ArticlesLatest

ಅವಲೋಕನ-104.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಕೃತಿ:ಕನ್ನಡ ಜನಪದ ಕಥೆಗಳಲ್ಲಿ ಸ್ತ್ರೀ

ಕರ್ತೃ:ಡಾ.ಎಸ್.ಅನಸೂಯ

ಮುದ್ರಕ-ಪ್ರಕಾಶಕ: ಬನಶಂಕರಿ ಪ್ರಿಂಟರ್ಸ್ ಮೈಸೂರು, ಪುಟ:340, ಬೆಲೆ:ರೂ.200/- ಮೊದಲ ಮುದ್ರಣ: 2011

ಬಾಲ್ಯದಿಂದಲೂ ಮಹಿಳೆಯರನ್ನು ಗೌರವಿಸುವ ನಾನು ಈ ಪುಸ್ತಕದ ಶೀರ್ಷಿಕೆ ಕಂಡು ಹೆಚ್ಚಿನ ಕುತೂಹಲದಿಂದ ಮೊದಲ ಪುಟದಿಂದಲೇ ಓದಲಾರಂಭಿಸಿದೆ. ಇಲ್ಲಿ ಪ್ರಸ್ತುತವೆನಿಸುವ ಮುಖ್ಯವಿಷಯ ಎಂದರೆ; ಚುಟುಕು ಸಾಹಿತ್ಯ ಪರಿಷತ್ತಿನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪರಿಚಯವಾದ ಇದರ ಲೇಖಕಿ ತಮ್ಮ ಹೆಸರಿಗೆ ತಕ್ಕಂತೆ ಅಸೂಯೆ ಇಲ್ಲದ “ಅನ+ಅಸೂಯದ” ಸುಗುಣವಂತೆ.

ಇದನ್ನು ಮನಗಂಡ ನಾನು ಈಕೆಯನ್ನು ಗೌರವಿಸಲು ಪ್ರಾರಂಭಿಸಿದೆ. ನನ್ನನ್ನು ಕಂಡಾಗಲೆಲ್ಲ ಇವರು ತೋರಿಸುತ್ತಿದ್ದ ಗೌರವ ಮತ್ತು ನಿಷ್ಕಪಟ ನಡೆನುಡಿ ಇಷ್ಟವಾಗಿ, ಈಕೆ ನಿಸ್ವಾರ್ಥಿ ಎಂಬುದು ಗಟ್ಟಿಯಾಯ್ತು. ನಮ್ಮೀರ್ವರ ಪರಿಚಯದ ಕುರುಹಾಗಿ ವಾತ್ಸಲ್ಯ ಪೂರ್ವಕ ಹಸ್ತಾಕ್ಷರ ಸಹಿತ ಈ ಪುಸ್ತಕವನ್ನು ನೀಡಿದ ಕ್ಷಣಗಳು ಸ್ಮರಣೀಯ. ಅಂದಿನಿಂದ ಇಂದಿನವರೆಗೂ ಸಾಗುತ್ತಿರುವ ನಮ್ಮ ಪವಿತ್ರ ಮೈತ್ರಿಗೆ ಬೆಲೆ ಕಟ್ಟಲಾಗದು.  –ಕುಮಾರಕವಿ ನಟರಾಜ

ಕರ್ತೃವಿನ ‘ನುಡಿನೈವೇದ್ಯ’ದಿಂದ ಪ್ರಾರಂಭ ಆಗುವ ಅಮೋಘ ಗ್ರಂಥಕ್ಕೆ ವಿಶ್ರಾಂತ ಕುಲಪತಿ ನಾಡೋಜ ಪ್ರೊ.ದೇ.ಜ.ಗೌ. ಆಶೀರ್ವದಿಸಿ ‘ಮುನ್ನುಡಿ’ ಬರೆದಿದ್ದಾರೆ.ತಮ್ಮ ಮುನ್ನುಡಿ ಮುಗಿಸುವ ಮುನ್ನ ದೇಜಗೌಡರ ಮಮತೆಯ ಬರಹತುಣುಕು ಹೀಗಿದೆ:-

“ಸಂಶೋಧಕಿಯರು ತಮ್ಮ ಅಧ್ಯಯನಕ್ಕಾಗಿ ನೂರಾರು ಕೃತಿಗಳ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಜಾನಪದ ಸಮುದಾಯದಲ್ಲಿ ಪ್ರಚಲಿತವಾಗಿದ್ದ ಸ್ತ್ರೀ ಜೀವನವನ್ನು ಚಿತ್ರಿಸಿ ಸಮಾಜ ವಿಜ್ಞಾನಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಇದು ಒಬ್ಬ ಸಮಾಜ ವಿಜ್ಞಾನಿ ಮಾಡಬೇಕಾದ ಕರ್ತವ್ಯ.

