ArticlesLatest

ಭಾರತ ಜನನಿಯ ತನುಜಾತೆ ನಮ್ಮ ಕನ್ನಡ ಮಾತೆಗೆ  ರಾಜ್ಯೋತ್ಸವದ ಸಂಭ್ರಮ. ನಾಡು- ನುಡಿಯ ಅನಾವರಣ

 ಕನ್ನಡಕ್ಕಾಗಿ ದುಡಿದ, ಮಡಿದ, ಸೇವೆ ಸಲ್ಲಿಸುತ್ತಿರುವವರ  ನೆನಪಿಸುವ ಪರ್ವ ದಿನ. ನಮ್ಮ ಕನ್ನಡ ಭಾಷೆಗೆ ದೀರ್ಘಕಾಲದ ಇತಿಹಾಸವಿದೆ. ಜೊತೆಗೆ ಪರಂಪರೆಯು ಕೂಡ ಇದೆ. ಆದಿ ಕವಿಯಿಂದ ಹಿಡಿದು ಹೊಸಗನ್ನಡದ ಎಲ್ಲಾ ಕವಿಗಳು, ಲೇಖಕರು ಕನ್ನಡವನ್ನು ಬಹಳ ವಿಜೃಂಭಣೆಯಿಂದ ವರ್ಣಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ನಾಡು- ನುಡಿ- ಸಂಸ್ಕೃತಿಗೆ ಸೇವೆ ಸಲ್ಲಿಸಿದ ಅನೇಕರು ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ. ಈ ಬಾರಿಯೂ ಕೂಡ 71 ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸರ್ಕಾರ ಸನ್ಮಾನಿಸುತ್ತಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. 1 ಲಕ್ಷ ಇದ್ದ ಪ್ರಶಸ್ತಿಯ ಮೌಲ್ಯ ಈಗ 5 ಲಕ್ಷಕ್ಕೆ ಏರಿದೆ. ಸದ್ದಿಲ್ಲದೆ ಸಾಧನೆ ಮಾಡುವ ಅನೇಕ ಸಾಧಕರು ಕೂಡ ಈ ಒಂದು ಸನ್ಮಾನಕ್ಕೆ ಪಾತ್ರರಾಗುತ್ತಿದ್ದಾರೆ. ಏಕೆಂದರೆ ವರ್ಷ ವರ್ಷವೂ ಕೂಡ ಈ ರೀತಿಯ ಒಂದು ಆಯ್ಕೆ ಸಾಧಕರಿಗೆ ಸಲ್ಲಿಸುವ ದೊಡ್ಡ ಗೌರವವಾಗಿದೆ.

ಈ “ಕನ್ನಡ” ಎನ್ನುವ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮೈ-ಮನಗಳು ರೋಮಾಂಚನಗೊಳ್ಳುತ್ತವೆ!. ನಮ್ಮ ಕನ್ನಡದ ನಾಡು ಚಂದ ಕನ್ನಡದ ನುಡಿ ಇನ್ನೂ ಚೆಂದ!. ಇಡೀ ಕರುನಾಡನ್ನು ಒಮ್ಮೆ ಸುತ್ತಿ ಬಂದರೆ ವಿಶ್ವವನ್ನೇ ಸುತ್ತಿದ ಅನುಭವ ನಮಗಾಗುತ್ತದೆ!.

ಕರ್ನಾಟಕದಲ್ಲಿ ಎಲ್ಲವೂ ಅಡಗಿದೆ. ಕನ್ನಡ ನಾಡು ಬಹು ಎತ್ತರಕ್ಕೆ ಬೆಳೆದಿದೆ.  ಕನ್ನಡ ನಾಡು-ನುಡಿ- ಸಂಸ್ಕೃತಿಗಾಗಿ ದುಡಿದ, ದಣಿದ ಅನೇಕರು ನಮ್ಮನಗಲಿದ್ದಾರೆ. ಮತ್ತಷ್ಟು ಜನರು ಈಗಲೂ ಕೂಡ ಕನ್ನಡದ ಸೇವೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಾ ಬರುತ್ತಿದ್ದಾರೆ. ಅಂತಹ ಎಲ್ಲಾ ಮಹನೀಯರನ್ನು ನಾವು ನೆನೆದುಕೊಳ್ಳುವ ದಿನ ನವೆಂಬರ್ 1. ಇದು ಸಾಂಕೇತಿಕ ಅಷ್ಟೇ. ಆದರೂ ಕೂಡ ನವಂಬರ್ ಪೂರ್ತಿ ಕನ್ನಡ ನಾಡಿನ ಉದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಒಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ.

ಒಂದು ರೀತಿಯಲ್ಲಿ ಕನ್ನಡ ನಾಡು- ನುಡಿ- ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮಗಳು, ಸುಗಮ ಸಂಗೀತ, ಇನ್ನಿತರ ಸದಭಿರುಚಿಯ ಕಾರ್ಯಕ್ರಮಗಳು ಜರುಗುತ್ತವೆ. ಅದೇ ರೀತಿ ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಹಲವು ಕಾರ್ಯಕ್ರಮಗಳು ನಡೆದವು. ಅದು ಮುಂದಿನ ದಿನಗಳಲ್ಲೂ ಕೂಡ ಹೊಸದಾದ ನಾಂದಿಗೆ ಮುನ್ನುಡಿ ಆಯಿತು.

