ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (ಅಪ್ಪು) ರವರ ಜನ್ಮದಿನ… ಹುಟ್ಟು ಹಬ್ಬದ ಸಂಭ್ರಮಕ್ಕೆ ಅವರಿಲ್ಲದಿರಬಹುದು… ಆದರೆ ಆ ಸಂಭ್ರಮ ಹಾಗೆಯೇ ಎಲ್ಲರ ಮನದಲ್ಲಿ ಉಳಿದು ಹೋಗಿದೆ… ಅವರನ್ನು ನೆನಪಿಸಿಕೊಳ್ಳುತ್ತಾ ಅವರಿಗೊಂದು ಹುಟ್ಟುಹಬ್ಬದ ಶುಭಾಶಯ ಹೇಳಿ ಬಿಡೋಣ… ಅಪ್ಪು ಅವರ ಬದುಕು ಮತ್ತು ಸಿನಿಮಾದ ಕುರಿತಂತೆ ಸಾಹಿತಿ, ಪತ್ರಕರ್ತರೂ ಆಗಿರುವ ಬನ್ನೂರು ಕೆ. ರಾಜು ಅವರು ಇಲ್ಲಿ ಹೇಳುತ್ತಾ ಹೋಗಿದ್ದಾರೆ… ನೀವೊಮ್ಮೆ ಓದಿ ಅಭಿಪ್ರಾಯ ತಿಳಿಸಿ…
“ಅಪ್ಪು” ಎಂದರೆ ಇವನಾರವ ಇವನಾರವ ನೆನ್ನದೇ ಇವ ನಮ್ಮವ ಇವ ನಮ್ಮವನೆಂದು ಎಲ್ಲರನ್ನೂ ಅಪ್ಪಿಕೊಳ್ಳುವ ವ್ಯಕ್ತಿತ್ವ. ಹಾಗಾಗಿ ಅವರು ಇಡೀ ಸಮಾಜವನ್ನು ಸಂಪೂರ್ಣವಾಗಿ ಆವರಿಸಿ ಕೊಂಡು ಸಮಸ್ತ ಕರ್ನಾಟಕವನ್ನೂ ಬಾಚಿ ತಬ್ಬಿ ಕೊಂಡಿದ್ದರು. ಅಷ್ಟೇ ಅಲ್ಲ, ಅಪ್ಪಟ ನಾಡ ಪ್ರೇಮಿಯೂ, ದೇಶ ಭಕ್ತರೂ ಆಗಿದ್ದ ಅವರು, ತಮ್ಮ ದೇಶಾಭಿಮಾನದಿಂದಲೇ ದೇಶವನ್ನೂ ಆಲಂಗಿಸಿ ಕೊಂಡಿದ್ದರು ಮಾತ್ರವಲ್ಲ, ಜಗತ್ತನ್ನೇ ತಮ್ಮತ್ತ ಸೆಳೆದು ಕೊಂಡಿದ್ದರು.

ಅಂತಹ ಆಯಸ್ಕಾಂತ ಗುಣ ಅವರದು. ಇದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆ ಇಲ್ಲ. ಜಗವೇ ಹೇಳುತೈತೆ ನೀನೇ ರಾಜಕುಮಾರ ಎಂದು. “ಶರಣರ ಸಾವನ್ನು ಮರಣದಲ್ಲಿ ನೋಡು” ಎಂಬಂತೆ ‘ಅಪ್ಪು’ ಅಗಲಿಕೆಯ ನೋವಿನಲ್ಲಿ ಇಡೀ ಜಗತ್ತು ಭಾಗಿಯಾಗಿತ್ತೆಂಬುದನ್ನು ನಾವು ಕಂಡಾಗಲಂತೂ ಅಪ್ಪುವಿನ ಪುನೀತ ಶಕ್ತಿಯ ಬಗ್ಗೆ ಹೆಮ್ಮೆಯಾಗುತ್ತದೆ. ಅಪ್ಪು ನಿಜವಾದ ‘ಪವರ್ ಸ್ಟಾರ್’ ಕನ್ನಡ, ಕನ್ನಡಿಗ, ದೇಶ, ಭಾಷೆ, ಹೀಗೆ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ತಾನೂ ಪುನೀತನಾಗಿ, ಸಮಾಜವನ್ನೂ ಪುನೀತಗೊಳಿಸಿ ಕಾಣದಂತೆ ಮಾಯವಾದ ಡಾ. ಪುನೀತ್ ರಾಜಕುಮಾರ್ ಯಾವತ್ತೂ ಅಜರಾಮರರು.
