ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
46 ಕೃತಿ: ಆಯ್ದ ಜನಪದ ಲೆಕ್ಕಗಳು
ಲೇಖಕರು: ಪಿ.ಕೆ.ರಾಜಶೇಖರ್ ಮತ್ತು ಎಸ್.ಗೋಪಾಲಕೃಷ್ಣ
ಶ್ರೀಸಾಮಾನ್ಯರು ಅದರಲ್ಲೂ ಅವಿದ್ಯಾವಂತ, ಅಮಾಯಕ ಹಳ್ಳಿಗಾಡು ಜನರು ಗಣಿತದಲ್ಲಿ ಹಿಂದುಳಿದಿಲ್ಲ ಎಂಬುದನ್ನು ‘ಆಯ್ದ ಜನಪದ ಲೆಕ್ಕಗಳು’ ಕೃತಿಯಲ್ಲಿ ಪಿ.ಕೆ.ರಾಜಶೇಖರ್ ಮತ್ತು ಎಸ್.ಗೋಪಾಲಕೃಷ್ಣ ಜೋಡಿಲೇಖಕರು ರುಜುವಾತುಪಡಿಸಿದ್ದಾರೆ. ಪ್ರತಿದಿನವು ಹಳ್ಳಿಜೀವನದ ವ್ಯಾಪಾರ ವ್ಯವಹಾರ ವೇಳೆಯಲ್ಲಿ ಮತ್ತು ಮಂಗಳ ಅಮಂಗಳ ಕಾರ್ಯಗಳ ಸಂದರ್ಭದಲ್ಲಿ ಅಥವ ನ್ಯಾಯ ಪಂಚಾಯ್ತಿ ನಡೆಯುವ ಕಾಲದಲ್ಲಿ ಎದುರಾಗುವ ಕೆಲವು ಇತ್ಯರ್ಥ ಆಗುವ/ಆಗದಿರುವ ಲೆಕ್ಕಾಚಾರಗಳು ಇವತ್ತಿಗೂ ಚಾಲ್ತಿಯಲ್ಲಿದೆ. ಇಂತಹ ಜನಪದ ಲೆಕ್ಕಗಳ ಬಗ್ಗೆ ಲೇಖಕರಿಬ್ಬರು ತಮ್ಮ ಸ್ವಂತ ಬುದ್ಧಿಯಿಂದ ಪ್ರತಿಪಾದಿಸಿ ಅಗತ್ಯವೆನಿಸುವ ಪರಿಹಾರ ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಸಾಮಾನ್ಯಜ್ಞಾನಿ ಅತೀಂದ್ರಿಯಜ್ಞಾನಿ ಮಹಾಜ್ಞಾನಿ ಆದವರನ್ನು ಸಂಪರ್ಕಿಸಿ ಅವರಿಗೆ ತಿಳಿದಿದ್ದ ಪ್ರತಿಯೊಂದು ಲೆಕ್ಕದ ವಿವರಗಳನ್ನು ಚಾಚೂತಪ್ಪದೆ ಶೇಖರಿಸಿ, ಆ ನಂತರ ಅವೆಲ್ಲಾ ಲೆಕ್ಕಗಳ ಮಾಹಿತಿಯನ್ನ ಓದುಗರಿಗೆ ಅರ್ಥವಾಗುವಂತೆ ಬರೆದಿದ್ದಾರೆ. ಎಲ್ಲ ಅವಿದ್ಯಾವಂತರೂ ಅಜ್ಞಾನಿಗಳಲ್ಲ, ಇವರ ತಲೆಯೊಳಗೂ ಸಹ ಅವ್ಯಕ್ತಗೊಂಡ ಜ್ಞಾನ-ಪ್ರತಿಭೆ ಸುಪ್ತವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. “ಆಯ್ದ ಜನಪದ ಲೆಕ್ಕಗಳು” ಕೃತಿಯಲ್ಲಿ ಹೊಸಾ ಜೋಡಿಲೇಖಕರು ದಾಖಲಿಸಿರೋದು ಮೆಚ್ಚುವಂಥದ್ದೆ.
