LatestMysore

ಹಿರೀಕ್ಯಾತನಹಳ್ಳಿ ಗ್ರಾಮ ದೇವತೆ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಸಂಪನ್ನ… ಸಂಭ್ರಮಿಸಿದ ಭಕ್ತರು

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಲ್ಲಿಕಾರ್ಜುನಸ್ವಾಮಿ ಉತ್ಸವ ಹಲವು ಧಾರ್ಮಿಕ ಕಾರ್ಯಗಳೊಂದಿಗೆ ಸಂಪನ್ನಗೊಂಡಿತು.

ಗ್ರಾಮ ದೇವತೆ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಯನ್ನು ಹಬ್ಬದ ಹಿಂದಿನ ದಿನ ಇಡೀ ಗ್ರಾಮದ ಸಾವಿರಾರು ಭಕ್ತರು ಬರಿಗಾಲಿನಲ್ಲಿ ಸುಮಾರು 18 ಕಿ.ಮೀ. ದೂರ ಹೊತ್ತು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಕಾವೇರಿ ನದಿಗೆ ತೆರಳಿರು.

ಆ ನಂತರ ಅಲ್ಲಿ ಯುಗಾದಿ ಹಬ್ಬದ ದಿನ ಕಾವೇರಿ ನೀರಿನಿಂದ ಸ್ವಚ್ಛಗೊಳಿಸಿ ಅದೇ ಮಾರ್ಗವಾಗಿ ದೇವರ ಮೂರ್ತಿಯನ್ನು ಹೊತ್ತು ಹಿಂತಿರುಗಿದರು. ಇದೇ ವೇಳೆ ಮಾರ್ಗ ಮಧ್ಯ ಸಿಗುವ ಗ್ರಾಮಗಳ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು.

ಗ್ರಾಮಕ್ಕೆ ಉತ್ಸವಮೂರ್ತಿ ಬರುತ್ತಿದ್ದಂತೆ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಹೊಸ ಉಡುಗೆಯನ್ನು ತೊಟ್ಟು ದೇವಸ್ಥಾನದ ಆವರಣದಲ್ಲಿ ಸೇರಿ ದೇವರ ದರ್ಶನ ಪಡೆದರು.

ಇಡೀ ಗುರುವಾರ ರಾತ್ರಿ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು.

ಇನ್ನು ಪ್ರತಿ ವರ್ಷದಂತೆ ಈ ವರ್ಷದ ಯುಗಾದಿಯ ಮಾರನೆಯ ದಿನ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ  ಕೊಂಡೋತ್ಸವ ನಡೆಯಿತು. ಹರಕೆ ಹೊತ್ತ ಶಾಲಾ ಕಾಲೇಜು ವಿದ್ಯಾರ್ಥಿಗಳು, ಭಕ್ತರು, ಕೂಡ ಈ ಬಾರಿ ಕೊಂಡ ಹಾದು ತಮ್ಮ ಹರಕೆಯನ್ನು ತೀರಿಸಿದರು.

ನಂತರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಹೊಸ ವರ್ಷದ ಪಂಚಾಂಗವನ್ನು ಮೈಲಾಂಬೂರು ಗ್ರಾಮದ ಚಂದ್ರ ಆರಾಧ್ಯ ಪಠಣ ಮಾಡಿದರು.

ಇನ್ನು  ಶುಕ್ರವಾರ  ಈ ವರ್ಷದ ಹೊಸ ಪಂಚಾಂಗದ ಪ್ರಕಾರ ಕುಂಭ ರಾಶಿಯವರಿಗೆ ತುಂಬಾ ಒಳ್ಳೆಯ ರಾಶಿ ಫಲವಿದ್ದು, ಗೋಧಿ ಬಣ್ಣದ ಮಿಶ್ರಿತ ಬಿಳಿ ಎತ್ತುಗಳಲ್ಲಿ  ಸ್ವಾಮಿಗೌಡ ಎಂಬುವವರ ರಾಶಿಗೆ ತುಂಬಾ ಚೆನ್ನಾಗಿತ್ತು.

ಹೀಗಾಗಿ  ಅವರು ಈ ವರ್ಷದಲ್ಲಿ  ಪ್ರಾರಂಭದ ಉಳುಮೆ ಮಾಡಿದರೆ ಉತ್ತಮ ಮಳೆ ಬೆಳೆಯಾಗುತ್ತದೆ ಎಂದು  ಹೇಳಿದ್ದರಿಂದ ಅವರಿಂದ ಊರು ಸುತ್ತ ಹೊನ್ನಾರನಿಂದ ಉಳುಮೆ ಮಾಡಿಸಿದರು.

admin
the authoradmin

Leave a Reply

Translate to any language you want