“ಪುನೀತ್ ಬಹುದೊಡ್ಡ ಕಲಾವಿದ,
ಅದಕ್ಕಿಂತಲೂ ಹೆಚ್ಚಾಗಿ ವಿನಯವಂತ,
ಹೃದಯವಂತ, ಉದಾರಶೀಲ, ಸ್ನೇಹಶೀಲ,
ಸರಳ ನಡೆ-ನುಡಿಯ ಮುಗ್ಧ ಮನಸ್ಸಿನ
ಸಜ್ಜನ ಹೀರೊ. ನಮ್ಮೆಲ್ಲರ ಮನದೊಳಗೆ
ಈ ಹೀರೊ ಎಂದೆಂದಿಗೂ ಅಮರ…”
–ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಡಾ. ಪುನೀತ್ ರಾಜಕುಮಾರ್ ಬಗೆಗಿನ ಮೇಲ್ಕಂಡ ಸುತ್ತೂರು ಶ್ರೀಗಳ ನುಡಿಮುತ್ತುಗಳು ಅಕ್ಷರಶಃ ಸತ್ಯ. ಪುನೀತ್ ಪ್ರತಿಯೊಬ್ಬರ ಹೃದಯದಲ್ಲೂ ಪುನೀತನಾಗಿಯೇ ಚಿರಸ್ಥಾಯಿ. “ವಿಧಿಯ ಕ್ರೂರ ಆಟವು ಮೇರು ಮತ್ತು ಪ್ರತಿಭಾವಂತ ನಟ ಪುನೀತ್ ರಾಜಕುಮಾರ್ ಅವರನ್ನು ನಮ್ಮಿಂದ ಕಸಿದು ಕೊಂಡಿದೆ. ಇದು ಸಾಯುವ ವಯಸ್ಸಲ್ಲ. ಮುಂಬರುವ ಪೀಳಿಗೆಯೂ ಅವರ ಅದ್ಭುತ ವ್ಯಕ್ತಿತ್ವ ಮತ್ತು ಕಾರ್ಯಕ್ಕಾಗಿ ಅವರನ್ನು ಪ್ರೀತಿಯಿಂದ ಸ್ಮರಿಸಲಿದೆ…..” ಪುನೀತ್ ರಾಜಕುಮಾರ್ ಸಾವಿನ ಸುದ್ದಿ ಕೇಳುತ್ತಲೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ದುಃಖದಿಂದ ಉದ್ಘರಿಸಿದ ಈ ನುಡಿಗಳು ಕೂಡ ಅಕ್ಷರಕ್ಷರವೂ ಸ್ಮರಣೀಯವೇ.

ಜಗತ್ತು ಇರುವ ವರೆವಿಗೂ ಪುನೀತ ಶಾಶ್ವತವಾದ ಚಿರಮಲ್ಲಿಗೆ. “ಅಪ್ಪು ಹುಟ್ಟಿನಿಂದಲೇ ಕಲಾವಿದ. ಕಲೆ ಅನ್ನುವುದನ್ನು ಯಾರೂ ಅವನಿಗೆ ಹೇಳಿ ಕೊಟ್ಟಿಲ್ಲ. ರಾಜಕುಮಾರ್ ಅವರ ಮೇರು ಕಾಲದಲ್ಲಿ ಹುಟ್ಟಿದ ಪುನೀತ್ ಅವರ ಕಲಾ ಪ್ರತಿಭೆಯನ್ನು ಹುಟ್ಟುವಾಗಲೇ ಹೊತ್ತು ತಂದಿದ್ದ ಅದ್ಭುತ ಪ್ರತಿಭೆ ಅಪ್ಪು. ಯುವ ನಟರು ಇವನಿಂದ ಕಲಿಯುವಂತಹದ್ದು ಬಹಳಷ್ಟಿದೆ…..” ಪುನೀತ್ ಹುಟ್ಟಿದಂದಿನಿಂದಲೂ ಪ್ರತಿ ಹೆಜ್ಜೆಯನ್ನೂ ಕಂಡಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಕೆ. ಭಗವಾನ್ ಅವರ ಮಾತುಗಳಿವು ಸತ್ಯಸ್ಯಸತ್ಯ. ಪುನೀತ್ ರಾಜಕುಮಾರ್ ಜನ್ಮತಃ ಕಲಾವಿದ. ನಟನೆ ಎಂಬುದು ಅವರಲ್ಲಿ ರಕ್ತಗತವಾಗಿ ಬಂದಿದ್ದ ಅಮರ ನಟ ಚೇತನ. ದೇಶದ ಪ್ರಧಾನಿಯಿಂದ ಹಿಡಿದು ಓರ್ವ ಸಾಮಾನ್ಯ ವ್ಯಕ್ತಿಯ ತನಕ ಪ್ರತಿಯೊಬ್ಬರೂ ಅಭಿಮಾನಿಸುವ ಅಪರೂಪದ ಕಲಾವಿದರಾಗಿದ್ದರು ಪುನೀತ್ ರಾಜಕುಮಾರ್.