ಯಾವುದೇ ಒಂದು ಜನಾಂಗದ ಪ್ರಾಚೀನ ಸಂಸ್ಕೃತಿಗೆ ಜಾನಪದ ಸಾಹಿತ್ಯವೇ ಮೂಲಾಧಾರ. ಅದನ್ನು ನಿರ್ಲಕ್ಷಿಸಿದ ಸಮಾಜ ವಿಜ್ಞಾನಿಯ ವಿದ್ವತ್ತು ಅಪೂರ್ಣವೆಂದೇ ಹೇಳಬೇಕು. ಜಾನಪದ ಸಾಹಿತ್ಯದಲ್ಲಿ ಆಗಬೇಕಾದ ಸಂಶೋಧನೆ ಹಾಗೂ ಅಧ್ಯಯನ ಅಪಾರವಾಗಿದೆ ಎಂಬುದನ್ನು ಮೌಲಿಕವಾದ ಈ ಮಹಾನಿಬಂಧದ ಮೂಲಕ ಮಾರ್ಗದರ್ಶನ ಮಾಡಿರುವ ಡಾ.ಎಸ್.ಅನಸೂಯ ಅವರು ಅಭಿನಂದನಾರ್ಹರೆಂದು ಪ್ರಮಾಣೀಕರಿಸಲು ಸಂತೋಷವಾಗುತ್ತದೆ. –ನಾಡೋಜ ದೇ.ಜ.ಗೌ.

ಈ ಗ್ರಂಥದ ಕಟ್ಟಕಡೆಯ ಕವಚದ ಪುಟದಲ್ಲಿ, ಮತ್ತೊಬ್ಬ ಖ್ಯಾತ ಸಾಹಿತಿ ಡಾ.ವೀರಣ್ಣದಂಡೆ, ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿಶ್ವವಿದ್ಯಾನಿಲಯ ಗುಲಬರ್ಗಾ, ಇವರು ಬೆನ್ನುಡಿ? ಬರೆದಿರುವುದು ಇಂತಿದೆ:-

“ಡಾ.ಎಸ್.ಅನಸೂಯರವರು ಜಾನಪದ ಕಥೆಗಳನ್ನು ಕುರಿತು ಅಧ್ಯಯನ ಮಾಡಿದ ಪಿ.ಎಚ್.ಡಿ.ಪ್ರಬಂಧ ಎಂಬುದು ನಿಜವಾಗಿಯೂ ಒಂದು ಗಮನಾರ್ಹ ಕೃತಿಯಾಗಿದೆ. ಜಗತ್ತಿನಾದ್ಯಂತ ಶಿಷ್ಟ ಸಾಹಿತ್ಯದಲ್ಲಿ ಕಾವ್ಯಪ್ರಕಾರ ಹೆಚ್ಚು ಅಧ್ಯಯನಕ್ಕೊಳಗಾದರೆ ಮೌಖಿಕ ಸಾಹಿತ್ಯದಲ್ಲಿ ಕಥಾ ಪ್ರಕಾರ ಹೆಚ್ಚು ಅಧ್ಯಯನಕ್ಕೆ ಒಳಗಾಗಿದೆ. ಜಾನಪದ ಕಥೆಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ನಡೆದ ಅಧ್ಯಯನಗಳಲ್ಲಿದು ೪ನೇ ಪ್ರೌಢ ಪ್ರಬಂಧ. ಬಿಡಿಲೇಖನಗಳನ್ನ ಹೊರತುಪಡಿಸಿದರೆ ಸಂಶೋಧನೆಗೆ ಸಂಬಂಧಿಸಿದಂತೆ ಇದು ಪ್ರಪ್ರಥಮ ಅಧ್ಯಯನವಾಗಿದೆ….. ಡಾ.ಅನಸೂಯ ಸಮರ್ಥವಾಗಿ ಹಿಡಿದು ವಿವರಿಸಿದ್ದಾರೆ. ಹೀಗಾಗಿ ಈ ಕೃತಿಯು ಕರ್ನಾಟಕದ ಸ್ತ್ರೀ ಜೀವನವನ್ನು ಅರ್ಥ ಮಾಡಿಕೊಳ್ಳಲು ಒಂದು ವಿಶೇಷ ಆಕರವಾಗಿದೆ.

ಅನಸೂಯರವರು ವೃತ್ತಿಯಲ್ಲಿ ಬೆರಳಚ್ಚುಗಾರ್ತಿ ಕೆಲಸವನ್ನು ನಿರ್ವಹಿಸುತ್ತಿದ್ದರೂ ಅವರ ಅಧ್ಯಯನ ಆಸಕ್ತಿ ಸಹಜವಾಗಿಯೇ ಮೆಚ್ಚುವಂಥದ್ದು. ಅವರು ತಮ್ಮ ಆಸಕ್ತಿಯನ್ನು ಮುಂದುವರೆಸಲಿ, ಇನ್ನೂ ಹೆಚ್ಚಿನ ಅಧ್ಯಯನಗಳು ಅವರಿಂದ ಬರಲಿ ಎಂದು ಹಾರೈಸುತ್ತೇನೆ.” -ಡಾ.ವೀರಣ್ಣದಂಡೆ

ಕನ್ನಡ ಸಾರಸ್ವತ ಲೋಕದ ಮೇಲ್ಕಂಡ ಅತಿರಥ ಮಹಾರಥರಲ್ಲದೆ ಮತ್ತೆ ಮೂವರು  ದಿಗ್ಗಜವಿದ್ವಾಂಸರ ಪ್ರತಿಕ್ರಿಯೆ ಕೆಳಕಂಡಂತಿದೆ:

೧.ಶ್ರೀಮತಿ ಎಸ್.ಅನಸೂಯ ರವರ ಸಂಶೋಧನಾ ಪ್ರಬಂಧವನ್ನು………! ಹೆಣ್ಣುಮಗಳೊಬ್ಬಳು ಹೆಣ್ಣಿನ ಬಗ್ಗೆ ಬರೆಯಬೇಕಾದ ದರ್ದಿನಲ್ಲಿ ಇರಬೇಕಾದ ಸತ್ಯನಿಷ್ಠ ಸಮಸ್ಥಿತಿಯನ್ನು, ಸಂಭಾವಿತ ಸಮನ್ವಯ ಗುಣವನ್ನು, ಸಮತೋಲನ ಸಾಕ್ಷಾತ್ಕಾರವನ್ನ ಸುಂದರವಾಗಿ ಸಾಧಿಸಿರುವ ಇಲ್ಲಿಯ ಬರವಣಿಗೆ ಸುಭಾಷಿಣಿಯೂ ಸುಹಾಸಿನಿಯೂ ಸೌಂದರ್ಯ ತವನಿಧಿಯೂ ಸರ್ವಾಲಂಕಾರ ಭೂಷಿತೆಯೂ ಆಗಿರುವ ಮದುವಣಗಿತ್ತಿ ಒಬ್ಬಳು ಝರಿ ಸೀರೆಯ ನಿರಿಗೆ ಚಿಮ್ಮುತ್ತ ಮೆಲ್ಲಡಿ ಇಡುತ್ತ ಸಾಗುವ ಒಯ್ಯಾರದ ಸಮ್ಮೋಹಕ ಸಂಚಲನದಂತಿದೆ.

ಈ ಮಹಾ ಪ್ರಬಂಧದ ವಿಷಯ ಮಂಡನೆಯಲ್ಲಿ: ಶಿಸ್ತು, ವಿದ್ವತ್ಪೂರ್ಣ ವಿಶ್ಲೇಷಣೆ, ಪ್ರತಿಪಾದನಾ ಸಾಮರ್ಥ್ಯ, ನಿರ್ದುಷ್ಟ ತರ್ಕವೈಭವ, ಸಕಾರಣ ತೀರ್ಮಾನ, ಸಮರ್ಪಕ ನಿರೂಪಣೆ ಕೌಶಲಗಳು, ಹಾಳತವಾಗಿ ಮೂಡಿ ಹೃದ್ಯವಾಗುತ್ತದೆ. ಸಮಪಾತಳಿಯಲ್ಲಿ ಸಾಗುತ್ತ ಸುರುಚಿರವೆನಿಸಿ ಸಹ್ಯವಾಗುತ್ತದೆ. ಇಂದು ನಿಜಕ್ಕೂ ಅನಸೂಯರವರ ಅಪೂರ್ವ ಅನನ್ಯ ಅದ್ಭುತ ಸಾಧನೆ.  – ಡಾ.ಪಿ.ಕೆ.ರಾಜಶೇಖರ,

2 ಡಾ.ಎಸ್.ಅನಸೂಯಅವರು ಗ್ರಾಮೀಣ ಪ್ರದೇಶದಿಂದ ಬಂದವರು. ಜನಪದರ ಬದುಕಿನ ಅಂಗವಾಗಿ ಜೊತೆಗೂಡಿ ಬೆಳೆದವರು. ಜನಪದ ಸಂಸ್ಕೃತಿಯ ಆಳ-ಹರಹನ್ನು ಚೆನ್ನಾಗಿ ಬಲ್ಲವರು. ಜಾನಪದ ಸಾಹಿತ್ಯ ಸಂಗ್ರಹದಲ್ಲಿ ಹೆಚ್ಚಿನ ಕೃಷಿಗೈಯದಿದ್ದರೂ ಅದರ ಅಧ್ಯಯನ, ವಿಶ್ಲೇಷಣೆ, ಅಭ್ಯಾಸಗಳಿಗೆ ತಮ್ಮನ್ನು ಅಗಾಧವಾಗಿ ತೊಡಗಿಸಿ ಕೊಂಡವರು. ಸ್ತ್ರೀಪರ ಅಧ್ಯಯನಕ್ಕೆ ತಮ್ಮನ್ನು ಧಾರೆ ಎರೆದುಕೊಂಡವರು.

