ArticlesLatestLife styleMysore

ಡಾ. ಸರ್ತಾಜ್ ಪಿ.ಹೆಚ್…. ಸಾಧನೆಯ ಶಿಖರದ ಕಡೆಗೆ ಚಾರಣ… ಇಲ್ಲಿವೆ ದಾಖಲೆಯ ಹೆಜ್ಜೆಗುರುತುಗಳು!

ಇದು ಸಾಧನೆಯ ಯಶೋಗಾಥೆ…

ವೃತ್ತಿ ಕ್ಷೇತ್ರದಲ್ಲಿ ಪಠ್ಯದ ಜತೆಗೆ ಸದಾ ಹೊಸ ವಿಚಾರಗಳ ಅಧ್ಯಯನ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದು ಮಾತ್ರವಲ್ಲದೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಉಪನ್ಯಾಸ, ಬರವಣಿಗೆಯ ಮೂಲಕ ಸಮಾಜಕ್ಕೆ ನೀಡುತ್ತಾ ಸದಾ ಕ್ರಿಯಾಶೀಲರಾಗಿರುವವರ ಸಾಲಿನಲ್ಲಿ   ಹುಣಸೂರು ಸರ್ಕಾರಿ ಮಹಿಳಾ ಕಾಲೇಜು ಹಿಂದಿ ವಿಭಾಗಮುಖ್ಯಸ್ಥರಾದ ಡಾ. ಸರ್ತಾಜ್ ಪಿ.ಹೆಚ್. ಒಬ್ಬರಾಗಿ ನಿಲ್ಲುತ್ತಾರೆ. ಅವರ ಸಾಧನೆಯ ಪುಟಗಳನ್ನೊಮ್ಮೆ ತಿರುವುತ್ತಾ ಹೋದರೆ ವೃತ್ತಿ ಬದುಕಿನ ಜತೆಗೆ ಸಾಹಿತ್ಯ, ಸಾಮಾಜಿಕ, ಶಿಕ್ಷಣ ಕ್ಷೇತ್ರಗಳಲ್ಲಿ ಛಾಪು ಮೂಡಿಸಿ ಹಲವು ಸನ್ಮಾನ, ಗೌರವಗಳೊಂದಿಗೆ  ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡು ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶಕ್ಕೆ ಹೆಮ್ಮೆ ತಂದಿರುವುದು ಎದ್ದು ಕಾಣಿಸುತ್ತದೆ.

ಅಧ್ಯಯನ ಮತ್ತು ಬರವಣಿಗೆ ಇದೆರಡರಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡಿದ್ದೇ ಆದರೆ.. ಮುಂದಕ್ಕೆ ಅವು  ನಮ್ಮನ್ನು ಒಂದೊಳ್ಳೆಯ ದಿಕ್ಕಿನೆಡೆಗೆ ಕರೆದೊಯ್ಯುತ್ತವೆ ಎನ್ನುವುದು  ತಿಳಿದವರಾಡಿದ ಮಾತು… ಹಾಗೆಯೇ  ವೃತ್ತಿ ಜೀವನದಾಚೆಗೂ ಬದುಕಿನಲ್ಲಿ ಸದಾ ಏನಾದರೊಂದು ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿರುವ ಡಾ. ಸರ್ತಾಜ್ ಅವರು ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕಗಳ ಮೂಲಕ  ಸಮಯದೊಂದಿಗೆ ಹೆಜ್ಜೆಹಾಕುತ್ತಿದ್ದಾರೆ..  ಇದರ ಅರಿವು ನಮಗಾಗ ಬೇಕಾದರೆ ನಾವು ಅವರ  ಸಾಧನೆಗಳ ಪಟ್ಟಿಯನ್ನೊಮ್ಮೆ ಓದಬೇಕಾಗುತ್ತದೆ… ಇದೀಗ ಅವರ ಹೆಸರು ಯುನಿಕ್ ವರ್ಲ್ಡ್ ರೆಕಾರ್ಡ್ಸ್ (Unique World Records)  ನಲ್ಲಿ ಸೇರಿರುವುದು ಅವರ ಸಾಧನೆಯ ವೇಗವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಇವತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಾ ಮುನ್ನೆಡೆಯುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಹಿಂದಿ ವಿಭಾಗದಲ್ಲಿ ಡಾ. ಸರ್ತಾಜ್ ಅವರ ಸಾಧನೆ ಮಾದರಿಯಾಗಿದೆ. ವೃತ್ತಿಗಷ್ಟೇ ಸೀಮಿತರಾಗದೆ ಸದಾ ಚಲನಶೀಲರಾಗಿರುವ ಅವರು ಬರವಣಿಗೆಯನ್ನು ಉಸಿರಾಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅವರ ಲೇಖನಗಳೇ ಸಾಕ್ಷಿಯಾಗಿವೆ..

