LatestMysore

ಜಗತ್ತಿನ  ವೈಚಾರಿಕ ಕ್ರಾಂತಿಯ  ಅದ್ಭುತ ತತ್ವಜ್ಞಾನಿ ಅಲ್ಲಮ ಪ್ರಭು: ಕಲ್ಮಳ್ಳಿ ನಟರಾಜು ಅಭಿಪ್ರಾಯ

 ಮೈಸೂರು: ಜಗತ್ತಿನ ವೈಚಾರಿಕ ಕ್ರಾಂತಿಯ  ಅದ್ಭುತ ತತ್ವಜ್ಞಾನಿ ಅಲ್ಲಮ ಪ್ರಭು ಎಂದು ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಘಟಕದ ನಿರ್ದೇಶಕ ಕಲ್ಮಳ್ಳಿ ನಟರಾಜು ಹೇಳಿದರು.

ಶ್ರೀ ಮಹದೇಶ್ವರ ಸ್ನೇಹ ಬಳಗದ ವತಿಯಿಂದ ದೇವಿರಮ್ಮನಹಳ್ಳಿಯ ಬಸವೇಶ್ವರ ಮುಖ್ಯ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಅಲ್ಲಮ ಪ್ರಭು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 12ನೆಯ ಶತಮಾನದಲ್ಲಿ ಜಗತ್ತಿನ ಮಾನವ ಇತಿಹಾಸದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಿದ್ದು, ಆಳುವ ವರ್ಗದ ಹಿಡಿತಕ್ಕೆ ಸಿಕ್ಕ ಸಾಮಾನ್ಯಜನರ ಬದುಕು ಪ್ರಾಣಿ ಸದೃಶವಾಗಿ ಮನುಷ್ಯರೂಪವಿದ್ದರೂ ಪ್ರಾಣಿ ಪಕ್ಷಿಗಳಿಗಿಂತಲೂ ಕೀಳಾಗಿ ಹೀನಾಯ ಬದುಕು ನಡೆಸುತ್ತಿದ್ದ ಅಕ್ಷರಶಃ ಮೂಕ ಪ್ರಾಣಿಗಳಂತೆ ಜೀವಿಸಿದ್ದ ಸಮಾಜದ ಕೆಳ ಸ್ತರದ ಜನಸಮೂಹಕ್ಕೇ ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸ್ವಾತಂತ್ರ್ಯದ ಉಸಿರನ್ನು ನೀಡಿ ಆತ್ಮ ಸ್ಥೈರ್ಯ ತುಂಬಿದ್ದು ಬಸವಣ್ಣ.

ನಿಜಾರ್ಥದಲ್ಲಿ ಶೋಷಿತರ, ದಮನಿತರ ಅಲಕ್ಷಿತ ಬಹು ದೊಡ್ಡ ಸಮುದಾಯಕ್ಕೆ ಪ್ರೀತಿ ಕರುಣೆ ತೋರುವುದರ ಮೂಲಕ ಮನುಷ್ಯರೂಪದ ದೇವರಾದ ಬಸವಣ್ಣನ ಕಲ್ಪನೆಯ ಶಿಶುವಾದ ಅನುಭವ ಮಂಟಪ ಇಂದಿನ ನಮ್ಮ ಸಂವಿಧಾನದ ಪರಮೋಚ್ಚ ಆಶಯಗಳಾದ  ಸಮಾನತೆ , ಅಭಿ ವ್ಯಕ್ತಿ ಸ್ವಾತಂತ್ರ, ಭ್ರಾತೃತ್ವವನ್ನು ಸಾರುವ ಜಗತ್ತಿನ ಪ್ರಜಾ ಪ್ರಭುತ್ವ ವ್ಯವಸ್ಥೆಯ ಬಹು ದೊಡ್ಡ ಅಡಿಗಲ್ಲು  ಎಂದು ಹೇಳಿದರು.

ಕಾಯಕವೇ ಕೈಲಾಸ ಎನ್ನುವ ಮೂಲಕ ವ್ಯಕ್ತಿ ಸತ್ಯ ಶುದ್ಧವಾಗಿ ಮಾಡುವ ಪ್ರತಿಯೊಂದು ಕೆಲಸವೂ ಸರ್ವ ಶ್ರೇಷ್ಠ ಅದರಲ್ಲೇ ಸಂತೋಷ ನೆಮ್ಮದಿ ಆತ್ಮ ತೃಪ್ತಿ ಹೊಂದಬಹುದು ತನ್ಮೂಲಕ ದೇವರನ್ನೂ ಕಾಣಬಹುದು ಮತ್ತು ತಾವೇ ದೇವರಾಗಬಹುದು ಎನ್ನುವುದಕ್ಕೆ ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಸಿದ್ದಗಂಗೆಯ ಸಿದ್ದ ಪುರುಷ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಸುತ್ತೂರು ಮಠದ ರಾಜೇಂದ್ರ ಮಹಾ ಸ್ವಾಮಿಗಳವರನ್ನು ನಾವು ಮತ್ತು ಈ ಜಗತ್ತು ಕಣ್ಣಾರೆ ಕಂಡು ದಿನ ನಿತ್ಯ ಅವರನ್ನು ಸ್ಮರಿಸಿ ಪೂಜಿಸುತ್ತಿದೆ ಎಂದರು.

