ಕಣ್ಣು ಮೂಗು ಬಾಯಿ ಒಟ್ಪಿಗೇ ಅಗಲಿಸಿ ಎರಡೂ ತುಟಿಗಳಿಂದ ಗುರ್…ರ್…ರ್… ಶಬ್ದತರಂಗ ಎಬ್ಬಿಸುತ್ತ ಥೇಟ್ ಮಂಗನಂತೆ ಎದುರಿಗಿದ್ದ ಕೋತಿಯೂ ಸೇರಿದಂತೆ ಹರಳೆಣ್ಣೆ ಮೂತಿಯವರನ್ನೂ ನಗಿಸುತ್ತಿದ್ದ ಹಾಸ್ಯ ಜಲಪಾತ ಎಂ.ಎಸ್.ಉಮೇಶ್ ದೈಹಿಕವಾಗಿ ಇಹಲೋಕ ತೊರೆದು ಪರಲೋಕ ಸೇರಿದರೂ ಸಹ ಆಚಂದ್ರಾರ್ಕ ಅಜರಾಮರ. ಇವರ ಸಿನಿಮಾ ಬದುಕಿನ ಬಗ್ಗೆ ಇಲ್ಲಿ ಬರಹಗಾರ ಕುಮಾರಕವಿ ನಟರಾಜ್ ಅವರು ಹೇಳುತ್ತಾ ಹೋಗಿದ್ದಾರೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯ ವಿಪ್ರ ಕುಟುಂಬದ ಶ್ರೀಮತಿ ನಂಜಮ್ಮ ಮತ್ತು ಶ್ರೀ ಎ.ಎಲ್.ಶ್ರೀಕಂಠಯ್ಯ ದಂಪತಿಯ ಪುತ್ರನಾಗಿ 22.4.1945ರಂದು ಮೈಸೂರಿನಲ್ಲಿ ಜನಿಸಿದ ಉಮೇಶ್ ಬಾಲ್ಯದಿಂದಲೇ ಬಲು ಚೂಟಿ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ ಮತ್ತು ಅಭಿನಯ ಕಲೆಯನ್ನ ಕರಗತ ಮಾಡಿಕೊಂಡಿದ್ದ ಕಿಲಾಡಿಕಿಟ್ಟು. ಈತನ ಸೋದರ ಎಂ.ಎಸ್. ಸತ್ಯ ಕೂಡ ಹಾಸ್ಯನಟನಾಗಿ ನಾಟಕ ಸಿನಿಮ ರಂಗದಲ್ಲಿ ಸೇವೆಮಾಡಿ ಅಕಾಲಮೃತ್ಯುಗೆ ಬಲಿಯಾದರು. ಈ ಜೋಡಿ ಹಾಸ್ಯನಟರು ಹತ್ತಾರು ವರ್ಷ ಚಂದನವನದಲ್ಲಿ ಸಂಚಲನ ಉಂಟುಮಾಡಿದ್ದು ಇತಿಹಾಸ.

1960ರಲ್ಲಿ ಬಿ.ಆರ್.ಪಂತುಲು ನಿರ್ದೇಶಿಸಿ ನಿರ್ಮಿಸಿದ ಮಕ್ಕಳರಾಜ್ಯ ಸಿನಿಮಾ ಮೂಲಕ ಬಾಲಕ ನಟನಾಗಿ ಪಾದಾರ್ಪಣೆ ಮಾಡಿದರು. ಅಂದಿನಿಂದ ಮೊದಲ್ಗೊಂಡು 2025ನೇ ಇಸವಿ ತನಕ ಬಣ್ಣಹಚ್ಚಿಕೊಂಡು ಬೆಳ್ಳಿತೆರೆಯ ಕಲಾ ಸರಸ್ವತಿ ಸೇವೆಗೈದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮತ್ತು 25ಕ್ಕೂ ಹೆಚ್ಚಿನ ಕಿರುತೆರೆ ಧಾರಾವಾಹಿಗಳಲ್ಲಿ ತಮ್ಮ ಜೀವ ಜೀವನದ ಅಂತಿಮ ಕ್ಷಣದವರೆಗೂ ದುಡಿದು ಮಡಿದರು! ಇವರು ನಟಿಸಿದ ಕಟ್ಟಕಡೆಯ ಚಿತ್ರ “ಐಯಾಮ್ ಗಾಡ್” ಇವರ ಅಭಿನಯದ ಅಂತಿಮ ಧಾರಾವಾಹಿ “ರಥಸಪ್ತಮಿ”