ಇನ್ನು ಡಾ. ಸರ್ತಾಜ್ ರವರ ಬಾಲ್ಯ, ಶಿಕ್ಷಣ, ವೃತ್ತಿ ಮತ್ತು ಅದರಾಚೆಗಿನ ಚಟುವಟಿಕೆಗಳನ್ನು ನೋಡುವುದಾದರೆ ಪಿರಿಯಾಪಟ್ಟಣದ ನಿವಾಸಿ ಹುಸೈನೀ ಬೇಗಂ ಮತ್ತು ಮೀರ್  ಹಾಜತ್ ಆಲಿ ದಂಪತಿ ಪುತ್ರಿಯಾಗಿ ಜನಿಸಿದ ಅವರು MA, B.ed, M.Phil, Ph.D, PG- Diploma In Translation. ನ್ನು ಪೂರೈಸಿದ್ದಾರೆ.

1995ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್, ಈ ಸಂಸ್ಥೆಯ ಹಿಂದಿ ಪ್ರಚಾರಕರಾಗಿ ಕಳೆದ 20 ವರ್ಷಗಳಿಂದ ಹಿಂದಿ ಪ್ರಚಾರ ಮತ್ತು ಪ್ರಸಾರ ಮಾಡುವುದರೊಂದಿಗೆ  2005 ರಿಂದ ದಕ್ಷಿಣ ಭಾರತ ಹಿಂದಿ   ಪ್ರಚಾರ ಸಭಾ ಅಧೀನದಲ್ಲಿ ನಡೆಸುತ್ತಿರುವ “ನ್ಯಾಷನಲ್ ಹಿಂದಿ ಮಹಾವಿದ್ಯಾಲಯ” ಇದರ ಪ್ರಾಂಶುಪಾಲರಾಗಿ ಹತ್ತು ವರ್ಷಗಳಲ್ಲಿ ತಮ್ಮ ವಿದ್ಯಾಲಯದ ಮೂಲಕ 15000 ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆಯೊಂದಿಗೆ ನೂರಾರು ವಿದ್ಯಾರ್ಥಿಗಳು MA, B.ed, M.Phil ಪದವಿ ಪಡೆದು ತಮ್ಮ ಜೀವನ ರೂಪಿಸಿಕೊಂಡಿರುತ್ತಾರೆ.

ಸದ್ಯ ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸಾಹಿತ್ಯದ ಅಭಿರುಚಿ ಮೂಡಲು ಕಾರಣವಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ಸ್ಥಳೀಯ ಸಾಪ್ತಾಹಿಕ  “ದಾರಿದೀಪ” ಪತ್ರಿಕೆಯ ಸಂಪಾದಕರಾದಂತಹ ದಿವಂಗತ ಕಂಪ್ಲಾಪುರ ಮೋಹನ್ ರವರ ನೇತೃತ್ವದಲ್ಲಿ ಜನವರಿ 2000 ದಲ್ಲಿ ಪ್ರಾರಂಭವಾದ “ಮನೆ ಮನೆ ಕವಿಗೋಷ್ಠಿ”.

ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಪ್ರತಿ ತಿಂಗಳು ಒಬ್ಬೊಬ್ಬರ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗೆ ಅವರು ತಪ್ಪದೆ ಪಾಲ್ಗೊಳ್ಳುತ್ತಿದ್ದರು. ಹೀಗೆ  150ಕ್ಕೂ ಅಧಿಕ ಕವಿಗೋಷ್ಠಿ ಗಳನ್ನು ಕಂಡಂತಹ ಈ ಕವಿಗೋಷ್ಠಿ ಬಳಗದ ಒಡನಾಟದಿಂದ ಉತ್ತಮ ಕವಿಗಳು, ಸಾಹಿತಿಗಳು ವಿಮರ್ಶಕರು, ಉನ್ನತ ಅಧಿಕಾರಿಗಳು, ಹೀಗೆ ನೂರಾರು ಪ್ರತಿಭಾನ್ವಿತ ವ್ಯಕ್ತಿಗಳ ಪ್ರೇರಣೆ ಸಾಹಿತ್ಯದ ಕಡೆಗೆ ಸೆಳೆಯಿತು. ಹೀಗಾಗಿ ಕವನಗಳನ್ನು ರಚಿಸುವುದರೊಂದಿಗೆ ವೇದಿಕೆಯನ್ನೇರುವ ಧೈರ್ಯ, ಸಾಮರ್ಥ್ಯ ಅವರಲ್ಲಿ ಬೆಳೆಯಿತು. ಇದು ಇವತ್ತು ಅವರು ಕಥೆ ಕವನ ಸೇರಿದಂತೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಾರಣವಾಯಿತು ಎಂದರೆ ತಪ್ಪಾಗಲಾರದು.

ಪತಿ ಮೊಹಮ್ಮದ್ ಶಫಿ ವುಲ್ಲಾ. M.com, MBA. ಉಪನ್ಯಾಸಕರು ಅವರು ಇವರ ಸಾಧನೆಗೆ ಬೆಂಬಲವಾಗಿ ನಿಂತಿದ್ದು ಸದಾ ಕಾರ್ಯಪ್ರವೃತ್ತರಾಗಿರಲು ಸಾಧ್ಯವಾಗಿದೆ. ವೃತ್ತಿ ಮತ್ತು ಕುಟುಂಬದಾಚೆಗೆ ಮಾಡಿರುವ ಸಾಧನೆಗಳನ್ನು ನೋಡುವುದಾದರೆ. ಸೃಜನಾತ್ಮಕ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು  ಸುಮಾರು 23ಕ್ಕೂ ಹೆಚ್ಚು ಲೇಖನಗಳು ಅಂತರಾಷ್ಟ್ರೀಯ  ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇದುವರೆಗೆ 100ಕ್ಕೂ  ಅಧಿಕ ಕನ್ನಡ ಮತ್ತು ಹಿಂದಿ ಕವಿತೆ, ಕಥೆ, ಲೇಖನಗಳನ್ನು ಬರೆದಿದ್ದಾರೆ. ಹಿಂದಿ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.ಅಕ್ಕಮಹಾದೇವಿ, ಬಸವಣ್ಣನವರ ಲೇಖನಗಳನ್ನು ಹಿಂದಿ ಭಾಷೆಗೆ ಅನುವಾದಿಸಿರುವುದು ಗಮನಾರ್ಹವಾಗಿದೆ.