ಆದರೆ…. ಆದರೆ….. ಈ ಒಂದು ದಿನ ಮಾತ್ರ ಅಲ್ಲಾ….  ವರ್ಷ ಪೂರ್ತಿ ಕನ್ನಡದ ಬಗ್ಗೆ ಅಭಿಮಾನದ  ಮಾತುಗಳನ್ನು ಆಡುವುದರ ಮೂಲಕ ಕನ್ನಡ ಭಾಷೆಯ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇದು ನಮ್ಮ ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು.

ವ್ಯವಹಾರಕ್ಕೆ ಪರಭಾಷೆಗಳು ಮುಖ್ಯ. ಆದರೆ ನಮ್ಮ ಮನೆಯಂಗಳದ ಮೂಲದಲ್ಲಿ ಕನ್ನಡದ ಬೇರು ಇರಲೇಬೇಕು. ಈಗ ನಮ್ಮ ಕನ್ನಡ ನೆಲದಲ್ಲಿ ಏನಿಲ್ಲ? ಎಲ್ಲವೂ ಅಡಗಿದೆ!. ಅದನ್ನು ನಾವು ಕಂಡುಕೊಳ್ಳಬೇಕು. ಜೊತೆಗೆ ಅದು ಹೊರಗೆ ಬರುವಂತೆ ಆಗಬೇಕು. ಮತ್ತಷ್ಟು ವಿಸ್ತಾರವಾಗಿ ಎಲ್ಲೆಡೆ ಚಾಲನೆಗೆ ಸಿಗುವಂತಾಗಬೇಕು. ಆಗ ಮಾತ್ರ ಕನ್ನಡದ ಸೊಬಗಿನ ಅನಾವರಣವಾಗುತ್ತದೆ.

ಕನ್ನಡ ನಾಡಿನ ಒಳ- ಹೊರಗಿನಲ್ಲೂ ಕೂಡ ಶ್ರೀಮಂತಿಕೆ ತುಂಬಿ ತುಳುಕುತ್ತಿದೆ.

ಕನ್ನಡದ ಸುಧೀರ್ಘ ಇತಿಹಾಸ, ವಿಶಿಷ್ಟ ಶೈಲಿಯ ಪರಂಪರೆ, ಚಾರಿತ್ರಿಕ ಹಿನ್ನೆಲೆ, ಭಾರತ ಮಾತೆಯ ತನುಜಾತೆಯಾಗಿ ನಮ್ಮ ಕನ್ನಡ ಎಲ್ಲಾ ಭಾಷೆಗಳಿಗಿಂತ ಒಂದು ಕೈ ಮೇಲು ಎನ್ನುವಂತಾಗಿದೆ!.

ವರ್ಷ ವರ್ಷವೂ ಕೂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಹಂಪಿ ಉತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ ಇಂತಹ ಸಂದರ್ಭಗಳಲ್ಲಿ ಕನ್ನಡ ಮತ್ತಷ್ಟು ಹೆಮ್ಮರವಾಗುತ್ತದೆ.

ಅಲ್ಲದೆ ಮುಖ್ಯವಾಗಿ ಹೊರನಾಡ ಕನ್ನಡಿಗರು ಕೂಡ ವಿದೇಶದಲ್ಲಿ ಕನ್ನಡ ಸಂಘಗಳನ್ನು ಮಾಡಿಕೊಂಡು ವಿದೇಶದ ನೆಲದಲ್ಲೂ ಕೂಡ ಕನ್ನಡದ ಬಗ್ಗೆ ಅಭಿಮಾನ, ಸಾಂಸ್ಕೃತಿಕ ಕಾರ್ಯಕ್ರಮ ಚರ್ಚೆ, ಚಿಂತನೆ, ಉತ್ಸವವನ್ನು ಆಚರಿಸುತ್ತಾರೆ. ಅದರಿಂದಾಗಿ “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು”- ಎನ್ನುವ ಕುವೆಂಪು ವಾಣಿಯಂತೆ ನಾವು ಎಲ್ಲೇ ಇದ್ದರೂ ಮೊದಲು ಕನ್ನಡವನ್ನು ಮರೆಯಬಾರದು.

ನಮ್ಮದು ಅತ್ಯಂತ ಶ್ರೀಮಂತ ಸಂಸ್ಕೃತಿ ಪರಂಪರೆಗಳ ತಾಣ. ನಾವು ಅವನ್ನೆಲ್ಲ ಸದಾ ನೆನಪಿಸಿಕೊಳ್ಳಬೇಕು. ಜೊತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಸಹ್ಯಾದ್ರಿ ಗಿರಿ ಶಿಖರಗಳು, ಕರಾವಳಿಯ ವಿಸ್ತಾರ ತಾಣ, ಬಯಲು ಸೀಮೆ ಪ್ರದೇಶ, ಖನಿಜ ಪದಾರ್ಥಗಳು, ನದಿ ಸರೋವರಗಳು, ಗುಡಿ ಗೋಪುರಗಳು, ಕೋಟೆ- ಕೊತ್ತಲಗಳು, ಪ್ರವಾಸಿ ತಾಣಗಳು, ಹೀಗೆ ಎಲ್ಲೆಡೆ ಪ್ರಕೃತಿಯ ಸೌಂದರ್ಯ ಕೈಬೀಸಿ ಕರೆಯುತ್ತದೆ. ಸಿ ವಿ ಶಿವಶಂಕರ್ ರವರು ಬರೆದಿರುವ

“ನಾ ನೋಡಿ ನಲಿದ ಕಾರವಾರ” ಎನ್ನುವ ಸುಮಧುರ ಗೀತೆ ನೆನಪಾಗುತ್ತದೆ. ಜೊತೆಗೆ ಕುವೆಂಪುರವರ “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೇ…”. ಎಂದು ಪ್ರವಾಸಿಗರನ್ನು ಕರೆಯುವ ಗೀತೆ ನಿತ್ಯ ಹರಿದ್ವರ್ಣದ ಭಾವನೆ ಮೂಡಿಸುತ್ತದೆ.

