CrimeLatestMysore

ಕೆ.ಆರ್.ನಗರದಲ್ಲಿ ಆಸ್ತಿಗಾಗಿ ಹಿರಿ-ಕಿರಿ ಹೆಂಡ್ತಿ ಮಕ್ಕಳ ಮಧ್ಯೆ ಗಲಾಟೆ… ಜೋಡಿ ಹೆಣ ಬಿತ್ತು

ಕೆ.ಆರ್.ನಗರ(ಜಿಟೆಕ್ ಶಂಕರ್) :  ಆಸ್ತಿ ವೈಷಮ್ಯದ ಹಿನ್ನಲೆಯಲ್ಲಿ ಸಹೋದರರಿಬ್ಬರನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆಗೈದ ಮಾಡಿರುವ ಘಟನೆ ತಾಲೂಕಿನ ಅರ್ಜುನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಡಿಸ್ಕವರಿ ರಾಘು(35)   ಹರ್ಷವರ್ಧನ್ (30) ಬರ್ಬರವಾಗಿ ಹತ್ಯೆಗೀಡಾದ ದುರ್ದೈವಿಗಳು. ಇವರಿಬ್ಬರು ಸಹೋದರರಾಗಿದ್ದು, ಅರ್ಜುನಹಳ್ಳಿ ಗ್ರಾಮದ ನಿವಾಸಿ ದಿವಂಗತ ರಮೇಶ್ ರಾಜು ಅವರ ಕಿರಿಯ ಹೆಂಡತಿಯ ಮಕ್ಕಳಾಗಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ  ವಾಸವಾಗಿದ್ದರು.

ಅರ್ಜುನಹಳ್ಳಿ ಗ್ರಾಮದ ರಮೇಶ್ ರಾಜು ಎಂಬುವರಿಗೆ ಇಬ್ಬರು ಹೆಂಡತಿಯರಿದ್ದು,  ಮೊದಲನೇ ಹೆಂಡತಿ ಸುಧಾ ಆಗಿದ್ದರೆ ಎರಡನೇ ಹೆಂಡತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮೂಲದ ಶಿಕ್ಷಕಿ ಕಾಮಾಕ್ಷಿ ಯಾಗಿದ್ದಾರೆ. ಮೊದಲಿನಿಂದಲೂ ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿ ಮಕ್ಕಳ ನಡುವೆ ಆಸ್ತಿಗಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ರಮೇಶ್ ರಾಜು ಅವರ ಎರಡನೇ ಹೆಂಡತಿ ಕಾಮಾಕ್ಷಿ ಶಿಕ್ಷಕಿಯಾಗಿ ನಿವೃತ್ತಿ ಹೊಂದಿ ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದರು ಎನ್ನಲಾಗಿದ್ದು, ನಿವೃತ್ತ ಶಿಕ್ಷಕಿ ಕಾಮಾಕ್ಷಿ ಅವರಿಗೆ ಹಿರಿಯ ಮಗ ಡಿಸ್ಕವರಿ ರಾಘು ಎರಡನೇ ಮಗ ಹರ್ಷವರ್ಧನ ಆಗಿದ್ದಾರೆ. ಈ ಪೈಕಿ ಡಿಸ್ಕವರಿ ರಾಘು ತಂದೆಯ ಆಸ್ತಿಗಾಗಿ  ಜಗಳ ನಡೆಸಿದ್ದು ಅದು ವಿಕೋಪಕ್ಕೆ ಹೋಗಿ ಅರ್ಜುನಹಳ್ಳಿ ತೋಟದ ಮನೆಯಲ್ಲಿದ್ದ ತಂದೆ ರಮೇಶ್ ರಾಜ್ ಅವರನ್ನು ಮೂರು ವರ್ಷಗಳ ಹಿಂದೆ ಬರ್ಬರ ಹತ್ಯೆ ಮಾಡಿ ಜೈಲು ಸೇರಿದ್ದನು.

