ಕುಶಾಲನಗರದಲ್ಲಿ ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ
ರಕ್ತದಾನ ಮಾಡಲು ಮುಂದೆ ಬರಬೇಕು.. ಡಾ.ಕರುಂಬಯ್ಯ

ಕುಶಾಲನಗರ(ರಘುಹೆಬ್ಬಾಲೆ): ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ. ರಕ್ತದಾನಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಡಾ.ಕರುಂಬಯ್ಯ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿ ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ಗೌಡ ಸಮಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ರಕ್ತದಾನ ಮಾಡುವ ಬಗ್ಗೆ ಜನರಲ್ಲಿ ಗೊಂದಲಗಳಿವೆ. ರಕ್ತಕ್ಕೆ ಪರ್ಯಾಯ ಯಾವುದು ಇಲ್ಲ. ಸಂಪೂರ್ಣವಾಗಿ ರಕ್ತದಾನ ಅವಲಂಬಿಸಿದ್ದೇವೆ.ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವದಾನ ಮಾಡಲು ಸಾಧ್ಯವಿದೆ ಎಂದರು.

ರಕ್ತ ಸಂಬಂಧಿ ಕಾಯಿಲೆಗಳಿಗೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ರಕ್ತದ ಅಗತ್ಯತೆ ತುಂಬ ಇದೆ.ಇತ್ತೀಚಿನ ದಿನಗಳಲ್ಲಿ ರೋಗಿಗಳು,ರೋಗಗಳು ಹೆಚ್ಚಾಗುತ್ತಿವೆ. ಅದೇ ರೀತಿ ರಕ್ತಕ್ಕೆ ಕೂಡ ಬೇಡಿಕೆ ಹೆಚ್ಚುತ್ತಿದೆ.ಆದರೆ ರಕ್ತದಾನಿಗಳ ಸಂಖ್ಯೆ ಹೆಚ್ಚುತ್ತಿಲ್ಲ ಎಂದು ಹೇಳಿದರು. ರಕ್ತದಾನ ಮಾಡಿದರೆ ಆರೋಗ್ಯ ಲಾಭಗಳಿವೆ. ಹಾಗಾಗಿ ಯುವಕರು ಹಾಗೂ ಆರೋಗ್ಯವಂತರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಇತರರ ಪ್ರಾಣವನ್ನು ಕಾಪಾಡಬೇಕು ಎಂದರು.

ಲಯನ್ಸ್ ಕ್ಲಬ್ ರೀಜನಲ್ ಚೇರ್ ಪರ್ಸನ್ ಡಾ.ಪಂಚಮ್ ತಿಮ್ಮಯ್ಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನಕ್ಕೆ ಸಹಕಾರ ನೀಡುವ ಚಿಂತನೆ ಎಲ್ಲರಲ್ಲೂ ಮೂಡಬೇಕಿದೆ. ಸ್ಥಿತಿವಂತರಾದರೂ ಕೊಡುಗೆ ನೀಡುವ ಮನಸ್ಥಿತಿ ಎಲ್ಲರಲ್ಲೂ ಇರುವುದಿಲ್ಲ. ಇದು ಬದಲಾಗಬೇಕಿದೆ. ಪುನಿತ್ ರಾಜ್ ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಅವರು ಶ್ಲಾಘಿಸಿದರು.
ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ,. ರಕ್ತದಾನ ಮಾಡಲು ಅವಕಾಶವಿರುವವರು ಕಡ್ಡಾಯವಾಗಿ ರಕ್ತದಾನದಂತಹ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಇತರೆ ಜೀವಕ್ಕೆ ನೆರವಾಗಬೇಕಿದೆ ಎಂದರು.

ಈ ಸಂದರ್ಭ ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಉಪ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಕುಶಾಲನಗರ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಕಿರಣ್, ಕುಶಾಲನಗರ ಗೌಡ ಸಮಾಜ ಉಪಾಧ್ಯಕ್ಷ ಕಾಶಿ ಪೂವಯ್ಯ, ಕಾರ್ಯದರ್ಶಿ ಹೇಮಂತ್, ಮೈಸೂರಿನ ಡಾ.ಇಬ್ರಾಹಿಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ, ಸೇರಿದಂತೆ ಲಯನ್ಸ್ ಪ್ರಮುಖರಾದ ಚಿಣ್ಣಪ್ಪ, ಡಾ.ಪ್ರವೀಣ್, ರಾಜಶೇಖರ್, ಗೌಡ ಸಮಾಜದ ಪ್ರಮುಖರು, ರಕ್ತದಾನಿಗಳು ಪಾಲ್ಗೊಂಡಿದ್ದರು.







