ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು  ಕೃತಿಗಳ ಪರಿಚಯ.. ಭಾಗ-18

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ. 

86 ಕೃತಿ : ಸ್ಥಿತಪ್ರಜ್ಞ

(“ಉದಯರವಿ” ಅವರ ಬದುಕು-ಬರಹ)

ಸಂಪಾದಕರು:ಮೇ.ಚ.ಕೋಟಪ್ಪ & ಸಿಸಿರಾ

ಪ್ರಕಾಶಕರು:ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರು-560026

412 ಪುಟಗಳು, ಬೆಲೆ ರೂ.250/-

ಪ್ರಥಮ ಮುದ್ರಣ 2020

ಮೇ.ಚ.ಕೋಟಪ್ಪನವರ ಪ್ರಧಾನ ಸಂಪಾದಕತ್ವದ “ಸ್ಥಿತಪ್ರಜ್ಞ” ಎಂಬ ಈ ಕೃತಿಯ ಬಗ್ಗೆ ಕೂಲಂಕಷ ಮನನಾನಂತರ ನನಗನಿಸಿದ್ದು ಇಷ್ಟೆ: 150 ಬರಹಗಾರರ 400ಕ್ಕು ಹೆಚ್ಚು ಪುಟಗಳುಳ್ಳ 100ಕ್ಕು ಹೆಚ್ಚು ಭಾವಚಿತ್ರವಿರುವ ಆಕರ್ಷಕ ಪುಸ್ತಕ ಇದು. ಹಳ್ಳಿಯಿಂದ ದಿಲ್ಲಿವರೆಗೆ ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡ ಕುಲಕೋಟಿಯ ಪ್ರೀತಿ ವಿಶ್ವಾಸ ಸಂಪಾದಿಸಿದ ಗುಣಶ್ರೀಮಂತ ಉದಯರವಿ ರವರ “ಬದುಕು-ಬರಹ” ದ ಸಂಪುಟ. ಈ ಕೃತಿಗೆ ಬಹುಶೃತ ವಿದ್ವಾಂಸರೂ ವಿಶ್ರಾಂತ ಕುಲಪತಿಯೂಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರು  ಶುಭ ಹಾರೈಸಿದ್ದಾರೆ.

ಕ.ಸಾ.ಪ.ಮಾಜಿ ಅಧ್ಯಕ್ಷ ಆರ್.ಕೆ.ನಲ್ಲೂರುಪ್ರಸಾದ್ ಬೆನ್ನುಡಿ ಬರೆದಿದ್ದಾರೆ. ಇದಲ್ಲದೇ ಪ್ರತಿಯೊಬ್ಬ ಲೇಖಕರ ಅಪೂರ್ವ ಅದ್ಭುತ ಬರಹಗಳ ಕೊಡುಗೆಯೂಇದೆ. ಈ ಪೈಕಿ ಹಲವನ್ನು ಮಾತ್ರ ಉದಾಹರಣೆಗೆ ಈ ಕೆಳಕಂಡಂತೆ ಯಥಾವತ್ತಾಗಿ ಇರುವ “ಲೇಖಕ-ಶೀರ್ಷಿಕೆ”   ಉಲ್ಲೇಖಿಸಿದ್ದೇನೆ..

ದುಬೈ NRI ಶೋಭಾಹರಿಪ್ರಸಾದ್ ರವರ ಸುಸಂಸ್ಕೃತ ಸಜ್ಜನ, ತಮಿಳುನಾಡು ಕಣ್ಣನ್‍ ಮಾಮಾರವರ ಮೋಡಿಗಾರ, ಜಯಂತಿ ಚಂದ್ರಶೇಖರ್ ರವರ ಸ್ಫೂರ್ತಿಚಿಲುಮೆ, ಉದಯರವಿ ಧರ್ಮಪತ್ನಿ ರಾಧಾರವರು ಕಂಡಂಥ “ಒಲುಮೆಯಸಿರಿ” ಮಗಳು ತನು ರವರ “ಮನಗೆದ್ದಹೀರೋ” ಶಾರದಾಶೇಖರ್‍ರ ಅಪರೂಪದವ್ಯಕ್ತಿ, ಎಸ್.ರಂಗನಾಥರಿಗೆ ಸರಳವ್ಯಕ್ತಿತ್ವದ ಸ್ನೇಹಜೀವಿ, ವೈದ್ಯರಾದ ಡಾ.ಪಾರ್ಶ್ವನಾಥ್ಗೆ ನಿತ್ಯಪ್ರಕಾಶ, ಪ್ರೊ.ಸಿದ್ದೇಗೌಡರ ಛಲಗಾರ, ವೈ.ಕೆ.ಲಕ್ಷ್ಮೇಗೌಡರ ಸಾಧಕ, ಬಿ.ಎನ್.ರಾಮಸ್ವಾಮಿಯರ ಸಹೋದರ, ಬೇಲೂರುಕೃಷ್ಣಮೂರ್ತಿಯವರಿಗೆ ಉದಾತ್ತ ಮನೋಭಾವ, ಬೈರಮಂಗಲ ರಾಮೇಗೌಡರಿಗೆ ಸಾಹಿತ್ಯಪರಿಚಾರಕ. ಮುದ್ದೇಗೌಡರಿಗೆ ಸಜ್ಜನಿಕೆಯಸಾಕಾರ ರೂಪ, ಅಪ್ಪಗೆರೆ ತಿಮ್ಮರಾಜುವಿಗೆ ಸಹೃದಯಿ, ಕೂಡ್ಲೂರು ವೆಂಕಟಪ್ಪನವರಿಗೆ ಕನ್ನಡಪರಿಚಾರಕ.