ಮನರಂಜನೆಯ ಸಂಗಾತಿಯಾಗಿ ಮನುಷ್ಯ ಸಾಗುತ್ತಿರುವಾಗ ಮನೋವಿಕಾಸ ಉಂಟು ಮಾಡುವ ಸಾವಿರಾರು ಜನಪದ ಲೆಕ್ಕಗಳು ಇವತ್ತಿಗೂ ಎದುರಾಗುತ್ತವೆ. ಇಂಥವುಗಳ ಪೈಕಿ ೬೧ಲೆಕ್ಕಗಳನ್ನು ಆರಿಸಿಕೊಂಡು “ಪ್ರಶ್ನೆ-ಉತ್ತರ” ಎಂಬುವ 2 ಬೇರೆಬೇರೆ ವಿಭಾಗಮಾಡಿ ಈ ಪುಸ್ತಕದಲ್ಲಿ ಅಳವಡಿಸಲಾಗಿದೆ.
ಗಣಿತದ ಮೇಷ್ಟ್ರುಗಳು, ಗಣಿತದ ಪ್ರಿಯರು, ವಿಶೇಷವಾಗಿ ಗಣಿತ ಶಾಸ್ತ್ರಜ್ಞರು ಆಶ್ಚರ್ಯ ಚಕಿತರಾಗುವಂತೆ ಮಾಡುವಲ್ಲಿ ಈ ಪುಸ್ತಕವು ಸ್ವಾರಸ್ಯಕರವಾಗಿದೆ! ಒಂದಂತೂ ಸತ್ಯ ಎಲ್ಲಾ ವರ್ಗದ, ಎಲ್ಲಾ ಅಭಿರುಚಿಯ, ಓದುಗರಿಗೆ ತುಂಬಾ ಇಷ್ಟವಾಗುವಂತೆ ರಚಿಸಿರುವ ಈ ಜಾನಪದ ಲೆಕ್ಕಗಳನ್ನು ಆಂಗ್ಲ ಭಾಷೆಯಲ್ಲಿ “ಪಝಲ್ ಅಥವ ಕ್ವಿಜ್”(Puzzle/Quiz) ಶೀರ್ಷಿಕೆಗೆ ಹೋಲಿಸಬಹುದು?!
(1.12.1981 “ಗ್ರಂಥಲೋಕ ” ಮಾಸಪತ್ರಿಕೆಯಲ್ಲಿ ಪ್ರಕಟಿತ)
47 ಕೃತಿ : ಮಹಾಂತ ಮಹಿಮೆ
ಕರ್ತೃ : ಮಹಾಂತೇಶ
ಕರ್ನಾಟಕ ರಾಜ್ಯದಲ್ಲಿ ಶೈವ ಧರ್ಮದ ಸಂಸ್ಕೃತಿ ಹಾಗೂ ಕಲ್ಯಾಣಕ್ಕೋಸ್ಕರ ಸಮಾಜ ಮುಖಿಯಾಗಿ ಶ್ರಮಿಸಿದ ಅನೇಕ ಮಹನೀಯರಲ್ಲಿ ಒಬ್ಬ ಮಠಪೀಠಾಧಿಪತಿ ಬಗ್ಗೆ “ಮಹಾಂತ ಮಹಿಮೆ” ಎಂಬುವ ಈ ಕೃತಿಯನ್ನು ಮಹಾಂತೇಶ್ ರವರು ಅತ್ಯುತ್ತಮವಾಗಿ ರಚಿಸದೇ ಇದ್ದರೂ ಸುಮಾರಾಗಿ ಬರೆದಿದ್ದಾರೆ.
