CrimeLatest

ಎಚ್ಚರ ತಪ್ಪಿದರೆ ಡಿಜಿಟಲ್ ಅರೆಸ್ಟ್ ಖಚಿತ… ನೀವು ಜಾಗೃತರಾಗಿ… ವಂಚನೆಯಿಂದ ಪಾರಾಗಿ!

ಡಿಜಿಟಲ್ ಅರೆಸ್ಟ್ ಎನ್ನುವುದೇ ಇಲ್ಲವಾದರೂ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಡೆಯುತ್ತಿರುವ ಪ್ರಮಾದಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಹಲವರು ವಂಚನೆಗೊಳಗಾಗುತ್ತಲೇ ಇದ್ದಾರೆ…  ಉದ್ಯಮಿಗಳು, ನಿವೃತ್ತ ಅಧಿಕಾರಿಗಳು ಸೇರಿದಂತೆ ವಯಸ್ಸಾದವರನ್ನೇ ಡಿಜಿಟಲ್ ಅರೆಸ್ಟ್ ಹೆಸರಲ್ಲಿ  ಬೆದರಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ.. ಈಗಾಗಲೇ ಸರ್ಕಾರವೇ ಡಿಜಿಟಲ್ ಅರೆಸ್ಟ್ ಎಂಬುದು ಸುಳ್ಳು ಅದರ ಬಗ್ಗೆ ಭಯಪಡಬೇಡಿ.. ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಜಾಹೀರಾತುಗಳ ಮೂಲಕ ಅರಿವು ಮೂಡಿಸುತ್ತಿದ್ದರೂ ಮೋಸ ಹೋಗುತ್ತಲೇ ಇರುವುದು ಮಾತ್ರ ಬೇಸರದ ಸಂಗತಿಯಾಗಿದೆ.

ಡಿಜಿಟಲ್ ಯುಗದಲ್ಲಿ ಮೋಸ, ವಂಚನೆ ಮಾಡುವುದು ಬಲು ಸುಲಭವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಪ್ರತಿದಿನವೂ ಪ್ರತಿಕ್ಷಣವೂ ಎಚ್ಚರದಲ್ಲಿರುವುದು ಒಳ್ಳೆಯದಾಗಿದೆ. ಈಗಾಗಲೇ ಸೈಬರ್ ವಂಚಕರು ಆಕ್ಟೀವ್ ಆಗಿದ್ದು ಯಾರಾನ್ನಾದರೂ ಯಾಮಾರಿಸಿ ದುಡ್ಡು ಹೊಡೆಯುವುದು ಅವರ ನಿತ್ಯದ ಕಾಯಕವಾಗಿದೆ. ಇದಕ್ಕಾಗಿ ಹಲವು ಬಗೆಯ ವೇಷಗಳನ್ನು ಧರಿಸುವುದರಲ್ಲಿ ಅವರು ನಿಸ್ಸೀಮರಾಗಿದ್ದಾರೆ. ಆದ್ದರಿಂದ ಮೈಯೆಲ್ಲ ಕಣ್ಣಾಗಿದ್ದರೂ ಸಾಲದಾಗಿದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದೇ ‘ಪ್ರೇಮ ನಾಟಕ’ ಬಯಲಾಗಿದ್ದೇಗೆ?