ಮುಂದುವರೆದಂತೆ….. ಎಸ್.ಸುರೇಶರಿಗೆ “ಅಣ್ಣ”, ಓಬಳೇಶ ಘ್ಹಟ್ಟಿಯವರ ಪ್ರಕಾರ ಚಲಾವಣೆಚಿಲುಮೆ, ತಗಡೂರು ಶಿವಾನಂದರಿಗೆ ಕ್ರಿಯಾಶೀಲ ವ್ಯಕಿ, ಬಾರಾಸು ರವರಿಗೆ ಕನ್ನಡದಕಟ್ಟಾಳು, ಭೇರ್ಯ ರಾಮಕುಮಾರ್‍ಗೆ ದೀನದುರ್ಬಲರ ಸೇವಾತುಡಿತ, ಆನಂದಕುಮಾರ್‍ಗೆ ಪ್ರಾಮಾಣಿಕ ಪತ್ರಕರ್ತ, ಕೆ.ಎಂ.ಸತೀಶ ಕುಮಾರ್ರ ಕನಸುಗಾರ, ವಿನಯಚಂದ್ರರ ನಗೆಮೊಗದರವಿ, ಸುರೇಶ್‍ಕುಮಾರ್‍ಗೆ ಸಹೃದಯಿಗೆಳೆಯ, ಲೀಲಾವತಿ ದೃಷ್ಟಿಯಲ್ಲಿ “ಬಾನೆತ್ತರ”, ಹಾಸನ ಎನ್.ಶೈಲಜಾರ ಅಭಿಮಾನ, ರಾಜೇಶ್ವರಿ ಹುಲ್ಲೇನಹಳ್ಳಿ ಪ್ರಕಾರ “ಮುಂದೆಬಂದರೆ…,”

ಬಿ.ಎಸ್.ನಾರಾಯಣಸ್ವಾಮಿಗೆ ಆಪತ್ಭಾಂಧವ, ದಾಕ್ಷಾಯಿಣಿಯವರ ಉದಯೋನ್ಮುಖರವಿ, ಜಗದೀಶಬಾಬುಗೆ ಕಷ್ಟಸುಖಗಳಭಾಗಿ, ಜೆ.ಆರ್.ರವಿಕುಮಾರ್ ಪ್ರಕಾರ ಸ್ಥಿತಪ್ರಜ್ಞ. ಚಂದ್ರಿಕಾಬಾಯಿಗೆ ಶ್ರೀರಕ್ಷೆ, ದಿಬ್ಬೂರು ರಮೇಶಂಗೆ ಆತ್ಮೀಯತೆ ಅನುಸಂಧಾನ, ಐಚನಹಳ್ಳಿ ಕೃಷ್ಣಪ್ಪರಿಗೆ ನಿಜದಬೆಳಕು, ಎಂ.ಬಾಲಕೃಷ್ಣರ ಪ್ರಕಾರ “ಪತ್ರಿಕೆಗಳ ಜೊತೆಗೇ ಬೆಳೆದವರು”, ಬಿ.ಡಿ. ಶಂಕರೇಗೌಡ್ರ “ಪ್ರಿಯಮಿತ್ರ”, ಕೆ.ಶ್ರೀನಿವಾಸ್ ರವರ “ನೇರನುಡಿಯ ಚಾಣಾಕ್ಷ”, ಹೊ.ರಾ. ಪರಮೇಶರ ಪ್ರತಿಭಾ ಪೋಷಕ ಸಂಘಟಕ, ಜಿ.ಟಿ.ಲೋಕೇಶರ ಇತಿಹಾಸದ ಪುಟಗಳಲ್ಲಿ ಉದಯರವಿ, ಇತ್ತಾದಿ, ಇತ್ಯಾದಿ, ಹೀಗೇ…. ಒಂದೂವರೆ ಶತಕದಷ್ಟು ಅತಿರಥ- ಮಹಾರಥ ಲೇಖಕರ ಹೃದಯ ಸಿಂಹಾಸನದ ಸಾಮ್ರಾಟ ಇಂತಹ ಉದಯರವಿ ಕನ್ನಡ ನಾಡಿನ ಆಬಾಲವೃದ್ಧರಾದಿ ಎಲ್ಲರ ತನುಮನ ಗೆದ್ದ ಸೃಜನಶೀಲ ಚಿಂತಕ ಮಾತ್ರವಲ್ಲ ಎಲ್ಲವನ್ನು ಇತಿಮಿತಿಯಲ್ಲಿ ಇಟ್ಟುಕೊಂಡ ಆರೋಗ್ಯದ ಸಿರಿವಂತನೂ ಹೌದು!

