LatestMysore

ಕಾಲಜ್ಞಾನಿ ಕೈವಾರತಾತಯ್ಯರವರು ಭಕ್ತಿ, ಸತ್ಕಾರ್ಯಗಳಿಂದ ಭಗವಂತನನ್ನು ಕಂಡವರು

 ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಾಲಜ್ಞಾನಿ ಕೈವಾರತಾತಯ್ಯ 18ನೇ ಶತಮಾನದ ಯೋಗಿ, ಕವಿ ಹಾಗೂ ಅದೈತ ತತ್ವ ಬೋಧಕ. ಭಕ್ತಿಗೀತೆಗಳ ಮೂಲಕ ಮನುಷ್ಯ ತನ್ನ ಸತ್ಕಾರ್ಯಗಳಿಂದ ಭಗವಂತನನ್ನು ಕಾಣಬಹುದು ಎಂದು ತಿಳಿಹೇಳಿದವರು’ ಎಂದು ರಂಗಕರ್ಮಿ ಜಯರಾಮ್ ಹೇಳಿದರು.

ನಗರದ ಉಪವಿಭಾಗಾಧಿ-ಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗಿನಾರಾಯಣೇಂದ್ರ ಜಯಂತಿ (ಕೈವಾರ ತಾತಯ್ಯ), ದೇವರ ದಾಸಿಮಯ್ಯ ಮತ್ತು ರೇಣುಕಾರ್ಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಕೈವಾರ ಗ್ರಾಮದಲ್ಲಿ ನಾರಾಯಣಪ್ಪ ಎಂಬ ಹೆಸರಿನಲ್ಲಿ ಜನಿಸಿ, ತನ್ನ ಕಾಯಕದ ಮೂಲಕ ಕೈವಾರ ತಾತಯ್ಯ ಎಂದು ಪ್ರ-ಸಿದ್ದರಾದರು. ಇವರ ಕಾಲಜ್ಞಾನ ಮತ್ತು ಕೃತಿಗಳು ಭವಿಷ್ಯದ ಘಟನೆಗಳನ್ನು ಮುನ್ಸೂಚಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಭಕ್ತಿಭಂಡಾರವಾಗಿದೆ ಎಂದರು.

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ‘ದೇವರ ದಾಸಿಮಯ್ಯ 10ನೇ ಶತಮಾನದ ವಚನಕಾರರಾಗಿ ಸಮಸಮಾಜ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇವರು ಬಸವ ಣ್ಣನವರ ಅನುಭವ ಮಂಟಪಕ್ಕಿಂತಲೂ ಮುಂಚೆಯೇ ಸಾಮಾಜಿಕ ಪರಿವರ್ತನೆಗೆ ವಚನಗಳ ಮೂಲಕ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದರು’ ಎಂದು ಹೇಳಿದರು.

‘ದೇವರ ದಾಸಿಮಯ್ಯ ಅವರು ತವನಿಧಿ ಧ್ಯಾನ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಇತರರೊಂದಿಗೆ ಹಂಚಿಕೊಂಡು ಮಹಾತ್ಮರಾದರು. ಅವರ ಎಲ್ಲ ಕೃತಿಗಳು ರಾಮನಾಥ ಎಂಬ ಅಂಕಿನ ನಾಮದಲ್ಲಿ ಸೃಷ್ಟಿಯಾಗಿದೆ’ ಎಂದರು.

‘ಜಯಂತಿಗಳ ಆಚರಣೆಯಿಂದ ನಾಗರಿಕರು ಮಹನೀಯರ ಆದರ್ಶವನ್ನು ಮೈಗೂಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು ಮೂಲ ಉದ್ದೇಶ. ಸರ್ಕಾರ ರಾಷ್ಟ್ರೀಯ ಹಬ್ಬಗಳ ಸಮಿತಿ ಮೂಲಕ ಪ್ರತಿಯೊಂದು ಸಮುದಾಯದ ಜಯಂತಿ ಹಮ್ಮಿಕೊಂಡು ಭವಿಷ್ಯದ ಕುಡಿಗಳಿಗೆ ಮಹನೀಯರ ತತ್ವ ಆದರ್ಶವನ್ನು ತಲಪಿಸುವ ಕೆಲಸ ನಿರಂತರವಾಗಿ ಮಾಡಿದೆ’ ಎಂದರು.

ಈ ವೇಳೆ ಸಮುದಾಯದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಗಜೇಂದ್ರ, ಮಹೇಂದ್ರ ಕುಮಾರ್, ಮಂಜು, ಮಹೇಂದ್ರ ಬಾಬು, ಡಿ.ಕುಮಾರ್, ರಾಜು. ಚಂದ್ರಣ್ಣ, ನಂದಕುಮಾರ್, ರಾಜಣ್ಣ, ಉಷಾ, ತ್ರಿಶಾ, ಪದ್ಮಮ್ಮ, ರಂಗನಾಥ್, ಮಹೇಶಾರಾಧ್ಯ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want