ಇದನ್ನೂ ಓದಿ: ಅಪ್ರತಿಮ ಸಾಧಕಿ ತಾರೆ ಜಯಮಾಲಾ
ಐದಾರು ತಿಂಗಳ ಎಳೆಯ ಮಗುವಿನಲ್ಲೇ ಪ್ರಸಿದ್ಧ ನಿರ್ದೇಶಕ ವಿ. ಸೋಮಶೇಖರ್ ನಿರ್ದೇಶನದ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆಯಲ್ಲಿ ಮೊಟ್ಟ ಮೊದಲಿಗೆ ಕಾಣಿಸಿಕೊಂಡು ಆರಂಭವಾದ ‘ಅಪ್ಪು’ವಿನ ಸಿನಿಮಾ ಪಯಣ ಅವರ ಕಡೆಯ ಚಿತ್ರ ‘ಗಂಧದ ಗುಡಿ’ ವರೆಗೂ ತಡೆಯಿಲ್ಲದೆ ನಿಲ್ಲದ ನದಿಯಾಗಿ ಹರಿದು ಬಂದು ಕನ್ನಡ ಚಿತ್ರ ಚರಿತ್ರೆಯಲ್ಲಿ ಒಂದು ಹೊಸ ಇತಿಹಾಸ ಬರೆದಿದೆ. ಬಾಲ ನಟನಾಗಿ ಪುನೀತ್ ಅಭಿನಯಿಸಿದ 14 ಚಿತ್ರಗಳು ಸೇರಿದಂತೆ ನಾಯಕನಟರಾಗಿ ಅವರು ಅಭಿನಯಿಸಿದ 32ಚಿತ್ರಗಳು ಒಳಗೊಂಡಂತೆ ಒಟ್ಟು 46 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಈ ಎಲ್ಲಾ ಚಿತ್ರಗಳು ಕೇವಲ ಸಿನಿಮಾ ಆಗಿರದೆ ಒಂದೊಂದು ಚಿತ್ರಗಳೂ ಒಂದೊಂದು ಮುತ್ತುಗಳಾಗಿ, ರತ್ನಗಳಾಗಿ ಹೊಳೆಯುತ್ತಿವೆ. ಅಂತಹ ಅಭೂತ ಪೂರ್ವ ಅನನ್ಯ ಸದಭಿರುಚಿ ಚಿತ್ರಗಳಿವು.ಇಲ್ಲಿ ಅಪ್ಪು ಅಭಿನಯಿಸಿರುವ ಒಂದೇ ಒಂದು ಚಿತ್ರವನ್ನೂ ಕಳಪೆ ಎಂದು ತೆಗೆದು ಹಾಕುವಂತಿಲ್ಲ. ಪ್ರತಿಯೊಂದು ಚಿತ್ರಗಳೂ ಶ್ರೇಷ್ಠ ಮಟ್ಟದ್ದೇ ಆಗಿವೆ. ಇಂತಹ ಅದ್ಭುತ ಕಲಾವಿದ ಹಾಗೂ ಅವರು ಅಭಿನಯಿಸಿದ ಉತ್ಕೃಷ್ಟ ಚಲನಚಿತ್ರಗಳು ಕನ್ನಡಕ್ಕೆ ದೊರೆತದ್ದೇ ಕನ್ನಡದ ಸೌಭಾಗ್ಯ.