ಉದಯರವಿಯ ಅಮೋಘ ಜೀವನಚರಿತ್ರೆ ಬಗ್ಗೆ ಮತ್ತೊಂದು ಮಹಾನ್ ಕೃತಿಯನ್ನು ಬೆಂಗಳೂರಿನ ಯುವ ಸಾಹಿತಿ ಕೃಷ್ಣ ಹಾನ್‍ಬಾಳ್ ಬರೆದು ಪ್ರಕಟಿಸಿದ್ದಾರೆ. ಇಲ್ಲಿ ಕಂಡುಬರುವ ಅಸಾಧಾರಣ ಸಾಲುಗಳಲ್ಲಿ ಕೆಲವು ವಾಕ್ಯಗಳನ್ನು ಉದಾಹರಿಸುವೆ ಈ ಕೆಳಕಂಡಂತೆ:

ಕೃತಿ-ಕತೃ ಬಗ್ಗೆ…

ಕೃಷ್ಣ ಹಾನಬಾಳ್‍ರ ಪ್ರಾಸ್ತಾವಿಕ ನುಡಿಗಳಲ್ಲಿ ವ್ಯಾಕರಣ ವಿರಾಮಚಿನ್ಹೆ ಅಲಂಕಾರ, ಛಂದಸ್ಸು, ಪದ, ವಾಕ್ಯ, ಇವುಗಳ ಕ್ರಮವಾಗಲೀ ಭಾಷಾ ಪ್ರೌಢಿಮೆಯಾಗಲೀ ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಉದಯರವಿಯಂಥ ನಿಷ್ಠಾವಂತ ತೇಜೋಮಯಿ ಬಗ್ಗೆ ಪ್ರಕಟಿಸಿದ ಓರ್ವ ಯುವ ಬರಹಗಾರನ ತೇಜೋವಧೆ ಮಾಡಬಾರದು. ಸಾವಿರಾರು ಸೃಜನೇತರ/ ಸೃಜನಶೀಲ ಸಾಹಿತ್ಯಗಳನ್ನು ಜ್ಞಾಪಿಸಿ ಕೊಳ್ಳುತ್ತಾ ಕೃಷ್ಣ ಹಾನ್‍ಬಾಳ್‍ರಂಥ ಹವ್ಯಾಸಿ ಬರಹಗಾರನನ್ನು ಹೃದಯವಂತಿಕೆಯಿಂದ ಕಾಣುವುದು ಲೇಸು. ಪಂಡಿತರು ಪ್ರಾಜ್ಞರು ತಜ್ಞರು ಇಂತಹ ಸಾಹಿತ್ಯಾಸಕ್ತ ಯುವಚೇತನಕ್ಕೆ ಬೆನ್ನುತಟ್ಟಿ ಹರಸಬೇಕಾದ್ದು ಕರ್ತವ್ಯ.