ಈ ನಡುವೆ ಡಿಸ್ಕವರಿ ರಾಘು ಜೈಲಿನಿಂದ ಬಂದಿದ್ದನು. ಆದರೆ ಆಸ್ತಿ ವಿಚಾರದ ಗಲಾಟೆಗಳು ಮುಂದುವರೆದಿತ್ತು. ಈ ನಡುವೆ ದಿವಂಗತ ರಮೇಶ್ ರಾಜು ಅವರ ಮೊದಲನೇ ಹೆಂಡತಿ ಸುಧಾ ಅವರ ಪುತ್ರ ರೋಹಿತ್ ಆಸ್ತಿಯ ವಿಚಾರವಾಗಿ ರಾಜಿ ಪಂಚಾಯಿತಿಗಾಗಿ ತನ್ನ ತಂದೆಯ ಕಿರಿ ಹೆಂಡತಿ ಕಾಮಾಕ್ಷಿ ಮಕ್ಕಳಾದ ಡಿಸ್ಕವರಿ ರಾಘು ಹಾಗೂ ಹರ್ಷವರ್ಧನ್ ಇಬ್ಬರನ್ನು ಅರ್ಜುನಹಳ್ಳಿ ಗ್ರಾಮಕ್ಕೆ ಕರೆಸಿದ್ದನು ಎನ್ನಲಾಗಿದೆ.

ಆಸ್ತಿ ಹಂಚಿಕೊಳ್ಳುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು ಏಕಾಏಕಿ ಮಚ್ಚಿನಿಂದ ರೋಹಿತ್ ಈ ಇಬ್ಬರು ಸಹೋದರರ ಮೇಲೆ ಮನಸ್ಸೊ ಇಚ್ಚೆ ಬಂದಂತೆ ತಲೆ ಹಾಗೂ ಮುಖದ ಮೇಲೆ ಕೊಚ್ಚಿದ್ದಾನೆ ಸ್ಥಳದಲ್ಲಿ ಹರ್ಷವರ್ಧನ್ ಸಾವನ್ನಪ್ಪಿದರೆ, ತಪ್ಪಿಸಿ ಕೊಂಡು ಓಡಿ ಹೋಗುತ್ತಿದ್ದ ಡಿಸ್ಕವರಿ ರಾಘು ನನ್ನು ಬೆನ್ನತ್ತಿದ್ದ ರೋಹಿತ್ ಕಲ್ಯಾಣಪುರ ಸಮೀಪ ರಸ್ತೆಯ ಬದಿಯಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಸುದ್ದಿ ತಿಳಿದ ಕೆ.ಆರ್.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಹತ್ಯೆಯಾದ ಇಬ್ಬರು ಯುವಕರ ಶವಗಳನ್ನು ಪರಿಶೀಲನೆ ನಡೆಸಿದರು. ಈ ಸಂಬಂಧ ಹತ್ಯೆಗೈದ ಆರೋಪಿ ರೋಹಿತ್ ನನ್ನು ಜಮೀನಿನ ಬಳಿ ಬಂಧಿಸಿದ ಪೊಲೀಸರು ಆರೋಪಿ ರೋಹಿತ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಘಟನಾ ಸ್ಥಳಕ್ಕೆ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಡಿವೈಎಸ್ ಪಿ ರಾಜಣ್ಣ,  ಕೆ.ಆರ್.ನಗರ ಪೊಲೀಸ್ ಇನ್ಸ್ ಪೆಕ್ಟರ್ ಎಸ್. ಶಿವಪ್ರಕಾಶ್, ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಆರ್.ಸ್ವಾಮೀಗೌಡ, ಪ್ರೋ. ಪಿಎಸ್ ಐ ಎ.ಎಸ್.ನವೀನ್ ನಿಶ್ಚಲ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನು ಜೋಡಿ ಕೊಲೆ ನಡೆದು ಮೂರು ಗಂಟೆಗಳಾದರೂ ಅವರ ಸಂಬಂಧಿಕರು ಇಲ್ಲದೆ ಪೊಲೀಸರು ಮತ್ತು ಸಾರ್ವಜನಿಕರು ಮಾತ್ರ ಸ್ಥಳದಲ್ಲಿದ್ದದ್ದು ಕಂಡು ಬಂತು. ಇನ್ನೊಂದೆಡೆ ಹಾಸನ ಮೈಸೂರು ಮುಖ್ಯ ರಸ್ತೆಯ ಪಕ್ಕ ಬಿದ್ದದ ರಾಘವೇಂದ್ರನ ಶವ ನೋಡಲು ಜನರು ಗುಂಪು ಗುಂಪಾಗಿ ಆಗಮಿಸುತ್ತಿದದ್ದು ಕಂಡು ಬಂತು.    ಅಲ್ಲದೆ  ಗ್ರಾಮದ ಮಹಿಳೆಯರು ಮತ್ತು ಪುರುಷರು ತಂಡೋಪ ತಂಡವಾಗಿ ಬಂದು ವೀಕ್ಷಿಸುವುದರ ಜತೆಗೆ ಬರ್ಬರ ಕೊಲೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು.

admin
the authoradmin

Leave a Reply

Translate to any language you want