ಬಿಜಾಪುರ ಜಿಲ್ಲೆಯ ಚಿತ್ತರಗಿ ಎಂಬ ಮೂಲ ಪೀಠದ ಗದ್ದುಗೆ ಏರಿದವರಲ್ಲಿ ಪ್ರಮುಖ ಶ್ರೀಗಳಾದ “ವಿಜಯ ಮಹಾಂತ ಶಿವಯೋಗಿ” ಕುರಿತಾದ ಈ ಪುಸ್ತಕವು ಮಕ್ಕಳಿಗೆ ತಕ್ಕಂತೆ ಇದೆ. ಶ್ರೀಮಹಾಂತ ರವರ ಮಹಿಮೆ ಮತ್ತು ಸರಳ ಜೀವನವನ್ನು ಪರವಾಗಿಲ್ಲ ಎಂಬಂತೆ ಪರಿಚಯ ಮಾಡಿಕೊಡುತ್ತದೆ. ಯಾವುದೇ ಲೇಖಕರಾಗಲಿ ಸಂತ, ಸಾಧು ಹಾಗೂ ಶರಣರ ಚರಿತ್ರೆಗಳನ್ನು ಸಾಧ್ಯವಾದಷ್ಟು ಸಂಕ್ಷಿಪ್ತವಾಗಿ ಬರೆದು ಪ್ರಕಟಿಸಿದಾಗ ಓದುಗರಿಗೆ ಬೇಸರ ಎನಿಸುವುದಿಲ್ಲ. ಆದರೆ, ಆಟವಾಡುತ್ತ ಬೆಳೆಯುವಂಥ ಎಳೆಮನಸ್ಸಿನ ಚಿಣ್ಣರಬಳಗಕ್ಕೆ ಆಧ್ಯಾತ್ಮಿಕ ಲೇಪನ ಹಚ್ಚಿ ಮಕ್ಕಳ ಪುಸ್ತಕ ಎಂದು ಬ್ರಾಂಡ್ ಒತ್ತುವುದು ತೀರಾ ಅನವಶ್ಯಕ, ಎನಿಸುತ್ತದೆ.
ಪುಟ್ಟ ವಯಸ್ಸಿನವರಿಗೆ ಅನಿವಾರ್ಯ ಅಲ್ಲದ ಈ ಪುಸ್ತಕವನ್ನು ಮಕ್ಕಳಿಗೆ ತಿಳಿಯುವಂತೆ ಬರೆದಿದ್ದಾರೆ ಆದರೂ ಕೆಲವು ಸಲ ಹಿರಿಯರು ಓದಿ ತಿಳಿದ ನಂತರ ಕಿರಿಯರಿಗೆ ತಿಳಿಸುವಂತೆ ಅಥವ ಮನವರಿಕೆ ಮಾಡಿಕೊಡುವಂತೆ ಇದೆ, ಎಂಬುದೇ ಸಮಾಧಾನಕರ ಸಂಗತಿ.
(1.12.1982 ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ)
48 ಕೃತಿ : ರೂಪ-ಗುಣ
ಕರ್ತೃ : ಶಂ.ಗು.ಬಿರಾದಾರ
ಮಕ್ಕಳ ಸಾಹಿತ್ಯದ ಪ್ರಾರಂಭ ಕಾಲದಲ್ಲಿ ಮಕ್ಕಳ ಸಾಹಿತಿಗಳಾಗಿ ಪ್ರಮುಖರೂ ಖ್ಯಾತರೂ ಆಗಿದ್ದವರೆಂದರೆ ಕುವೆಂಪು, ಜಿ.ಪಿ. ರಾಜರತ್ನಂ, ಜಯಂತಿಬಾಯಿ, ಟಿ.ಪಿ.ಕೈಲಾಸಂ, ಮುಂತಾದ
ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. ಕಾಲಕ್ರಮೇಣ 1979ನೇ ಇಸವಿಯನ್ನು”ಅಂತಾರಾಷ್ಟ್ರೀಯ ಮಕ್ಕಳವರ್ಷ” ಎಂದು ವಿಶ್ವಸಂಸ್ಥೆಯು ಘೋಷಿಸಿತು. ಇದರಿಂದ ಪ್ರಪಂಚ ದಾದ್ಯಂತ ಮಕ್ಕಳ ಸಾಹಿತ್ಯ ಭಂಡಾರವು ವೇಗವಾಗಿ ತುಂಬಲು ಪ್ರಾರಂಭವಾಯಿತು. ಇದೇವೇಳೆ ಕನ್ನಡ ಸಾರಸ್ವತ ಲೋಕದಲ್ಲೂ ಮಕ್ಕಳಿಗಾಗಿ ಪುಸ್ತಕ ಬರೆಯುವವರ ಸಂಖ್ಯೆ ಅಧಿಕವಾಗಿ ಕನ್ನಡದಲ್ಲೂ ಮಕ್ಕಳ ಸಾಹಿತ್ಯ ಭಂಡಾರ ಭರ್ತಿಯಾಗಲು ಶುರು ಆಯಿತು.