ಉದಯೋನ್ಮುಖ ಲೇಖಕನಿಗೆ ಸರ್ವರೀತಿ ಬೆಂಬಲ ನೀಡಬೇಕಾದ್ದು ಎಲ್ಲಕ್ಕಿಂತ ಮಿಗಿಲಾದ ಸಾಹಿತ್ಯಧರ್ಮ. ಕಿರಿಯರಿಗೆ ಹಿರಿಯರ ಆಶೀರ್ವಾದ ನ್ಯಾಯಸಮ್ಮತ. ಕಡ್ಡಿ ತುಂಡು ಮಾಡಿದಂತೆ  ಕಟ್ಟುನಿಟ್ಟಾದ ನೀತಿ ಅನುಸರಿಸುವುದು ಸಲ್ಲ? ಎಂಬುದು ನನ್ನ ನೇರಅನಿಸಿಕೆ ದಿಟ್ಟಅಭಿಪ್ರಾಯ ಮುಕ್ತಪ್ರಶ್ನೆ? ಟೀಕೆ-ಟಿಪ್ಪಣಿ ಅವರವರಿಷ್ಟ. ಕೃಷ್ಣಹಾನಬಾಳರ ಸಾಹಿತ್ಯ ಶೈಲಿಗಿಂತ ಇವರಲ್ಲಿರುವ ಇಚ್ಚಾಶಕ್ತಿ, ಆಂತರ್ಯ ತುಮುಲತೆ, ತನುಮನದ ಒಳಗುದಿ, ಕನ್ನಡದ ಕಾಳಜಿ, ಕನ್ನಡತನ-ಕನ್ನಡಿಗರ ಬಗ್ಗೆ ಕಳಕಳಿ ಇರುವ ಇವರಿಗೆ ಸಾಥ್ ನೀಡುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ಉದಯರವಿ ಯಂಥ ಕನ್ನಡ ಸೇವಕನ ಬಗ್ಗೆ ಈತನಿಗಿರುವ ಶ್ರದ್ಧೆ ಆಸಕ್ತಿ ಪ್ರಾಮಾಣಿಕ ಪ್ರಯತ್ನ ಇತ್ಯಾದಿಗಳನ್ನು ಮೆಚ್ಚಿಕೊಂಡಿದ್ದೇನೆ. ಹಾಗಾಗಿ ಕೃಷ್ಣ ಹಾನ್‍ಬಾಳ್‍ಗೆ ಎಲ್ಲ ರೀತಿಯ ಸಹಕಾರ ಸಲಹೆ ಮಾರ್ಗದರ್ಶನ ನೀಡಲೂ ಸದಾ ಸಿದ್ಧನಿದ್ದೇನೆ!

*ಉಪಸಂಹಾರ(CONCLUSION):-

ಮೇಲ್ಕಂಡ ಎರಡೂ ಗ್ರಂಥಗಳು ಓದುಗರ ಔದಾರ್ಯ ವಿಮರ್ಶಕರ ಮೆಚ್ಚುಗೆ ಗಳಿಸುತ್ತವೆ ಎಂಬುದು ಅತಿಶಯೋಕ್ತಿಯಲ್ಲ. ಈ ಕೃತಿಗಳಲ್ಲಿ ಓರ್ವ ಸೃಜನಶೀಲ ವ್ಯಕ್ತಿಶಕ್ತಿಯ ಸಾರ್ಥಕ ಸಾಧನೆಗಳ ಬಗ್ಗೆ ನಿತ್ಯಸತ್ಯ ಅಮೂಲ್ಯ ಪದಪುಂಜಗಳು ಅನುಭವಿಗಳಿಂದ ಅನಾವರಣಗೊಂಡಿವೆ. ಇವೆರಡು ಅತ್ಯುತ್ತಮ ಸಂಪುಟಗಳಿಗೆ ಅಭಿಪ್ರಾಯ ಅನಿಸಿಕೆ ಅಭಿವ್ಯಕ್ತ ಬೆನ್ನುಡಿ ಸಾಹಿತ್ಯ ರೂಪದಲ್ಲಿ ತಜ್ಞರು ಈಗಾಗಲೇ ಹ[ಬಿ]ಚ್ಚಿಟ್ಟಿರುವ ಹಣತೆಗಳ ಮಡಿಲಲ್ಲಿ ನನ್ನದೊಂದು ಪುಟಾಣಿ ದೀಪ ಇಡುವ ಸೌಭಾಗ್ಯ ದೊರಕಿದೆ. ನೂರಾರು ದನಿಗಳ ಮಧ್ಯೆ ನನ್ನ ದನಿಯೂ ನಿರಂತರ ಪ್ರತಿಧ್ವನಿಸಲಿ ಎಂಬ ಆಶಾಭಾವನೆ ಕವಲೊಡೆದು, ಕಿರಣವೊಂದನ್ನು ಚೆಲ್ಲಿದ್ದೇನೆ ಇಲ್ಲಿ.

