LatestPolitical

ಪಂಚರಾಜ್ಯ ಚುನಾವಣೆ ಬರೀ ಚುನಾವಣೆಯಲ್ಲ.. ಮಹಾಸಮರ…. ಅಧಿಕಾರದ ಗದ್ದುಗೆ ಯಾರಿಗೆ?

ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧಕ್ಕಿಂತಲೂ ಹೆಚ್ಚು ಭಾರತದಲ್ಲಿ ನಡೆಯುತ್ತಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಭೀಕರತೆಯನ್ನು ಸೃಷ್ಟಿಸುತ್ತಿರುವಂತೆ ಕಾಣಿಸುತ್ತಿದೆ. ಈ ಚುನಾವಣೆಗಳು ರಾಜಕೀಯ ಪಕ್ಷಗಳ, ಮುಖಂಡರ ನಡುವಿನ ಮಹಾ ಯುದ್ಧದಂತೆ ಗೋಚರವಾಗುತ್ತಿದೆ. ಇಲ್ಲಿ ಸಾಮ್ರಾಜ್ಯ ಕಟ್ಟಲು ಮತ್ತು ಕೆಡವಲು ನಡೆಯುತ್ತಿರುವ ನಾಯಕರ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸದ್ಯದ ಈ ಚುನಾವಣೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮಾಡು ಇಲ್ಲವೆ ಮಡಿ ಎಂಬಂತಾಗಿದ್ದರೆ, ಪ್ರಾದೇಶಿಕ ಪಕ್ಷಗಳಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

ನಮ್ಮ ದೇಶಕ್ಕೆ ಚುನಾವಣೆ ಹೊಸತೇನಲ್ಲ.. ಪ್ರತಿ ವರ್ಷವೂ ಒಂದಲ್ಲ ಒಂದು ಕಡೆಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗಿನ ಚುನಾವಣೆಗಳು ಮೊದಲಿನಂತಿಲ್ಲ. ಪ್ರತಿ ಚುನಾವಣೆಯೂ ರಾಜಕೀಯ ಪಕ್ಷಗಳ ಪಾಲಿಗೆ ಅಸ್ತಿತ್ವದ ಪ್ರಶ್ನೆಯಾಗುತ್ತಿದೆ. ಏಕ ಪಕ್ಷೀಯವಾಗಿ ಹೋರಾಡಿ ಗೆಲ್ಲುತ್ತೇವೆ ಎಂಬುದು ಬಹುತೇಕ ಪಕ್ಷಗಳಿಗೆ ಮರೀಚಿಕೆಯಾಗುತ್ತಿದೆ. ಹೀಗಾಗಿ ಚುನಾವಣೆ ಹೊಸ್ತಿಲಲ್ಲಿ ಶತ್ರುವಿನ ಶತ್ರು ಇನ್ಯಾರಿಗೋ ಮಿತ್ರರಾಗುವುದು, ಸ್ಥಾನ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದೆ ಮಿತ್ರನೇ ಶತ್ರುವಾಗುವುದು ಸಾಮಾನ್ಯವಾಗಿರುತ್ತದೆ.

ಸ್ಥಳೀಯ, ಪ್ರಾದೇಶಿಕ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಪ್ರಭಾವವನ್ನು ಕಳೆದುಕೊಳ್ಳುತ್ತಿವೆ. ಹಾಗೆಯೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೂಡ ಹೀನಾಯ ಸ್ಥಿತಿಗೆ ತಲುಪಿದೆ. ಆದರೆ ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಸಾಮಾಜ್ರ್ಯ ವಿಸ್ತರಣೆಯತ್ತ ದಾಪುಗಾಲಿಡುತ್ತಿದೆ. ಬಹುತೇಕ ಕಡೆಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡುತ್ತಾ ಅಸ್ತಿತ್ವವೇ ಇಲ್ಲದ ಕಡೆಗಳಲ್ಲಿ ನಿಧಾನವಾಗಿ ತನ್ನ ಓಟ್ ಬ್ಯಾಂಕ್ ನ್ನು ವಿಸ್ತರಿಸಿಕೊಳ್ಳುತ್ತಿದೆ. ತಳಮಟ್ಟದಿಂದಲೇ ಕಾರ್ಯಕರ್ತರ ಪಡೆಗಳನ್ನು ಕಟ್ಟಿ ಕೆಲಸ ಮಾಡುತ್ತಿರುವುದರಿಂದಾಗಿ ಇವತ್ತಲ್ಲ ನಾಳೆ ಪಕ್ಷದ ಪ್ರಭಾವ ಹೆಚ್ಚಾಗುತ್ತದೆ ಎಂಬುದು ಪಕ್ಷದ ವರಿಷ್ಟರಿಗೆ ಗೊತ್ತಾಗಿದೆ.