`ಅಪ್ಪು’ ಎಂಬ ಎರಡಕ್ಷರ ಮಾತ್ರದಿಂದಲೇ ಕರ್ನಾಟಕವನ್ನು ಆಲಂಗಿಸಿ ಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಚಲನಚಿತ್ರಗಳನ್ನು ನೋಡಿ ಮೆಚ್ಚದವರುಂಟೆ? ಅಪ್ಪುವಿನ ಅಭಿನಯವನ್ನು ಇಡೀ ಕನ್ನಡನಾಡು ಒಪ್ಪಿ- ಅಪ್ಪಿ, ಮೆಚ್ಚಿ, ಮನದುಂಬಿ ಆನಂದಿಸಿದೆ. ಕಿರಿಯ ವಯಸ್ಸಿನ ಹಿರಿಯ ವ್ಯಕ್ತಿತ್ವದ ಅಪ್ಪುವಿನಂಥ ಹೃದಯವಂತ ಕಲಾವಿದನನ್ನು ಕಳೆದುಕೊಂಡು ಕನ್ನಡನಾಡು ಕಣ್ಣೀರಿಟ್ಟಿದೆ. ಅಪ್ಪುವನ್ನು ಕುರಿತು ಬರೆಯಬೇಕೆಂದರೆ ಕಂಗಳು ತುಂಬಿ ಬರುತ್ತದೆ. ಮನಸ್ಸು ಆರ್ದ್ರವಾಗುತ್ತದೆ. ಪೆನ್ನು ತನ್ನಂತಾನೆ ಕಂಪಿಸುತ್ತದೆ.

ಅಪ್ಪು ‘ನಟಸಾರ್ವಭೌಮ’ ಎಂದು ಕರೆಸಿಕೊಂಡವರು. ಅಂತೆಯೇ ನಟನೆಯಿಂದಾಚೆಗೂ ಸಹಜ ಬದುಕಿನಲ್ಲಿ ‘ಮಾನವತಾವಾದಿ’ ಎಂದು ಕೂಗಿಸಿ ಕೊಂಡವರು. ಜೊತೆಗೆ ಅವರೊಬ್ಬ ವಿಸ್ಮಯದೋಪಾದಿಯ ಅದ್ಭುತ ವ್ಯಕ್ತಿಯಾಗಿ ಎಲ್ಲರನ್ನೂ , ಎಲ್ಲವನ್ನೂ ಒಳಗೊಂಡವರು.ಕನ್ನಡ ನಾಡು ಇನ್ನೆಂದೂ ಕಾಣದಂತಹ ಬಹು ಅಪರೂಪದ ವಜ್ರಸಿರಿಯ ಕಲಾ ವೈರಮುಡಿಯಿದು. ಅಪ್ಪುವಿನ ಬಗ್ಗೆ ಬರೆಯಹೊರಟರೆ ಅಕ್ಷರಗಳು ಅಳುತ್ತವೆ. ಪದಗಳು ಸೋಲುತ್ತವೆ. ಶಬ್ದಗಳು ನಿಶಬ್ದ ವಾಗುತ್ತವೆ. ಏನು ಬರೆಯಲಿ? ಏನು ಹೇಳಲಿ? ಕರ್ನಾಟಕ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಈ ಕ್ಷಣಕ್ಕೂ ಅಪ್ಪು ಅಚ್ಚುಮೆಚ್ಚು.
ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಅಭಿನಯದ ವಿಚಾರಕ್ಕೆ ಬಂದರೆ ಅಕ್ಷರಶಃ ಅಪ್ಪು ನಟಸಾರ್ವಭೌಮನೇ! ಸಿನಿಮಾ ಜೀವನ ಒತ್ತಟ್ಟಿಗಿರಲಿ. ವೈಯಕ್ತಿಕ ವಿಷಯಕ್ಕೆ ಬಂದರಂತೂ ಅಪ್ಪು ಭೂಮಿಗೆ ಬಂದ ಭಗವಂತ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಪ್ಪುವಿನಷ್ಟು ಸದ್ದಿಲ್ಲದೆ ಬಹುದೊಡ್ಡ ಜನೋಪಯೋಗಿ ಕೆಲಸವನ್ನು ಮಾಡಿದ ನಟರು ಬಹಳ ವಿರಳ. ಇಲ್ಲವೆಂದರೂ ಸರಿಯೇ!

