ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ AIMSSನಿಂದ ಹಕ್ಕೋತ್ತಾಯ ಸಲ್ಲಿಕೆ

ಮೈಸೂರು: ಉದ್ಯೋಗದ ಸ್ಥಳಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ (ICC) ಖಾತ್ರಿ ಪಡಿಸುವುದು ಮತ್ತು “ಇವ ನಮ್ಮವ” ಕಾಯ್ದೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ಸುಮಾರು 18ಕ್ಕೂ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಮೈಸೂರು ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಸಲ್ಲಿಸಿದೆ.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ಕೊನೆಗೊಳಿಸುವ ಸಲುವಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿದೆ. ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ , ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ, ಅಪೌಷ್ಟಿಕತೆ, ಅಭದ್ರತೆ, ಕೌಟುಂಬಿಕ ದೌರ್ಜನ್ಯದಂತಹ ಹಲವಾರು ಸಮಸ್ಯೆಗಳ ವಿರುದ್ಧ ಎಲ್ಲಾ ಸ್ತರದ ಮಹಿಳೆಯರನ್ನು ಸಂಘಟಿಸುತ್ತಿದೆ. ಕರ್ನಾಟಕದಲ್ಲೂ ಕೂಡಾ ಈ ಎಲ್ಲಾ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹಲವಾರು ಹೋರಾಟಗಳನ್ನು ಕಟ್ಟುತ್ತಾ, *25 ನವೆಂಬರ್ 2025 ರಿಂದ 25 ಮಾರ್ಚ್ 2026ರ* ವರೆಗೆ *ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು* ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಸಹಿ ಸಂಗ್ರಹಣಾ ಅಭಿಯಾನವನ್ನು AIMSS ರಾಜ್ಯ ಸಮಿತಿ ಕೈಗೆತ್ತಿಕೊಂಡಿತ್ತು.
ಈ ಹೋರಾಟಕ್ಕೆ ಸ್ಪಂದಿಸಿದ ರಾಜ್ಯದ ಸುಚಿಂತಕರು, ಪ್ರಗತಿಪರರು, ಎಲ್ಲಾ ವಯೋಮಾನದ ಎಲ್ಲಾ ವರ್ಗದ ಜನತೆಯು ಮುಂದಿಟ್ಟ ತಮ್ಮ ಮನ:ಪೂರ್ವ ಆಶಯ ಮತ್ತು ಒತ್ತಾಸೆಗೆ ಸ್ಪಂದಿಸಿ ಸರ್ಕಾರ ಕೆಲವು ಕಾರ್ಯ ಸೂಚಿಗಳನ್ನು ಮಾಡಿದೆ. ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು “ಇವ ನಮ್ಮವ” ಕಾಯ್ದೆಯನ್ನು ಜಾರಿಗೊಳಿಸಿದೆ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿದೆ. ಈ ಕ್ರಮಗಳು ಸ್ವಾಗತಾರ್ಹ. ಇದು ಜನಾಭಿಪ್ರಾಯಕ್ಕೆ ಸಂದ ಜಯ. ಈ ಕಾನೂನುಗಳು ಪರಿಣಾಮಕಾರಿಯಾಗಿ ತಳಮಟ್ಟದವರೆಗೂ ಕಾರ್ಯನಿರ್ವಹಿಸುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು AIMSS ಮನವಿ ಮಾಡಿದೆ.
ಇಂದು ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಜ್ಞಾನ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಇಂದಿಗೂ ಪೂರ್ಣವಾಗಿ ಪ್ರಜಾತಾಂತ್ರಿಕವಾಗಿಲ್ಲ. ಸಮಾಜದಲ್ಲಿ ಇನ್ನೂ ಹೆಣ್ಣನ್ನು ಭೋಗದ ವಸ್ತುವಿನಂತೆ ನೋಡುವ ಮೂಲಕ ಊಳಿಗಮಾನ್ಯ ಮೌಲ್ಯಗಳು ಅವಳನ್ನು ದಾಸ್ಯದಲ್ಲಿರಿಸಿದರೆ, ಇಂದಿನ ಕೊಳೆತ ಸಾಂಸ್ಕೃತಿಕ ವ್ಯವಸ್ಥೆಯಿಂದಾಗಿ ಅಶ್ಲೀಲ ಸಿನಿಮಾ ಸಾಹಿತ್ಯ, ಜಾಹೀರಾತುಗಳು, ಪೋರ್ನ್ ವೆಬ್ ಸೈಟ್ ಗಳು, ಮದ್ಯ-ಮಾದಕ ವಸ್ತುಗಳ ಹಾವಳಿಯಿಂದಾಗಿ ಸಾಮಾಜಿಕ ವಾತಾವರಣ ಕಲುಷಿತಗೊಂಡು ಅವಳ ಜೀವ-ಜೀವನದ ಮೇಲೆ ನಿರಂತರವಾಗಿ ದಾಳಿಗಳು ಹೆಚ್ಚುತ್ತಿವೆ.