………… ಹೆಣ್ಣಿನ ನೋವು ಸಂಕಟ ದುಃಖ ದುಮ್ಮಾನ ಪ್ರತಿಭಟನೆಯ ಎಲ್ಲಮುಖಗಳ ಪರಿಚಯಇಲ್ಲಿದೆ. ಪುರುಷಪ್ರಧಾನ ಸಮಾಜ ಪ್ರಾಚೀನ ಕಾಲದಿಂದ ಸ್ತ್ರೀಯನ್ನು ಶೋಷಣೆಗೆ ಒಳಪಡಿಸಿದ್ದನ್ನು ಅಸಹಾಯಕಳಾಗಿಯೇ ಸಹಿಸಿಕೊಳ್ಳುತ್ತ ಮೌನವಾಗಿ ಸಾಹಿತ್ಯದ ಮೂಲಕ ಪ್ರತಿಭಟನೆ ತೋರಿರುವ ಬಗ್ಗೆ ಈಕಥೆಗಳ ಅಧ್ಯಯನದಿಂದಾಗಿ ಅಭಿವ್ಯಕ್ತಗೊಳ್ಳುತ್ತದೆ. ಇಂಥದ್ದೊಂದು ಪ್ರಯತ್ನ ಜನಪದ ಸಾಹಿತ್ಯದ ಸಮಗ್ರ ಅಧ್ಯಯನಕ್ಕೆ, ಅದರಲ್ಲೂ ಸ್ತ್ರೀ ಬದುಕಿನ ಒಳ ಹೊರಗನ್ನು ಪ್ರಕಟಗೊಳಿಸುವುದಕ್ಕೆ ನೆರವಾಗುವ ಈ ಕೃತಿ ಗಮನಿಸಬೇಕಾದ್ದೇ ಆಗಿದೆ.

ಇಂತಹ ಒಂದು ಕೃತಿ ರಚನೆಯಿಂದ ಡಾ.ಅನಸೂಯ ಹೆಸರು ಜನಪದ ಅಧ್ಯಯನ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯಬಲ್ಲದು. ಇದಕ್ಕಾಗಿ ಅಭಿನಂದನೆಗಳು. ಇನ್ನೂ ಉತ್ತಮ ಕೃತಿಗಳು ಇತರೆ ಪ್ರಾಕಾರಗಳ ಅಧ್ಯಯನ ಮೂಲಕ ಮೂಡಿಬರಲಿ ಎಂದು ಹಾರೈಸುತ್ತೇನೆ.”- ಜೀನಳ್ಳಿ ಸಿದ್ಧಲಿಂಗಪ್ಪ.

3.ಡಾ.ಎಸ್.ಅನಸೂಯಮ್ಮ ಅವರ  ‘ಕನ್ನಡ ಜನಪದ ಕಥೆಗಳಲ್ಲಿ ಸ್ತ್ರೀ’ ಒಂದು ವಿಶಿಷ್ಟ ರೀತಿಯ ಹೊಸ ಬಗೆಯ ಅಧ್ಯಯನ. ಏಕೆಂದರೆ ಆರಂಭದ ದಿನಗಳಲ್ಲಿ ಕರ್ನಾಟಕ ಜಾನಪದ ಅಧ್ಯಯನದ ಬಗೆಗಿನ ಪರಿಕಲ್ಪನೆಗಳು ಅತ್ಯಂತ ಸೀಮಿತವಾಗಿದ್ದವು. ದೇಶೀಯ ಅಧ್ಯಯನಗಳು ಮುಂದುವರೆದಂತೆ ಜಾನಪದದ ಅರ್ಥ,ಮಿತಿ,ವ್ಯಾಪ್ತಿಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ತೀವ್ರವಾಗಿಯೇ ನಡೆದವು. ಪಾಶ್ಚಾತ್ಯರ ತತ್ವ-ಚಿಂತನೆ ಕೂಡ ನಮಗೆ ಮಾರ್ಗದರ್ಶಕವಾದದ್ದೂಉಂಟು. ಶ್ರೀಮತಿ ಅನಸೂಯರವರು ‘ಕನ್ನಡ ಜನಪದ ಕಥೆಗಳಲ್ಲಿ ಸ್ತ್ರೀ’ ಎಂಬ ಶೀರ್ಷಿಕೆಯಲ್ಲಿ ತಮ್ಮ ಸಂಶೋಧನೆ ನಡೆಸಿ ಮಹಾಪ್ರಬಂಧ ರಚಿಸಿರುವುದು ನಮ್ಮ ಜಾನಪದ ಅಧ್ಯಯನವು ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ಬೆಳೆದುನಿಂತು ಸಿಂಹಾವಲೋಕನ ನಡೆಸುತ್ತಿರುವುದರ ಸೂಚನೆಯಾಗುತ್ತದೆ. ಏಕೆಂದರೆ ಕನ್ನಡ ಜಾನಪದ ಸಖೇತ್ರದಲ್ಲಿ ಇದುವರೆಗಿನ ಸಂಶೋಧನೆಗಳನ್ನು ಲಕ್ಷಿಸಿ ಹೇಳುವುದಾದರೆ ಜನಪದ ಸಾಹಿತ್ಯ ಕುರಿತ ಅಧ್ಯಯನಗಳೆ ಹೆಚ್ಚಾಗಿವೆ.