ಅರವತ್ತು ಎಪ್ಪತ್ತರ ದಶಕದಲ್ಲಿ ಚಲನಚಿತ್ರ ಚಟುವಟಿಕೆಗಳು ಹೆಚ್ಚಾಗಿ ಚೆನ್ನೈನಲ್ಲಿ (ಆಗಿನ ಮದ್ರಾಸ್) ಕೇಂದ್ರೀಕೃತ ಗೊಂಡಿತ್ತು . ಹಾಗಾಗಿ ಕಲೆಯನ್ನೇ ನಂಬಿ ಕೊಂಡಿದ್ದ ಡಾ. ರಾಜಕುಮಾರ್ ಕುಟುಂಬ ಆಗ ಚೆನ್ನೈನಲ್ಲಿ ನೆಲೆಸಿತ್ತು. ಆ ಸಂದರ್ಭದಲ್ಲಿ 1975ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಅವರು ವಿಶ್ವವಿಖ್ಯಾತಿಯ ಕಲಾವಿದ ನಟಸಾರ್ವಭೌಮ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ದಂಪತಿಗೆ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸಿದರು. ಪುನೀತ್ ಅವರ ಮೊದಲ ಹೆಸರು ಲೋಹಿತ್. ಬಾಲ ನಟನಾಗಿ ಬಹಳಷ್ಟು ಚಿತ್ರಗಳಲ್ಲಿ ಅದೇ ಹೆಸರಿನಲ್ಲಿ ಅವರು ನಟಿಸಿದ್ದಾರೆ.
ಅವರು ಡಾ.ರಾಜ್ ಕುಮಾರ್ ದಂಪತಿಯ ಐದನೇ ಮತ್ತು ಕಿರಿಯ ಪುತ್ರ. ಅವರಿಗೆ ಇಬ್ಬರು ಅಣ್ಣಂದಿರು. ಹಿರಿಯಣ್ಣ ನಟ ಡಾ.ಶಿವರಾಜ್ ಕುಮಾರ್ ಮತ್ತು ಕಿರಿಯಣ್ಣ ನಟ ರಾಘವೇಂದ್ರ ರಾಜ್ ಕುಮಾರ್. ಇವರಿಬ್ಬರೂ ಸುಪ್ರಸಿದ್ಧ ನಟರು. ಹಾಗೆಯೇ ಲಕ್ಷ್ಮಿ ಮತ್ತು ಪೂರ್ಣಿಮಾ ಎಂಬ ಇಬ್ಬರು ಅಕ್ಕಂದಿರು. ತಂದೆ ಡಾ.ರಾಜ್ ಕುಮಾರ್ ಅವರು ಕಿರಿಯ ಮಗ ಪುನೀತ್ ರನ್ನು ಮತ್ತು ಕಿರಿಯ ಮಗಳು ಪೂರ್ಣಿಮಾಳನ್ನು ತಾವು ಅಭಿನಯಿಸುತ್ತಿದ್ದ ಚಲನ ಚಿತ್ರಗಳ ಶೂಟಿಂಗ್ ಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಹಾಗಾಗಿ ಎಳೆಯ ವಯಸ್ಸಿನಲ್ಲೇ ಪುನೀತ್ ಅವರಿಗೆ ಕಲೆ ಆಕರ್ಷಿಸಿತ್ತು. ಹಾಗಾಗಿ ಮುಂದಕ್ಕೆ ಅಭಿನಯವೆಂಬುದು ಅವರಿಗೆ ಸಲೀಸಾಯಿತು. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆ ದಾಟಿ ಯೌವನಕ್ಕೆ ಹೆಜ್ಜೆಯಿರಿಸಿದ ಅವರು, 1999 ಡಿಸೆಂಬರ್ 1 ರಂದು ಚಿಕ್ಕ ಮಗಳೂರಿನ ಸುಸಂಸ್ಕತ ಕುಟುಂಬದ ಹೆಣ್ಣು ಮಗಳು ಅಶ್ವಿನಿ ರೇವಂತ್ ಅವರನ್ನು ವಿವಾಹವಾದರು. ಇವರಿಗೆ ಧೃತಿ ಮತ್ತು ವಂದಿತ ಎಂಬ ಇಬ್ಬರು ಪುತ್ರಿಯರಿದ್ದು ಅವರದೊಂದು ಸುಖೀ ದಾಂಪತ್ಯದ ಸಂಸಾರವಾಗಿತ್ತು.
