LatestMysore

ಹಿರೀಕ್ಯಾತನಹಳ್ಳಿಯಲ್ಲಿ ಮಲ್ಲಿಕಾರ್ಜುನಸ್ವಾಮಿಗೆ ಮೂರು ದಿನಗಳ  ಜಾತ್ರೆ, ಕೊಂಡೋತ್ಸವ

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿಯಲ್ಲಿ ಮಲ್ಲಿಕಾರ್ಜುನಸ್ವಾಮಿಗೆ ನಾನಾ ಪೂಜಾ ಕೈಂಕರ್ಯ. ಉತ್ಸವ, ಕೊಂಡೋತ್ಸವಗಳು ಮಾ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಕಾವೇರಿ  ನದಿಯಿಂದ ಉತ್ಸವ ಮೂರ್ತಿಗಳನ್ನು ತೊಳೆದು ತರುವುದು ಮತ್ತು ಹೊನ್ನಾರು ನಡೆಸುವುದು ವಾಡಿಕೆ. ಯುಗಾದಿ ಹಬ್ಬದ ಹಿಂದಿನ ದಿನ ಶ್ರೀ ಮಲ್ಲಿಕಾರ್ಜುನ ಉತ್ಸವ ಮೂರ್ತಿಯನ್ನು ಪಕ್ಕದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯವರೆಗೆ ಗ್ರಾಮದ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬರಾದರೂ (ಸುಮಾರು 1ಸಾವಿರ ಮಂದಿ) ರಾತ್ರಿ ಮನೆಯಿಂದ ತರುವ ಮೀಸಲು ಬುತ್ತಿಯೊಂದಿಗೆ ಒಂದೆಡೆ ಸೇರಿ ರಾತ್ರಿ ಇಡೀ ಬರಿಗಾಲಿನಲ್ಲಿ ನಡೆದು ಬರುತ್ತಾರೆ.

ಆ ನಂತರ ಗ್ರಾಮದಿಂದ ತಂದ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ ನಂತರ ಹೊಸಬಟ್ಟೆ ಧರಿಸಿ ಮನೆಯಿಂದ ತಂದ ಮೀಸಲು ಬುತ್ತಿಯನ್ನು ಸಾಮೂಹಿಕವಾಗಿ ಸೇವಿಸುತ್ತಾರೆ. ಇದಕ್ಕೂ ಮುನ್ನ ಹಬ್ಬದ ಪ್ರಯುಕ್ತ ಬೇವು, ಬೆಲ್ಲ ಸೇವಿಸುತ್ತಾರೆ. ನಂತರ ಗ್ರಾಮದೇವತೆ ಉತ್ಸವ ಮೂರ್ತಿಯನ್ನು ವಾದ್ಯದೊಂದಿಗೆ ಸಾಲಿಗ್ರಾಮ ತಾಲೂಕಿನ ಶ್ರೀರಾಂಪುರ, ಮಳಲಿ, ಮಾವತ್ತೂರು ಮಾರ್ಗದ ಮೂಲಕ ಊರು ಸೇರುವ ಮಾರ್ಗದಲ್ಲಿ ನಾನಾ ಗ್ರಾಮಸ್ಥರು ನೀರು, ಮಜ್ಜಿಗೆ, ಪಾನಕ ನೀಡುತ್ತಾರೆ.

ಸ್ವಗ್ರಾಮಕ್ಕೆ ಉತ್ಸವ ಮೂರ್ತಿ ಬರುತ್ತಿದ್ದಂತೆ ಗ್ರಾಮದ ಪುರುಷರು, ಮಹಿಳೆಯರು, ಮಕ್ಕಳು ದೇವಸ್ಥಾನದ ಆವರಣಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವರು. ನಂತರ ಹಬ್ಬ ಆಚರಿಸಿ ಹೋಳಿಗೆ ಊಟ ಸವಿಯುತ್ತಾರೆ.

ಅಂದು ಸಂಜೆ 5ಕ್ಕೆ ಮತ್ತೆ ದೇವಸ್ಥಾನದ ಬಳಿ ಸೇರುವ ಗ್ರಾಮಸ್ಥರು ಪುರೋಹಿತರನ್ನು ಕರೆಯಿಸಿ ಹೊಸ ಪಂಚಾಂಗದಂತೆ ಯಾರ ಹೆಸರಿನಲ್ಲಿ ಹಾಗೂ ಯಾವ ಬಣ್ಣದ ಎತ್ತುಗಳಿಂದ ಉಳುಮೆ ಮಾಡಬೇಕೆಂಬುದನ್ನು ನಿರ್ಧರಿಸಿ ಆಯ್ಕೆ ಮಾಡಿದ ರೈತನ ತಲೆಗೆ ಪೇಟ, ಬಿಳಿ ಶರ್ಟ್, ಪಂಚೆ ತೊಡಿಸುತ್ತಾರೆ.

ಉಳುವ ಎತ್ತುಗಳನ್ನು ಏರು ಕಟ್ಟಿ ತಮಟೆ. ವಾದ್ಯಗಳೊಂದಿಗೆ ಇಡೀ ಗ್ರಾಮಸುತ್ತಿ ಉಳುಮೆ ಮಾಡಿದ ನಂತರ ದೇವಸ್ಥಾನ ತಲುಪುತ್ತಾರೆ. ಹೀಗೆ ಮಾಡಿದಲ್ಲಿ ಉತ್ತಮ ಮಳೆ, ಬೆಳೆಯಾಗಲಿದೆ ಎಂಬ ನಂಬಿಕೆ ಇದೆ. ಅದೇ ದಿನ ರಾತ್ರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವರ ಉತ್ಸವ ನಡೆಯಲಿದೆ. ಮಾರನೆ ದಿನ ಶುಕ್ರವಾರ ದೇವಸ್ಥಾನದ ಅವರಣದಲ್ಲಿ ಬೆಳಗಿನ ಜಾವ 5.30ಕ್ಕೆ ಕೊಂಡೋತ್ಸವ ನೆರವೇರಲಿದೆ.

ಹಬ್ಬದ ಕುರಿತಂತೆ ಸವಿತಾ ಸಮಾಜದ ಯಜಮಾನರಾದ ವೆಂಕಟೇಶ್ ಮಾತನಾಡಿ, ಹಿರೀಕ್ಯಾತನಹಳ್ಳಿಯಲ್ಲಿ ಹಿರಿಯ ತಲೆಮಾರಿನಿಂದ ಯುಗಾದಿ ಹಬ್ಬವನ್ನು ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರು ಸೇರಿ ಯುಗಾದಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರೆ, ಗ್ರಾಮದ ಯಜಮಾನರಾದ  ಜಗದೀಶ್ ಪಾಪಣ್ಣ ಅವರು,  ಅನಾದಿಕಾಲದಿಂದ ಯುಗಾದಿ ಹಬ್ಬ ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ನಾನಾ ಪೂಜಾ ಕೈಂಕರ್ಯ ಉತ್ಸವವನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲರೂ ಸೇರಿ ಸಂಭ್ರಮ ಸಡಗರದಿಂದ ಹಬ್ಬ ಹಾಗೂ ದೇವರ ಉತ್ಸವ ಆಚರಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ ಎಂದಿದ್ದಾರೆ.

 

 

 

 

 

admin
the authoradmin

Leave a Reply

Translate to any language you want