LatestMysore

ಮಳೆಹಾನಿ ಪರಿಹಾರವಾಗಿ ಶಾಸಕರ ನಿಧಿಯಿಂದ  25ಲಕ್ಷ ಬಿಡುಗಡೆ ಮಾಡಿದ ಶಾಸಕ ಜಿ.ಡಿ.ಹರೀಶ್ ಗೌಡ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮಳೆ ಬಿರುಗಾಳಿಗೆ ಧ್ವಂಸಗೊಂಡಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುನ‌ರ್ ನಿರ್ಮಾಣಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಶಾಸಕರ ನಿಧಿಯಿಂದ 25 ಲಕ್ಷ ಬಿಡುಗಡೆ ಮಾಡಿ, ಭೂಮಿ ಪೂಜೆ ನೆರವೇರಿಸಿದರು.

ತಾಲ್ಲೂಕಿನ ಹನಗೋಡು ಹೋಬಳಿ ದಾಸನಪುರ ಗ್ರಾಮದಲ್ಲಿ  ಇತ್ತೀಚೆಗೆ ಸುರಿದ ಬಿರುಗಾಳಿ, ಮಳೆಗೆ ಧ್ವಂಸಗೊಂಡಿದ್ದ ಸರ್ಕಾರಿ ಶಾಲೆ ಸೇರಿದಂತೆ 22 ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ, ಸಂಪೂರ್ಣವಾಗಿ ನಾಶವಾಗಿದ್ದ ಗ್ರಾಮದ ಶಾಲೆ ವೀಕ್ಷಿಸಿದ ಬಳಿಕ ಸ್ಥಳದಲ್ಲೇ ಶಾಲೆಯ ಎರಡು ಕೊಠಡಿ ನೂತನವಾಗಿ ನಿರ್ಮಿಸಲು ರೂ 25 ಲಕ್ಷ ಅನುದಾನ ನೀಡುವ ಭರವಸೆ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಶಾಲೆ ನಡೆಯುತ್ತಿದ್ದ ಅವಧಿಯಲ್ಲಿ ನಡೆದ ಘಟನೆಯಿಂದ ಮಕ್ಕಳ ಜೀವ ರಕ್ಷಿಸುವಲ್ಲಿ ಸಮಯಪ್ರಜ್ಞೆ ಮೆರೆದ ಶಾಲೆ ಶಿಕ್ಷಕರಾದ ಸುಮಾ ಮತ್ತು ಉಮಾ ಅವರನ್ನು ಪ್ರಶಂಸಿಸಿದರು.  ಮಳೆಯಿಂದಾಗಿ ಜಖಂಗೊಂಡ 22 ಮನೆಗಳಿಗೆ ಭೇಟಿ ನೀಡಿ ನೊಂದವರಿಗೆ ಧೈರ್ಯ ತುಂಬಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು. 22 ಮನೆ ಕಳೆದುಕೊಂಡಿರುವ ನೊಂದ ಕುಟುಂಬಗಳಿಗೆ ಮನೆ ಮಂಜೂರು ಮಾಡಲು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು. ಮನೆ ಛಾವಣಿ ಹಾನಿಗೊಂಡವರಿಗೆ ಹೆಂಚು ಹಾಗು ಇತರ ಸಾಮಗ್ರಿಗಳನ್ನು ಕೊಡಿಸುವುದಾಗಿ ತಿಳಿಸಿದರು.

ಅಕಾಲಿಕ ಮಳೆಯಿಂದ ಕೃಷಿ ಕ್ಷೇತ್ರ ತೀವ್ರ ಹಾನಿಗೊಂಡಿದ್ದು, ಆಲಿಕಲ್ಲು ಸಮೇತ ಮಳೆಯಾದ ಕಾರಣ, ತಂಬಾಕು ಸಸಿ, ತೆಂಗು, ಬಾಳೆ ಅಡಿಕೆ ಫಸಲಿಗೆ ಸಮಸ್ಯೆ ಆಗಿದ್ದು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ದಪಡಿಸ ನೀಡಲು ಸೂಚಿಸಿದರು.

ಇದೇ ವೇಳೆ ಹೋಬಳಿ ಕೇಂದ್ರದ ಸೆಸ್ಕ್ಇಲಾಖೆ ಎಂಜಿನಿಯರ್ ಸುನಿಲ್  ವಿರುದ್ಧ ಸ್ಥಳಿಯರು ದೂರಿನ ಸುರಿಮಳೆಗೈದರು. ಕುಪಿತಗೊಂಡ ಶಾಸಕರು ಎಂಜಿನಿಯರ್ ಮತ್ತು ಲೈನ್ ಮೆನ್ ಮೇಲೆ ಹರಿಹಾಯ್ದು ಲೈನ್‌ ಮನ್‌ ನ್ನು ವರ್ಗಾಯಿಸುವಂತೆ ಸೆಸ್ಕ್ ಎಇಇ ಜಗದೀಶ್ ಅವರಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವ್ಯಾ ವಿರುದ್ಧ ಎದುರಾದ ಕಾರ್ಯವೈಖರಿ, ಕುಡಿಯುವ ನೀರಿನ ಸಮಸ್ಯೆ ಕುರಿತ ದೂರಿಗೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಗಮನಕ್ಕೆ ತಂದರು.

ಶಾಸಕರ ಭೇಟಿ ಸಮಯದಲ್ಲಿ ತಹಶೀಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಮುಖಂಡರಾದ ಸುಭಾಷ್, ಕಿರಂಗೂರು ಬಸವರಾಜ್, ದಾ.ರಾ.ಮಹೇಶ್, ಸುರೇಂದ್ರ, ಸತೀಶ್ ಪಾಪಣ್ಣ, ಗಣೇಶ್ ಕುಮಾರಸ್ವಾಮಿ, ಹೊಸೂರು ಅಣ್ಣಯ್ಯ, ರಾಜೇಗೌಡ, ಬೀರಪ್ಪ ಸೇರಿದಂತೆ ಇತರರಿದ್ದರು.

admin
the authoradmin

Leave a Reply

Translate to any language you want