ಬಾಲ ನಟನಾಗಿ ಪುನೀತ್… ದಿಗ್ದರ್ಶಕ ವಿ.ಸೋಮಶೇಖರ್ ಅವರು ಪುನೀತ್ ಅವರನ್ನು ಆರು ತಿಂಗಳ ಮಗುವಾಗಿದ್ದಾಗ ‘ಪ್ರೇಮದಕಾಣಿಕೆ’ (1976) ಚಿತ್ರದಲ್ಲಿ ಡಾ.ರಾಜ್ ಮತ್ತು ಆರತಿ ಅವರೊಟ್ಟಿಗೆ ತೆರೆಯ ಮೇಲೆ ತೋರಿಸಿದ್ದರು. ಈ ಚಿತ್ರದ ನಂತರ ಪುನೀತ್ ಒಂದು ವರ್ಷದ ಮಗುವಾಗಿದ್ದಾಗ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿ ಆಧಾರಿತ ಅದೇ ಹೆಸರಿನ ವಿಜಯ್ ನಿರ್ದೇಶನದ ‘ಸನಾದಿ ಅಪ್ಪಣ್ಣ'(1977) ಚಿತ್ರದಲ್ಲಿ ಪ್ರಮುಖವಾಗಿ ನಟಿಸಿದ್ದರು. ಮತ್ತೆ ವಿ.ಸೋಮಶೇಖರ್ ನಿರ್ದೇಶಿತ ‘ತಾಯಿಗೆ ತಕ್ಕ ಮಗ’ (1978) ಚಿತ್ರದಲ್ಲಿ ನಟಿಸಿದರಲ್ಲದೆ, ಎರಡು ವರ್ಷಗಳ ನಂತರ ನಿರ್ದೇಶಕ ದೊರೆ-ಭಗವಾನ್ ಅವರು, ಪುನೀತ್ ಅವರನ್ನು ‘ವಸಂತಗೀತ’ (1980) ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುವಂತೆ ಮಾಡಿದರು.

ಇದರ ನಂತರ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಅವರ ಪೌರಾಣಿಕ ಚಿತ್ರ ‘ಭೂಮಿಗೆ ಬಂದ ಭಗವಂತ’ (1981) ಚಿತ್ರದಲ್ಲಿ ಭಗವಾನ್ ಬಾಲಕೃಷ್ಣನಾಗಿ ಪುನೀತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಆನಂತರ ಬಿ.ಎಸ್. ರಂಗ ಅವರ ‘ಭಾಗ್ಯವಂತ'(1982) ಚಿತ್ರದಲ್ಲಿ ನಟಿಸಿ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ರಾಗ ಸಂಯೋಜಿಸಿದ ತಮ್ಮ ಮೊದಲ ಜನಪ್ರಿಯ ಗೀತೆಯಾದ “ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ……” ಹಾಡನ್ನು ಹಿನ್ನೆಲೆ ಗಾಯಕರಾಗಿ ಪುನೀತ್ ಹಾಡಿದರು.ಇಲ್ಲಿ ಯಶಸ್ವಿಯೂ ಆದರು. ಇವತ್ತಿಗೂ ಬಾನ ದಾರಿಯ ಈ ಹಾಡು ಕನ್ನಡಿಗರೆದೆಯಲ್ಲಿ ಮಧುರವಾಗಿ ಗುನುಗುತ್ತಿರುತ್ತದೆ.
ಅದೇ ವರ್ಷ ಪುನೀತ್ ಅವರು ತಮ್ಮ ತಂದೆಯೊಡನೆ `ಚಲಿಸುವ ಮೋಡಗಳು’ ಮತ್ತು ‘ಹೊಸಬೆಳಕು’ ಎರಡೂ ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿ ತಾವು ಸಹ ಪ್ರಸಿದ್ಧಿಯ ಶಿಖರ ಏರಿದರು. `ಚಲಿಸುವ ಮೋಡಗಳು’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ (1982) ಕರ್ನಾಟಕ ರಾಜ್ಯ ಸರ್ಕಾರದಿಂದ ಪುನೀತ್ ಅವರು ಅತ್ಯುತ್ತಮ ಬಾಲ ಕಲಾವಿದ ರಾಜ್ಯ ಪ್ರಶಸ್ತಿಯನ್ನೂ ಹಾಗೂ ಭಾರತ ಸರ್ಕಾರದಿಂದ ಶ್ರೇಷ್ಠ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು. ಬಾಲ್ಯದಲ್ಲೇ `ತಂದೆಗೆ ತಕ್ಕ ಮಗ’ ನೆಂಬ ಕೀರ್ತಿಗೂ ಭಾಜನರಾದರು.

