ರಾಜ್ಯದಲ್ಲಿ ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಷರ್ಸ್, ಎಂ. ಸ್ಯಾಂಡ್ ಬಂದ್ ಮಾಡುವ ಎಚ್ಚರಿಕೆ ನೀಡಿದ್ದೇಕೆ?

ಬೆಂಗಳೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಜಾರಿಗೊಳಿಸಿರುವ ಒನ್ ಟೈಮ್ ಸೆಟಲ್ಮೆಂಟ್ – ಒಟಿಎಸ್ ಯೋಜನೆಯನ್ನು ಪರಿಷ್ಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಷರ್ಸ್ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಮನೆ, ಸಾರ್ವಜನಿಕ ವಲಯದ ನಿರ್ಮಾಣ ಕಾಮಗಾರಿಗೆ ಅಗತ್ಯವಾಗಿರುವ ಜಲ್ಲಿ, ಎಂ.ಸ್ಯಾಂಡ್ ಪೂರೈಕೆಯನ್ನು ಬಂದ್ ಮಾಡುತ್ತೇವೆ. ಅಲ್ಲದೇ ಹೊರ ರಾಜ್ಯಗಳಿಗೆ ಕಲ್ಲುಗಣಿ ಸಂಪನ್ಮೂಲ ರಾಜ್ಯಕ್ಕೆ ಬರದಂತೆ ತಡೆಯುವ ಜೊತೆಗೆ ಒಟಿಎಸ್ ಯೋಜನೆ ವಿರುದ್ಧ ಕಾನೂನು ಸಂಘರ್ಷ ಮಾಡುವುದಾಗಿ ಘೋಷಿಸಿದೆ.
ನಗರದ ಮೌರ್ಯ ಹೋಟೆಲ್ ನಲ್ಲಿಂದು ಸಂಘದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ಸರ್ಕಾರದ ವೈಜ್ಞಾನಿಕ ನೀತಿಗಳ ವಿರುದ್ಧ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಒನ್ ಟೈಮ್ ಸೆಟಲ್ಮೆಂಟ್ – ಒಟಿಎಸ್ ಯೋಜನೆ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸುವ ಗುರಿ ಹೊಂದಿದೆ. ಆದರೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ಮೇಲೆ ಅಧಿಕ ಹೊರ ಹೇರಿ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳುವ ಹುನ್ನಾರಕ್ಕೆ ಧಿಕ್ಕಾರ ಎಂದರು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ತಲಾತಲಾಂತರಗಳಿಂದ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಒಕ್ಕಲೆಬ್ಬಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರ್ಕಾರ ರತ್ನಗಂಬಳಿ ಹಾಸುವ ಹುನ್ನಾರದಲ್ಲಿ ತೊಡಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಹದಿನೈದು ದಿನಕ್ಕೊಬ್ಬರು ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಬದಲಾಗುತ್ತಿದ್ದಾರೆ. ಪ್ರತಿಯೊಂದು ಜಿಲ್ಲೆಗಳ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನಗಳಿಂದ ಕಲ್ಲುಗಣಿಗಾರಿಕೆಯಲ್ಲಿ ತೊಡಗಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಬಾಕಿ ರಾಜಧನವನ್ನು ವಸೂಲಿ ಮಾಡುವ ಒಟಿಎಸ್ ಯೋಜನೆಗೆ ನಮ್ಮ ಸಹಮತವಿಲ್ಲ. ಪ್ರತಿ ಎಕರೆಗೆ ಎರಡು ಲಕ್ಷ ರೂ ಹಣ ಪಾವತಿಸಲು ಸಿದ್ಧವಿದ್ದು, ಇದಕ್ಕಿಂತ ಹೆಚ್ಚು ಮೊತ್ತ ನಿಗದಿ ಮಾಡಿದರೆ ಪಾವತಿ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಹಣ ಸಂದಾಯವಾಗಿರುವುದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಇಂದಿಗೂ ಪಾವತಿಸಿಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಎಲ್ಲಾ ರೀತಿಯ ರಾಜಧನ ಈಗಾಗಲೇ ಸಂದಾಯವಾಗಿದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡಬಾರದು. ಕೆ.ಎಂ.ಎಂ.ಸಿ.ಆರ್-1994 ನಿಯಮಗಳಿಗೆ ಮಾಡಿರುವ ತಿದ್ದುಪಡಿ ಅಸಮರ್ಪಕವಾಗಿದ್ದು, ಇದರಿಂದ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿದೆ. ಯಾವ ಪ್ರಮಾಣದಲ್ಲಿ ಕಲ್ಲು ಗಣಿ ಸಂಪತ್ತು ತೆಗೆಯಲಾಗಿದೆ ಎಂಬ ಕುರಿತು ದೂರಸಂವೇದಿ ತಂತ್ರಜ್ಞಾನದಡಿ ಸಮೀಕ್ಷೆ ಮಾಡುವುದು ಸಹ ಕಾನೂನು ಬಾಹಿರ ಕ್ರಮ ಎಂದು ಡಿ.ಸಿದ್ದರಾಜು ಹೇಳಿದರು.
ಗೌರವಾಧ್ಯಕ್ಷ ಸಂಜೀವ್ ವಿ. ಹಟ್ಟಿಹೊಳಿ ಮಾತನಾಡಿ, ಸರ್ಕಾರ ಕಲ್ಲುಗಣಿಗಾರಿಕೆ ಗುತ್ತಿಗೆದಾರರ ಜೊತೆ ಚರ್ಚಿಸದೇ ಏಕಪಕ್ಷೀಯವಾಗಿ ಎಟಿಎಸ್ ಯೋಜನೆಯನ್ನು ಕಳೆದ ತಿಂಗಳ 26 ರಂದು ಜಾರಿಗೊಳಿಸಿದ್ದು, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಸರ್ಕಾರಿ ಕಾಮಗಾರಿ ಗುತ್ತಿಗೆದಾರರಿಂದಲೂ ರಾಜಧನ ಸಂಗ್ರಹಿಸುತ್ತಿದ್ದು, ಎರಡು ಕಡೆ ಸಂಗ್ರಹಿಸುವುದು ಕಾನೂನು ಬಾಹಿರ ಕ್ರಮವಾಗಿದೆ. ಈ ವರೆಗೆ ಸರ್ಕಾರ ಕಲ್ಲುಗಣಿಗಾರಿಕೆ ವಲಯದಿಂದ ಸಂದಾಯವಾಗಿರುವ ರಾಜಧನ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷರು ಡಿ.ಸಿದ್ದರಾಜು ಸಂಘದ ಉಪಾಧ್ಯಕ್ಷರುಗಳಾದ ,ವಾಗೀಶ್, ಅಬ್ದುಲ್ ಮಜಿದ್, ಮನೋಜೆ ಶೆಟ್ಟರ್, ಪಂಚಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್ , ಉಪ ಕಾರ್ಯದರ್ಶಿ ಡಿ.ಆರ್. ಮಹೇಶ್, ಸಂಘಟನಾ ಕಾರ್ಯದರ್ಶಿ ಕೆ ವಿ ಚೌಧರಿ, ಕೋಶಾಧಿಕಾರಿ ಉಮಾಶಂಕರಯ್ಯ, ಎಲ್ಲ 26 ಜಿಲ್ಲಾಯ ಅಧ್ಯಕ್ಷರು ನಿರ್ದೇಶಕರುಗಳು ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.