ಹಾಗೆನೋಡಿದರೆ ಸೈಬರ್ ವಂಚಕರು ಹೊಸ, ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಿರುತ್ತಾರೆ.  ಹೀಗಾಗಿ ಅವರು ಹೊಸ ಖೆಡ್ಡಾಗಳನ್ನು ತೋಡುತ್ತಾ ಅದರಲ್ಲಿ ಜನರನ್ನು ಕೆಡವುತ್ತಾ ಮುಂದೆ ಸಾಗುತ್ತಾ ಇರುತ್ತಾರೆ. ಇದರಲ್ಲಿ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿರುವುದು ಡಿಜಿಟಲ್ ಅರೆಸ್ಟ್. ಈ ಡಿಜಿಟಲ್ ಅರೆಸ್ಟ್ ಎಂದರೇನು? ಇದರಲ್ಲಿ ಸೈಬರ್ ಕಳ್ಳರು ಹೇಗೆ ಸಾರ್ವಜನಿಕರನ್ನು ವಂಚಿಸುತ್ತಾರೆ?  ಎಂಬಿತ್ಯಾದಿ ವಿಚಾರಗಳನ್ನು ನಾವು ಅರಿತು ಕೊಂಡರೆ ಆಗಲಿರುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದರೆ ಬಹಳಷ್ಟು ಸಾರಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಡಿಜಿಟಲ್ ಅರೆಸ್ಟ್ ಗೆ ಒಳಗಾಗುತ್ತಲೇ ಇರುತ್ತಾರೆ.

ಡಿಜಿಟಲ್ ಅರೆಸ್ಟ್ ಆದವರ ಪೈಕಿ ಹೆಚ್ಚಿನವರು ವಿದ್ಯಾವಂತರು, ಸಾಫ್ಟ್ ವೇರ್, ಸರ್ಕಾರಿ ಉದ್ಯೋಗಿಗಳು, ನಿವೃತ್ತ ಅಧಿಕಾರಿಗಳು ಹೀಗೆ ತರಾವರಿಯ ಜನರಿದ್ದಾರೆ. ಆದ್ದರಿಂದ  ಒಂದು ಫೋನ್, ವಿಡಿಯೊ ಕರೆ ಬಂದಾಗ ಅದನ್ನು ನಿಭಾಯಿಸುವ ಜಾಣ್ಮೆ ನಮ್ಮಲ್ಲಿ ಇಲ್ಲದೆ ಹೋದರೆ  ಅದೇ ಕರೆ, ವೀಡಿಯೋ ಕಾಲ್ ಮೂಲಕ ನಮ್ಮನ್ನು ನಮ್ಮ ಮನೆಗಳಲ್ಲೇ ಬಂಧನದಲ್ಲಿರಿಸಿ, ಅವರು ಲಕ್ಷ, ಕೋಟಿಗಳ ಲೆಕ್ಕದಲ್ಲಿ ಸುಲಿಗೆ ಮಾಡಿ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಪ್ರಾಮಾಣಿಕತೆ  ಇಲ್ಲದೆ ಅಡ್ಡಮಾರ್ಗಗಳಿಂದ ಬದುಕು ಕಟ್ಟಿಕೊಂಡವರು ಬಹುಬೇಗಲೇ ಹೆದರುವುದರಿಂದ ಅಂತಹವರನ್ನು ಯಾಮಾರಿಸುವುದು ಬಹು ಸುಲಭವಾಗಿರುತ್ತದೆ.

ಇದನ್ನೂ ಓದಿ: ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು..

ಇನ್ನು ಡಿಜಿಟಲ್ ಅರೆಸ್ಟ್ ಎನ್ನುವುದು ಒಂದು ಬಗೆಯ ಸೈಬರ್ ವಂಚನೆಯಾಗಿದ್ದು, ಪೊಲೀಸ್, ಜಾರಿ ನಿ‌ರ್ದೇಶನಾಲಯ (ಇ.ಡಿ), ಸಿಬಿಐ, ತೆರಿಗೆ ಇಲಾಖೆ ಮುಂತಾದ ತನಿಖಾ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡಿ, ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಹೆದರಿಸಿ ಬೆದರಿಸಿ, ನಂತರ ಹಣಕ್ಕೆ ಬೇಡಿಕೆ ಇಡುವುದು, ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಅವರಿಂದ ಹಣ ಸುಲಿಗೆ ಮಾಡುವುದು ಡಿಜಿಟಲ್ ಅರೆಸ್ಟ್ ನ ಮುಖವಾಡವಾಗಿದೆ.