“ಪ್ರತಿದಿನವೂ ಕಲಿಯಲು ಶಾಲೆಗೆ ಹೋಗುವ ವಿದ್ಯಾರ್ಥಿಯಂತೆ ನಾನೂ ವಿಧೇಯನಾಗಿ ನಿರ್ದೇಶಕರು ಹೇಳಿಕೊಟ್ಟಂತೆ ಚಾಚೂತಪ್ಪದೆ ಯಾವುದೇ ಪಾತ್ರವಿರಲಿ ಅಚ್ಚುಕಟ್ಟಾಗಿ ಮನಃಪೂರ್ವಕವಾಗಿ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಾದ್ದು ನನ್ನಕರ್ತವ್ಯ. ಆತ್ಮಸಾಕ್ಷಿ ಒಪ್ಪುವಂತೆ ಜೀವನ ನಡೆಸಬೇಕೆಂಬುದೇ ನನ್ನ ಗುರಿ” ಎಂದು ನುಡಿದಂತೆ ನಡೆದ ಈ ಜೋಕರ್ ಕೇವಲ ನಟನೆಯಲ್ಲಿಮಾತ್ರ ಪ್ರವೀಣ ಆಗಿರಲಿಲ್ಲ ಹಾರ್ಮೋನಿಯಂ ಮುಂತಾದ ವಾದ್ಯಸಂಗೀತ ನುಡಿಸುವುದರಲ್ಲೂ, ಹಿನ್ನಲೆಗಾಯನದಲ್ಲೂ, ಪರಿಣಿತರಾಗಿದ್ದರು. ಗುಬ್ಬಿವೀರಣ್ಣ, ಸುಬ್ಬಯ್ಯನಾಯ್ಡು, ಮಾಸ್ಟರ್ ಹಿರಣ್ಣಯ್ಯ ಮುಂತಾದವರ ಕಂಪನಿ ನಾಟಕದ ವಿವಿಧ ಪಾತ್ರಗಳನ್ನ ಭರ್ಜರಿಯಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದರು.

ಇಂತಹ ಪ್ರತಿಭಾವಂತ ಪುಣ್ಯಪುರುಷನಿಗೆ ಕೆಲವು ವರ್ಷಗಳಿಂದ ಕಷ್ಟಕಾರ್ಪಣ್ಯ ಸಾಲು ಸಾಲಾಗಿ ಒದಗಿಬಂದವು. ಆಶ್ರಯದಾತನಾಗಿ ಇಡೀಕುಟುಂಬ ಕಾಪಾಡಲು ಸಿದ್ಧವಿದ್ದ ಮಗನ ಅಕಾಲಿಕ ಮರಣದಿಂದ ಬರಸಿಡಿಲು ಬಡಿದಂತಾಗಿ ಪುತ್ರಶೋಕದ ಜತೆಗೆ ಇತರೆ ಕೌಟುಂಬಿಕ ಕಷ್ಟನಷ್ಟ ಕಾಡಿತು. ತಮ್ಮೊಳಗೇ ನೋವು ಅನುಭವಿಸುತ್ತಿದ್ದರೂ ಹೊರಗಿನ ಪ್ರಪಂಚಕ್ಕೆ ರ್ತೋರ್ಪಡಿಸದೆ ಎಲ್ಲರನ್ನು ನಗಿಸುತ್ತಿದ್ದ ನಿಸ್ವಾರ್ಥ ತ್ಯಾಗಮಯಿ.