ವೈದಿಕ ಸಂಸ್ಕೃತಿಯ ಮಾನವ ಕಲ್ಪಿತ ದೇವರುಗಳನ್ನು ನೋಡಿದ್ದ ನಮಗೆ ಮನುಷ್ಯ ಹೇಗೆ ದೇವನಾಗಬಹುದು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಮನುಷ್ಯನ ಬಣ್ಣ, ಅಧಿಕಾರ ಅಂತಸ್ತಿನ ಅರ್ಹತೆ ಮೇಲೆ ವರ್ಗ, ವರ್ಣ, ಜಾತಿ ಲಿಂಗ, ತಾರತಮ್ಯವನ್ನು ಹೋಗಲಾಡಿಸಲು ಬಸವಣ್ಣ ತಾನು ಸ್ಥಾಪಿಸಿದ ಅನುಭವ ಮಂಟಪಕ್ಕೆ ಕೆಳ ಸ್ತರದ ಅಲ್ಲಮ ಪ್ರಭುವನ್ನು ಅಧ್ಯಕ್ಷನಾಗಿ ಆಯ್ಕೆ ಮಾಡುವುದರ ಮೂಲಕ ಎಲ್ಲರಿಗೂ ಭಾಗವಹಿಸುವ ಅವಕಾಶ ನೀಡುವ ಮೂಲಕ ಬಹು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣನಾದ ಅಲ್ಲಮ ಪ್ರಭು ರಚಿಸಿದ ನೂರಾರು ಬೆಡಗಿನ ವಚನಗಳು ಇಂದು ಸಂಶೋಧನೆಗೆ ಒಳ ಪಟ್ಟಿದ್ದು, ಅದನ್ನು ವಿವಿಧ ನೆಲೆಗಳಲ್ಲಿನಲ್ಲಿ ಅರ್ಥೈಸುವ ಕಾರ್ಯವನ್ನು ಅನೇಕ ಕನ್ನಡ ಮತ್ತು ವಿಶ್ವದ ಅನೇಕ ಬರಹಗಾರರು  ಪ್ರಭುವಿನ ಜೀವನ ವೃತ್ತಾಂತ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ.

ಅವುಗಳಲ್ಲಿ ಶೂನ್ಯ ಸಂಪಾದನೆ ಮತ್ತು ಇನ್ನಿತರ ಕವಿಗಳ ಬರಹಗಳಲ್ಲಿ ಅವನನ್ನು ಅವತಾರ ಪುರುಷ ಎಂದು ಬಿಂಬಿಸುವ ಪ್ರಯತ್ನಗಳನ್ನೂ ಕಾಣಬಹುದು. ಆದರೆ ವೈಚಾರಿಕ ನೆಲೆಗಟ್ಟಿನ ಬರಹಗಾರ ಸಂಶೋಧಕರು ಅರ್ಥೈಸುವ ರೀತಿಯೇ ಬೇರೆಯಾಗಿದ್ದು , ಅಲ್ಲಮನ ವ್ಯಕ್ತಿತ್ವ ನಾನಾ ಆಯಾಮಗಳನ್ನು ಪಡೆದು ಅಗೆದಷ್ಟು ವಿಚಾರಗಳ ನಿಗೂಢತೆ ತೆರೆದು ಕೊಳ್ಳುತ್ತಿದೆ ಹಾಗಾಗಿ ಅಲ್ಲಮನ ವಚನಗಳಿಗೆ ನಿರ್ಧಿಷ್ಟ ವ್ಯಾಖ್ಯಾನ ನೀಡುವುದು ಸ್ಪಷ್ಟ ನಿರ್ಧಾರಕ್ಕೆ ಬರುವುದು ಸುಲಭದ ಮಾತಲ್ಲ ನಮ್ಮ ನಿಲುವಿಕೆಗೆ ಮಾತ್ರ ನಾವುಗಳು ಅರ್ಥೈಸಿ ಕೊಳ್ಳ ಬಹುದೇ ವಿನಃ ನಿಖರತೆ ಸಾಧ್ಯವಾಗದು ಎಂದರು.