ಹಾಗಾದರೆ ಡಿಜಿಟಲ್ ಅರೆಸ್ಟ್ ನ್ನು ವಂಚಕರು ಹೇಗೆ ಮಾಡುತ್ತಾರೆ ಎಂಬುದನ್ನು ನೋಡುತ್ತಾ ಹೋದರೆ, ಮೊದಲು ಸಂತ್ರಸ್ತರನ್ನು ಫೋನ್ ಮೂಲಕ ಸಂರ್ಪಕಿಸುತ್ತಾರೆ. ತಾವು ಸಿಬಿಐ, ಆರ್‌ಬಿಐ, ತೆರಿಗೆ, ನಾರ್ಕೋಟಿಕ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಾರೆ. ‘ನಿಮಗೆ ನಿಷೇಧಿತ ಅಥವಾ ಅಕ್ರಮ ವಸ್ತು, ಸರಕು ಕೊರಿಯರ್‌ ನಲ್ಲಿ ಬಂದಿದೆ  ಅಥವಾ ನೀವು ಅಂಥ ವಸ್ತುಗಳನ್ನು ಕೊರಿಯರ್ ಮೂಲಕ ಕಳಿಸಿದ್ದೀರಿ ಎಂದೋ ವಾದಿಸುತ್ತಾರೆ. ಇಲ್ಲವೇ ಹಣ ಅಕ್ರಮ ವರ್ಗಾವಣೆ, ಸೈಬರ್ ಅಪರಾಧದ ಆರೋಪ ಹೊರಿಸುತ್ತಾರೆ. ಆ ನಂತರ ವಿಡಿಯೊ ತಂತ್ರಜ್ಞಾನದ ಮೂಲಕ ಸಂತ್ರಸ್ತರೊಂದಿಗೆ ಸಂಪರ್ಕ ಸಾಧಿಸುತ್ತಾರೆ.

ಇದನ್ನೂ ಓದಿ: ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್…

‘ಅಕ್ರಮದ ಸಂಬಂಧ ವಿಚಾರಣೆಗಾಗಿ ನಿಮ್ಮನ್ನು ಬಂಧಿಸಲಾಗಿದೆ (ಕಂಪ್ಯೂಟರ್‌, ಮೊಬೈಲ್‌ ಪರದೆಯಲ್ಲಿ ಕಾಣುವಂತೆ ಒಂದೇ ಜಾಗದಲ್ಲಿ, ಮನೆ, ಕೊಠಡಿಗಳಲ್ಲಿ ಕೂರುವುದು) ಎಂದು ಬೆದರಿಕೆ ಒಡ್ಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಂತ್ರಸ್ತರ ಮನೆಗಳಲ್ಲಿಯೇ ಅವರನ್ನು ಬಂಧನಕ್ಕೊಳಪಡಿಸಲಾಗಿರುತ್ತದೆ. ಸಂತ್ರಸ್ತರನ್ನು ನಂಬಿಸುವ ಸಲುವಾಗಿ ತಾವು ಯಾವ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಹೇಳಿರುತ್ತಾರೋ, ಅಂಥ ಕಚೇರಿಯ ವಾತಾವರಣವನ್ನು ಸೃಷ್ಟಿಸಿರುತ್ತಾರೆ. ಅಧಿಕಾರಿಗಳು ಎನ್ನುವುದನ್ನು ಸಾಬೀತು‍ಪಡಿಸುವ ಸಲುವಾಗಿ ನಕಲಿ ಗುರುತಿನ ಚೀಟಿಗಳನ್ನು ಕೂಡ ತೋರಿಸುತ್ತಾರೆ. ಕೆಲವೊಮ್ಮೆ ನಕಲಿ ಅರೆಸ್ಟ್ ವಾರಂಟ್‌ ಗಳನ್ನೂ ಪ್ರಸ್ತುತಪಡಿಸುತ್ತಾರೆ. ಕೂತಲ್ಲಿಂದಲೇ ಅವುಗಳನ್ನು ವಿಡಿಯೊ ಮೂಲಕ ನೋಡುವವರು ಭಯಭೀತರಾಗಿ ಅನಿವಾರ್ಯವಾಗಿ ಒಪ್ಪಿಕೊಂಡು ಬಿಡುತ್ತಾರೆ.