ಇವಿಷ್ಟನ್ನೂ ಅಪ್ರಭಾವಿತನಾಗಿ ಸಲ್ಲಿಸಲು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಅಭಿಮಾನ ಪಡುತ್ತೇನೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗು ವಿಶೇಷವಾಗಿ ಮಿತ್ರಶ್ರೇಷ್ಠ ಉದಯರವಿಯವರಿಗೆ ಮತ್ತು ನಲ್ಮೆಯ ಪ್ರಕಾಶಕರಿಗೆ ಮನದಾಳದ ನಮನ.  ಕುವೆಂಪುರವರು“ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ”ಎಂದೂ; ಡಿ.ವಿ.ಜಿ.ಯವರು “…ಎಲ್ಲರೊಳಗೊಂದಾಗು ಮಂಕುತಿಮ್ಮ” ಎಂದೂ ಹೇಳಿದ ಅನುಭವಾಮೃತಗಳು ಇವರಿಗೆ ಅನ್ವಯವಾಗಬಹುದು. ಶಿಸ್ತುಗಾರ ಶಿವಪ್ಪನಾಯಕರಂಥ ಉದಯರವಿ ಬಗ್ಗೆ ಬರೆದ ಪುಸ್ತಕವು ನನ್ನ ಅಚ್ಚುಮೆಚ್ಚಿನದು. ಜೈಕರ್ನಾಟಕ ಜೈಕನ್ನಡಿಗ!

 –ಕುಮಾರಕವಿ ಬಿ.ಎನ್.ನಟರಾಜ

ಸಂಕ್ರಾಂತಿ-2023

87.ಕೃತಿ: ಅಲಂಕಾರ ಸರ್ವಸ್ವಮ್

ಕನ್ನಡಾನುವಾದ: ಎಚ್.ವಿ.ನಾಗರಾಜರಾವ್

ಸಂಸ್ಕೃತ ಮೂಲಕರ್ತೃ: ರಾಜಾನಕ

ಸಂವಹನ ಪ್ರಕಾಶನ, ಶಿವರಾಂಪೇಟೆ, ಮುದ್ರಕರು: ಶ್ರೀರಾಜೇಂದ್ರ ಪ್ರಿಂಟರ್ಸ್, ಮೈಸೂರು, ಪುಟಗಳು: 26+286=310,

ಬೆಲೆ:ರೂ.200, ಮೊದಲಮುದ್ರಣ 2011

ವಿಖ್ಯಾತ ಸಂಸ್ಕೃತ ಕವಿ ರಾಜಾನಕ ರುಯ್ಯಕ. ಈತನು ಮೂಲತಃ ಕಾಶ್ಮೀರ ಪ್ರದೇಶದವನು. ಪುರಾತನ ಕಾಲದಲ್ಲಿ ಈಗಿನ ಕಾಶ್ಮೀರವನ್ನು ‘ಬಿಲ್ಹಣ ಶಾರದಾ ದೇಶ’ ಎಂದೂ ಕರೆಯಲ್ಪಡುತ್ತಿತ್ತು. ಅತಿರಥ ಕವಿಗಳೂ ಮಹಾರಥ ವಿಮರ್ಶಕರೂ ಪ್ರಚಂಡ ಪಂಡಿತರೂ ಇಲ್ಲಿ ಜನಿಸಿದರು ಎಂಬುದು ಪುರಾಣೇತಿಹಾಸ ದಾಖಲೆ. ಇವತ್ತಿಗೆ ದೊರಕುತ್ತಿರುವ ವಿವಿಧ ಭಾರತೀಯ ಭಾಷೆಗಳ ಅಗಣಿತ ಕಾವ್ಯಮೀಮಾಂಸೆಗಳಿಗೆಲ್ಲ ಮಾತೃ ಸ್ಥಾನದ ಸಂಸ್ಕೃತ ಕಾವ್ಯಮೀಮಾಂಸೆ ಹುಟ್ಟಿದ್ದೇ ಇಲ್ಲಿ. ಹೀಗಾಗಿ ಕನ್ನಡ ಕಾವ್ಯಮೀಮಾಂಸೆ ಒಳಗೊಂಡಂತೆ ಪ್ರತಿಯೊಂದು ಸಂಸ್ಕೃತಾಧಾರ ಭಾಷೆಯ ಕಾವ್ಯಮೀಮಾಂಸೆ ಜನಿಸಲು ಮೂಲ ಸ್ಥಳ ಕಾಶ್ಮೀರ ಹಾಗು ಮೂಲ ಕರ್ತೃಗಳು ಸಂಸ್ಕೃತ ಸಾಹಿತಿಗಳು.