ಈ ಬಾರಿ ನಡೆಯುತ್ತಿರುವ ಪಂಚ ರಾಜ್ಯ ಚುನಾವಣೆಗಳನ್ನು ಗಮನಿಸಿದರೆ ಬಹುತೇಕ ಕಡೆಗಳಲ್ಲಿ ಪ್ರಾದೇಶಿಕ ಪಕ್ಷಗಳೇ ರಾಜ್ಯಭಾರ ನಡೆಸುತ್ತಿವೆ. ಹೀಗಿರುವಾಗ ಈ ಚುನಾವಣೆ ಅವುಗಳ ಅಸ್ತಿತ್ವದ ಪ್ರಶ್ನೆಯಾಗಿಯೂ ಕಾಣುತ್ತಿದೆ. ಮೊದಲೆಲ್ಲ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿದ್ದವು. ಅನಿವಾರ್ಯ ಪರಿಸ್ಥಿತಿಗಳಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾ ಎಂಬುದನ್ನು ಅವುಗಳು ತೀರ್ಮಾನ ಮಾಡುತ್ತಿದ್ದವು. ಆದರೀಗ ಪರಿಸ್ಥಿತಿ ಹಾಗಿಲ್ಲ. ಅಲ್ಲಿಯೂ ಬಂಡಾಯ, ಕುಟುಂಬ ರಾಜಕಾರಣದ ಮಧ್ಯೆ ಒಗ್ಗಟ್ಟು ಒಡೆಯುತ್ತಿದೆ. ಜತೆಗೆ ಹೊಸ ಪಕ್ಷಗಳ ಉದಯವಾಗುತ್ತಿವೆ. ಇದೆಲ್ಲದರ ನಡುವೆ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷದ ನಾಯಕರನ್ನು ಸೆಳೆದುಕೊಂಡು ಅವರಿಗೆ ಅಧಿಕಾರದ ಆಮಿಷವೊಡ್ಡುತ್ತಿವೆ.

ಇದೆಲ್ಲ ಕಾರಣಗಳಿಂದ ಸ್ವಂತ ಶಕ್ತಿಯಿಂದ ಗೆಲ್ಲುತ್ತೇವೆ ಎನ್ನುವ ವಿಶ್ವಾಸವೇ ಪ್ರಾದೇಶಿಕ ಪಕ್ಷಗಳಲ್ಲಿ ಕಡಿಮೆಯಾಗಿದೆ. ಹೀಗಾಗಿ ಕೆಲವೊಂದು ಪ್ರಾದೇಶಿಕ ಪಕ್ಷದ ನಾಯಕರು ಅನಿವಾರ್ಯವಾಗಿ ರಾಷ್ಟ್ರೀಯ ಪಕ್ಷಗಳ ಶಕ್ಯವನ್ನು ಬೆಳೆಸಿಕೊಳ್ಳುವಂತಾಗಿದೆ. ಇವತ್ತು ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಇದು ಮುಂದಿನ 2029ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಹಾಗೆಯೇ ಕಾಂಗ್ರೆಸ್ ಗೂ ಬಹುದೊಡ್ಡ ಪಾಠವಾಗಲಿದೆ

ಕಾಂಗ್ರೆಸ್ ಗೆ ಕೇರಳದಲ್ಲಿ ಮಾತ್ರ ಅಧಿಕಾರ ಹಿಡಿಯುವ ಅವಕಾಶಗಳಿವೆ. ಆದರೆ ಅದನ್ನು ಕಾಂಗ್ರೆಸ್ ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತಿದೆ ಎನ್ನುವುದು ಗೊತ್ತಿಲ್ಲ. ಏಕೆಂದರೆ ಅಲ್ಲಿ ಆಡಳಿತದಲ್ಲಿರುವ ಎಡಪಕ್ಷ ಕಾಂಗ್ರೆಸ್ ನ ಮಿತ್ರ ಪಕ್ಷವೇ ಆದರೂ ಅದರೊಂದಿಗೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಗೆ ಹೊಂದಾಣಿಕೆ ಎಂಬ ತ್ರಿಶಂಕು ಸ್ಥಿತಿ ಸೃಷ್ಟಿಯಾಗಿದ್ದು, ಇದುವೇ ಕಾಂಗ್ರೆಸ್ ಗೆ ಬಹುದೊಡ್ಡ ಹೊಡೆತ ನೀಡುತ್ತಿದೆ.  ಲೋಕಸಭಾ ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ನರೇಂದ್ರಮೋದಿಯನ್ನು ವಿರೋಧಿಸುವ ಎಲ್ಲ ಪಕ್ಷಗಳ ನಾಯಕರನ್ನು ಎಳೆದುಕೊಂಡು ಗುಡ್ಡೆ ಹಾಕಿಕೊಳ್ಳುತ್ತದೆ. ಇವರೆಲ್ಲರೂ ನಮ್ಮ ಮಿತ್ರರು. ನಮ್ಮದೇನಿದ್ದರೂ ಬಿಜೆಪಿಯನ್ನು ಸೋಲಿಸುವುದು ಗುರಿ ಎಂಬಂತೆ ಫೋಸ್ ನೀಡುತ್ತಾರೆ.

