9 ಕ್ಕೆ ಚಿಕ್ಕದೇವಮ್ಮ ಅಮ್ಮನವರನ್ನು ಕುದುರೆಯ ರಥದ ಮೇಲೆ ಕೂರಿಸಿ ಹೂವಿನಿಂದ ಅಲಂಕರಿಸಿ ವಿವಿಧ ಕಲಾತಂಡಗಳ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.

ಮಾ.20ರಂದು ಬೆಳಗ್ಗೆ 4 ಕ್ಕೆ ಬಾಣ ಬಿರುಸುಗಳ ಸಮೇತ ವಿಶೇಷ ಪೂಜೆ ಸಲ್ಲಿಸಲಾಗುವುದು. ಬಳಿಕ ಮಾರಮ್ಮನ ದೇವಸ್ಥಾನದಲ್ಲಿ ಪೂಜಿಸಲಾಗುವುದು. ಬೆಳಗ್ಗೆ 8ಕ್ಕೆ ಕಪಿಲಾ ನದಿಯಲ್ಲಿ ಚಿಕ್ಕದೇವಮ್ಮ ಅಮ್ಮನವರಿಗೆ ಕಪಿಲ ನದಿಯಲ್ಲಿ ತೀರ್ಥೋತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿ-ವಿಧಾನ ನೆರವೇರಿಸಲಾಗುವುದು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮತ್ತೆ ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗುವುದು. ರಾತ್ರಿ 9 ಕ್ಕೆ “ಅಣ್ಣನ ಅರಮನೆ ಮತ್ತು ಕಲಿಯುಗದ ಅರ್ಜುನ” ಎಂಬ ನಾಟಕ ನಡೆಯಲಿದೆ.
ಮಾ.21ರಂದು ಚಿಕ್ಕದೇವಮ್ಮನಿಗೆ ವಿಶೇಷ ಪೂಜೆ ಮುಗಿಸಿ, ಮಧ್ಯಾಹ್ನ 12ಕ್ಕೆ ಇಟ್ನ ಗ್ರಾಮದಿಂದ ಹೊರಟು ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಎಡೆಪೂಜೆ, ತಳಿಗೆ ಪೂಜೆ, ಮಹಾಮಂಗಳಾರತಿ ಮಾಡಲಾಗುವುದು. ಬಳಿಕ ಬೆಟ್ಟಕ್ಕೆ ಹೊರಡಲಿದೆ.
ಭಕ್ತರಿಗೆ ಕಪಿಲ ನದಿ ಸಮೀಪದಲ್ಲಿ ಮೂರು ದಿನಗಳು ಅನ್ನ ಸಂತರ್ಪಣೆ ಆಯೋಜಿಸಲಾಗಿದ್ದು, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ, ಉದ್ಯಮಿ ಎನ್.ಬೆಳ್ತೂರು ನಿಂಗರಾಜು, ಇಟ್ನ ಗ್ರಾಮದ ದೇವಾಲಮ್ಮ ಬೊಂಡನಚಿನ್ನನಾಯಕ ಅನ್ನದಾನ ಸೇವಾರ್ಥದಾರರಾಗಿದ್ದಾರೆ.
ಚಿಕ್ಕದೇವಮ್ಮನ ಜಾತ್ರೆ ಕಮಿಟಿ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ಎನ್. ಬಸವನಾಯಕ, ಯಜಮಾನರಾದ ಬಿ. ಬೆಟ್ಟನಾಯಕ, ಚಿನ್ನನಾಯಕ, ತಮ್ಮರಾಜು, ಡೈರಿಬೆಟ್ಟನಾಯಕ, ಅನಿಲ್, ಕಾಳಿಂಗನಾಯಕ, ಸಣ್ಣಸ್ವಾಮಿನಾಯಕ, ಐಬಿ ರವಿಕುಮಾರ್, ಜಯರಾಮ್, ನಾಗೇಂದ್ರ, ಸೋಮಣ್ಣ, ಚಿಕ್ಕಣ್ಣ, ಬಿ. ಬಸವರಾಜು ಸೇರಿದಂತೆ ಹಾಲುಗಡ ಹಾಗೂ ಇಟ್ನ ಗ್ರಾಮದ ಗ್ರಾಮಸ್ಥರು ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂರು ದಿನಗಳು ನಡೆಯುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವಕ್ಕೆ ಮೈಸೂರು, ಕೋಟೆ, ಸರಗೂರಿನಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಯಾವುದೇ ಅಹಿಕತರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಟ್ನ ಜಯರಾಮ್, ಡೈರಿ ಬೆಟ್ಟನಾಯಕ ತಿಳಿಸಿದ್ದಾರೆ
ಇನ್ನು ಜಾತ್ರಾ ಕಮಿಟಿ ಅಧ್ಯಕ್ಷರಾದ ದೊಡ್ಡವೀರನಾಯಕ, ಮಾತನಾಡಿ ಮೂರು ದಿನಗಳು ಚಿಕ್ಕದೇವಮ್ಮನ ಜಾತ್ರೆ ಮಹೋತ್ಸವವು ಜಾತ್ರಾ ಕಮಿಟಿ, ಇಟ್ನ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆಯಲಿದೆ. ಇಟ್ನ ಗ್ರಾಮದ ಮೇಲೆ ತಾಯಿ ಚಿಕ್ಕದೇವಮ್ಮರವರಿಗೆ ಅಪಾರವಾದ ಪ್ರೀತಿ. ಹೀಗಾಗಿ ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಜಾತ್ರೆ ಆಚರಿಸಲಾಗುವುದು ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ








