ಬದುಕಿ ಬಾಳುವ ವಯಸ್ಸಿನಲ್ಲಿ ಬದುಕನ್ನೇ ಅಂತ್ಯ ಮಾಡಿಕೊಂಡ ಯುವಪ್ರೇಮಿಗಳು.. ಮನೆಬಿಟ್ಟು ಬಂದವರು ಹೆಣವಾದರು!

ಚಾಮರಾಜನಗರ : ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಪ್ರೀತಿಸಿದ ಪ್ರೇಮಿಗಳು ಸಮಾಜವನ್ನು ಎದುರಿಸಿ ಬದುಕು ನಡೆಸಲು ಸಾಧ್ಯವಾಗದೆ ಭಯಗೊಂಡು ಪ್ರಾಣಕಳೆದುಕೊಂಡಿರುವ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯ್ತಿಯ ಗೇರಟ್ಟಿ ಗ್ರಾಮದಲ್ಲಿ ನಡೆದಿದ್ದು, ಎರಡು ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇವತ್ತು ಒಟ್ಟಿಗೆ ಪ್ರಾಣಕಳೆದುಕೊಂಡು ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿದ ಯುವ ಪ್ರೇಮಿಗಳ ಹೆಸರು ನಾಗೇಂದ್ರ(21) ಮತ್ತು ನದಿಯಾ(19). ನಾಗೇಂದ್ರ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪ ಇರುವ ಪೊನ್ನಾಚಿ ಗ್ರಾಮಯ ಗೇರಟ್ಟಿ ಗ್ರಾಮದ ನಕ್ಕುಂದಿ ಗ್ರಾಮದ ನಿವಾಸಿಯಾಗಿದ್ದರೆ, ನದಿಯಾ ಪಾಲಾರ್ ಗ್ರಾಮದ ನಿವಾಸಿಯಾಗಿದ್ದಾಳೆ.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಇವರಿಬ್ಬರು ಒಂದಾಗುವ ಪ್ಲಾನ್ ಮಾಡಿದ್ದರು ಎನ್ನಲಾಗಿದ್ದು, ಅದರಂತೆ ಮದುವೆಯಾಗುವ ಸಲುವಾಗಿ ಮನೆಬಿಟ್ಟು ಕಳೆದ ಮೂರು ದಿನಗಳ ಹಿಂದೆಯೇ ಬಂದಿದ್ದರು. ನಾಗೇಂದ್ರ ತನ್ನ ಅಜ್ಜ ಶಿವಮಾದಯ್ಯ ಅವರ ಪೊನ್ನಾಚಿ ಗ್ರಾಮದ ಮನೆಗೆ ತೆರಳಿದ್ದು ಅಲ್ಲಿನ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಈ ನಡುವೆ ಮಗಳು ನದಿಯಾ ಮನೆ ಬಿಟ್ಟು ನಾಪತ್ತೆಯಾಗಿದ್ದರಿಂದ ಹೆತ್ತವರು ಗಾಬರಿಗೊಂಡಿದ್ದರಲ್ಲದೆ, ಈ ಸಂಬಂಧ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಭಯಗೊಂಡಿದ್ದ ಪ್ರೇಮಿಗಳಿಬ್ಬರು ಬೇರೆ ದಾರಿ ಕಾಣದೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅವರ ಮೃತದೇಹ ಪೊನ್ನಾಚಿ ಗ್ರಾಮ ಪಂಚಾಯ್ತಿಯ ಗೇರಟ್ಟಿ ಗ್ರಾಮದಲ್ಲಿ ದೊರೆತಿದ್ದು ಪ್ರಕರಣ ದಾಖಲಿಸಿಕೊಂಡಿರುವ ಮಹದೇಶ್ವರಬೆಟ್ಟ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ತನಿಖೆಯಿಂದಷ್ಟೆ ಸಾವಿನ ಸುತ್ತ ಇರುವ ಅನುಮಾನಗಳಿಗೆ ಉತ್ತರ ಸಿಗಬೇಕಿದೆ. ಆದರೂ ಬದುಕಿ ಬಾಳುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಮದುವೆ ಅಂಥ ತಲೆಕೆಡಿಸಿಕೊಂಡು ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ.