ಇಂಥ ಪುಣ್ಯಭೂಮಿಯಲ್ಲಿ ಜನ್ಮತಾಳಿದ ಅನೇಕ ಅಪ್ರತಿಮ ಸಂಸ್ಕೃತ ಕವಿಪುಂಗವರ ಪೈಕಿ ಓರ್ವ ಅಸಾಧಾರಣ ಕವಿ-ವಿಮರ್ಶಕನಾಗಿ ಕ್ರಿ.ಶ.೧೨ನೇ ಶತಮಾನದಲ್ಲಿ ಜನ್ಮತಳೆದವನು ರುಯ್ಯಕ ಉರುಫ್ ರುಚಕ. ರುಯ್ಯಕ(ರುಚಕ)ನಿಗೆ ಆತನ ಪಿತನಾದ ರಾಜಾನಕ ತಿಲಕನು ಗುರುವೂ ಹೌದು. ಹೀಗಾಗಿ ಸ್ವತಃ ರುಯ್ಯಕನೇ ಹೇಳಿಕೊಂಡಿದ್ದಾನೆ ತನ್ನ ಗುರುವೂ ತಂದೆಯೂ ಒಬ್ಬರೇ ಆಗಿದ್ದರಿಂದ ಅವರ ಮೇಲೆ ಈತನ ಗೌರವ-ಭಕ್ತಿ ಇಮ್ಮಡಿಗೊಂಡಿತ್ತೆಂದು. ರುಯ್ಯಕ ಉರುಫ್ ರುಚಕ ವಿರಚಿತ ಕೃತಿಗಳು:- [1]ಅಲಂಕಾರ ಸರ್ವಸ್ವ [2]ವ್ಯಕ್ತಿವಿವೇಕ ವ್ಯಾಖ್ಯಾ [3] ಕಾವ್ಯಪ್ರಕಾಶ ಸಂಕೇತ [4]ಸಹೃದಯಲೀಲಾ [5]ಅಲಂಕಾರಾನುಸಾರಿಣೀ [6]ಸಾಹಿತ್ಯಮೀಮಾಂಸಾ [7]ನಾಟಕಮೀಮಾಂಸಾ [8]ಶ್ರೀಕಂಠಸ್ತವ ಹಾಗೂ [9]ಹರ್ಷಚರಿತವಾರ್ತ್ತಿಕ.

ರಾಜಾನಕ ರುಯ್ಯಕ ಎಂಬ ಮಹಾಕವಿ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟ “ಅಲಂಕಾರ ಸರ್ವಸ್ವಮ್” ಎಂಬುವ ಮೂಲ ಕೃತಿಯನ್ನು ಮೇರುಭಾಷೆ ಕನ್ನಡಕ್ಕೆ ಅನುವಾದ ಮಾಡುವ ಉತ್ತಮ ಕೆಲಸವನ್ನು ಹೆಚ್.ವಿ.ನಾಗರಾಜರಾವ್ ಮಾಡಿರುವುದು ಸ್ವಾಗತಾರ್ಹ. ಕನ್ನಡದ ಕವಿವರೇಣ್ಯ ಎಚ್.ವಿ.ಎನ್.ರವರು ಕನ್ನಡ-ಸಂಸ್ಕೃತ ಎರಡೂ ಭಾಷೆಗಳಲ್ಲಿ ಅಸಾಮಾನ್ಯಜ್ಞಾನ ಪಡೆದ ದಿಗ್ಗಜರು. ಈ ಭಾಷೆಗಳಲ್ಲಿ ಇವರಿಗಿರುವ ಪ್ರತಿಭೆಗೆ ಸರಿಸಾಟಿಯಿಲ್ಲ. ಹೀಗಾಗಿ ಈ ಅನುವಾದಿತ ಕೃತಿಯಲ್ಲಿ ಪರಿಪೂರ್ಣತೆಯು ತುಂಬಿತುಳುಕುತ್ತಿದೆ.