ನಿಮ್ಮಿಂದ ಕಾನೂನು ಉಲ್ಲಂಘನೆಯಾಗಿದೆ. ನಿಮ್ಮ ಫೋನ್ ಅನ್ನು ಅಕ್ರಮಕ್ಕೆ ಬಳಸಲಾಗಿದೆ ಎಂದೆಲ್ಲ ಹೇಳಿ, ವಿಚಾರಣೆ, ಜೈಲು, ಶಿಕ್ಷೆ ಬಗ್ಗೆ ಪ್ರಸ್ತಾಪಿಸಿ, ಸಂತ್ರಸ್ತರಲ್ಲಿ ಭಯ ಹುಟ್ಟಿಸಲಾಗುತ್ತದೆ. ನಂತರ ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂತಿಷ್ಟು ಹಣ ಕೊಟ್ಟರೆ ಈ ಪ್ರಕರಣದಿಂದ ಮುಕ್ತಗೊಳಿಸುವುದಾಗಿ ಹೇಳುತ್ತಾರೆ. ಈ ಸಮಯದಲ್ಲಿ ಬೇರೆ ಯಾರನ್ನೂ ಸಂಪರ್ಕಿಸದಂತೆ ಮಾಡುತ್ತಾರೆ. ಆನ್‌ಲೈನ್ ಬ್ಯಾಂಕಿಂಗ್ ಮತ್ತಿತರ ಮಾರ್ಗಗಳ ಮೂಲಕ ಹಣವನ್ನು ಮೂರನೇ ವ್ಯಕ್ತಿಯ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ

ಇದನ್ನೂ ಓದಿ: ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ…

ಸಾಮಾನ್ಯವಾಗಿ ಸಂತ್ರಸ್ತರಿಗೆ ಮನೆಗಳಲ್ಲೇ ದಿಗ್ಬಂಧನ ವಿಧಿಸಲಾಗುತ್ತದೆಯಾದರೂ ಕೆಲವೊಮ್ಮೆ ಅವರನ್ನು ಹೊರಗೆ ಬರುವಂತೆ ಮಾಡಿ, ಬೇರೊಂದು ಸ್ಥಳದಲ್ಲಿ ಕೂಡಿ ಹಾಕುವುದುಂಟು. ಸಂತ್ರಸ್ತರಿಂದ ಹಣ ವರ್ಗಾವಣೆ ಆಗುವವರೆಗೆ ವಂಚಕರು ಸಂತ್ರಸ್ತರನ್ನು ಡಿಜಿಟಲ್‌ ಬಂಧನದಲ್ಲಿ ಇರಿಸುತ್ತಾರೆ.  ಹಣ ಕೊಟ್ಟು ಹೊರ ಬಂದ ಬಳಿಕ ಇದು ಮೋಸ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಅಪರಿಚಿತ, ಅಂತರರಾಷ್ಟ್ರೀಯ ಫೋನ್‌ ಕರೆಗಳ ಬಗ್ಗೆ ಎಚ್ಚರ ವಹಿಸಬೇಕು. ಅಂಥ ಸಂದರ್ಭ ಸೃಷ್ಟಿಯಾದರೆ, ಆತಂಕಕ್ಕೊಳಗಾಗದೇ ಧೈರ್ಯದಿಂದ ಮಾತಾಡಬೇಕು. ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿದರೆ, ಅದನ್ನು ವಿವರವಾಗಿ ಪರಿಶೀಲಿಸಬೇಕು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ, ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದೂ ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಸರ್ಕಾರಿ ಸಂಸ್ಥೆಗಳು ತಮ್ಮ ಅಧಿಕೃತ ಸಂವಹನಕ್ಕೆ ಸ್ಕೈಪ್, ಝೂಮ್‌ ಅಥವಾ ವಾಟ್ಸ್ ಆ್ಯಪ್‌ ನಂಥ ವಿಡಿಯೊ ತಂತ್ರಾಂಶಗಳನ್ನು ಬಳಸುವುದಿಲ್ಲ. ಡಿಜಿಟಲ್ ಅರೆಸ್ಟ್‌ ಎಂಬ ಕಾನೂನು, ನಿಯಮ ದೇಶದಲ್ಲಿ ಇಲ್ಲ ಎಂಬುದೂ ಗಮನದಲ್ಲಿರಬೇಕು. ಮತ್ತೊಂದು ಮುಖ್ಯ ವಿಚಾರ, ಈಗಲೇ ಕೆಲಸ ಆಗಬೇಕು, ಪ್ರಕರಣ ಇವತ್ತೇ ಮುಗಿಯಬೇಕು ಎನ್ನುವಂತೆ ಒತ್ತಡ ಹೇರಿ, ತುರ್ತು ಸ್ಥಿತಿ ಸೃಷ್ಟಿಸುವವರನ್ನು ನಂಬಬಾರದು. ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಖಾಸಗಿ ವಿಷಯಗಳನ್ನು, ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು. ವಂಚನೆಯ ಬಗ್ಗೆ ಅನುಮಾನ ಬಂದರೆ, ಕೂಡಲೇ ಸೈಬರ್ ಸಹಾಯವಾಣಿ, ಪೊಲೀಸರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಗಂಡನಿಗೆ ಚಟ್ಟ ಕಟ್ಟಲು ಪ್ರಿಯಕರನಿಗೆ ಹೆಂಡತಿ ಸಾಥ್!