ಅದರಲ್ಲೂ ಜನಪದ ಗೀತೆಗಳ ಮೇಲೆ ಹೆಚ್ಚಿನ ಸಂಶೋಧನೆ ನಡೆದಿರುವುದನ್ನು ನೋಡುತ್ತೇವೆ.ಮುಂದೆ ಅದು ಬುಡಕಟ್ಟು ಜಾನಪದದತ್ತ ಹೊರಳಿ ನಂತರ, ನಗರ ಜಾನಪದ ಪರಿಕಲ್ಪನೆ…………… ತಾಯಿ, ಮಲತಾಯಿ, ಸವತಿ……, ತಾಳ್ಮೆ, ದ್ವೇಷ, ಅಸೂಯೆ ಹೀಗೆ ಒಂದೊಂದೂ ಮಹಾ ಪ್ರಬಂಧ ರಚಿಸುವಷ್ಟು ವಿಷಯವನ್ನು ಒಳಗೊಂಡಿದೆ ಎಂಬುದು ಈ ಅಧ್ಯಯನದಿಂದ ತಿಳಿಯುತ್ತದೆ. ಡಾ.ಅನಸೂಯರವರು ಜಾನಪದ ಸಾಹಿತ್ಯದಲ್ಲಿ ಬಹುಮುಖ್ಯ ಪ್ರಕಾರವಾಗಿರುವ ಜಾನಪದ ಕಥೆಗಳನ್ನ ಆಧುನಿಕ ವಿಚಾರಧಾರೆಗಳ  ಹಿನ್ನೆಲೆಯಲ್ಲಿ ಅಧ್ಯಯನಮಾಡಿ ಜಾನಪದ ಕ್ಷೇತ್ರಕ್ಕೆ ಒಂದು ಉತ್ತಮ ಪ್ರಬಂಧ ನೀಡಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. –ಪ್ರೊ.ಮೈಲಹಳ್ಳಿರೇವಣ್ಣ ಕು.ಕ.ಅ.ಸಂಸ್ಥೆ, ಮಾನಸಗಂಗೋತ್ರಿ

ಪಿ.ಎಚ್.ಡಿ.ಪದವಿ ಗಳಿಸಿದ್ದರೂ ಸಹ ಅಹಂಕಾರವಿಲ್ಲದ ಸರಳ ಸಜ್ಜನಿಕೆಯ ಲೇಖಕಿ ಡಾ.ಅನಸೂಯ. ಸಂಯಮ ಶೀಲರಾಗಿ ತಮ್ಮ ಡಾಕ್ಟರೇಟ್ ಪದವಿ ಗಳಿಸಲು ಬರೆದ ಪ್ರೌಢಪ್ರಬಂಧ ಆಧಾರಿತ ಕೃತಿ “ಕನ್ನಡ ಜನಪದ ಕಥೆಗಳಲ್ಲಿ ಸ್ತ್ರೀ” ಇದರ ಪರಿವಿಡಿ ಕೆಳಕಂಡಂತಿದೆ: ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ

ಅಧ್ಯಾಯ-1.ಜನಪದ ಸಮಾಜ ಮತ್ತು ಮಹಿಳೆ:- (ಮಾತೃಪ್ರಧಾನ ಕುಟುಂಬ, ಪಿತೃಪ್ರಧಾನ ಕುಟುಂಬ, ದುಡಿಮೆಯಲ್ಲಿ ಹಂಚಿಕೆ, ಶ್ರಮ ವಿಭಜನೆ, ಇತ್ಯಾದಿ) ಅಧ್ಯಾಯ-2. ಸಾಹಿತ್ಯ ಮತ್ತು ಮಹಿಳೆ:- (ಗ್ರಾಮೀಣದುಡಿಮೆ- ಸಾಹಿತ್ಯ, ವಿಶೇಷ ಸಂದರ್ಭಗಳು-ಸಾಹಿತ್ಯ, ಕೌಟುಂಬಿಕ ನೆಲೆ- ಸಾಹಿತ್ಯ) ಅಧ್ಯಾಯ-3. ಬಂಧುತ್ವದ ನೆಲೆ- ಜನಪದರ ಮಾತೃತ್ವ ದೃಷ್ಟಿ:- ತಾಯ್ತನದ ಹಂಬಲ. ಪೂಜೆ ವ್ರತ ಹರಕೆ. ಬಸುರಿಯ ಸಂದರ್ಭದಲ್ಲಿ ಎದುರಾಗುವ ತೊಂದರೆಗಳು.

ತಾಯಿ: ಸಾಮಾನ್ಯತಾಯಂದಿರು. ತ್ಯಾಗಮಯತಾಯಂದಿರು. ಸಂಕೀರ್ಣತಾಯಂದಿರು. ತಾಯಿಯ ವಿರಳಮಾದರಿಗಳು. ಅನೈತಿಕ ತಾಯ್ತನ. ಮಲತಾಯಿ: ಹೆಣ್ಣುಮಕ್ಕಳೊಂದಿಗೆ ಮಲತಾಯಿ. ಗಂಡುಮಕ್ಕಳೊಂದಿಗೆ ಮಲತಾಯಿ. ಮಲತಾಯಿ ಸಂಬಂಧ ಪರಿಣಾಮಗಳು. ಹೆಂಡತಿ: ಸಾಮಾನ್ಯ ಗೃಹಿಣಿ, ಹೆಚ್ಚುವರಿ ಜವಾಬ್ಧಾರಿ, ಸ್ಫೂರ್ತಿ/ ಮಾರ್ಗದರ್ಶನ. ಗಂಡನ ರಕ್ಷಣೆ: ರಾಕ್ಷಸರಿಂದ ಅತಿಮಾನುಷ ಕನ್ಯೆಯರಿಂದ ಬಂಧುಗಳಿಂದ ಮಾಟ ಮಂತ್ರಗಾರಿಕೆಯಿಂದ ವೇಶ್ಯೆಯರಿಂದ ಬಲಿಕೊಡುವ ಗಂಡನ ರಕ್ಷಣೆ. ಸತಿ-ಸಹಗಮನ ಪದ್ಧತಿ, ಪಾತಿವ್ರತ್ಯ ಉಲ್ಲಂಘನೆ.