ಇವರ ಅನೇಕ ಕಥೆ, ಕವನ, ಲೇಖನಗಳು ಸಕ್ರಿಯವಾಗಿ ‘ಅಂತರಾಷ್ಟ್ರೀಯ ಸಾಹಿತ್ಯ ಅರ್ಪಣ್ ’UAE ದುಬೈ ನಲ್ಲಿ ಪ್ರಕಟ ಗೊಳ್ಳುತ್ತಿವೆ. ಅನೇಕ ಕಥೆ, ಕವನ, ಲೇಖನಗಳು ಸಕ್ರಿಯವಾಗಿ ಹಿಂದಿ ತ್ರೈಮಾಸಿಕ ಪತ್ರಿಕೆ “ಹಿಂದಿ ಕಿ ಗುಂಜ್” ಪತ್ರಿಕೆಯಲ್ಲಿ  ಟೋಕಿಯೋ, ಜಪಾನ್ ನಿಂದ ಪ್ರಕಟಗೊಳ್ಳುತ್ತಿವೆ. ಹಲವು ಲೇಖನಗಳು ಸಕ್ರಿಯವಾಗಿ “ಸಾರಾ ಸಚ್” ಡಿಜಿಟಲ್ ಪ್ರಿಂಟ್ ಮೀಡಿಯಾ, ದೆಹಲಿ ಪ್ರಕಟಗೊಳ್ಳುತ್ತಿವೆ. ಇವರ ಶೋಧ ಲೇಖನ ಅತಿಥಿ ಗುಪ್ತ: ಕಾಮಿಕ್ಸ್ ಮೆನ್ಸ್ಟ್ರೋಪಿಡಿಯಾ’   Agrani: The Women Entrepreneur,  UNIQUE  WORLD RECORD  ನಲ್ಲಿ ಪ್ರಕಟಗೊಂಡಿದೆ.

ಬರವಣಿಗೆಯಾಚೆಗೆ ಉಪನ್ಯಾಸ, ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, 40ಕ್ಕೂ ಅಧಿಕ ಆನ್ಲೈನ್ ಸೆಮಿನಾರ್/ ವೆಬಿನಾರ್,  20ಕ್ಕೂ ಹೆಚ್ಚು ಅಧ್ಯಯನ ಗೋಷ್ಠಿ, ಕಾರ್ಯಾಗಾರ, ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.  ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ 23ಕ್ಕೂ ಅಧಿಕ ಶೋಧ ಪತ್ರಗಳ ಪ್ರಕಟಣೆ, ವಿಶೇಷ ಉಪನ್ಯಾಸಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ (Resource  Person) ಭಾಗವಹಿಸಿ ಗಮನಸೆಳೆದಿದ್ದಾರೆ.