ನಂತರ ಅವರು ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ತಂದೆ ರಾಜಕುಮಾರ್ ನಟಿಸಿದ್ದ ಹಿರಣ್ಯಕಶಿಪುವಿನ ಆರ್ಭಟದ ಪಾತ್ರದೆದುರು ಒಂದು ಚೂರೂ ಅಂಜದೆ ಪ್ರಹ್ಲಾದನಾಗಿ ನಟಿಸಿ ಇಡೀ ಪ್ರೇಕ್ಷಕರ ಹೃದಯ ಹೊಕ್ಕಿ ಮನಸೂರೆಗೊಂಡಿದ್ದರು. ಮತ್ತು ‘ಎರಡು ನಕ್ಷತ್ರಗಳು’ (1983) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಅಭೂತಪೂರ್ವ ಯಶಸ್ವಿ ವಿಜಯದ ಏಣಿ ಏರಿದ್ದರು. ಅಷ್ಟೇ ಅಲ್ಲ,ಈ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾದಿಂದ ಎರಡನೇ ಅತ್ಯುತ್ತಮ ಬಾಲ ನಟ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ಗಳಿಸಿದ್ದರು.
1984ರಲ್ಲಿ ಪುನೀತ್ ರಾಜ್ ಕುಮಾರ್ ಅವರು ಥ್ರಿಲ್ಲರ್ ಮಾದರಿಯ ‘ಯಾರಿವನು?’ ಚಿತ್ರದಲ್ಲಿ ನಟಿಸಿದರು. ಅದರಲ್ಲಿ ರಾಜನ್-ನಾಗೇಂದ್ರ ರಾಗ ಸಂಯೋಜನೆಯಲ್ಲಿ “ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ……” ಹಾಡನ್ನು ಬಿ.ಸರೋಜಾದೇವಿ ಕಾಂಬಿನೇಶನ್ ನಲ್ಲಿ ಹಾಡಿ ಹಿನ್ನೆಲೆ ಗಾಯಕರಾಗಿಯೂ ‘ಸೈ’ ಅನಿಸಿಕೊಂಡು ಬೆಳೆಯುತ್ತಾ ಹೋದರು. ಬಾಲನಟನಾಗಿ ಪುನೀತ್ ರಾಜಕುಮಾರ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರವೆಂದರೆ ಅದು ‘ಬೆಟ್ಟಹೂವು’ (1985). ಇದು ಎಂ.ಲಕ್ಷ್ಮೀನಾರಾಯಣ ನಿರ್ದೇಶಿಸಿದ ಶೆರ್ಲಿ ಎಲ್. ಅರೋರಾ ಅವರ ‘ವಾಟ್ ತೆನ್ ರಾಮನ್, ರಾಮನ್?’ ಕಾದಂಬರಿಯಾಧಾರಿತ ಚಿತ್ರ.

ಬೆಟ್ಟದ ಹೂವಿನಲ್ಲಿ ಮುಗ್ದ ರಾಮು ಆಗಿ ಅಭಿನಯಿಸಿ ಆ ಪಾತ್ರಕ್ಕಾಗಿ ಪುನೀತ್ ಅವರು 33ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಹದಿಹರೆಯದತ್ತ ಹೆಜ್ಜೆ ಇಡುತ್ತಿದ್ದ ಕಾಲಘಟ್ಟದಲ್ಲಿ ಪುನೀತ್ ಅವರು ‘ಶಿವ ಮೆಚ್ಚಿದ ಕಣ್ಣಪ್ಪ’ (1988)ಚಿತ್ರದಲ್ಲಿ ತನ್ನ ಹಿರಿಯ ಸಹೋದರ ಶಿವರಾಜಕುಮಾರ್ ಜತೆ ಅಭಿನಯಿಸಿದರು. ಬಾಲನಟನಾಗಿ ಅವರು ನಟಿಸಿದ ಕೊನೆಯ ಚಿತ್ರ ‘ಪರಶುರಾಮ್’ (1989) ಆಗಿತ್ತು. ಅದೂ ಸಹ ಅವರ ತಂದೆ ವರನಟ ಡಾ.ರಾಜಕುಮಾರ್ ಜೊತೆಯಲ್ಲಿ!