ಸವತಿ: ಸವತಿ ಸಂಬಂಧ, ಸವತಿ ಮತ್ಸರ, ತಾಯ್ತನದ ಹಂಬಲ, ಮೊದಲನೇ-ಎರಡನೇ ಬಗೆ ಚಲನಾ ಪ್ರಸಂಗ.ಒಳ್ಳೆಯ ಸವತಿಯರು, ಸವತಿ ಮತ್ಸರದ ಪರಿಣಾಮಗಳು. ವಾರಗಿತ್ತಿ: ಒಳ್ಳೆ ವಾರಗಿತ್ತಿಯರು. ಸಹೋದರಿ: ಸಕಾರಾತ್ಮಕ ನಕಾರಾತ್ಮಕ ಸ್ವರೂಪದ ಸೋದರಿಯರು. ಒಳ್ಳೆಯ ಸೋದರ ಸೋದರಿ, ಒಳ್ಳೆಯ ಅಕ್ಕ-ತಂಗಿಯರು. ಅತ್ತಿಗೆ-ನಾದಿನಿ: ಒಳ್ಳೆಯ ಅತ್ತಿಗೆ, ಒಳ್ಳೆಯ ನಾದಿನಿ. ಕೆಟ್ಟ ಅತ್ತಿಗೆ, ಕೆಟ್ಟ ನಾದಿನಿ. ಅತ್ತಿಗೆ ದ್ವೇಷಕ್ಕೆ ಕಾರಣಗಳು, ನಾದಿನಿ ವಿವಾಹ ಪೂರ್ವ ಸಂದರ್ಭಗಳು, ನಾದಿನಿಯ ವಿವಾಹೋತ್ತರ ಸಂದರ್ಭಗಳು. ಕೆಟ್ಟ ಅತ್ತಿಗೆ, ಕೆಟ್ಟಅಣ್ಣ. ಅತ್ತಿಗೆ-ಮೈದುನ: ಒಳ್ಳೆಯ ಅತ್ತಿಗೆ ಒಳ್ಳೆಯ ಮೈದುನ,ಒಳ್ಳೆಯ ಅತ್ತಿಗೆ-ಕೆಟ್ಟ ಮೈದುನ, ದುಷ್ಟಅತ್ತಿಗೆ-ಒಳ್ಳೆಯ ಮೈದುನ. ಅತ್ತೆ-ಸೊಸೆ: ಒಳ್ಳೆಯ ಅತ್ತೆ- ಒಳ್ಳೆಯ ಸೊಸೆ, ಕೆಟ್ಟಅತ್ತೆ-ಕೆಟ್ಟಸೊಸೆ, ಒಳ್ಳೆಯಅತ್ತೆ- ಕೆಟ್ಟಸೊಸೆ, ಕೆಟ್ಟಅತ್ತೆ- ಒಳ್ಳೆಯಸೊಸೆ, ಕಠಿಣ ಕೆಲಸ ಹಚ್ಚುವುದು, ಅಕ್ರಮ ಸಂಬಂಧದ ಅಪವಾದ ಪರಿಣಾಮ, ಅತ್ತೆಸೊಸೆ ವಿರಸ ಕಾರಣಗಳು, ಅಧಿಕಾರ ಚಲಾಯಿಸೊ ಪ್ರಶ್ನೆ, ಮಗ ದೂರವಾದನೆಂಬ ಆತಂಕ, ರೂಪಮತ್ಸರ.

ಅಧ್ಯಾಯ-4. ವ್ಯಕ್ತಿ ವಿಶಿಷ್ಟತೆಯ ನೆಲೆ- ಸದ್ಗುಣಗಳು:- (ಪಾತಿವ್ರತ್ಯ, ಪಾತಿವ್ರತ್ಯ ಮಹತ್ವ, ರಕ್ಷಣೆಯ ಸುಲಭ ಮಾರ್ಗಗಳು, ಅ/ಸಂಭವನೀಯ ಸವಾಲು, ಪ್ರಾರ್ಥನೆ, ಪೂಜೆ, ವ್ರತ, ಹರಕೆ, ಬಲಿ, ಪ್ರತಿಜ್ಞೆ, ಹಾರ, ಪಾತಿವ್ರತ್ಯ ಪರೀಕ್ಷೆ- ನಿರ್ಬಂಧಗಳು, ಪಾತಿವ್ರತ್ಯ ಪರೀಕ್ಷೆ- ಅ/ನಿರೀಕ್ಷಿತ, ಪವಾಡ, ಮಹಿಮೆಗಳು, ಪ್ರತಿಫಲ, ಧೈರ್ಯ; ಶುದ್ಧಧೈರ್ಯ, ಪ್ರತಿಭಟನಾ ಧೈರ್ಯ, ಲೈಂಗಿಕ ನೆಲೆಯಲ್ಲಿ ತೋರುವ ಧೈರ್ಯ.

