ಮೈಸೂರು:ಸಮಾಜದ ಕಟ್ಟ ಕಡೆಯ ಅಂಚಿನಲ್ಲಿರುವವರು, ಮುಖ್ಯವಾಹಿನಿಯಿಂದ ಹೊರಗುಳಿದವರು ಮತ್ತು ನಿರ್ಲಕ್ಷಿತರೆಡೆಗೆ ಸಹಾನುಭೂತಿ ಹೊಂದಿರುವುದು ಪ್ರಸ್ತುತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಂಚಾಲಕಿ ಪ್ರೊ. ರೇಖಾ ಕೆ. ಜಾದವ್ ಹೇಳಿದರು.

ಇತ್ತೀಚೆಗೆ ಮೈಸೂರಿನ ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೋನಿಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆ ಮತ್ತು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಪರಸ್ಪರ ಸಹಾಯಹಸ್ತ ಚಾಚಿದಲ್ಲಿ ಮನುಕುಲದ ಏಳ್ಗೆ ಸುಲಭ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಘಟಕದ ವತಿಯಿಂದ ಎರಡೂ ಶಾಲೆಗಳಲ್ಲೂ ಜ್ಯಾಮಿಟ್ರಿ ಬಾಕ್ಸ್ ಮತ್ತು ಪುಸ್ತಕ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮಾತ್ರವಲ್ಲದೆ ಗ್ರಾಮದಲ್ಲಿ ಜಾಥಾ ನಡೆಸಿ ಘೋಷಣೆ ಕೂಗುವ ಮುಖಾಂತರ ಆರೋಗ್ಯ, ಶಿಕ್ಷಣ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಸದಸ್ಯರಾದ ಡಾ. ಶ್ವೇತಾ ಎಮ್.ಹನ್ಸ್, ಡಾ.ದಿನಮಣಿ ಬಿ. ಎಸ್, ಡಾ.ಸೋಮಲತ ಕೆ.ಸಿ, ಪುನೀತ್ ಸಿ.ಎಮ್, ದಿನೇಶ್ ರಾವ್, ಅಭಿಷೇಕ್ ಮತ್ತು ಅಧ್ಯಾಪಕರಾದ ಡಾ. ಕಲ್ಯಾಣ ಕುಮಾರಿ, ಡಾ.ರೋಹಿಣಿ, ಡಾ.ಸುವರ್ಣದೇವಿ ಬಿ.ಕೆ, ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರು ಮತ್ತು ಗ್ರಾಮದ ಮುಖಂಡರು ಭಾಗಿಯಾಗಿದ್ದರು.