ನಾಗರಾಜರಾಯರು ಸಂಸ್ಕೃತದಿಂದ ಕನ್ನಡಕ್ಕೆ ಹಲವಾರು ಗ್ರಂಥಗಳನ್ನು ಅನುವಾದಗೊಳಿಸಿದ್ದು, ಇವುಗಳಲ್ಲಿ ಮೈಲುಗಲ್ಲಾಗಿರುವ ಎರಡು ಕೃತಿಗಳು:- (1)ವ್ಯಕ್ತಿವಿವೇಕ ಮತ್ತು ರಸಗಂಗಾಧರ (2)ಅಲಂಕಾರ ಸರ್ವಸ್ವಮ್ ಪ್ರಸ್ತುತ”ಅಲಂಕಾರ ಸರ್ವಸ್ವಮ್”ಎಂಬ ಈ ಗ್ರಂಥದಲ್ಲಿ ಮಾಡಿರುವ ಅಲಂಕಾರಗಳ ನಿರೂಪಣೆ ಅಪೂರ್ವ, ಅಪ್ಯಾಯಮಾನ. ಆದ್ದರಿಂದ ಇದೊಂದು ಸಂಗ್ರಹಯೋಗ್ಯ ಪುಸ್ತಕ ಮಾತ್ರವಲ್ಲ, ಒಂದು ಅದ್ಭುತ ಉಪಯುಕ್ತ ಕೃತಿ ಎಂಬುದರಲ್ಲಿ ಲವಲೇಶ ಸಂಶಯಬೇಡ. ಇಂಥ ಸತ್ಯದ ನಿರ್ವಿವಾದ ಕೃತಿಗೆ ಕರ್ನಾಟಕ ರಾಜ್ಯಸರ್ಕಾರದ ಸಂಸ್ಕೃತ ವಿಶ್ವವಿದ್ಯಾನಿಲಯದ ಪ್ರಪ್ರಥಮ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮುನ್ನುಡಿ ಬರೆದು ಪ್ರಸ್ತುತ ಪಡಿಸುತ್ತಾರೆ ಹೀಗೆ….

ಮುನ್ನುಡಿ;;;

“ವಿದ್ವಾನ್ ಎಚ್.ವಿ.ನಾಗರಾಜರಾವ್ ಅವರ ಈ ಅನುವಾದವು ಕನ್ನಡ ವಿದ್ವಾಂಸರಿಗೆ ಮಾತ್ರವಲ್ಲ, ಸಂಸ್ಕೃತ ವಿದ್ವಾಂಸರ ಅಧ್ಯಯನಕ್ಕೂ ಉಪಾದೇಯವಾಗಿದೆ. ಕನ್ನಡ ಸಾಹಿತ್ಯವನ್ನು ಪ್ರೀತಿಯಿಂದ ಓದುವವರು ಅದರಲ್ಲೂ ವಿಶೇಷವಾಗಿ ಪ್ರಾಚೀನ ಕಾವ್ಯಗಳನ್ನು ಓದುವವರು ಈ ಗ್ರಂಥದ ಅಧ್ಯಯನ ಮಾಡಬೇಕು. ಮಧ್ಯಕಾಲೀನ ಕನ್ನಡ ಕವಿಗಳಾದ ರಾಘವಾಂಕ-ಲಕ್ಷ್ಮೀಶ ಮುಂತಾದವರ ‘ವರ್ಣಕಾವ್ಯ’ಗಳಲ್ಲಿರುವ ಅಲಂಕಾರ ಪ್ರಪಂಚವನ್ನೂ ಉಕ್ತಿಚಮತ್ಕಾರದ ವೈಭವವನ್ನೂ ನಾವು ಮನಮುಟ್ಟಿ ತಿಳಿಯಬೇಕಾದರೆ ರುಯ್ಯಕನ ಅಲಂಕಾರ ಸರ್ವಸ್ವದ ವ್ಯಾಸಂಗ ಮಾಡಬೇಕು! ಇಲ್ಲದೆ ಹೋದರೆ, ಅಷ್ಟರಮಟ್ಟಿಗೆ ಕನ್ನಡ ಕಾವ್ಯದ ಅಧ್ಯಯನ ಅಪೂರ್ಣವಾದೀತು! ಪ್ರಸ್ತುತ ಅನುವಾದ ಕೃತಿ ಈ ಎಚ್ಚರವನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ.