ಕರುನಾಡಿನಲಿ ಕನ್ನಡವಿರಲಿ ಸಂಗಡ… ಕನ್ನಡವೆಂದರೆ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವೇ?

ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಹೆಚ್ಚಾಗಿ ಬೆಳೆದಿದೆ ಎಂದು ಹೇಳಬೇಕು. ಕೇವಲ ಇಂಗ್ಲಿಷ್ ಶಿಕ್ಷಣ ಇದ್ದ ಕಾಲ ಹೊಂದಿತ್ತು. ಈಗ ಕನ್ನಡದಲ್ಲಿ ಕೂಡ ಎಲ್ಲಾ ವಿಷಯಗಳ ಶಿಕ್ಷಣ ನಮಗೆ ಸುಲಭವಾಗಿ ದೊರೆಯುತ್ತಿದೆ. ಜೊತೆಗೆ ಮೊಬೈಲ್ ನಲ್ಲೂ ಕೂಡ ಕನ್ನಡದ ಕೀಲಿಮಣೆ ಇರುವುದರಿಂದ ಕನ್ನಡ ಸರಾಗವಾಗಿ ಓದಲು, ಬಳಸಲು ಅನುಕೂಲವಾಗಿದೆ.

ಕನ್ನಡ ನಾಡು- ನುಡಿ ಸಂಸ್ಕೃತಿಯು ನಾ ಮೊದಲೇ ಹೇಳಿದಂತೆ ವಿಶಾಲವಾದದ್ದು. ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ಶೌರ್ಯ, ಕ್ರೀಡೆ ಎಲ್ಲದರಲ್ಲೂ ಕನ್ನಡ ಮುಂದಿದೆ.

ರಾಜರಾಳಿದ ನಾಡು ನಮ್ಮದು. ಗಂಗರು, ರಾಷ್ಟ್ರಕೂಟರು, ಕದಂಬರು, ಚೋಳರು, ಚಾಲುಕ್ಯರು, ಪಲ್ಲವರು… ಒಟ್ಟಾರೆ ವಿಜಯನಗರದ ಅರಸರಿಂದ ಹಿಡಿದು, ಮೈಸೂರಿನ ಅರಸರವರೆಗೆ ಆಳ್ವಿಕೆಯ ಪರಂಪರೆ ಅತ್ಯಂತ ಶ್ರೀಮಂತವಾಗಿ ಬೆಳೆದು ಬಂದಿದೆ. ರಾಜರುಗಳ ಕೊಡುಗೆಗಳನ್ನು ನಾವು ಕೂಡ ಈ ದಿನ ನೆನೆದುಕೊಳ್ಳಲೇಬೇಕು. ಅದರಲ್ಲೂ ಮೈಸೂರು ರಾಜರುಗಳ ಕೊಡುಗೆ ಅಪಾರವಾದದ್ದು ಸದಾ ಹಸಿರಾದಂತದ್ದು.

ತಮ್ಮ ದೂರ ದೃಷ್ಟಿ, ಚಿಂತನ ಮಂಥನ, ಮುಂದಾಳತ್ವ, ಯೋಚನೆ, ಯೋಜನೆಯ ಮೂಲಕ ನಾಡಿನ ಜನರಿಗೆಲ್ಲ ಉತ್ತಮ ಆಡಳಿತ ನೀಡುವುದರ ಜೊತೆಗೆ ನಮ್ಮ ನಾಡು- ನುಡಿ- ಸಂಸ್ಕೃತಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.

ಅಲ್ಲದೆ ನಮ್ಮ ಕನ್ನಡದ ನೆಲದಲ್ಲಿ ಅನೇಕ ಶಾಸನಗಳು ಇವೆ. ನಮ್ಮ ಕನ್ನಡ ನಾಡು ವೀರ ವನಿತೆಯರ ಬೀಡು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಅತ್ತಿಮಬ್ಬೆ, ಬೆಳವಡಿ ಮಲ್ಲಮ್ಮ……..

ಕವಿ ಪರಂಪರೆ ಮಾತ್ರ ದೀರ್ಘವಾದದ್ದು. ಪಂಪ, ರನ್ನ, ಪೊನ್ನ, ಜನ್ನ, ನಾಗವರ್ಮ, ನಾಗಚಂದ್ರ, ಕುಮಾರವ್ಯಾಸ, ಸರ್ವಜ್ಞ, ಮುದ್ದಣ್ಣ, ಲಕ್ಷ್ಮೀಶ, ಹರಿಹರ, ರಾಘವಾಂಕ, ಡಿವಿಜಿ, ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತರು, ರಾಜರತ್ನಂ, ಅನಂತಮೂರ್ತಿ, ಕಂಬಾರರು, ಹೀಗೆ ನೂರಾರು ಕವಿಗಳಿದ್ದಾರೆ.