ಜಾಣ್ಮೆ; ಕಾಮುಕರಿಂದ ತಪ್ಪಿಸಿಕೊಳ್ಳುವ ಜಾಣ್ಮೆ, ಕಳ್ಳರಿಂದ ತಪ್ಪಿಸಿಕೊಳ್ಳುವ ಜಾಣ್ಮೆ, ತಂದೆ ಗಂಡ ಮಾವನನ್ನು ಇಕ್ಕಟ್ಟಿನಿಂದ ಬಿಡಿಸುವ ಜಾಣ್ಮೆ, ಕುಟುಂಬದವರ ಪ್ರಾಣ ರಕ್ಷಿಸುವ ಜಾಣ್ಮೆ, ಸೂಳೆಸಂಗದಿಂದ ಗಂಡನ್ನ ಬಿಡಿಸುವ ಜಾಣ್ಮೆ, ಗಂಡನಿಗೆ ಪಾಠ ಕಲಿಸಿ ಸ್ಫೂರ್ತಿ ತುಂಬುವ ಜಾಣ್ಮೆ.  ತ್ಯಾಗ; ಸ್ವವ್ಯಕ್ತಿತ್ತ್ವಉನ್ನತಿಗಾಗಿ ತ್ಯಾಗ, ಕುಟುಂಬದ ಉನ್ನತಿಗಾಗಿ ತ್ಯಾಗ, ಸಮಾಜದ, ನಾಡಿನ, ಸ್ವಾತಂತ್ರ್ಯದ ಏಳಿಗೆಗಾಗಿ ತ್ಯಾಗ, ಮುಂತಾದ ತ್ಯಾಗ…. ತಾಳ್ಮೆ; ಬಂಜೆಯಾಗಿದ್ದಾಗ ತಾಳ್ಮೆ , ಸ್ವಾಭಿಮಾನ ತಾಳ್ಮೆ, ಪರೋಪಕಾರ ತಾಳ್ಮೆ.

ದುರ್ಗುಣಗಳು, ಮತ್ಸರ, ಅಸೂಯೆ, ಪ್ರೀತಿಯ-ರೂಪದ ಕೊರತೆ, ಅಸ್ತಿತ್ವದ, ಪ್ರಾಧಾನ್ಯತೆ ಪ್ರಶ್ನೆ, ತಾಯ್ತನದ, ಶ್ರಮದ, ಲೈಂಗಿಕ ತೃಪ್ತಿ, ಸ್ವಾರ್ಥ, ನಿಗೂಢತೆ, ಚಂಚಲತೆ, ಹಠಮಾರಿತನ, ಜಗಳಗಂಟಿ (ಗಯ್ಯಾಳಿ)ತನ, ಚಾಡಿ, ಹರಕುಬಾಯಿ ಕೊರತೆ. ವಿವಾಹ ಬಾಹಿರ ಸಂಬಂಧ, ಪ್ರೀತಿಸಿದವನೇ ಪ್ರೇಮಿಯಾದಾಗ, ಪ್ರೇಮಿಯೇ ಪತಿಯಾದಾಗ, ಸ್ವಭಾವತಃ ಜೈವಿಕ ವಿಲಕ್ಷಣತೆ, ಅತಿಯಾದ ಭೋಗ ಲಾಲಸೆ, ಅನಿವಾರ್ಯ ಕಾರಣದ ಹಾದರ, ಬಂಜೆತನ, ಪುರುಷ-ಸ್ತ್ರೀ ಸಂದರ್ಭ ಪ್ರೇರಿತ, ವಿಧವೆ ಸಂದರ್ಭ.

ಅಧ್ಯಾಯ-5. ವಿಧಿ ನಿಷೇಧಗಳು: ಸಾಮಾಜಿಕ ವಿಧಿ ಮತ್ತು ನಿಷೇಧಗಳು, ಜನನ, ಋತುಮತಿ, ಬಸುರಿ, ಬಾಣಂತಿ, ವೈಧವ್ಯ, ಸುಮಂಗಲಿ, ವಸ್ತ್ರ-ಒಡವೆ ಗಳನ್ನೂ ಧರಿಸಬಾರದು, ಮದುವೆ ನಿಷಿದ್ಧ, ಇತ್ಯಾದಿ ಒಳಗೊಂಡಿದೆ. ಉಪಸಂಹಾರ ಪರಾಮರ್ಶನ ಗ್ರಂಥಗಳು ಪರೀಕ್ಷಕರ ಮೌಲ್ಯಮಾಪನ ವರದಿಗಳು.