ಇವರ ಮೈತ್ರಿಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಇರುತ್ತದೆ. ಆ ನಂತರ ಅವರ ಒಗ್ಗಟ್ಟು ಪ್ರದರ್ಶನ ಕಾಣಿಸುವುದೇ ಇಲ್ಲ. ಅಷ್ಟೇ ಅಲ್ಲದೆ ಸ್ಥಳೀಯ ಮಟ್ಟದ ಚುನಾವಣೆಗಳು ಬಂದಾಗ ಮತ್ತೆ ವಿರೋಧಿಗಳಾಗಿ ಬಡಿದಾಡಿಕೊಳ್ಳಲು ಆರಂಭಿಸುತ್ತಾರೆ. ಕಾಂಗ್ರೆಸ್ ನ ಈ ಅನುಕೂಲ ಸಿಂಧು ಧೋರಣೆಯೇ  ಪ್ರಾದೇಶಿಕ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಅವರಿಂದ ದೂರ ಇರುವಂತೆ ಮಾಡುತ್ತಿದೆ. ಅದರ ಪರಿಣಾಮಗಳು ಚುನಾವಣೆಗಳಲ್ಲಿ ಸೋಲು ಕಾಣುವಂತಾಗುತ್ತಿದೆ.

2024ರ ಚುನಾವಣೆ ವೇಳೆ ಎನ್ ಡಿಎ ವಿರುದ್ಧ ಸಮರ ಸಾರಲು ಕಾಂಗ್ರೆಸ್ ನೇತೃತ್ವದಲ್ಲಿ ಕಟ್ಟಿಕೊಂಡಿದ್ದ ಇಂಡಿಕೂಟ ಚುನಾವಣೆ ನಂತರ ಏನಾಯಿತು ಎಂಬುದೇ ಗೊತ್ತಿಲ್ಲ. ಚುನಾವಣೆ ನಂತರ ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶನದ ಮಾತುಗಳನ್ನೇ ಆಡಲಿಲ್ಲ. ಒಂದೆಡೆ ಸೇರಿ ಇಂಡಿಕೂಟ ಅಸ್ತಿತ್ವದಲ್ಲಿದೆ ಎಂದು ಹೇಳುವ ಪ್ರಯತ್ನವನ್ನು ಮಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಇಂಡಿಕೂಟದಲ್ಲಿದ್ದ ಪಕ್ಷದ ನಾಯಕರೇ ವಿರೋಧಿಗಳಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಇನ್ನು ಇಂಡಿಕೂಟವನ್ನು ಒಟ್ಟಾಗಿ ಕೊಂಡೊಯ್ಯುವ ಮತ್ಸದ್ಧಿತನವೂ ಕಾಂಗ್ರೆಸ್ ಗಿಲ್ಲ. ಹೀಗಾಗಿ ಅದು ಪ್ರತಿ ಚುನಾವಣೆ ಬಂದಾಗ ಮಿತ್ರ ಪಕ್ಷಗಳೊಂದಿಗೆ ಹೋರಾಡ ಬೇಕಾದ ಅನಿವಾರ್ಯತೆಗೆ ಒಳಗಾಗುತ್ತದೆ. ಇದು ಬಿಜೆಪಿಗೆ ಲಾಭವಾಗುತ್ತದೆ. ಪಕ್ಷ ಸಂಘಟನೆ ಮಾಡದೆ ಗೆಲುವು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ನ ಬಹುತೇಕ ನಾಯಕರು ಕೇವಲ ನರೇಂದ್ರ ಮೋದಿಯನ್ನು ಟೀಕಿಸಿಕೊಂಡು ಪ್ರಚಾರ ಪಡೆದುಕೊಂಡು ಓಡಾಡುತ್ತಿದ್ದಾರೆ. ಚುನಾವಣೆ ವೇಳೆಯಲ್ಲಿ ಸಾರ್ವಜನಿಕ ಸಭೆ, ರೋಡ್ ಶೋ, ಪತ್ರಿಕಾಗೋಷ್ಠಿ ನಡೆಸಿದರೆ ಮತಗಳು ಬಂದು ಬೀಳುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯೇ ಸೋಲಿಗೆ ಕಾರಣವಾಗುತ್ತಿದೆ.

