CrimeLatest

ರೈತರೇ ಹುಷಾರ್.. ಶುರುವಾಗಿದೆ ಯೂರಿಯಾ ಗೊಬ್ಬರದ ಅಕ್ರಮ ಸಂಗ್ರಹ!

ಅಕ್ರಮವಾಗಿ ಸಂಗ್ರಹಿಸಿಟ್ಟ 305 ಯೂರಿಯಾ ಚೀಲಗಳು ಪತ್ತೆ!

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮುಂಗಾರು ಆರಂಭವಾಗುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳು ಆರಂಭವಾಗಲಿದ್ದು, ಯೂರಿಯಾ ಗೊಬ್ಬರದ ಅವಶ್ಯಕತೆ ಇರುವ ಕಾರಣದಿಂದಾಗಿ ಅದನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿಸುವ ಕೃತ್ಯಕ್ಕೆ ಮುಂದಾಗಿದ್ದನ್ನು ಪತ್ತೆ ಹಚ್ಚಿರುವ ಕೃಷಿ ಇಲಾಖೆ ಅಧಿಕಾರಿಗಳು ಸುಮಾರು 305 ಚೀಲಗಳಷ್ಟು ಯೂರಿಯಾ ಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಹುಣಸೂರು ಕೆ.ಆರ್.ನಗರ ಮುಖ್ಯರಸ್ತೆಯ ಗಾವಡಗೆರೆ ಗ್ರಾಮದ ಸಮೀಪ ಗೋಪಾಲರಾವ್ ಕದಂ ಎನ್ನುವವರ ತೋಟದ ಮನೆಯ ಗೋದಾಮಿನಲ್ಲಿ 305 ಚೀಲ ಯೂರಿಯಾ ರಸಗೊಬ್ಬರವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಇಲಾಖೆ  ಅಧಿಕಾರಿಗಳು ಯೂರಿಯಾ ಗೊಬ್ಬರವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಗೋಪಾಲರಾವ್ ಕದಂ ಎನ್ನುವವರ ತೋಟದ ಮನೆಯ ಗೋದಾಮಿನಲ್ಲಿ 45 ಕೆಜಿ ತೂಕದ 100 ಯೂರಿಯಾ ಮೂಟೆಗಳು ಮತ್ತು ಟೆಕ್ನಿಕಲ್ ಗ್ರೇಡ್ ಎಂದು ನಮೂದಿಸಿರುವ 205 ಯೂರಿಯಾ ಚೀಲಗಳು ದೊರೆತಿದ್ದು ಇದನ್ನು ವಶಕ್ಕೆ ಪಡೆಯಲಾಯಿತು. ಕೃಷಿ ಇಲಾಖೆ ಉಪ  ಸಹಾಯಧನದೊಂದಿಗೆ `ವಿತರಿಸಲಾಗುವ ಗೊಬ್ಬರ ಇದಾಗಿದ್ದು, 5.50 ಲಕ್ಷ ರೂ. ಮೌಲ್ಯ ಹೊಂದಿದೆ

ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ. ಮಾರ್ಗದರ್ಶನದಡಿ ಕಾರ್ಯಾಚರಣೆ ನಡೆಸಲಾಗಿದೆ.   ಉಪನಿರ್ದೇಶಕ ಬಿ.ಎನ್.ಧನಂಜಯ್, ಮೈಸೂರು ನಾಗನಹಳ್ಳಿ ಜಾಗೃತಕೋಶ ವಿಭಾಗದ ಅಧಿಕಾರಿಗಳಾದ ಕೆ.ರಾಮಕೃಷ್ಣ, ಎಚ್.ಎನ್.ಮಮತಾ, ಯಾದವ ಬಾಬು ಮತ್ತು ಹುಣಸೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅನಿಲ್ ಕುಮಾರ್  ಅವರು  ವಶಕ್ಕೆ ಪಡೆದರು.

ದಾಳಿ ವೇಳೆ ಆರೋಪಿ ಪರಾರಿಯಾಗಿದ್ದು, ಗೊಬ್ಬರಗಳನ್ನು ವಶಕ್ಕೆ ಪಡೆದಿದ್ದು ಅಕ್ರಮ ದಾಸ್ತಾನು ಮಾಡಿರುವ ವ್ಯಕ್ತಿ ವಿರುದ್ಧ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ನಗರಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಹಾಜರಿದ್ದರು.

admin
the authoradmin

Leave a Reply

Translate to any language you want