ರಾಜ್ಯದಲ್ಲಿ ಗಣನೀಯವಾಗಿ ಮಹಿಳೆಯರು-ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ, ಮರ್ಯಾದಾಗೇಡು ಹತ್ಯೆ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯದಂತಹ ಘಟನೆಗಳು ಜನತೆಯನ್ನು ಆಕ್ರೋಶಭರಿತರನ್ನಾಗಿಸಿವೆ. ಕಣ್ಣು ಬಿಡುವ ಮುನ್ನವೇ ಉಸಿರು ನಿಲ್ಲಿಸಿ ತಿಪ್ಪೆಗೆ ಎಸೆಯುವ ಸ್ತ್ರೀ ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಇನ್ನು ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ.
ಇಷ್ಟೇ ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ. ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ. 2025ರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ 43,000ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳು ಶೇಕಡಾ 26 ರಷ್ಟು ಹೆಚ್ಚಾಗಿವೆ. ಅದರಂತೆ ದಾಖಲಾದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ.
2022 ರಲ್ಲಿ ದಾಖಲಾದ 3,209 ಪ್ರಕರಣಗಳಲ್ಲಿ 1,562 ಪ್ರಕರಣಗಳು ಖುಲಾಸೆಯಾಗಿವೆ, 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರು ಭಾಗಿಯಾಗಿರುವುದು ನಾಡಿನ ದುರಂತವೇ ಸರಿ. ಅದೇ ರೀತಿ ಕರ್ನಾಟಕದಲ್ಲಿ ಬಾಲ್ಯವಿವಾಹ, ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಆತಂಕಕಾರಿಯಾಗಿ ಬೆಳವಣಿಗೆ ಕಂಡಿವೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ ಸಿ ಎಚ್) ಪೋರ್ಟಲ್ ನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2023-24ರ ಜುಲೈ ವರೆಗೆ 80,813 ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ.
ಇತ್ತೀಚಿಗೆ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿವೆ. ಇವು ಕೇವಲ ದಾಖಲಾದ ಅಂಕಿ ಅಂಶಗಳಾದರೆ, ಕೌಟುಂಬಿಕ ಗೌರವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣಗಳಿಗಾಗಿ ದಾಖಲಾಗದೆ ಉಳಿದಿರುವ ಎಷ್ಟೋ ಪ್ರಕರಣಗಳು ಇನ್ನೂ ಇವೆ. ಇತ್ತೀಚಿಗೆ 340 ವರದಕ್ಷಣೆ ಸಾವುಗಳು ವರದಿಯಾಗಿವೆ. ಕೌಟುಂಬಿಕ ದೌರ್ಜನ್ಯದಲ್ಲಂತೂ ಕರ್ನಾಟಕ, ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
ಅನ್ಯ ಜಾತಿಯ ಅಥವಾ ಕೋಮಿನ ಹುಡುಗನನ್ನು ಪ್ರೀತಿಸಿದಳು ಎಂಬ ಒಂದೇ ಕಾರಣಕ್ಕಾಗಿ ಹೆತ್ತ ಮಗಳನ್ನೇ ಕೊಲ್ಲುವ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಆಸಿಡ್ ಎರಚುವುದು, ಕೊಲ್ಲುವುದು, ಸೈಬರ್ ಸ್ಟಾಕಿಂಗ್, ಡಿಜಿಟಲ್ ದಾಳಿಗಳು, ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆಯಂತಹ ಸಮಸ್ಯೆಗಳು ಪ್ರತಿಕ್ಷಣ ಎಷ್ಟೋ ಹೆಣ್ಣು ಮಕ್ಕಳ ಜೀವ ತೆಗೆಯುತ್ತಿವೆ.
ಈ 21ನೇ ಶತಮಾನದಲ್ಲೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಜ್ಞಾನದ ಬಾಗಿಲು ತೆರೆದಿಲ್ಲ. ಇಂತಹ ಪರಿಸ್ಥಿತಿಯಲ್ಲೂ KPS ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮ ಅಲ್ಪ ಸ್ವಲ್ಪ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕೊಡಲಿಯೇಟು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಪರಿಹಾರಕ್ಕಾಗಿ ರಾಜ್ಯದ ಮಹಿಳಾ ಸಮುದಾಯದ ಧ್ವನಿಯಾಗಿ ಎಐಎಂಎಸ್ಎಸ್ ಕೆಲಸ ಮಾಡುತ್ತಾ ಬಂದಿದೆ.
ಇದೀಗ ಸರ್ಕಾರದ ಮುಂದೆ ಹಕ್ಕೋತ್ತಾಯಗಳಾದ 1. ಉದ್ಯೋಗದ ಸ್ಥಳಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ (ICC) ಖಾತ್ರಿ ಪಡಿಸಿ, 2. “ಇವ ನಮ್ಮವ” ಕಾಯ್ದೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಿ, 3. ಸ್ತ್ರೀ ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಹಾಗೂ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ. ಜೊತೆಗೆ ಶಾಲಾ – ಕಾಲೇಜು ಸೇರಿದಂತೆ ಎಲ್ಲಾ ಕಡೆ ತೀವ್ರತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಿ. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಕೂಡಲೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಿ.