ಮಹಿಳಾ ಸಬಲೀಕರಣ, ಪಾಲಕತ್ವ ಮತ್ತು ಮಕ್ಕಳ ಶಿಕ್ಷಣ (Parenting), ಜಾಗತಿಕ ಸಮಾಜದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಸಬಲೀಕರಣ: ಕುಟುಂಬದಿಂದ ರಾಷ್ಟ್ರದವರೆಗೆ, ಸಮಾಜದ ಅಭಿವೃದ್ಧಿಗೆ ಸಾಹಿತ್ಯದ ಕೊಡುಗೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳು, ಹಲವಾರು ಶೈಕ್ಷಣಿಕ ವಿಷಯ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಮತ್ತು ಉಪನ್ಯಾಸ ಕಾರ್ಯಾಗಾರ, ಪ್ರೌಢಶಾಲಾ ಶಿಕ್ಷಕರಿಗೆ ಪಠ್ಯ ಸಂಬಂಧ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ, ಆಲ್ ಇಂಡಿಯಾ ರೇಡಿಯೋ ಆಕಾಶವಾಣಿ ಮೈಸೂರು, ರೇಡಿಯೋ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಲವು ಸದಸ್ಯತ್ವವನ್ನು ಹೊಂದಿದ್ದು, 1995 ರಿಂದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್, ಹಿಂದಿ ಪ್ರಚಾರಕರಾಗಿ, 1994 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿ, ”ಹಿಂದಿ ಕಿ ಗುಂಜ್” ತ್ರೈಮಾಸಿಕ ಪತ್ರಿಕೆ ಜಪಾನ್ ದೇಶದ ಟೋಕಿಯೊ ದಿಂದ ಹೊರಡುವ ಪತ್ರಿಕೆಯ ಸದಸ್ಯರಾಗಿ, “ಅಂತರಾಷ್ಟ್ರೀಯ ಸಾಹಿತ್ಯ ಅರ್ಪಣ” ದುಬೈ,  “ಶಬ್ದ ಪ್ರತಿಭಾ ಫೌಂಡೇಶನ್” ನೇಪಾಳ, ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಸಂಸ್ಥೆ “ರೋಟರಿ ಮಿಡ್ ಟೌನ್” ಪಿರಿಯಾಪಟ್ಟಣ ಇವರ ಪ್ರಾಯೋಜಕ ಸಂಸ್ಥೆಯಾದ “ ರೊಟ್ರಾಕ್ಟ್ ಕ್ಲಬ್ “   ಪಿರಿಯಾಪಟ್ಟಣ ಇಲ್ಲಿ 1992 ರಲ್ಲಿ ಸಂಸ್ಥೆಯ ಸದಸ್ಯತ್ವ ಪಡೆದು 15 ವರ್ಷಗಳಲ್ಲಿ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಜಂಟಿ ಕಾರ್ಯದರ್ಶಿ, ರೋಟ್ರಾಕ್ಟ್ ಜಿಲ್ಲಾ ಪತ್ರಿಕಾ ಸಂಪಾದಕಗಳಾಗಿ, ಹಲವಾರು ಸ್ಥಾನಗಳನ್ನ ನಿರ್ವಹಿಸುತ್ತಾ ತಮ್ಮ ಸ್ವ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗಾಗಿ ಸೇವೆ ಮಾಡುವ ಅವಕಾಶ ಪಡೆದು ಕೊಂಡು ಸಂಸ್ಥೆಯ ಸದಸ್ಯರಾಗಿ  Pulse polio program, Eye camp, blood donation camp ,veterinary camp , shuttle badminton tournament, Tree planting, Charity shows, youth Mela for college students, quiz competition, self employment program for womens, motivational speeches for student’s, ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಥೆ, ಕವನ ಮಾತ್ರವಲ್ಲದೆ, ಸದಾ ಏನಾದರೊಂದು ವಿಷಯದ ಬಗ್ಗೆ ಬರೆಯುತ್ತಲೇ ಬಂದಿರುವ ಡಾ. ಸರ್ತಾಜ್ ಅವರ ಬರವಣಿಗೆಯನ್ನು ಹುಡುಕಿಕೊಂಡು .”ಗಿನಾ ದೇವಿ” ಹಿಂದಿ ಗೌರವ ಸಮ್ನಾನ್, .”ಗುಗನ್ ರಾಮ್” ಸಮಾಜ ರತ್ನ ಸಮ್ಮಾನ್, ”ಮಹಾದೇವಿ ವರ್ಮಾ” ಸಮ್ಮಾನ್, .”ಡಾ. ಭೀಮರಾವ್ ಅಂಬೇಡ್ಕರ್” ರಾಷ್ಟ್ರೀಯ ಗೌರವದ ಸಮ್ಮಾನ್, ” ರಾಜ್ ಮಾತಾ ಜೀಜಾಬಾಯಿ” ಸಮ್ಮಾನ್,  ”ಗುರುದೇವ್ ರವೀಂದ್ರನಾಥ್ ಟ್ಯಾಗೋರ್ ಸ್ಮೃತಿ” ಸಾಮ್ಮಾನ್, ”ಗುರು ರೀಸರ್ಚ್ ಎಕ್ಸಲೆನ್ಸ್ ಅವಾರ್ಡ್, ”ಗುರು ರತ್ನ” ಸಮ್ಮಾನ್, ”ಡಾ. ಸರ್ವಪಲ್ಲಿ ರಾಧಾಕೃಷ್ಣನ್” ಶಿಕ್ಷಾ ಸಮ್ಮಾನ್, ”ರಾಷ್ಟ್ರೀಯ ನವೊನ್ಮೇಶಿ” ಸಮ್ಮಾನ್