1979ರಲ್ಲಿ ಮಕ್ಕಳಮಿಠಾಯಿ ಮತ್ತು ಮಂಗೀಮಳ್ಳೀ ಎಂಬುವ ಪದ್ಯಗಳ ಎರಡು ಪುಸ್ತಕವನ್ನೂ, 1982-83ರಲ್ಲಿ ಅಸೂಯೆಫಲ ಮತ್ತು ಅಜ್ಜೀಗುಜ್ಜೀ ಎಂಬುವ ಕಥೆಗಳ 2ಪುಸ್ತಕ ಬರೆದ ಕುಮಾರಕವಿ ಬಿ.ಎನ್.ನಟರಾಜ ಸೇರಿದಂತೆ ಚೇತನ ಕನ್ನಡ ಸಂಘದ ಸ.ರ.ಸುದರ್ಶನ, ಪುಸ್ತಕ ಚಿಲುಮೆಯ ಶ್ರೀಧರ, ಕೆ.ಸದಾಶಿವ ಎಣ್ಣೆಹೊಳೆ, ಹೊರೆಯಾಲ ದೊರೆಸ್ವಾಮಿ ಮುಂತಾದ ಯುವ ಸಾಹಿತಿಗಳು ಉಲ್ಲೇಖಾರ್ಹರು.
ಪ್ರಸ್ತುತ ‘ಅವಲೋಕನ’ ಮಾಲಿಕೆಯಲ್ಲಿ “ಮಕ್ಕಳಿಗಾಗಿ ಮಾಲೆ” ಸರಣಿಯಲ್ಲಿ ಶಂ.ಗು.ಬಿರಾದಾರ್ ಬರೆದ ‘ರೂಪ-ಗುಣ’ ಮತ್ತು ಸಂಗಮೇಶ ಹೊಸಮನಿ ಬರೆದ ‘ಗಾಂಧೀ ಗೀತೆಗಳು’ ಕ್ರಮವಾಗಿ ೧ ಮತ್ತು ೨ನೆ ಪಂಕ್ತಿಯಲ್ಲಿ ನಿಲ್ಲುವ ಸಚಿತ್ರ ಪದ್ಯಗಳ ಕವನ ಸಂಕಲನಗಳು, ಇದನ್ನು ಮಕ್ಕಳಿಗಾಗೇ ಬರೆಯಲಾಗಿದೆ ಅಂತೆ?!
