LatestMysore

ಬಸವಮಾರ್ಗದಲ್ಲಿ ಬಸವ ಜಯಂತಿ ಆಚರಣೆ… ಬಸವಣ್ಣನ ತತ್ವಾದರ್ಶ ಮನನ

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಷನ್‌ನಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಈ ವೇಳೆ ಬಸವಣ್ಣನ ತತ್ವಾದರ್ಶಗಳನ್ನು ಮನನ ಮಾಡಲಾಯಿತು.

ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು, ಬಸವಣ್ಣನವರು ಜಾತಿ ಪದ್ಧತಿಯನ್ನು ವಿರೋಧಿಸಿ, ಸಮಾನತೆ ಮತ್ತು ಲಿಂಗ ಸಮಾನತೆಗೆ ಒತ್ತು ನೀಡಿದರು. ಕಾಯಕವೇ ಕೈಲಾಸ’ ಎಂಬ ಮಂತ್ರದ ಮೂಲಕ ಕೆಲಸದ ಮಹತ್ವವನ್ನು ಸಾರಿದರು. ಅವರ ವಚನಗಳು ಇಂದಿಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಎಲ್ಲ ವರ್ಗದ ಜನರೂ ಮುಕ್ತವಾಗಿ ಚರ್ಚಿಸುತ್ತಿದ್ದರು ಎಂದು ಹೇಳಿದರು.

ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಅನುಕರಣೀಯ ಮತ್ತು ಪ್ರೇರಣದಾಯಕವಾಗಿದೆ. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಜನರ ಆಡಳಿತದ ಬಗ್ಗೆ ಬಸವಣ್ಣನವರು ಆಲೋಚನೆ ಮಾಡಿದರು. ಆ ಸಂದರ್ಭದಲ್ಲಿಯೇ ಪುರುಷ, ಸ್ತ್ರೀ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಸ್ಥಾನಮಾನಗಳನ್ನು ದೊರಕಿಸಿಕೊಡುವಲ್ಲಿ ಅವರು ಶ್ರಮಿಸಿದರು. ಬಸವಣ್ಣ ಅವರ ಸಂದೇಶಗಳು ಇಂದಿನ ಪೀಳಿಗೆಗೆ ದೊಡ್ಡ ಆಸ್ತಿಯಾಗಿದೆ ಎಂದು ಉಲ್ಲೇಖಿಸಿದರು.

12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಬೀಜಾಂಕುರ ಹಾಕಿದ್ದ ಬಸವಣ್ಣನವರು. ಸರ್ವರ ಸಾಮರಸ್ಯವನ್ನು ಒತ್ತಿ ಹೇಳಿದ್ದರು. ಜೊತೆಗೆ ಎಲ್ಲ ಸಮಾಜಗಳಿಗೆ ಸಮಾನ ಪ್ರಾತಿನಿಧ್ಯ ನೀಡಿ ಅನುಭವ ಮಟ್ಟದಲ್ಲಿ ಕೂರಿಸಿದ್ದರು. ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಬಸವಣ್ಣ ಅವರು ಜನತೆಗೆ ಸಾರಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್, ಅಕ್ಷರ ಫೌಂಡೇಷನ್ ಅಧ್ಯಕ್ಷ ಡಾ.ಸುನೀಲ್, ಸಿಬ್ಬಂದಿ ರಾಘವೇಂದ್ರ, ಸಂಜಯ್ ಗೌಡ, ನಂದೀಶ್ , ಬೇಸಿಗೆ ಶಿಬಿರದ ಮಕ್ಕಳು ಇದ್ದರು.

admin
the authoradmin

Leave a Reply

Translate to any language you want