ಸೈಬರ್ ವಂಚನೆಯಿಂದ ಪಾರಾಗಬೇಕು ಎಂದರೆ, ಮೊದಲು ವಂಚಕರ ಕಾರ್ಯವಿಧಾನವನ್ನು ಅರಿಯಬೇಕು. ವಂಚಕರು ಹೇಗೆ ಸೈಬರ್ ಅಪರಾಧಗಳನ್ನು ಎಸಗುತ್ತಾರೆ ಎಂಬ ಬಗ್ಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಆರ್‌ಇಟಿ–ಐಎನ್) ಮಾಹಿತಿ ಪ್ರಕಟಿಸಿದ್ದು, ಅದರಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ.  ಒಂದು ವೇಳೆ ನೀವು ಡಿಜಿಟಲ್ ಅರೆಸ್ಟ್‌ ಗೆ ಒಳಗಾಗಿದ್ದ ಪಕ್ಷದಲ್ಲಿ ಮೊದಲು ಮಾಡಬೇಕಾದ ಕೆಲಸ ಬ್ಯಾಂಕ್ ಅನ್ನು ಸಂಪರ್ಕಿಸಿ ಖಾತೆಯನ್ನು ಸ್ಥಗಿತಗೊಳಿಸುವುದು. ನಂತರ ಸೈಬರ್ ಸಹಾಯವಾಣಿ (1930) ಸಂಪರ್ಕಿಸಬೇಕು. ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ತನಿಖೆಯ ಅನುಕೂಲಕ್ಕಾಗಿ, ನಿಮ್ಮ ಕರೆ, ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