ಇವರಿಂದ ಹೊರಹೊಮ್ಮಿರುವ ಸಾಹಿತ್ಯ ಕೂಡ ಕನ್ನಡಾಂಬೆಯ ಪ್ರಸಾದವಾಗಿದೆ. ಜೊತೆಗೆ ಉತ್ಕೃಷ್ಟ ಸಾಹಿತ್ಯ ಇವರಿಂದ ಸೃಷ್ಟಿಯಾಗಿ, ನಮ್ಮ ಕನ್ನಡದ ನೆಲದ ಸೊಗಡಿನ ವೈಭವವನ್ನು ಮತ್ತಷ್ಟು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ.

ಅದಕ್ಕಲ್ಲವೇ ಹುಯಿಲಗೋಳ ನಾರಾಯಣರಾವ್  ಅವರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂದದ್ದು.  ಕುವೆಂಪುರವರು “ಬಾರಿಸು ಕನ್ನಡ ಡಿಂಡಿಮವ” “ಎಲ್ಲಾದರೂ ಇರು ಎಂತಾದರು ಇರು” ಎಂದರು…  “ಹೊತ್ತಿತೋ ಹೊತ್ತಿತೋ ಕನ್ನಡದ ದೀಪ” ಎಂದು ಸಿದ್ದಯ್ಯ ಪುರಾಣಿಕರು ಹೇಳಿದರೆ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂದರು ನಮ್ಮ ಚೆನ್ನವೀರ ಕಣವಿ ಅವರು. ಇದೇ ರೀತಿ ಮುಂತಾದ ಕವಿಗಳು, ಲೇಖಕರು ತಮ್ಮ ಲೇಖನಿಯಿಂದ ಬರೆದಂತಹ ಉತ್ಕೃಷ್ಟ ಸಾಹಿತ್ಯ ಇವೆಲ್ಲವೂ ಆಗಿವೆ.

ಈ ಎಲ್ಲಾ ಭಾವಗೀತೆಗಳನ್ನು ಕೇಳಿದರೆ ಸಾಕು ನಮಗೆ ಕನ್ನಡದ ಮೇಲೆ ಅಭಿಮಾನ ಮತ್ತಷ್ಟು ಉಕ್ಕುತ್ತದೆ.  ಈ ಸಂದರ್ಭದಲ್ಲಿ ನಾವು ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ರವರನ್ನು ನೆನಪಿಸಿಕೊಡಲೇಬೇಕು. ಅವರು ಪರಭಾಷೆ ಚಿತ್ರಗಳಲ್ಲಿ ನಟಿಸದೆ ಕೊನೆಯವರೆಗೂ ಕೂಡ ಕನ್ನಡದಲ್ಲಿ ಇದ್ದು ಎಲ್ಲರಿಗೂ ಮಾದರಿಯಾದರು. ಇದೇ ರೀತಿ ಅನೇಕ ನಟ- ನಟಿಯರು ತಮ್ಮ ಪ್ರತಿಭೆ ಮೆರೆದಿದ್ದಾರೆ.

ಹೀಗೆ ನಮ್ಮ ನಾಡು- ನುಡಿ ನೆಲದ ಬಗೆಗಿನ ಅಭಿಮಾನ ತಾರಕಕ್ಕೇರಿದೆ.

ಅಷ್ಟೇ ಅಲ್ಲದೆ ನಮ್ಮ ಕನ್ನಡದ ನೆಲದಿಂದ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ವೀರ ಸ್ವಾತಂತ್ರ್ಯ ಹೋರಾಟಗಾರರು, ವೀರ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ಕೂಡ ಒಂದು ಅಭಿಮಾನದ ಮಾತು. ಸತ್ಯ, ಅಹಿಂಸೆಯ ನೇಕಾರ ಮಹಾತ್ಮ ಗಾಂಧೀಜಿಯವರು ಕೂಡ ನಮ್ಮ ಕನ್ನಡದ ನೆಲದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿ, ಇಲ್ಲಿಗೆ ಭೇಟಿಕೊಟ್ಟು ಕನ್ನಡ ನಾಡಿನ ಸಂಸ್ಕೃತಿಗೆ ಬೆರಗಾಗಿದ್ದಾರೆ.

ಇನ್ನು ನಮ್ಮ ಕನ್ನಡದಲ್ಲಿ ಗ್ರಾಮದಿಂದ ಗ್ರಾಮಕ್ಕೆ…… ತಾಲೂಕಿನಿಂದ ತಾಲೂಕಿಗೆ…… ಜಿಲ್ಲೆಯಿಂದ ಜಿಲ್ಲೆಗೆ…… ಭಾಷಾ ಸೊಗಡಿನ ಸಂಸ್ಕೃತಿ ವಿಭಿನ್ನವಾದದ್ದು ಮತ್ತು ವಿಸ್ತಾರವಾದದ್ದು. ಕಾಸರಗೋಡು ಕನ್ನಡ, ಧಾರವಾಡ ಕನ್ನಡ, ಹುಬ್ಬಳ್ಳಿ ಕನ್ನಡ,  ಚಾಮರಾಜನಗರ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ, ಉತ್ತರ ಕರ್ನಾಟಕ ಹೀಗೆ ಬೇರೆ ಬೇರೆ ಪ್ರದೇಶದ ಕನ್ನಡಿಗರು ಮಾತನಾಡುತ್ತಿದ್ದರೆ ಅದನ್ನು ಕೇಳುವುದೇ ಒಂದು ರೀತಿಯಲ್ಲಿ ಖುಷಿ.