ಹದಿನಾಲ್ಕು ಪದ್ಯಗಳುಳ್ಳ ‘ರೂಪ-ಗುಣ’ ಎಂಬ ಪುಸ್ತಕದಲ್ಲಿ ‘ಹುಟ್ಟುಹಬ್ಬದಕಾಣಿಕೆ’ ಕವನವು ಗಾಂಧೀಜಿಯನ್ನು ಕುರಿತು ಬರೆದದ್ದು. ‘ಸಂಗೀತಸಭೆ’ ನೀಳ್ಗವನವು ಕಾಡುಪ್ರಾಣಿಗಳ ಬಗ್ಗೆ ಸುಧೀರ್ಘ ಕತೆಯೊಂದನ್ನು ಹೇಳುತ್ತದೆ, ಆದ್ದರಿಂದ ಇದನ್ನು ಕಥನಕವನ ಎನ್ನಬಹುದು ಚಾಚಾಸ್ಮರಣೆ ಪದ್ಯವು ನೆಹರುವನ್ನು ನೆನಪಿಗೆ ತರುತ್ತದೆ. ನಾವೇನಾಳಿನನಾಯಕರು ಮತ್ತು ಬೆಳ್ಳಿಹಬ್ಬ ಇವೆರಡೂ ಪದ್ಯಗಳಿಗೆ ಒಂದೇ ರೀತಿ ಚಿತ್ರವಿದ್ದು ಸಾರಾಂಶದಲ್ಲೂ ಸಹ ಒಂದೇ ಬಗೆಯ ಅರ್ಥ ನೀಡಿರುವುದು ಸೋಜಿಗ! ಇನ್ನುಳಿದ ಪದ್ಯಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಇಲ್ಲದಿರುವುದು ಹಾಗೂ ಸ್ವಂತದ್ದು ಅಲ್ಲದಿರುವುದು ಸಖೇದಾಶ್ಚರ್ಯ ತರುತ್ತದೆ!
ಇನ್ನುಮುಂದಾದರೂ ಬಿರಾದಾರ್, ಮಕ್ಕಳ ಪುಸ್ತಕದ ಲೇಖಕ ಆಗಬೇಕಾದರೆ ತಮ್ಮ ಬರವಣಿಗೆ ಮಕ್ಕಳ ಮನಸ್ಸಿಗೆ ತಕ್ಕುದಾದ ವಿಷಯದಲ್ಲಿ ಹಾಗೂ ಮಕ್ಕಳದೇ ಭಾಷೆಯಲ್ಲಿ ಮಾತ್ರವೇ ಬರೆದು ಪ್ರಕಟಿಸಲಿ ಎಂದು ಆಶಿಸೋಣವೇ..?
(1.12.1082ರ ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)
- ಕೃತಿ : ಗಾಂಧೀ ಗೀತೆಗಳು
ಕರ್ತೃ : ಸಂಗಮೇಶ ಹೊಸಮನಿ
“ಮಕ್ಕಳಿಗಾಗಿ ಮಾಲೆ” ಸರಣಿಯಲ್ಲಿ ಸಂಗಮೇಶ ಹೊಸಮನಿ ಬರೆದ ‘ಗಾಂಧೀ ಗೀತೆಗಳು’ ಸಚಿತ್ರ ಪದ್ಯಗಳ ಮಕ್ಕಳ ಕವನ ಸಂಕಲನವೇ ಇದು.
ಮೋಹನದಾಸ ಕರಮಚಂದ ಗಾಂಧೀಜಿ ಬಗ್ಗೆ ಸಂಗಮೇಶ ಹೊಸಮನಿ ಬರೆದ ಪದ್ಯಗಳ ಗೊಂಚಲು. ಬಹುತೇಕ ಕವನಗಳು ಧೀರ್ಘವಾಗಿದ್ದು ಮಕ್ಕಳು ಓದುವಾಗ ತುಸು ಬೇಸರ ತರಿಸುವಂತಿದೆ. ಹಲವು ಪದ್ಯಗಳು ರಾಷ್ಟ್ರಕವಿ ಕುವೆಂಪು ರಚಿಸಿದ ‘ಕಿಂದರಿಜೋಗಿ’ ಎಂಬ ಕಥನ ಕವನವನ್ನು ನೆನಪಿಗೆ ತರಿಸುತ್ತಾ ಓದುಗರನ್ನು ಎಡಬಿಡದೆ ಕಾಡುತ್ತವೆ. ಇನ್ನು ಕೆಲವು ಪದ್ಯಗಳು ಜಿ.ಪಿ.ರಾಜರತ್ನಂ ರವರ ‘ತುತ್ತೂರಿ’ ಮತ್ತಿತರ ಪದ್ಯಗಳನ್ನು ನೆನಪಿಸುತ್ತವೆ ಅಥವ ಹೋಲುತ್ತವೆ.