KPS ಮ್ಯಾಗ್ನೆಟ್ ಯೋಜನೆ ಕೈಬಿಡಿ, ಸರ್ಕಾರಿ ಶಾಲೆಗಳನ್ನು ಬಲಪಡಿಸಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಖಾತ್ರಿಪಡಿಸಿ, 5. ಅಶ್ಲೀಲತೆಯ ಪ್ರಚಾರ, ಮದ್ಯ-ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಿ, 6. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರ ವಾಗುವ ಅಶ್ಲೀಲ ಹಾಗೂ ಕ್ರೌರ್ಯ ತುಂಬಿದ ಐಟಂ ಹಾಡುಗಳಿಗೆ ಕಡಿವಾಣ ಹಾಕಿ, 7. ಆನ್ಲೈನ್ ಸುರಕ್ಷತಾ ಆಕ್ಟ್ 2021ರ ಅಡಿಯಲ್ಲಿ e- ಸುರಕ್ಷತಾ ಕಮಿಷನರ್ ನೇಮಕ ಮಾಡಿ. 8. ಸಾಮಾಜಿಕ ಮಾಧ್ಯಮ, ಇ-ಮೇಲ್ ಮತ್ತು ಡಿಜಿಟಲ್ ಫ್ಲಾಟ್ ಫಾರ್ಮ್ ಗಳ ಮೂಲಕ ನಡೆಯುವ ಸೈಬರ್ ಸ್ಟಾಕಿಂಗ್ ಅನ್ನು ನಿರ್ದಿಷ್ಟವಾಗಿ ನಿಭಾಯಿಸಲು ವಿಶೇಷ ಕಾನೂನು ನಿಯಮಗಳನ್ನು ಜಾರಿಗೊಳಿಸಿ.
ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಗಾಗಿ ಜೂಡೋ -ಕರಾಟೆಯಂತಹ ಕೌಶಲ್ಯ ತರಬೇತಿ ನೀಡಿ, 10. ಮಹಿಳೆಯರ-ಮಕ್ಕಳ ಮಾರಾಟ ಮತ್ತು ಕಳ್ಳಸಾಗಣಿಕೆಯನ್ನು ತಡೆಗಟ್ಟಿ, 11. ಅಪೌಷ್ಟಿಕತೆಯನ್ನು ತಡೆಯಲು ಮಧ್ಯಾಹ್ನದ ಬಿಸಿಯೂಟವನ್ನು ಪದವಿ ಪೂರ್ವ ಕಾಲೇಜುಗಳ ವರೆಗೂ ವಿಸ್ತರಿಸಿ, 12. ಉದ್ಯೋಗದ ಭದ್ರತೆಯನ್ನು ಖಾತ್ರಿಪಡಿಸಿ ಮತ್ತು ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ, 13. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಶಿಶುಪಾಲನಾ ಕೇಂದ್ರದಂತಹ ಮೂಲಭೂತ ಸೌಕರ್ಯ ಒದಗಿಸಿ, 14. ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ PHC ಗಳನ್ನು ನಿರ್ಮಿಸಿ ಹಾಗೂ ಸೂಕ್ತ ಆರೋಗ್ಯ ಸೌಕರ್ಯಗಳನ್ನು ಖಾತ್ರಿಪಡಿಸಿ.
ನಿರ್ಭಯಾ ನಿಧಿಯ ಸರಿಯಾದ ಬಳಕೆಯನ್ನು ಖಾತ್ರಿಪಡಿಸಿ, 16. ಎಲ್ಲಾ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಜೀವನ ಯೋಗ್ಯ ಕನಿಷ್ಠ ವೇತನ ಖಾತ್ರಿಪಡಿಸಿ, 17. ಶಾಲಾ ಮಟ್ಟದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಆದರ್ಶಪ್ರಾಯ ಚೇತನಗಳ ಚರಿತ್ರೆಯನ್ನು ಲಿಂಗ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಬೋಧಿಸಿ,18. ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳಲ್ಲಿ ತ್ವರಿತವಾಗಿ ಪ್ರಕರಣಗಳನ್ನುಇತ್ಯರ್ಥಗೊಳಿಸಿ ಹಾಗೂ ಜಸ್ಟೀಸ್ ವರ್ಮಾ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಮೈಸೂರು ಜಿಲ್ಲಾ ಸಮಿತಿಯ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಯಾಗಿರುವ ಶ್ರೀಮತಿ ನಳಿನಾ, ಆಸಿಯಾ ಬೇಗಂ ತಿಳಿಸಿದ್ದಾರೆ.