”ಮಹಾತ್ಮ ಗಾಂಧಿ ಶಾಂತಿ ರತ್ನ” ಸಮ್ಮಾನ್, ”ಸ್ವಾಮಿ ವಿವೇಕಾನಂದ ಸ್ಮೃತಿ” ಸಮ್ಮಾನ್, “ಸ್ವರ್ಣ ಆಬಾ ಸಾಹಿತ್ಯ ಸಮ್ಮಾನ್”- 2024,  ಅಂತರಾಷ್ಟ್ರೀಯ ಸಾಹಿತ್ಯ ಅರ್ಪಣ್ ದುಬೈ,  ಯು ಎ ಇ,  “ಸಾಹಿತ್ಯ ಶಿರೋಮಣಿ” ಸಮ್ಮಾನ್ (Ministry of MSME Government of India),  “ಸೋಶಿಯಲ್ ಪ್ರೈಡ್ ಅವಾರ್ಡ್”(Golden Era Book of World Records), ” ಲಾಲ್ ಬಹದ್ದೂರ್ ಶಾಸ್ತ್ರ “ಸ್ಮೃತಿ ಸಮ್ಮಾನ್, ”ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವಾರ್ಡ್” (Ministry of MSME Government of India), ”ಜಪಾನಿ ಹಿಂದಿ ಸೇವಿ ಸಮ್ಮಾನ್” (From Japan, Tokeyo), ” ಜಪಾನಿ ಹಿಂದಿ ಸೇವಿ ಸನ್ಮಾನ “ ಹಿಂದಿ ಕೀ ಗುಂಜ್, ಜಪಾನ್, ಟೋಕಿಯೋ ಸನ್ಮಾನಗಳು ಬಂದಿವೆ.

ಇಷ್ಟೇ ಅಲ್ಲದೆ, 76ನೇ ಗಣರಾಜ್ಯೋತ್ಸವ ದಿನದಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪಿರಿಯಾಪಟ್ಟಣ ಮತ್ತು ತಾಲೂಕು ಆಡಳಿತ ವತಿಯಿಂದ ಸನ್ಮಾನ. “ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್” ಜೈಪುರ, ರಾಜಸ್ಥಾನ್ , .”ಹಿಂದಿ ಕಿ ಕಲಂ ಕೆ ಸೇನಾನಿ ಸಾಮಾನ್” ಟೋಕಿಯೋ, ಜಪಾನ್, ”ಮಾತೃಭಾಷಾ ರತ್ನ” ಗೌರವ ಪ್ರಶಸ್ತಿ, ‘ಫೆಬ್ರವರಿ 21 ರಂದು    ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಸಂದರ್ಭದಲ್ಲಿ, ಮಾತೃಭಾಷಾ ಸೇವೆಗಾಗಿ  “ಶಬ್ದ ಪ್ರತಿಭಾ ಮಲ್ಟಿ-ಸೆಕ್ಟೋರಲ್ ಆನರ್ ಫೌಂಡೇಶನ್” ನೇಪಾಳ,  ಅಂತರಾಷ್ಟ್ರೀಯ ಹಿಂದಿ ಗೌರವ  ಸಮ್ಮಾನ್-2026 “Internation Sahitya Arpan Emirate of Dubai ಮೊದಲಾದ ಪ್ರಶಸ್ತಿ, ಗೌರವ ಸನ್ಮಾನಗಳು ಇವರಿಗೆ ದೊರೆತಿವೆ.

ಇದೆಲ್ಲದರ ನಡುವೆ ಯುನಿಕ್ ವರ್ಲ್ಡ್ ರೆಕಾರ್ಡ್ಸ್ ಬಗ್ಗೆ ಒಂದಿಷ್ಟು ಹೇಳಬೇಕಾಗುತ್ತದೆ.. ಅಗ್ರಿಣಿ : ದಿ ವುಮೆನ್ ಎಂಟರ್‌ಪ್ರೆನ್ಯೂರ್” ( AGRANI :The Women Enteraprenur) ಸಂಶೋಧನಾ ಆಧಾರಿತ ಲೇಖನಗಳ ಸಂಗ್ರಹವನ್ನು  ದೆಹಲಿಯ ಡಾ. ವಿದುಷಿ ಶರ್ಮ 5 ವಿಶ್ವ ದಾಖಲೆ ಸಾಧಕರು, ಶೈಕ್ಷಣಿಕ ಕೌನ್ಸಿಲರ್- ಇಗ್ನೋ. ಸಂಪಾದಕರಾಗಿ ಮತ್ತು ಗಾಯತ್ರಿ ಪಾಂಡೆ, ಹಾರ್ವರ್ಡ್ ಯೂನಿವರ್ಸಿಟಿ, ಅಮೆರಿಕ ಸಹ-ಸಂಪಾದಕರಾಗಿ ಇವರ     ಸಂಘಟನೆ, ನಿರ್ದೇಶನ, ಸಂಪಾದಕತ್ವದಲ್ಲಿ ಪ್ರಸ್ತುತ ಪಡಿಸಲಾದ ಸಂಶೋಧನಾ ಸಂಗ್ರಹವಾಗಿದೆ.