ಕನ್ನಡ ಜನಪದ ಕಥೆಗಳಲ್ಲಿ ಸ್ತ್ರೀಪಾತ್ರ ಏನು? ಎಷ್ಟು? ಹೇಗೆ? ಏಕೆ? ಎಲ್ಲಿ? ಎಂಬುವ ಬಗ್ಗೆ ಲೇಖಕಿ, ಸರಳ ಭಾಷೆಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಸುಂದರವಾಗಿ ವರ್ಣಿಸಿದ್ದಾರೆ. ಪುಸ್ತಕದಲ್ಲಿರುವ ಅಷ್ಟೂ ಕಥೆಗಳು ಬಹಳ ಆಕರ್ಷಕವಾಗಿದ್ದು ಮಹಿಳ ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವಂತಿದೆ. ಸಾಮಾಜಿಕವಾಗಿ ಸಂದೇಶ ಸಾರುವಂತಿದ್ದು ಒಂದಕ್ಕಿಂತ ಹೆಚ್ಚು ಬಾರಿ ಓದುವಂತೆ ಮಾಡುತ್ತದೆ. ಆಬಾಲವೃದ್ಧ ರಾದಿಯಾಗಿ ಪಂಡಿತರಿಂದ ಪಾಮರನವರೆಗೆ ಪ್ರತಿಯೊಬ್ಬರು ಇಷ್ಟಪಟ್ಟು ಓದುವಂತಿದ್ದು, ಯುವಕ ಮುದುಕರಿಗೆ, ಮಹಿಳೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದಿರುವ ಈ ಉದಯೋನ್ಮುಖ ಲೇಖಕಿಯನ್ನು ಮನಸಾರೆ ಅಭಿನಂದಿಸಬೇಕು!

ಕೃತಿಯಲ್ಲಿ ಇವರ ಬರವಣಿಗೆ ಶೈಲಿ, ವಿಚಾರವಂತಿಕೆ, ವಿಶ್ಲೇಷಣೆ, ವಿವರಣೆ, ಉದಾಹರಣೆ, ಕ್ರಾಂತಿಕಾರಕ ಬದಲಾವಣೆ, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಮಹತ್ವ, ಆಕೆಯ ಪಾತ್ರ, ದಕ್ಷತೆ, ತ್ಯಾಗ, ಸಮಸ್ಯೆ, ಪರಿಹಾರ, ಮೈನೆರೆದಾಗ, ನಿಷೇಕ, ಸೀಮಂತ, ಬಸುರಿ, ಬಾಣಂತಿ, ಗಂಡ, ಮನೆ, ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು, ಬೀಗರು, ನೆಂಟರಿಷ್ಟರು, ಸಾವುನೋವು, ಮಡಿ, ಮೈಲಿಗೆ, ಸೂತಕ, ಮುಂತಾದ ಅನೇಕ ವಿಷಯದಲ್ಲಿ ಮಹಿಳೆಗೆ ಸಂಬಂಧಿಸಿದಂತೆ ಆಕೆಯ ಒಳಗೆ-ಹೊರಗೆ ನಡೆಯುವ ಮಾನಸಿಕ-ದೈಹಿಕ ತುಮುಲಾಂದೋಲನ, ಸಮತೋಲನ, ಅಸಮತೋಲನ, ಇತ್ಯಾದಿ (ಅ)ವ್ಯವಸ್ಥೆ ಬಗ್ಗೆ ಅಚ್ಚುಕಟ್ಟಾಗಿ ಎಲ್ಲರಿಗು ಮನವರಿಕೆ ಆಗುವಂತೆ ಬರೆದಿರುವುದು ಅನಸೂಯಾರ ಅಸಾಧಾರಣ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ.

ಒಟ್ಟಾರೆ, ಭೂತ-ವರ್ತಮಾನ-ಭವಿಷ್ಯತ್ ಕಾಲಘಟ್ಟದಲ್ಲಿ ಇದ್ದ, ಇರುವ, ಮುಂಬರುವ ನಿತ್ಯಸತ್ಯವನ್ನ ಒತ್ತಿಹೇಳುತ್ತದೆ. ಅದಾವುದೇ ಇದ್ದರೂ ಎಲ್ಲವನ್ನು ನುಂಗಿ ನೀರು  ಕುಡಿಯಬಲ್ಲ ಯಶಸ್ವೀ ಶಕ್ತಿ ಎಂದರೆ ‘ಸ್ತ್ರೀ’ ಎಂಬುದನ್ನು ಸುಲಲಿತವಾಗಿ ನಿಷ್ಠುರವಾಗಿ ಪ್ರತಿಪಾದಿಸುತ್ತದೆ. ಈ ಕಾರಣಕ್ಕೆ ಇದು ಐಚ್ಚಿಕ ಕನ್ನಡ ಅಧ್ಯಯನದ ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಹಲವುಬಗೆ ಉಪಯೋಗ ಆಗುವಂಥ ಪುಸ್ತಕ.

– ಕುಮಾರಕವಿ ಬಿ.ಎನ್.ನಟರಾಜ್, ಮೈ.ವಿ.ವಿ. ಮಾನಸಗಂಗೋತ್ರಿ ಮೈಸೂರು- 15.6.2013

 

 

admin
the authoradmin

ನಿಮ್ಮದೊಂದು ಉತ್ತರ