ಬೆಂಗಳೂರು: ವಾಸ್ತು ಜ್ಯೋತಿಷ್ಯ ಹೆಸರಲ್ಲಿ ಇತ್ತೀಚೆಗೆ ದೋಖಾಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳೆಯರ ದೌರ್ಬಲ್ಯಗಳನ್ನು ಬಳಸಿಕೊಂಡು ಅವರನ್ನು ಸರ್ವ ರೀತಿಯಲ್ಲಿ ವಂಚಿಸುವವರಿಗೇನು ಕೊರತೆಯಿಲ್ಲ… ಇದರ ಜತೆಗೆ ಲೈಂಗಿಕ ದೌರ್ಜನ್ಯದ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುವವರು ಇಲ್ಲದಿಲ್ಲ ಹೀಗಾಗಿ ಇದೊಂದು ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ.
ಇಲ್ಲಿ ಗುರೂಜಿ ವಿರುದ್ಧ ಗರ್ಭಿಣಿ ಲೈಂಗಿಕ ದೌರ್ಜನ್ಯದ ದೂರು ನೀಡಿದರೆ, ಗುರೂಜಿ ಆಕೆಯೇ ಬಟ್ಟೆ ಬಿಚ್ಚಿಕೊಂಡು ಹಣದ ಬೇಡಿಕೆಯಿಟ್ಟು ಅದನ್ನು ಕೊಡದಿದ್ದಾಗ ದೂರು ನೀಡಿದ್ದಾರೆಂದು ಪ್ರತಿ ದೂರು ನೀಡಿದ್ದಾರೆ. ಇದೊಂದು ಪ್ರಕರಣ ಅಚ್ಚರಿ ಮೂಡಿಸಿದ್ದು ಪೊಲೀಸರು ಎರಡು ಕಡೆಯ ದೂರು ಪಡೆದು ತನಿಖೆ ಆರಂಭಿಸಿದ್ದಾರೆ.
ಇಷ್ಟಕ್ಕೂ ಎರಡು ಕಡೆಯಿಂದ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಏನಿದೆ ಎಂದು ನೋಡುತ್ತಾ ಹೋದರೆ ಗರ್ಭಿಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಮ್ಮ ವಾಸದ ಮನೆಯ ವಾಸ್ತು ವಿಚಾರಿಸಲು ವಿಜಯನಗರದ `ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ಗೆ ಏಪ್ರಿಲ್ .4ರಂದು ತೆರಳಿದ್ದು ಅಲ್ಲಿನ ಗುರೂಜಿ ಶಾಂತಕುಮಾರ್ ವಾಸ್ತು ಹೇಳುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದು, ಈ ವೇಳೆ ಆತನ ಪತ್ನಿ ಸಿಬ್ಬಂದಿ ಇದ್ದರು. ಅವರ ಅನುಚಿತ ವರ್ತನೆಯನ್ನು ಪ್ರಶ್ನಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಸ್ತು ಸಲಹೆ ನೀಡಲು 15 ಸಾವಿರ ರೂ. ನಗದು ಹಣ ಪಡೆದಿದ್ದಾರೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ. ಈ ಬಗ್ಗೆ ಆ ಮಹಿಳೆ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇದರ ಬೆನ್ನಲ್ಲೇ ಗುರೂಜಿ ಶಾಂತಕುಮಾರ್ ಕೂಡ ಪ್ರತಿ ದೂರು ನೀಡಿದ್ದು, ಸಂತ್ರಸ್ತೆ, ಜಮಾಲ್ ಮತ್ತು ಅಮೃತಲಿಂಗಂ ಎಂಬ ಮೂವರು ವ್ಯಕ್ತಿಗಳೊಂದಿಗೆ ತಮ್ಮ ಕಚೇರಿಗೆ ಬಂದು ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹಣ ನೀಡಲು ನಿರಾಕರಿಸಿದಾಗ, ತಮ್ಮ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿದ್ದಾರೆ.
ನನ್ನ ಪತ್ನಿ ಬಿಡಿಸಲು ಬಂದಾಗ, ಅವರ ಮೇಲೆಯೂ ಜಮಾಲ್ ಮತ್ತು ಅಮೃತಲಿಂಗಂ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ಆರೋಪಿಗಳು ಸಂಘಟನೆ ಹಾಗೂ ಪೊಲೀಸ್ ಇಲಾಖೆಗೆ ಸೇರಿದವರು ಹಾಗೂ ಮಾಧ್ಯಮದವನು ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಲ್ಲದೆ, ಒಂದು ಲಕ್ಷ ರೂ. ಮೌಲ್ಯದ Samsung S-23 Ultra ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ.
ಅವರು ನನ್ನ ಹಾಗೂ ನನ್ನ ಹೆಂಡತಿಯನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಜಯನಗರದ ಕಡೆಗೆ ಕರೆದೊಯ್ದಿದ್ದಾರೆ. ಆಟೋದಲ್ಲಿ ಹೋಗುವಾಗ ಆಕೆ ತನ್ನ ಬಟ್ಟೆಯನ್ನು ನಾನೇ ಬಿಚ್ಚಿಕೊಂಡು, ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದೆ ಎಂದು ಕೇಸ್ ಹಾಕಿ, ಮಾನ ಕಳೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ದಾರಿಯುದ್ದಕ್ಕೂ ಹಲ್ಲೆ ಮುಂದುವರಿದಾಗ ನಾನು ಕಿರುಚಿಕೊಂಡೆ. ಆಗ ಆಟೋ ನಿಲ್ಲಿಸಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈಗ ಎರಡು ಕಡೆಯಿಂದಲೂ ದೂರನ್ನು ಪಡೆದಿರುವ ಪೊಲೀಸರು ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.