ಇದೇ ರೀತಿ ಕನ್ನಡದಲ್ಲಿ ಜಾನಪದ ಗೀತೆಗಳು ಭಾವನೆಗಳನ್ನು ಹೊರಹೊಮ್ಮಿಸುವ ಭಾವಗೀತೆಗಳು, ಜೊತೆಗೆ ಒಗಟುಗಳು, ಗಾದೆಗಳು, ಸೂಕ್ತಿಗಳು, ಇವೆಲ್ಲವೂ ಕೂಡ ಕನ್ನಡದ ಅಸ್ಮಿತೆಯನ್ನು ಪ್ರದರ್ಶಿಸುತ್ತವೆ.

ಹೀಗೆ ಅಡಿಯಿಂದ ಮುಡಿವರೆಗೆ ಎನ್ನುವಂತೆ ಕನ್ನಡದ ಬಗ್ಗೆ ಎಷ್ಟು ಮಾತನಾಡಿದರು ಸಾಲದು. ಕನ್ನಡ ಒಂದು ರೀತಿಯಲ್ಲಿ ಸರಳ ಸುಂದರ ಭಾಷಾ ಚೌಕಟ್ಟು ಹೊಂದಿರುವ ಭಾಷೆ.

ಕನ್ನಡ ನಾಡು- ನುಡಿ- ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕನ್ನಡದ ಸಾವಿರಾರು ಚಲನ ಚಿತ್ರಗಳು ನಮ್ಮ ಕಣ್ಮುಂದೆ ಕಾಣಸಿಗುತ್ತವೆ. ಆ ಚಿತ್ರಗಳಲ್ಲಿ ನಮ್ಮ ಕನ್ನಡ ನಾಡಿನ ಪ್ರಕೃತಿಯ ಸೌಂದರ್ಯ, ಕನ್ನಡ ನಾಡಿನ ಪ್ರಾಮುಖ್ಯತೆ ಬಗ್ಗೆ, ಕನ್ನಡದ ಹಾಡುಗಳು ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುತ್ತವೆ. ಈ ನಿಟ್ಟಿನಲ್ಲಿ ನಾವು ಪ್ರತಿಯೊಬ್ಬ ನಟ, ನಟಿ, ನಿರ್ದೇಶಕ, ಸಂಗೀತಗಾರರು, ಗೀತರಚನಾಕಾರರು, ನಿರ್ಮಾಪಕರು, ಸಹ ಕಲಾವಿದರು ಹೀಗೆ ಒಂದು ಚಿತ್ರ ಯಶಸ್ವಿಯಾಗಿ ತೆರೆಯ ಮೇಲೆ ಕಾಣಬೇಕಾದರೆ ಶ್ರಮವಹಿಸುವ ಪ್ರತಿಯೊಬ್ಬರಿಗೂ ಕೂಡ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲೇಬೇಕು.

ಕನ್ನಡ ಚಲನ ಚಿತ್ರಗಳು ಕೂಡ ಕನ್ನಡ ನಾಡು ನುಡಿಗೆ ಉತ್ತಮ ಕೊಡುಗೆ ನೀಡಿವೆ. ಸಮಯ ಸಿಕ್ಕಾಗ ಕನ್ನಡದ ಬಗ್ಗೆ ಇರುವ ಹಾಡುಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಮಜಾ!.

ಕನ್ನಡ ರೋಮಾಂಚನವೀ ಕನ್ನಡ (ಕನ್ನಡ ಹೆಣ್ಣನ್ನು ಮರಿಬೇಡ ಅಭಿಮಾನಿ), ಈ ದೇಶ ಚೆನ್ನ ಈ ಮಣ್ಣು ಚಿನ್ನ, ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ  ಆರಾಧಿಸುವೆ, ಕನ್ನಡದ ನಾಡು ಚೆಂದ ಕನ್ನಡದ ನುಡಿ ಚೆಂದ, ಕನ್ನಡ ನಾಡಿನ ರನ್ನದ ರತುನ, ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ, ಕನ್ನಡಮ್ಮನ ದೇವಾಲಯ, ಇದೇ ನಾಡು ಇದೇ ಭಾಷೆ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು

ಕರುನಾಡ ತಾಯಿ ಸದಾ ಚಿನ್ಮಯಿ, ನಾವಾಡುವ ನುಡಿಯೇ ಕನ್ನಡ ನುಡಿ, ಜೇನಿನ ಹೊಳೆಯೋ ಹಾಲಿನ ಮಳೆಯೋ, ಕನ್ನಡ ನಾಡಿನ ವೀರರಮಣಿಯ, ಹೇಳೆ ಕನ್ನಡತಿ ನೀ ಯಾಕೆ ಇಂಗಾಡ್ತಿ, ಕರುನಾಡೆ, ನಮ್ ಕಡೆ ಸಾಂಬಾರ್ ಅಂದ್ರೆ ನಿಮ್ ಕಡೆ, ಸಿರಿವಂತನಾದರೂ ಕನ್ನಡ ನಾಡಲ್ಲೆ, ಒಂದೇ ನಾಡು ಒಂದೇ ಕುಲ, ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ನಮ್ಮ  ಅಪ್ಪ ಕಣೋ ಕನ್ನಡ, ಕನ್ನಡಕ್ಕಾಗಿ ಜನನ, ಕನ್ನಡದ ರವಿ ಮೂಡಿ ಬಂದ, ಕಲ್ಲಾದರೆ ನಾನು, ಹೀಗೆ ಒಂದೆ? ಎರಡೇ?? ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ.!