ಸೈಬರ್‌ ವಂಚನೆ ಯತ್ನ ಮತ್ತು ವಂಚನೆಗೆ ಒಳಗಾದ ಸಂದರ್ಭದಲ್ಲಿ ಅದರ ಬಗ್ಗೆ ದೂರು ನೀಡಲು ರಾಷ್ಟ್ರೀಯ ಮಟ್ಟದಲ್ಲಿ ‘ಸಿಟಿಜನ್‌ ಫೈನಾನ್ಶಿಯಲ್‌ ಸೈಬರ್‌ ಫ್ರಾಡ್‌ ರಿಪೋರ್ಟಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌’ ಅನ್ನು ರೂಪಿಸಲಾಗಿದೆ. 2021ರಲ್ಲಿ ಇದು ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್‌ ಅಪರಾಧ ದೂರು ನೀಡುವ ಪೋರ್ಟಲ್‌ www.cybercrime.gov.in ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸೈಬರ್‌ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ ‘1930’ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ 7.6 ಲಕ್ಷಕ್ಕೂ ಹೆಚ್ಚು ಸೈಬರ್‌ ವಂಚನೆ ದೂರು ದಾಖಲಾಗಿದ್ದು, ₹2,400 ಕೋಟಿಗೂ ಹೆಚ್ಚು ಹಣ ವಂಚಕರ ಕೈ ಸೇರದಂತೆ ತಡೆಯಲಾಗಿದೆ ಎಂದು ಗೃಹ ಸಚಿವಾಲಯವು ಈ ವರ್ಷದ ಆಗಸ್ಟ್‌ನಲ್ಲಿ ಸಂಸತ್ತಿಗೆ ತಿಳಿಸಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ: ಭಾರತಕ್ಕೆ ಬಾಂಗ್ಲಾನೇಪಾಳಿ ಹುಡ್ಗೀರ್ ಬರೋದ್ಯಾಕೆ?…

ನಕಲಿ ಷೇರು ಮಾರುಕಟ್ಟೆ ಹೂಡಿಕೆಗಳು ಮತ್ತು ಡಿಜಿಟಲ್‌ ಅರೆಸ್ಟ್‌ನಂತಹ ಸೈಬರ್‌ ಹಗರಣಗಳನ್ನು ನಡೆಸುವ ದೊಡ್ಡ ಜಾಲವೇ ದೇಶದಲ್ಲಿ ಕಾರ್ಯಾಚರಿಸುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ ಮತ್ತು ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ಈ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂಬ ಸಂಗತಿ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ. ನಕಲಿ ವೆಬ್‌ಸೈಟ್‌ಗಳು ಮತ್ತು ದಾರಿತಪ್ಪಿಸುವ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ಬಳಸಲಾಗುತ್ತಿದ್ದು, ಇವುಗಳು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿವೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನಕಲಿ ಜಾಹೀರಾತು ಮತ್ತು ಸುಳ್ಳು ಯಶಸ್ಸಿನ ಕಥೆಗಳನ್ನು ಸೃಷ್ಟಿಸಿ ಸಂತ್ರಸ್ತರು ಹೆಚ್ಚು ಹಣವನ್ನು ಹೂಡುವಂತೆ ಮಾಡಲಾಗುತ್ತಿದೆ.

ಡಿಜಿಟಲ್‌ ಅರೆಸ್ಟ್‌ ವಂಚಕರಲ್ಲಿ ಬಹುತೇಕರು ದೇಶದ ಹೊರಗಡೆಯಿಂದ ಕಾರ್ಯಾಚರಿಸುತ್ತಾರೆ. ಮ್ಯಾನ್ಮಾರ್‌, ಲಾವೊಸ್‌, ತೈವಾನ್‌, ಕಾಂಬೋಡಿಯಾದಂತಹ ದೇಶಗಳಲ್ಲಿ ಕುಳಿತು ಕರೆ ಮಾಡಿ ವಂಚನೆ ಎಸಗುತ್ತಾರೆ. ವಿದೇಶಿಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ವಂಚನೆಗೆ ಒಳಗಾಗುತ್ತಿರುವವರಲ್ಲಿ ನಗರ ಪ್ರದೇಶದವರು, ವಿದ್ಯಾವಂತರು, ಸೇವೆಯಿಂದ ನಿವೃತ್ತಿ ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವತ್ತು ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಅದರಿಂದ ವಂಚನೆಗೆ ಒಳಗಾಗುವುದು ಇನ್ನೂ ನಿಂತಿಲ್ಲ… ಆದ್ದರಿಂದ ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ ಎನ್ನುವುದೇ ನಮ್ಮ ಆಶಯ…

-ಬಿ.ಎಂ.ಲವಕುಮಾರ್

admin
the authoradmin

Leave a Reply

Translate to any language you want