ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಸಾಧಿಸುವ ಛಲವಿದ್ದರೆ ತಮ್ಮ ವೃತ್ತಿ ಜತೆಗೆ ಇತರೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಬಹುದು… ಅಷ್ಟೇ ಅಲ್ಲದೆ ಸಮಾಜಕ್ಕೂ ಮಾದರಿಯಾಗಬಹುದು ಎಂಬುದಕ್ಕೆ ಡಾ.ಪೂರ್ಣಿಮಾ ಎ.ಪಿ ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿದ್ದಾರೆ…
ಪ್ರಾಧ್ಯಾಪಕ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕೃತಿಗಳನ್ನು ರಚಿಸಿದ್ದಲ್ಲದೆ, ವಿವಿಧ ರೀತಿಯ ಲೇಖನಗಳನ್ನು ಬರೆದು ಇತರರ ಜ್ಞಾನಾರ್ಜನೆಗೆ ಕಾರಣರಾಗಿರುವ ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಡಾ. ಪೂರ್ಣಿಮಾ ಎ.ಪಿ ಅವರ ಸಾಧನೆಯನ್ನು ಗುರುತಿಸಿರುವ ದುಬೈನ (ಯುಎಇ) ‘ಸಾಹಿತ್ಯ ಅರ್ಪಣ್’ ಸಂಸ್ಥೆಯು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯಾದ “ಹಿಂದಿ ಗೌರವ್ ಸಮ್ಮಾನ್ 2026” ಅನ್ನು ನೀಡಿ ಗೌರವಿಸಿದೆ.
ಇದೊಂದು ಜಾಗತಿಕ ಗೌರವವಾಗಿದ್ದು, ಇದು ಡಾ. ಪೂರ್ಣಿಮಾ ಸಾಹಿತ್ಯ ಕೃಷಿ ಸಂದ ಗೌರವ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಪಡೆದಿದ್ದಾರೆ ಎಂದರೆ ಅದು ಸುಮ್ಮನೆ ಬಂದಿದ್ದಲ್ಲ ಈ ಗೌರವವನ್ನು ಸಂಸ್ಥೆಯು ಅವರು ಹಿಂದಿ ಭಾಷೆ ಮತ್ತು ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ ನೀಡಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.. ಅವರ ಸಾಧನೆ ಇತರರಿಗೂ ಮಾದರಿಯಾಗಿದೆ ಎನ್ನುವುದು ಅಷ್ಟೇ ಸತ್ಯ..

ಇವತ್ತು ಬಹಳಷ್ಟು ಬಂದಿ ವೃತ್ತಿಗಷ್ಟೇ ಸೀಮಿತರಾಗಿದ್ದಾರೆ.. ಆದರೆ ಡಾ.ಪೂರ್ಣಿಮಾ ಅವರ ಸಾಧನೆಯನ್ನು ಗಮನಿಸಿದರೆ ಅವರ ಪರಿಶ್ರಮ ಮತ್ತು ಸಾಹಿತ್ಯದ ಮೇಲಿನ ಅವರ ಆಸಕ್ತಿ ಹಾಗೂ ಶ್ರದ್ದೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ. ಅವರ ವೃತ್ತಿ ಮತ್ತು ಅದರಾಚೆಗಿನ ಹಿಂದಿ ಸಾಹಿತ್ಯದಲ್ಲಿನ ಅವರ ಸಾಧನೆಯನ್ನು ನೋಡುತ್ತಾ ಹೋದರೆ ನಿಜಕ್ಕೂ ಖುಷಿಯಾಗುತ್ತದೆ…
ಡಾ. ಪೂರ್ಣಿಮಾ ಅವರು ಪ್ರಸ್ತುತ ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (ಸ್ವಾಯತ್ತ) ಹಿಂದಿ ವಿಭಾಗದ ಮುಖ್ಯಸ್ಥರಾಗಿ (HOD) ಮತ್ತು ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 11 ವರ್ಷಗಳಿಗೂ ಹೆಚ್ಚು ಶೈಕ್ಷಣಿಕ ಅನುಭವ ಹೊಂದಿರುವ ಅವರು 2017 ರಿಂದ ಈ ಸಂಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ.
ಇವರು ಇದುವರೆಗೆ 14 ಪುಸ್ತಕಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳ ಬಗ್ಗೆ ನೋಡಿದ್ದೇ ಆದರೆ ದೇಶ್ ಔರ್ ವಿದೇಶೋಂ ಮೇಂ ಹಿಂದಿ (2022), ನರೇಂದ್ರ ಸಿಂಗ್ ನಿಹಾರ್ ಕೆ ಕರೋನಾ ಕಾಲೀನ್ ಸಾಹಿತ್ಯ (2021), ಸರಳ ಹಿಂದಿ ಭಾಷಾ ಔರ್ ವ್ಯಾಕರಣ್ (2018). ಸ್ವಾಶ್ 2015: ಸ್ವತಂತ್ರೋತ್ತರ್ ಹಿಂದಿ ನಾಟಕೋಂ ಮೇಂ ಭೂಮಂಡಲೀಕರಣ್ ಔರ್ ಪರಿವಾರ್, ಡಿಜಿಟಲ್ ಶಿಕ್ಷಕಿ: ಯೂಟ್ಯೂಬ್‌ನಲ್ಲಿ ಹಿಂದಿ ವ್ಯಾಕರಣ ಮತ್ತು ಸಾಹಿತ್ಯದ ಕುರಿತು ಹಲವಾರು ಶೈಕ್ಷಣಿಕ ಉಪನ್ಯಾಸಗಳನ್ನು ನೀಡಿದ್ದಾರೆ.