ಚರಣ ಹಾಗೂ ಪಲ್ಲವಿಯಲ್ಲಿ ಕನ್ನಡ ಬರುವಂತಹ ಹಾಡುಗಳು ಇವೆ. ಇದೇ ರೀತಿ ಕನ್ನಡ ಚಿತ್ರಗೀತೆಗಳ ಚಿತ್ರೀಕರಣ ನಾಡಿನ ತುಂಬೆಲ್ಲ ಆಗಿವೆ. ಇದರಿಂದಾಗಿ ಆ ಸ್ಥಳದ ಹಿರಿಮೆ ನಮಗೆ ಪರಿಚಯವಾಗುತ್ತದೆ.

ಇಂತಹ ಗೀತೆಗಳನ್ನು ಬರೆದ ಗೀತ ರಚನೆಕಾರರು, ಜೊತೆಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು, ಇವರೆಲ್ಲರ ನಡುವೆ ಕೇಳುವ ನಾವೇ ಪುಣ್ಯವಂತರು!.          ಇದೇ ರೀತಿ ಅನೇಕ ಕವಿಗಳಿಂದ ಅನೇಕ ಭಾವಗೀತೆಗಳು ಕನ್ನಡಾಂಬೆಯ ಕೊರಳಿಗೆ ಮಾಲೆಯಾಗಿಸಿವೆ.

ಅದಕ್ಕಲ್ಲವೇ ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಬಂದಿರುವುದು. ಈ ಸಂದರ್ಭದಲ್ಲಿ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ ಕೃ ಗೋಕಾಕ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಇವರೆಲ್ಲರನ್ನು ಕೂಡ ನೆನೆಯಬೇಕು. ಅಲ್ಲದೆ ಇವರು ಸೃಷ್ಟಿಸಿರುವ ಸಾಹಿತ್ಯ ಪ್ರತಿಯೊಬ್ಬರ ಮನೆಯಂಗಳದಲ್ಲಿ ಇರಲೇಬೇಕು.

ಕನ್ನಡದ ನೆಲದಲ್ಲಿ ಅನೇಕ ಪತ್ರಿಕೆಗಳು ಕೂಡ ಕನ್ನಡದ ಭಾಷೆಯನ್ನು ಶ್ರೀಮಂತ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಾಡಿನ ಜನರ ಸಮಸ್ಯೆಗಳು, ಇತಿಹಾಸ ಪ್ರಸಿದ್ಧ ತಾಣಗಳು ಜೊತೆಗೆ ನಮ್ಮ ಕನ್ನಡದ ಶ್ರೀಮಂತಿಕೆಯನ್ನು ವಿವಿಧ ಲೇಖಕರುಗಳ ಮೂಲಕ ಬರೆಯಿಸಿ ಮತ್ತಷ್ಟು ಪ್ರಚಾರವಾಗಲು ಸಹಾಯ ಮಾಡಿವೆ.

ಇನ್ನು ದೂರದರ್ಶನ ಕನ್ನಡದ “ಚಂದನ ಟಿವಿ” ನಮ್ಮ ಕರುನಾಡ ಸುತ್ತಮುತ್ತ ಅಂತರಂಗದಲ್ಲಿ ಅಡಗಿರುವ ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಜೊತೆಗೆ ಕನ್ನಡ ನಾಡಿನ ಇತಿಹಾಸದ ಬಗ್ಗೆ, ಸ್ಥಳಗಳ ಬಗ್ಗೆ ಚಿತ್ರ, ವಿಡಿಯೋ ಸಹಿತ ಮಾಹಿತಿಯನ್ನು ನೀಡುವುದರೊಂದಿಗೆ ವೀಕ್ಷಕರ ಮನಸೂರಗೊಂಡಿದೆ. ಜೊತೆಗೆ ನಮ್ಮ ನಾಡು — ಸಂಸ್ಕೃತಿಗೆ ಒಂದಲ್ಲ ಒಂದು ರೀತಿಯಲ್ಲಿ ಪೂರಕ ಕೆಲಸ ಮಾಡುತ್ತಾ ಎಲ್ಲರಿಗೂ ಹತ್ತಿರವಾಗುತ್ತಿದೆ.

ಅದೇ ರೀತಿ ಆಕಾಶವಾಣಿಗಳು ಕೂಡ ಅನಕ್ಷರಸ್ಥರು, ಜನಸಾಮಾನ್ಯರು ಕೂಡ ಕೇಳುವಂತಹ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿವೆ. ಕನ್ನಡಕ್ಕೆ ತನ್ನದೇ ಆದಂತಹ ಪುರಾತನತೆ ಮತ್ತು ಪ್ರಾದೇಶಿಕ ಹಾಗೂ  ಸಾಹಿತ್ಯದ ಸನಾತನತೆಯು ಇದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದಲ್ಲಿ 12ಕ್ಕೂ ಹೆಚ್ಚು ಆಕಾಶವಾಣಿ ಕೇಂದ್ರಗಳಿದ್ದು, ಎಲ್ಲಾ ಆಕಾಶವಾಣಿಯಿಂದಲೂ ಕೂಡ ಸ್ಥಳೀಯ ಭಾಷೆಗಳ ಸೊಗಡು ಒಂದಲ್ಲ ಒಂದು ರೀತಿಯಲ್ಲಿ ಅನಾವರಣವಾಗುತ್ತಿದೆ. ಜೊತೆಗೆ ಸ್ಥಳೀಯ ಪ್ರತಿಭೆಗಳು, ಸ್ಥಳಗಳ ಮಹಿಮೆ, ಸಾಧಕರ ಪರಿಚಯ ಇವೆಲ್ಲದರ ಜೊತೆಗೆ… ಸಾಹಿತ್ಯ, ಸಂಗೀತ ಮನರಂಜನೆಯ ಜೊತೆಗೆ ಕನ್ನಡವನ್ನ ನಾಡಿನ ಎಲ್ಲಾ ಕಡೆ ಅಲ್ಲದೆ, ವಿಶ್ವದೆಲ್ಲೆಡೆ ಸುಲಭವಾಗಿ ತಲುಪಿಸುವ ಸರಳ ಮಾಧ್ಯಮ ನಮ್ಮ ಈ “ಆಕಾಶವಾಣಿ” ಎನ್ನುವುದು ಒಂದು ಮಹತ್ವದ ಸಂಗತಿ.