ಇದು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ  76 ಮಂದಿ ವಿವಿಧ ಲೇಖಕರು ಭಾರತೀಯ ಮಹಿಳಾ ಉದ್ಯಮಿಗಳ ಬಾಲ್ಯ, ಶಿಕ್ಷಣ, ಸಂಘರ್ಷ, ಹೋರಾಟ, ಸಾಧನೆ ಮತ್ತು ನಾಯಕತ್ವದ ಪ್ರಯಾಣಗಳನ್ನು ಪ್ರದರ್ಶಿಸುತ್ತದೆ ಮತ್ತು ಮಹಿಳಾ ಸಬಲೀಕರಣ ಕುರಿತು  ವಿಶಿಷ್ಟ ವಿಶ್ವ ದಾಖಲೆಗಳಲ್ಲಿ ಸೇರಿಸಲಾಗಿದ್ದು ಇದರಲ್ಲಿ ಡಾ.ಸರ್ತಾಜ್ ಪಿ.ಹೆಚ್. ಅವರ ಶೋಧ ಲೇಖನ  ಸೇರಿದೆ. ಇದೀಗ  ‘ಕಾಮಿಕ್ಸ್ ಮೆನ್ಸ್ಟ್ರೋಪಿಡಿಯಾ’  ಈ ಸಂಸ್ಥೆಯ ಮುಖ್ಯಸ್ಥೆ ಅಧಿತಿ ಗುಪ್ತ, ಮಹಿಳಾ ಉದ್ಯಮಿಯ ಬಗ್ಗೆ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಪ್ರಮಾಣಿಕರಿಸಿ, (Unique World Records) ಯುನಿಕ್ ವರ್ಲ್ಡ್ ರೆಕಾರ್ಡ್ಸ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ – ಎರಡು  ಪ್ರಶಸ್ತಿ ,ಟ್ರೋಫಿ, ಮೆಡಲ್, ನೀಡಿ ಗೌರವಿಸಿದ್ದಾರೆ.

ಒಟ್ಟಾರೆ ವೃತ್ತಿಯ ಜತೆಗೆ ಸಾಹಿತಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ, ಶೈಕ್ಷಣಿಕ ಕಾರ್ಯಾಗಾರ, ತರಬೇತಿ ಸಭೆಗಳಲ್ಲಿ ಭಾಗವಹಿಸುತ್ತಾ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿರುವ ಡಾ. ಸರ್ತಾಜ್  ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎನ್ನುವುದೇ ಜನಮನಕನ್ನಡ ದ ಆಶಯವಾಗಿದೆ…

B M Lavakumar

ಇದನ್ನೂ ಓದಿ: ಪೋಷಕರೇ ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಯೋಚಿಸಿ… ಮಕ್ಕಳಿಗೆ ಎದುರಾಗಿದೆ ಆಟಿಸಂನ ಅಪಾಯ..!

ಇದನ್ನೂ ಓದಿ….. ವೃತ್ತಿ, ಸಾಹಿತ್ಯ, ಸಾಮಾಜಿಕ ಸೇವೆಯಿಂದ ‘ಗೌರವದ ಸನ್ಮಾನ’ ಪಡೆದ ಡಾ.ಪೂರ್ಣಿಮಾ

 

 

 

 

 

 

 

admin
the authoradmin

2 Comments

Leave a Reply

Translate to any language you want