ಇನ್ನು ಇವರಿಗೆ ಸಂದಿರುವ ಪ್ರಶಸ್ತಿಗಳ ಸರಮಾಲೆಯನ್ನು ಗಮನಿಸಿದರೆ, “ಹಿಂದಿ ಗೌರವ್ ಸಮ್ಮಾನ್ 2026” ರೊಂದಿಗೆ ಡಾ. ಪೂರ್ಣಿಮಾ ಅವರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕಾಗಿ ಒಟ್ಟು 14 ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರಾಚೆಗೆ ಅಂತರಾಷ್ಟ್ರೀಯ ಗೌರವಗಳು ಸಂದಿದ್ದು, ಈ ಹಿಂದೆ ಇವರು ಹಿಂದಿ ಗೌರವ್ ಸಮ್ಮಾನ್-2023 (ದುಬೈ) ಮತ್ತು ಇಂಟರ್ನ್ಯಾಷನಲ್ ಟೀಚರ್ಸ್ ಪ್ರೈಡ್ ಅವಾರ್ಡ್ 2021 ಅನ್ನು ಪಡೆದಿರುವುದು ವಿಶೇಷವಾಗಿದೆ.
ರಾಜ್ಯ ಮತ್ತು ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದು, ಇವರಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ 2025, ವಿಶ್ವ ಜ್ಞಾನಶ್ರೀ-2025, ಮತ್ತು ಗ್ಲೋಬಲ್ ಟೀಚರ್ಸ್ ಅವಾರ್ಡ್ 2018 ಲಭಿಸಿದೆ. ಇಷ್ಟೇ ಅಲ್ಲದೆ, ಸಾಮಾಜಿಕ ಪ್ರಭಾವದ ಪ್ರಶಸ್ತಿಗಳು ಲಭ್ಯವಾಗಿವೆ. ಪಿಂಕಿಶ್ ಫೌಂಡೇಶನ್ ಮೂಲಕ ಮಾಡಿದ ಸೇವೆಗಾಗಿ ಪಿಂಕ್ ರತ್ನ ಪ್ರಶಸ್ತಿ-2023 ಮತ್ತು ಸ್ವರಾ-ನಾರಿ ಹೃದಯ ಕಾ ಸ್ವರ್ ಗೌರವಗಳನ್ನು ಪಡೆದುಕೊಂಡಿದ್ದಾರೆ.

ಇನ್ನು ಭೋಧನಾ ವೃತ್ತಿಯೊಂದಿಗೆ ಸಾಹಿತ್ಯ ಮಾತ್ರವಲ್ಲದೆ ಸಾಮಾಜಿಕ ನಾಯಕತ್ವ ಮತ್ತು ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಕ್ರೀಡಾ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಪಿಂಕಿಶ್ ಫೌಂಡೇಶನ್, ದೆಹಲಿ ಇದರ ಕರ್ನಾಟಕ ರಾಜ್ಯ ಪ್ರತಿನಿಧಿಯಾಗಿ ಮಹಿಳಾ ಆರೋಗ್ಯ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಹಿಂದಿ ಕಿ ಗಂಜ್, ನವದೆಹಲಿಯ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ಯಾರಾ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಮಟ್ಟದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜ್ಯ ಮಟ್ಟದ ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಸಾಧನೆಗಳನ್ನು ಗಮನಿಸಿದರೆ ಇತ್ತೀಚೆಗೆ ದುಬೈನಲ್ಲಿ ಸಂದ ಗೌರವದ ಜೊತೆಗೆ, ಇತ್ತೀಚೆಗೆ ಇವರಿಗೆ ರಾಷ್ಟ್ರ ಮಟ್ಟದ “ಟಿಜಿಟಿ ಮಹಾದೇವಿ ವರ್ಮಾ ಸಮ್ಮಾನ್-2026” ಪ್ರಶಸ್ತಿ ಲಭಿಸಿದೆ. ಸಂಪನ್ಮೂಲ ವ್ಯಕ್ತಿಯಾಗಿ ಇವರು 24 ಕ್ಕೂ ಹೆಚ್ಚು ಆಹ್ವಾನಿತ ಭಾಷಣಗಳನ್ನು ನೀಡಿದ್ದಾರೆ. ಇದರಲ್ಲಿ ಮಹಿಳಾ ಆರೋಗ್ಯ, ಹದಿಹರೆಯದವರ ಕ್ಷೇಮ ಮತ್ತು ಹಿಂದಿ ಭಾಷೆಯಲ್ಲಿನ ಉದ್ಯೋಗಾವಕಾಶಗಳ ಕುರಿತಾದ ಉಪನ್ಯಾಸಗಳು ಪ್ರಮುಖವಾಗಿವೆ. ಇವರು ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎನ್ನುವುದೇ ಜನಮನ ಕನ್ನಡದ ಆಶಯವಾಗಿದೆ…