ನಮ್ಮ ಕನ್ನಡ ನಾಡಿನ, ಕನ್ನಡದ ಹೆಸರಿನ ಮೂಲ ಇತಿಹಾಸದ ಬಗ್ಗೆ ಹೇಳುವುದಾದರೆ……..ಕರ್ ನಾಡು-ಕರುನಾಡು- ಕಮಿತು ನಾಡು-ಕಪ್ಪು ನಾಡು-ಎತ್ತರದ ನಾಡು-ಕಂಪಿನ ನಾಡು  ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಪ್ರಪ್ರಥಮವಾಗಿ ಉಯಿಲಗೋಳ ನಾರಾಯಣರಾವ್ ರವರು ಬರೆದಿರುವ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”- ಈ ಗೀತೆ ನಾಡಗೀತೆಯಾಗಿ ಪರಿಗಣಿಸಲಾಗಿತ್ತು. ತದನಂತರ ರಾಷ್ಟ್ರೀಯ ಭಾವೈಕ್ಯತೆಯ ದ್ಯೋತಕವಾಗಿ ರಾಷ್ಟ್ರಕವಿ ಕುವೆಂಪುರವರು ಬರೆದಿರುವ “ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ”-ಯನ್ನು ಮರು ಪರಿಗಣಿಸಿದರು. ಇದು ಅಧಿಕೃತವಾಗಿ  ಕರ್ನಾಟಕದ ನಾಡಗೀತೆ ಆಗಿದೆ.

ಹಾಗೆಯೇ ಕರ್ನಾಟಕ ರಾಜ್ಯದ ಲಾಂಛನ:- ಗಂಡ ಬೇರುಂಡ, ಕನ್ನಡ ಕುಲದೇವತೆಯಾಗಿ:- ಶ್ರೀ ವನೇಶ್ವರಿ ದೇವಿ, ಹಳದಿ ಮತ್ತು ಕೇಸರಿ ಬಣ್ಣಗಳಿಂದ ಸಂಯುಕ್ತವಾಗಿರುವುದನ್ನು ಕನ್ನಡದ ಧ್ವಜವಾಗಿ ರಾಜ್ಯದ ನಾಡ ಹಬ್ಬವಾಗಿದೆ.

ನವರಾತ್ರಿಯ ಪರಂಪರಿಕ ಮೈಸೂರು ದಸರಾ ಉತ್ಸವ, ರಾಜ್ಯದ ಮರವಾಗಿ ಶ್ರೀಗಂಧ, ರಾಜ್ಯದ ಪುಷ್ಪವಾಗಿ ಕಮಲ, ಹಾಗೂ ರಾಜ್ಯದ ನೃತ್ಯವಾಗಿ ಯಕ್ಷಗಾನ- ಇವುಗಳನ್ನು ನಾಡಿನ ಸಂಸ್ಕೃತಿಯ ಪ್ರತೀಕವೆಂದು ಅಧಿಕೃತವಾಗಿ ಪರಿಗಣಿಸಲಾಗಿದೆ.

ಈ ಹಂತದಲ್ಲಿ ಕನ್ನಡ ನಾಡು ಇಷ್ಟು ಶ್ರೀಮಂತವಾಗಿರಲು ನಮ್ಮ ಹಿರಿಯರು ಅನೇಕ ಕಷ್ಟಗಳನ್ನು ಅನುಭವಿಸಿ, ಕನ್ನಡವನ್ನು ಅತ್ಯಂತ ಶ್ರೀಮಂತ ಗೊಳಿಸಿದ್ದಾರೆ. ನಾವು ಈ ಸಂದರ್ಭದಲ್ಲಿ ಅವರನ್ನೆಲ್ಲ ನೆನೆದು ಅವರು ನಾಡು- ನುಡಿಗೆ ನೀಡಿದ ಕೊಡುಗೆಯನ್ನು ಗೌರವಿಸಿ, ನಾವು ಕೂಡ ಅವರಂತೆ ಸೇವೆ ಮಾಡಬೇಕು. ಕನ್ನಡಾಂಬೆಯನ್ನು ಉಳಿಸಿ ಬೆಳೆಸಬೇಕು.