ನಾಟಕ ಸಿನಿಮ ಧಾರಾವಾಹಿ ಎಲ್ಲಾರಂಗದಲ್ಲು ಉಮೇಶ್ ಮುಖ ಕಂಡೊಡನೆ ಇಂಗುತಿಂದ ಮಂಗನೂ ಕಿಸಕ್ಕನೆ ಬಾಯ್ತೆರೆದು ಮನಸಾರೆ ನಗುತ್ತಿತ್ತು “ಅಯ್ಯೋ ಇವ್ರೂ ನನ್ನನ್ನ ಅಪಾರ್ಥ ಮಾಡ್ಕಂಬಿಟ್ರಲ್ಲ..”ಇನ್ನೂಮುಂತಾದ ಡೈಲಾಗ್ ಡೆಲಿವರಿ ಕೇಳಿದೊಡನೆ ಅಹ್ಹಹ್ಹಹಾ….ಎಂದು ದವ್ಡೆನೋವು ಬರುವಂಥೆ ನಕ್ಕುನಕ್ಕು ಸುಸ್ತಾಗಿ ಹೋಗುತ್ತಿದ್ದರು. ಡಾ.ರಾಜ್ ಬಾಯಿಂದ ಹಾಸ್ಯಚಿಲುಮೆ ಎಂದು ಹೊಗಳಿಸಿಕೊಂಡಿದ್ದ ಡಾ.ವಿಷ್ಣುರಿಂದ ನಗುವಿಗೇ ಸೈ ಉಮೇಶ್ ಎನಿಸಿಕೊಂಡಿದ್ದ ಕನ್ನಡದ ಚಾರ್ಲಿಚಾಪ್ಲಿನ್ ಚಿತ್ರಾಭಿಮಾನಿಗಳ ಪಾಲಿಗೆ ನಗೆಸಮುದ್ರ ಆಗಿದ್ದರು. ಒಂದೇಒಂದುಸಲ ರಾಜ್ಯ ಪ್ರಶಸ್ತಿ ಗಳಿಸಿದ್ದ ಅಪ್ರತಿಮ ಹಾಸ್ಯನಟ.

ಉಮೇಶ್ ನಟಿಸಿದ ಕೆಲವು ಪ್ರಮುಖ ಸಿನಿಮಾಗಳು : ಭಾಗ್ಯವಂತರು, ಕಿಲಾಡಿಜೋಡಿ, ಅಂತ, ಕಥಾಸಂಗಮ, ನಾಗರಹೊಳೆ, ಗುರುಶಿಷ್ಯರು, ಹಾವಿನಹೆಡೆ, ಪುಟಾಣಿಏಜೆಂಟ್123, ಹಾಲುಜೇನು, ನನ್ನದೇವರು, ಕಾಮನಬಿಲ್ಲು, ಸಿಂಹಘರ್ಜನೆ, ಭಕ್ತಪ್ರಹ್ಲಾದ, ಇಬ್ಬನಿಕರಗಿತು, ಗಂಡುಭೇರುಂಡ, ಬೆಂಕಿಬಿರುಗಾಳಿ, ಮಲಯ ಮಾರುತ, ಶ್ರಾವಣಬಂತು, ಹಾಲುಸಕ್ಕರೆ, ಗಜಪತಿಗರ್ವಭಂಗ, ಅನುಪಮ, ಶೃತಿಸೇರಿದಾಗ ಗೋಲ್‍ಮಾಲ್ ರಾಧಾಕೃಷ್ಣ, ಮುಂತಾದವು ಚಿರಸ್ಮರಣೀಯ ಎಂದೆಂದೂ ಅಜರಾಮರ.
ಇತ್ತೀಚೆಗೆ ಸ್ನಾನದ ಮನೇಲಿ ಜಾರಿಬಿದ್ದ ಕಾರಣ ಆಸ್ಪತ್ರೆ ಸೇರಿ ಪರೀಕ್ಷೆಗೊಳಗಾದ ಇವರಿಗೆ 4ನೇ ಹಂತ ತಲುಪಿದ್ದ ಲಿವರ್ ಕ್ಯಾನ್ಸರ್ ಇತ್ತೆಂದು ಪತ್ತೆಯಾಯ್ತು. ಮಾನಸಿಕವಾಗಿ ದೈಹಿಕವಾಗಿ ಜರ್ಝರಿತ ಸ್ಥಿತಿ ತಲುಪಿದ್ದ ಪ್ರಯುಕ್ತ ಚಿಕಿತ್ಸೆ ಫಲಕಾರಿಯಾಗದೆ ಮಡದಿ ಮತ್ತು ಪುತ್ರಿಯನ್ನ ತೊರೆದು ಎಂ.ಎಸ್.ಉಮೇಶ್ 30 ನವೆಂಬರ್ 2025 ಭಾನುವಾರ ದೈವಾಧೀನರಾದರು. ಬದುಕಿನುದ್ದಕ್ಕು ತಾನು ಮಾತ್ರ ಅಳುತ್ತ ಬದುಕಿದ್ದಷ್ಟು ಕಾಲ ಎಲ್ಲರನ್ನು ನಗಿಸುತ್ತ ಹೊರಟೇ ಬಿಟ್ಟರು. ಇಂಥ ಓರ್ವ ಅದ್ಭುತ ಹಾಸ್ಯನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ!