ಹಾಗೆನೋಡಿದರೆ ಒಂದು ಕಾಲದಲ್ಲಿ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಪತ್ಯವಿತ್ತು. ಹೀಗಾಗಿ ಪಕ್ಷ ಕಟ್ಟುವುದು ಕಾಂಗ್ರೆಸ್ ಗೆ ಕಷ್ಟವಾಗುವುದಿಲ್ಲ. ಆದರೆ ಬಿಜೆಪಿ ಪರಿಸ್ಥಿತಿ ಹಾಗಿಲ್ಲ. ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲ. ಆದರೂ ಚುನಾವಣೆಯಿಂದ ಚುನಾವಣೆಗೆ ಶೇಕಡವಾರು ಮತಗಳನ್ನು ಹೆಚ್ಚು ಮಾಡುತ್ತಾ ಹೋಗುತ್ತಿದೆ. ಮತ ಬೀಳದ ಪ್ರದೇಶಗಳಲ್ಲಿಯೂ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇದರ ಲಾಭ ಇವತ್ತಿಗೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಮುಂದೆ ಪ್ರಯೋಜನಕ್ಕೆ ಬರುತ್ತದೆ ಎಂಬುದು ಅವರಿಗೆ ಗೊತ್ತಿದೆ.

ಕಾಂಗ್ರೆಸ್ ನಾಯಕರು ಮತ ತಂದು ಕೊಡುವ ಕ್ಷೇತ್ರಗಳತ್ತ ಮಾತ್ರ ಫೋಕಸ್ ಮಾಡುತ್ತಿದ್ದಾರೆ. ಉಳಿದಂತೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ಪರಿಣಾಮಗಳು ವಿಧಾನಸಭಾ ಚುನಾವಣೆಗಿಂತ ಹೆಚ್ಚಾಗಿ ಲೋಕಸಭಾ ಚುನಾವಣೆ ಮೇಲೆ ಬೀರುತ್ತದೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಸ್ಥಳೀಯವಾಗಿ ಪಕ್ಷ ಸಂಘಟನೆ ಆಗದೆ ಹೋದರೆ ಕೇಂದ್ರದಿಂದ ಯಾವ ನಾಯಕ ಬಂದು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅರಿಯಬೇಕಾಗಿದೆ.

ಇವತ್ತು ಪಂಚರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ಅತಿ ಹೆಚ್ಚು ಗಮನಸೆಳೆಯುತ್ತಿದ್ದು, ಇಡೀ ದೇಶದ ಜನ ಅತ್ತ ಮುಖ ಮಾಡಿ ಕುತೂಹಲದಿಂದ ಅಲ್ಲಿನ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಅಲ್ಲಿನ ರಾಜಕೀಯ ಬೆಳವಣಿಗೆಗಳು ಕೇವಲ ವಿಧಾನಸಭಾ ಚುನಾವಣೆಗಷ್ಟೆ ಸೀಮಿತವಾಗಲ್ಲ ಅದು ಮುಂದಿನ ಲೋಕಸಭಾ ಚುನಾವಣೆಗೂ ಮುಂದುವರೆಯಲಿದೆ. ಹೀಗಾಗಿ ಬಿಜೆಪಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ.

ಬಿಜೆಪಿ ವಿರುದ್ಧ ಹೋರಾಡ ಬೇಕಾದ ಕಾಂಗ್ರೆಸ್ ನ ನಾಯಕರ ವೀರಾವೇಶ ದೊಡ್ಡ ಮಟ್ಟದಲ್ಲಿ ಕಾಣಿಸುತ್ತಿಲ್ಲ. ನಮ್ಮದೇ ಮತಬ್ಯಾಂಕ್ ಇದ್ದು ಅವರು ಮತಹಾಕಿದರೆ ನಾವು ಗೆದ್ದುಬಿಡುತ್ತೇವೆ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದ್ದಂತೆ ಕಾಣುತ್ತಿದೆ. ಆದರೆ ಅದು ಎಷ್ಟರ ಮಟ್ಟಿಗೆ ಲಾಭವಾಗುತ್ತೆ ಎಂಬುದು ಗೊತ್ತಿಲ್ಲ. ಸದ್ಯದ ಪಂಚರಾಜ್ಯಗಳ ಚುನಾವಣೆಯನ್ನು ಗಮನಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮಾತ್ರವಲ್ಲದೆ, ಈಗ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೂ ಪ್ರತಿಷ್ಠೆಯಾಗಿರುವುದಂತು ನಿಜ.. ಮುಂದೇನು ಕಾದು ನೋಡೋಣ…

B M Lavakumar

admin
the authoradmin

Leave a Reply

Translate to any language you want