ಮುಖ್ಯವಾಗಿ ಮಾಡಬೇಕಾಗಿರುವುದು ನಮ್ಮ ಯುವ ಜನತೆ. ಇವರು ಕನ್ನಡ ಕಲಿಯಲು…. ಕನ್ನಡ ಉಳಿಸಲು….. ಕನ್ನಡ ಬೆಳೆಸಲು……. ಆಸಕ್ತಿ ವಹಿಸಬೇಕು. ಕನ್ನಡ ಪಠ್ಯಪುಸ್ತಕ ಓದುವುದರ ಜೊತೆಗೆ, ಸಾಹಿತ್ಯ ಪುಸ್ತಕಗಳನ್ನು ಕೊಂಡುಕೊಂಡು ಓದಬೇಕು. ನಮ್ಮ ನಾಡಿನಲ್ಲಿ ಹಲವು ಲೇಖಕರು, ಕವಿಗಳು, ಉತ್ಕೃಷ್ಟ ಸಾಹಿತ್ಯ ಉಳಿಸಿ ಹೋಗಿದ್ದಾರೆ. ಅಂತವುಗಳನ್ನು ನಾವು ಓದಿ ಮನನ ಮಾಡಿ, ನಮ್ಮ ಜೀವನದಲ್ಲಿ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ನಾವು ದಿನಾಲೂ ಕನ್ನಡವನ್ನು ಸ್ವಲ್ಪ ಮಟ್ಟಿಗಾದರು ಓದಬೇಕು….. ಬರೆಯಬೇಕು…… ಕೇಳಿಸಿಕೊಳ್ಳಬೇಕು……. ದಿನದಿಂದ ದಿನಕ್ಕೆ ಈ ಅಭಿರುಚಿ ಹವ್ಯಾಸವಾಗಬೇಕು. ಆಗ ಮಾತ್ರ ನಾವು ಕನ್ನಡ ನಾಡು- ನುಡಿಗೆ, ಸಂಸ್ಕೃತಿಗೆ ಗೌರವ ನೀಡಿದಂತಾಗುತ್ತದೆ.

ತಂತ್ರಜ್ಞಾನದ ಅಬ್ಬರ – ಕನ್ನಡವೇ ನಮ್ಮ ಅಕ್ಷರ…. ಎಂದೆಂದಿಗೂ ಎಲ್ಲೆಲ್ಲೂ ಮೊಳಗಲಿ.. ಬೆಳಗಲಿ..

ಕನ್ನಡದ ಮೇಲೆ ಪರಕೀಯರ ದಾಳಿ ನಡೆಯುತ್ತಲೇ ಇದೆ. ಮೊದಲು ಕನ್ನಡ ಮನೆ- ಮಾತಾಗಬೇಕು. ಬೇರೆ ಭಾಷೆಗಳಿಂದಲೂ ಕೂಡ ಕನ್ನಡ ಶ್ರೀಮಂತವಾಗಿದೆ ನಿಜ, ಆದರೆ ಕನ್ನಡಕ್ಕೆ, ಕನ್ನಡದ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು. ನಾವು ಈಗ ಹೊಸದಾಗಿ ಏನನ್ನು ಮಾಡದಿದ್ದರೂ ಕೂಡ ಈಗಾಗಲೇ ನಮ್ಮ ಕನ್ನಡದ ಶ್ರೀಮಂತಿಕೆ ವಿಸ್ತಾರವಾಗಿದ್ದು ಅದನ್ನು ಉಳಿಸಿದರೆ ಸಾಕು!.

ಜೊತೆಗೆ ಈ ಎಲ್ಲಾ ಸಂಸ್ಕೃತಿ ಪರಂಪರೆಗಳನ್ನು ನಮ್ಮ ಮುಂದಿನ ಪೀಳಿಗೆಗೂ ವಿಸ್ತಾರವಾಗುವಂತೆ ನೋಡಿಕೊಳ್ಳಬೇಕು.    ನಾವು ಕೇವಲ “ನವೆಂಬರ್” ತಿಂಗಳಿನಲ್ಲಿ ಮಾತ್ರ ಕನ್ನಡವನ್ನು ಪ್ರೀತಿಸಿ, ಗೌರವಿಸುವುದರ ಜೊತೆಗೆ ವರ್ಷಪೂರ್ತಿ ಕನ್ನಡ  ನಮ್ಮ ಅಂತರಂಗದಲ್ಲಿ ಇರಬೇಕು. ಕನ್ನಡ ನೆಲದಲ್ಲಿ ಅನೇಕ ಧೀಮಂತ ಪ್ರತಿಭೆಗಳು ಇದ್ದಾರೆ. ಅವರೆಲ್ಲರಿಗೂ ಕೂಡ ನಾವು ಪ್ರೋತ್ಸಾಹಿಸಿ, ಕನ್ನಡಕ್ಕೆ ಮತ್ತಷ್ಟು ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ಅವರೆಲ್ಲರಿಗೂ ಶುಭಾಶಯಗಳು.

ಜೊತೆಗೆ ಕನ್ನಡಕ್ಕೆ, ಕನ್ನಡ ನೆಲಕ್ಕೆ ತೊಂದರೆಯಾದರೆ ಹೋರಾಡುವ ಮನೋಭಾವವನ್ನು ಕೂಡ ನಾವು ಹೊಂದಿರಬೇಕು. “ನಾವು ನವೆಂಬರ್ ಕನ್ನಡಿಗರಾಗದೆ, ನಂಬರ್ ಒನ್ ಕನ್ನಡಿಗರಾಗೋಣ”!!. ಇದೇ ನಮ್ಮೆಲ್ಲರ ಆಶಯ. ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

“ನಮ್ಮ ಉಸಿರಿರುವ ತನಕ ಕನ್ನಡ ನಮ್ಮ ಮನದಲ್ಲಿ ಸದಾ ಹಸಿರಾಗಿರಲಿ”- ಎಂಬುದು ಎಲ್ಲರ ಆಶಯವಾಗಬೇಕು. ಸಿರಿಗನ್ನಡಂ ಗೆಲ್ಗೆ

ಜೈ ಕರ್ನಾಟಕ ಜೈ ಭುವನೇಶ್ವರಿ.

admin
the authoradmin

ನಿಮ್ಮದೊಂದು ಉತ್ತರ