ಸ್ತ್ರೀ ಪ್ರತಿನಿಧಿಯಾಗಿ ಅಕ್ಕಾ ಮಹಾದೇವಿ, ಸತ್ಯಕ್ಕ ಕಾಳವ್ವ ಆಯ್ದಕ್ಕಿ ಲಕ್ಕವ್ವ ಮುಕ್ತಾಯಕ್ಕ ಕಿನ್ನರಿ ಬೊಮ್ಮಯ್ಯ ಹಡಪದ ಅಪ್ಪಣ್ಣ ಮೋಳಿಗೆ ಮಾರಯ್ಯಾ ಕುಂಬಾರ ಗುಂಡಯ್ಯ ಮೇದರ ಕ್ಯಾತಯ್ಯ ಮಾದರ ಚೆನ್ನಯ್ಯ ಅಂಬಿಗರ ಚೌಡಯ್ಯ ಇನ್ನೂ ನೂರಾರು ಶರಣರು ಜಾತಿ ಬೇಧವಿಲ್ಲದೆ ಬೆರೆತು ಆಡಿದ ಅನುಭಾವದ  ಚಿಂತನ ಮಂಥನಗಳಿಂದ ಹೊರ ಹೊಮ್ಮಿದ ಮಾತುಗಳೇ ವಚನಗಳಾದವು. ಕನ್ನಡ ಸಾಹಿತ್ಯ ವನ್ನು ಜಗತ್ತಿನ ಎತ್ತರಕ್ಕೆ ಕೊಂಡೊಯ್ದ ನಿಜಾರ್ಥದ ಅನರ್ಘ್ಯ ರತ್ನಗಳು ಎಂದರೆ ತಪ್ಪಾಗಲಾರದು ಎಂದರು.

ಅಲ್ಲಮ ಪ್ರಭುಗಳ ವಚನಗಳಿಂದ ಪ್ರಭಾವಿತ ಗೊಂಡು ಅನೇಕ ಕನ್ನಡ ಲೇಖಕರು ಪೂಜ್ಯ ಸಿದ್ದೇಶ್ವರ ಶ್ರೀಗಳು ಅವುಗಳನ್ನು ಅರ್ಥೈಸುವ ಪುಣ್ಯ ಕೆಲಸವನ್ನು ಮಾಡಿ ಈ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದರಲ್ಲೂ ಈ ನಿಟ್ಟಿನಲ್ಲಿ ಸುತ್ತೂರು ಮಠದ ಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಕೃಪಾ ದೃಷ್ಟಿಯಿಂದ ಜೆಎಸ್ಎಸ್ ಪ್ರಕಾಶನ ಸಂಸ್ಥೆ ಎಲ್ಲ ಶರಣರ ವಚನಗಳನ್ನು ಸಂಗ್ರಹಿಸಿ ಭಾಷಾಂತರ ಮಾಡಿ ಜಗತ್ತಿನ ಎಲ್ಲೆಡೆ ಪಸರಿಸುತ್ತಿದೆ ಅದು ನಮ್ಮೆಲ್ಲರ ಪುಣ್ಯವಾಗಿದೆ.

ನಾನು ರಾಜೇಂದ್ರ ಕಲಾ ಬಳಗದಡಿಯಲ್ಲಿ ಶರಣರ ಜೀವನ ಸಂದೇಶ ಸಾರುವ ಕುರಿತ ಐತಿಹಾಸಿಕ ನಾಟಕ ಪ್ರಭುಲಿಂಗ ಲೀಲೆ ನಾಟಕದಲ್ಲಿ ಅಲ್ಲಮ ಪ್ರಭು ಪಾತ್ರದಲ್ಲಿ ಅಭಿನಯಿಸಿದ್ದು ನನ್ನ ಜೀವನದಲ್ಲಿ ಎಂದು ಮರೆಯಲಾಗದ ಅವಿಸ್ಮರಣೀಯ ಗಳಿಗೆ ಎಂದರಲ್ಲದೆ,  ಹೊಸ ವರ್ಷದ ಸಂವತ್ಸರದ ಮೋಜು ಮಸ್ತಿ ಸಂಭ್ರಮದ ನಡುವೆ ಕಳೆದು ಹೋಗಬೇಕಾದ ಈ ದಿನ ಘನ ಶರಣರನ್ನು ಸ್ಮರಿಸುವ ಪುಣ್ಯ ಅವಕಾಶ ಕಲ್ಪಿಸಿದ ಬಳಗದ ಎಲ್ಲ ಪದಾಧಿಕಾರಿಗಳಿಗೆ ತುಂಬು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಶ್ರೀ ಬದನವಾಳು ಪುಟ್ಟ ಬುದ್ಧಿ ಕಾರ್ಯದರ್ಶಿ ಮತ್ತು ಉದ್ಯಮಿ ಸುರೇಶ್ ಕುರುಬರ ಹುಂಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಮಹದೇವಸ್ವಾಮಿ ಕುರುಬರಹುಂಡಿ ಕಂಬ್ರಾಲಿ ನಾಗರಾಜು ಮುಳ್ಳೂರು ಪ್ರಕಾಶ್ ನಾಗೇಂದ್ರ ವಕೀಲ ಹಸಗೂಲಿ ಪ್ರಭುಸ್ವಾಮಿ ಶಾಂತಪ್ಪ ಡಾ ಕೆ ಸಿ ಬಸವಣ್ಣ ಅಮರ್ ಕಬ್ಬು ಅಧಿಕಾರಿ ರಾಜಣ್ಣ ಬಸವ ಯೋಗೇಶ್ ಅಶೋಕ್ ಮುದ್ದ ಹಳ್ಳಿ ಕಲ್ಪುರ ಮಹೇಶ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಸಾವಿರಾರು ಜನರಿಗೆ ಮಜ್ಜಿಗೆ ಪಾನಕ ವಿತರಿಸಲಾಯಿತು.

admin
the authoradmin

Leave a Reply

Translate to any language you want