LatestMysore

ನೇಗಿಲಯೋಗಿ ಸೇವಾ ಟ್ರಸ್ಟ್‌ ಮತ್ತು  ಸೇವಾ ಬಳಗದಿಂದ ಅರ್ಥಪೂರ್ಣ ಮಹಿಳಾ ದಿನಾಚರಣೆ

ಮೈಸೂರು: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ (ರಿ), ಮೈಸೂರು ಹಾಗೂ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ, ಕೆ.ಜಿ. ಕೊಪ್ಪಲು ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್‌ (ರಿ) ಸಹಕಾರದೊಂದಿಗೆ ವಿಶ್ವ ಮಹಿಳಾ ದಿನಾಚರಣೆ–2026 ಅನ್ನು ಅದ್ಧೂರಿಯಾಗಿ ಆಚರಿಸಲಾಯಿತಲ್ಲದೆ, ಮಹಿಳೆಯರ ಒಗ್ಗಟ್ಟು, ಸಬಲೀಕರಣ ಮತ್ತು ಸಮಾಜಸೇವೆಯ ಮಹತ್ವವನ್ನು ಈ ಕಾರ್ಯಕ್ರಮವು ಸಾರಿತು.

ಜಯನಗರದಲ್ಲಿರುವ ಹೊಸ ನ್ಯಾಯಾಲಯದ ಎದುರಿನ ನೇಗಿಲಯೋಗಿ ಸೇವಾ ಭವನದಲ್ಲಿ ನಡೆದ ಕಾರ್ಯಕ್ರಮವು ಮಹಿಳಾ ದಿನಾಚರಣೆಗೆ ಮೆರುಗು ತಂದಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷೆ ಶೋಭಾ ರಮೇಶ್ ವಹಿಸಿದ್ದರು. ತಮ್ಮ ಪ್ರಸ್ತಾವಿಕ ನುಡಿಯಲ್ಲಿ ಅವರು ಸಂಸ್ಥೆಯ ವಿವಿಧ ಸಾಮಾಜಿಕ ಚಟುವಟಿಕೆಗಳು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಶಿಬಿರಗಳು ಮತ್ತು ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರಿನ ಎಂಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಶ್ವೇತಾ ಸದಾನಂದ್ ಅವರು  ಮಾತನಾಡಿ ಮಹಿಳಾ ಆರೋಗ್ಯದ ಮಹತ್ವವನ್ನು ಒತ್ತಿಹೇಳಿ, ಪ್ರತಿಯೊಬ್ಬ ಮಹಿಳೆಯೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಮತ್ತೊಬ್ಬ ಅತಿಥಿ ಸಂಧ್ಯಾ ಮಂಜುನಾಥ್ ಅವರು ಮಹಿಳೆಯರು ಇಂದಿನ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈದು ಮುನ್ನಡೆಯುತ್ತಿರುವುದನ್ನು ಉಲ್ಲೇಖಿಸಿ, ಇನ್ನಷ್ಟು ಉನ್ನತ ಸಾಧನೆಗಳತ್ತ ಹೆಜ್ಜೆ ಹಾಕಬೇಕೆಂದು ಪ್ರೇರೇಪಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಮಹಿಳೆಯರನ್ನು ಗೌರವಿಸಲಾಯಿತು. ಡಾ. ಕಾವ್ಯಶ್ರೀ ಎಚ್.ಎಸ್ (ಎಂ.ಎಂ.ಸಿ.ಆರ್.ಐ), ಶ್ರೀಮತಿ ಕುಸುಮ ಜಿ (ಕೆಪಿಸಿಎಲ್), ಕುಮಾರಿ ಸಹನಾ ಗೌಡ (ಸಮೃದ್ಧಿ ವಾರ್ತೆ), ಶ್ರೀಮತಿ ಸವಿತ (ಪ್ರಗತಿಪರ ರೈತ), ಹಾಗೂ ಶ್ರೀಮತಿ ರಂಜಿತಾ ಸಿದ್ದೇಶ್ ಕುಮಾರ್ (ಉದ್ಯಮಿ) ಅವರಿಗೆ ಅಭಿನಂದನಾ ಸನ್ಮಾನ ನೀಡಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಿಳೆಯರ ಪ್ರತಿಭೆ ಪ್ರದರ್ಶನಕ್ಕಾಗಿ ನೃತ್ಯ, ಭಾವಗೀತೆ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ವೇಳೆ, ಅಗತ್ಯವಿರುವವರಿಗೆ ಉಚಿತ ವೀಲ್‌ಚೇರ್‌ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆಯನ್ನೂ ಸಂಸ್ಥೆಗಳು ನೆರವೇರಿಸಿವೆ. ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಸುನಂದ, ಕಾರ್ಯದರ್ಶಿ ಶ್ರೀಮತಿ ರಾಣಿ ಮಹೇಶ್, ಖಜಾಂಚಿ ಶ್ರೀಮತಿ ಶ್ರುತಿ ರಾಣಿ ತೇಜಸ್ ಸೇರಿದಂತೆ ನಿರ್ದೇಶಕರು, ಪದಾಧಿಕಾರಿಗಳು ಮತ್ತು ಅನೇಕ ಸದಸ್ಯರು ಉಪಸ್ಥಿತರಿದ್ದರು. ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಿ. ರವಿಕುಮಾರ್ ಹಾಗೂ ಮರುಳೇಶ್ವರ ಟ್ರಸ್ಟ್ ಅಧ್ಯಕ್ಷರಾದ ಡಾ. ಎಂ. ಮಹಾದೇವಯ್ಯ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want