ನಾಯಕ ನಟರಾಗಿ ಪುನೀತ್… ಏಪ್ರಿಲ್ 2002ರಲ್ಲಿ ಪುನೀತ್ ಅವರು ಪೂರಿ ಜಗನ್ನಾಥ್ ನಿರ್ದೇಶನದ, ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟರಾಗಿ ಕನ್ನಡದ ಬೆಳ್ಳಿತೆರೆಗೆ ಮೊದಲಿಗೆ ಪಾದಾರ್ಪಣೆ ಮಾಡಿದರು. ಇದು ನಟಿ ರಕ್ಷಿತಾ ಅವರ ಮೊದಲ ಚಲನಚಿತ್ರ ಕೂಡ ಆಗಿತ್ತು. ಇದರಲ್ಲಿ ಪುನೀತ್ ಅವರು ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದೀಚೆಗೆ ಪುನೀತ್ ರಾಜ್ ಕುಮಾರ್ ಅವರು ಹಿಂತಿರುಗಿ ನೋಡಲೇ ಇಲ್ಲ. ಒಂದರ ಹಿಂದೆ ಒಂದರಂತೆ ಇಡೀ ಭಾರತೀಯ ಚಿತ್ರರಂಗದಲ್ಲೇ ಮಹದದ್ಬುತ ಎನ್ನುವಂತೆ ಬೆಳ್ಳಿತೆರೆಗೆ ಬಂದ ‘ಗಂಧದ ಗುಡಿ’ (2022) ಚಿತ್ರದವರೆವಿಗೂ ರಾಕೆಟ್ ವೇಗದಲ್ಲಿ ಅಭಿನಯಿಸುತ್ತಾ ಹೋದರು. ದುರಂತವೆಂದರೆ ಅವರ ನಟನೆಯ ಕಟ್ಟಕಡೆಯ ಚಿತ್ರ ‘ಗಂಧದ ಗುಡಿ’ ಹಾಗೂ ಇದರ ಹಿಂದಿನ ಚಿತ್ರಗಳಾದ ‘ಲಕ್ಕಿ ಮ್ಯಾನ್’ ಹಾಗೂ ‘ಜೇಮ್ಸ್’ ಚಿತ್ರ ಗಳನ್ನು ಅವರು ನೋಡಲಾಗಲೇ ಇಲ್ಲ. ಅಷ್ಟರಲ್ಲಾಗಲೇ ಪುನೀತ್ ರಾಜಕುಮಾರ್ ಅವರು ದೈವಾಧೀನರಾಗಿ ದೇವರತ್ತ ಹೊರಟು ಬಿಟ್ಟಿದ್ದರು (ನಿಧನ: 29-10-2021)

“ಇರೋದ್ ಒಂದ್ ಜೀವ್ನ. ಹಿಂದೇನಾಯ್ತೋ ನೆನ್ಪಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ. ನಾನ್ ಏನ್ ತಿಂತೀನಿ, ಎಲ್ಲಿ ಮಲಗ್ತೀನಿ, ನಾನೇನ್ ಮಾಡ್ತೀನಿ, ಯಾವಾಗ ಎಲ್ಲಿ ಸಾಯ್ತೀನಿ ಎಂಬುದನ್ನೆಲ್ಲಾ ಬರೆದು ಬಿಟ್ಟಿದ್ದಾನೆ ವಿಧಿ. ಅವನ್ ಮುಂದೆ ನಮ್ದೇನಿಲ್ಲ.” ಇದು ಪುನೀತ್ ರಾಜಕುಮಾರ್ ಬದುಕಿದ್ದಾಗ ತಮಾಷೆ ಎಂಬಂತೆ ಆಗಾಗ ಹೇಳುತ್ತಿದ್ದ ಜೀವನ ಸಂದೇಶ. ಈಗ ಇದರ ಗಂಭೀರತೆ ಅರ್ಥವಾಗುತ್ತಿದೆ. ಅರಿತು ಬಾಳುವವರಿಗೆ ಇದಕ್ಕಿಂತ ಬದುಕಿನ ಮಾರ್ಗಸೂಚಿ ಬೇಕೆ?