ಲೇಖಕರ ಸ್ವಂತದ್ದಾದ ಒಳ್ಳೆಯ ಕವಿತೆಗಳು ಅಲ್ಲೊಂದು ಇಲ್ಲೊಂದು ಇದಾವೆ ಎಂಬುದೇ ಖುಷಿ ಪಡುವಂಥ ವಿಷಯ. ಬಾಲಭಾಷೆ ಬಳಸುವಾಗ, ಪುಟಾಣಿಗಳ ವಿಷಯ ಅಥವ ವಸ್ತುವಿನ ಬಗ್ಗೆ ಬರೆಯುವಾಗ, ಮಕ್ಕಳಮತಿಯ ಮಿತಿಯನ್ನು ಅರಿತು ಬರೆಯಬೇಕು ಎಂಬ ಸತ್ಯವನ್ನು ಲೇಖಕ ಮರೆತಿರುವಂತಿದೆ. ಮುಂದಿನ ಕಾಲದಲ್ಲಿ ಎಳೆಯ ಕಂದಮ್ಮಗಳಿಗೆ ತಕ್ಕುದಾದ ಮಕ್ಕಳ ಪುಸ್ತಕ ಇವರಿಂದಲೂ ಸಹ ಪ್ರಕಟವಾಗುತ್ತದೆ ಎಂದು ನಿರೀಕ್ಷಿಸೋಣ?
(1.12.1982ರ’ಗ್ರಂಥಲೋಕ’ಮಾಸಿಕದಲ್ಲಿ ಪ್ರಕಟಿತ)
50.ಕೃತಿ : ಚಕ್ಕಲಗುಲಿ (ಹಾಸ್ಯ ಲೇಖನಗಳು)
ಕರ್ತೃ : ಗೌಡನಕಟ್ಟೆ ತಿಮ್ಮಯ್ಯ
‘ರೀಲು ಪುರಾಣ’ ಎಂಬ ಕೃತಿಯ ಮೂಲಕ ಕೆಲವು ವರ್ಷಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಗೌಡನಕಟ್ಟೆ ತಿಮ್ಮಯ್ಯನವರ 2ನೇ ಹೊತ್ತಗೆಯಾದ ಇದರಲ್ಲಿ ಒಟ್ಟಾರೆ 8 ಹಾಸ್ಯಮಯ ಲೇಖನಗಳಿವೆ. ಸಾಹಿತ್ಯ ಸ್ಫುರಿಸುವ ಅನುಭವ ಹಾಗು ಭಾಷಾಬೆಳವಣಿಗೆ ಅಷ್ಟೇನೂ ಪಕ್ವವಾಗಿಲ್ಲ. ಆದರೆ ಇವರ ದ್ವಿತೀಯ ಕೃತಿಯನ್ನು ಬರೆದು ಹೊರತಂದ ಪ್ರಯತ್ನವು ಸಂಪೂರ್ಣ ವಿಫಲವೂಅಲ್ಲ, ಪೂರ್ಣ ಸಫಲವೂ ಆಗಿಲ್ಲ. ನೇರ ಟೀಕೆ ಮಾಡುವುದಾದರೆ ಅಥವ ಪ್ರಾಮಾಣಿಕ ಟಿಪ್ಪಣಿ ಮಾಡುವುದಾದರೆ ಲೇಖಕರ ಬರವಣಿಗೆ ಶೈಲಿಯಲ್ಲಿ ತುಸು ಬದಲಾವಣೆ ಅಗತ್ಯವಿದೆ, ಅವರಿಗವರೇ ಕೊಂಚ ಸಾಣೆ ಹಿಡಿಯಬೇಕಾಗುತ್ತೆ.
“ಚಕ್ಕಲಗುಲಿ” ಎಂಬ ಲೇಖನವು ಮಾರ್ಪಾಡು ಮಾಡಿದ ಹಳೇ ಪ್ರಬಂಧದಂತೆ ಇದ್ದರೆ, “ರೋಗಾಯಣ”ವು ಸಂಘ ಜೀವಿಯ ಸಾಮಾಜಿಕ ಹೊಣೆಯಂತಿದೆ ಇನ್ನಿತರ ಒಕ್ಕಣೆಗಳು ನಗೆ ಬರಹಗಳಂತೆ ಕಂಡು ಬರುತ್ತವೆ. “ಕಾಕಾಪುಡಿ”ಯಲ್ಲಿ ರಾಜಕೀಯ ವಿಡಂಬನೆ ತುಂಬಿ ತುಳುಕುವಂತೆ ಮಾಡಿರುವ ಲೇಖಕರು “ಅನಿವಾರ್ಯರು” ಮತ್ತು “ಭಾಷಣದ ಭಯ” ಎಂಬೆರಡು ಲೇಖನಗಳಲ್ಲಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. “ಅವ್ವನ ಆಸೆ” ಬರವಣಿಗೆಯಲ್ಲಿ ಕಟುಸತ್ಯದ ಕಹಿ ಇದ್ದರೆ “ಕಲೆಯಲ್ಲಿ ಕ(ಬೆ)ಲೆ” ಲೇಖನದಲ್ಲಿ ನಿತ್ಯಸತ್ಯದ ಸತ್ವವಿದೆ.
ಹೊಸ ಲೇಖಕರಾದ ಗೌಡನಕಟ್ಟೆ ತಿಮ್ಮಯ್ಯನವರು ಮುಂದೊಂದಿನ ಕನ್ನಡದ ಓರ್ವ ಉತ್ತಮ ಹಾಸ್ಯ ಬರಹಗಾರ ಆಗುವಂಥ ಕುರುಹು ತೋರಿಸಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು. ಹಾಸ್ಯ ಪ್ರಜ್ಞೆಯುಳ್ಳ ಓದುಗರು ಮುಲಾಜಿಲ್ಲದೆ ಇದನ್ನು ಖರೀದಿಸಿ ಓದಬಹುದು. ಹಾಸ್ಯ ರಸದ ಸಾಹಿತ್ಯ ಪ್ರಜ್ಞೆ ಇರುವ ಗೆಳೆಯರ ಬಳಗಕ್ಕೂ ಸರ್ಕ್ಯುಲೇಟ್ ಮಾಡಬಹುದು. “ಚಕ್ಕಲಗುಲಿ” ಅನ್ವರ್ಥ ಶೀರ್ಷಿಕೆ. ಹೀಗಾಗಿ ಇದೊಂದು ನಕ್ಕು ನಗಿಸುವ ಬೊಂಬಾಟ್ ಪುಸ್ತಕ…!
(ಜೂನ್ 1981’ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟಿತ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-9









ಧನ್ಯವಾದ ಲವ ಸರ್, ಕುಮಾರಕವಿ ನಟರಾಜ
ಕನ್ನಡ ಪುಸ್ತಕಗಳ ವಿಮರ್ಶೆ ಓದುವ ಭಾಗ್ಯ ದೊರಕಿಸಿಕೊಡುವ ಪ್ರತಿವಾರದ
ಅವಲೋಕನ ಅಂಕಣ ಅಮೋಘ ಉಪಯುಕ್ತ, ಧನ್ಯವಾದ
ಕನ್ನಡ ಪುಸ್ತಕಗಳ ವಿಮರ್ಶೆ ಓದುವ ಭಾಗ್ಯ ದೊರಕಿಸಿಕೊಡುವ ಪ್ರತಿವಾರದ
ಅವಲೋಕನ ಅಂಕಣ ಅಮೋಘ ಉಪಯುಕ್ತ, ಧನ್ಯವಾದ, ಸತ್ಯನಾರಾಯಣ, ಮೈಸೂರು