ನಾಗರಾಜರಾವ್ ಕನ್ನಡವನ್ನು ಬಲ್ಲವರು, ಸಂಸ್ಕೃತ ಶಾಸ್ತ್ರೊದಧಿಯಲ್ಲಿ ಮುಳುಗೆದ್ದವರು ಅವರು ಮಹಿಭಟ್ಟನ ‘ವ್ಯಕ್ತಿವಿವೇಕ’ ಗ್ರಂಥದ ಅನುವಾದ ಮಾಡಬಲ್ಲ ಸಾಮರ್ಥ್ಯ ಉಳ್ಳವರು. ಆ ಕೃತಿಯ ಓದು ಇಲ್ಲದೆ ಹೋದರೆ ‘ಧ್ವನಿ ಪ್ರಸ್ಥಾನ’ದ ಆಳ-ಅಗಲಗಳು ನಮಗೆ ತಿಳಿಯಲಾರದು. ರಾಜಾನಕ ರುಯ್ಯಕನ ಅಪೂರ್ವ ಗ್ರಂಥವನ್ನು ಕನ್ನಡಕ್ಕೆ ತಂದುಕೊಟ್ಟು ತಮ್ಮ ಮಾತೃ ಋಣವನ್ನು ತೀರಿಸಿದ್ದಾರೆ. ವ್ಯಕ್ತಿವಿವೇಕವನ್ನು ಕನ್ನಡಕ್ಕೆ ಕೊಟ್ಟು ಪಿತೃಋಣವನ್ನು ಅದರ ಮೂಲಕ ಆಚಾರ್ಯಋಣವನ್ನು ಅವರು ತೀರಿಸಲೆಂದು ಆಶಿಸುತ್ತೇನೆ. ಆನಂತರ ಉಳಿದ ಕಾಲಗಳಲ್ಲಿ ಜಗನ್ನಾಥ ಪಂಡಿತನ ‘ರಸಗಂಗಾಧರ’ ಮೂಲಕ ಮತ್ತೊಂದು ಸುಂದರ ಅನುವಾದವು ಕನ್ನಡಕ್ಕೆ ಬರಲೆಂದು ನಾನು ಮನವಾರೆ ನಿರೀಕ್ಷಿಸುತ್ತೇನೆ.

ಇಂಥ ಅನುವಾದ ಗ್ರಂಥಗಳಿಂದ ಕನ್ನಡದ ಶಾಸ್ತ್ರೀಯ ಸಂಪತ್ತು ಹೆಚ್ಚಾಗುತ್ತದೆ. ನಮ್ಮ ಸಾಹಿತ್ಯತತ್ವ ವಿವೇಚನೆಗೆ ಹೊಸಕಾಣ್ಕೆ, ಹೊಸಬಲ್ಮೆ, ಹೊಸಶಕ್ತಿ ಮತ್ತು ಉತ್ತಮೋತ್ತಮ ತೇಜಸ್ಸು ಬಂದೊದಗುತ್ತೆ.. ರಾಜಾನಕ ರುಯ್ಯಕನ ಮಂಗಳ ಶ್ಲೋಕದ ಪೂರ್ವಾರ್ಧದೊಂದಿಗೆ ನನ್ನ ಮಾತಿಗೆ ವಿರಾಮ ಹೇಳುತ್ತೇನೆ: ನಮಸ್ಕೃತ್ಯ ಪರಾಂ ವಾಚಂ ದೇವೀಂ ತ್ರಿವಿಧವಿಗ್ರಹಾಮ್|

 –ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

ಆಗಸ್ಟ್ 30, 2011

ನಾಗರಾಜರಾವ್ ತಮ್ಮ ಪುಟದಲ್ಲಿ ಬರೆದುಕೊಂಡ….. ಉಪೋದ್ಘಾತ

“ಸರಸ್ವತಿಯ ನಿಜಸ್ವರೂಪ ಕವಿ ಮತ್ತು ಸಹೃದಯ. ಇದೇ ಆಕೆಯ ತತ್ವ. ಇದು ಅಪೂರ್ವ ವಸ್ತುವನ್ನು ಸೃಷ್ಟಿಸಿ ಕಲ್ಲನ್ನೂ ಮೃದುವಾಗಿಸಿ ಅದರಿಂದ ರಸ ಒಸರುವಂತೆ ಮಾಡುತ್ತದೆ….. ಅನುಕೂಲ ಫಲವತ್ತಾದ ಭೂಮಿ.

ಅಲಂಕಾರಶಾಸ್ತ್ರದ ಮೂಲತತ್ವಗಳನ್ನು ಶಾಸ್ತ್ರೀಯವಾಗಿ ನಿರೂಪಿಸುವ ಮೊದಲ ಸಂಸ್ಕೃತ ಗ್ರಂಥ ಭರತನ ನಾಟ್ಯಶಾಸ್ತ್ರ. ಇದರಲ್ಲಿ ಮೂವತ್ತಾರು ಅಧ್ಯಾಯಗಳಿದ್ದು ನಾಟ್ಯಕ್ಕೆ ಸಂಬಂಧಿಸಿದ ಸಮಸ್ತ ವಿಷಯಗಳೂ ಇಲ್ಲಿ ಸಮಗ್ರವಾಗಿ…… ನಾಮೋಲ್ಲೇಖವನ್ನು ಮಾಡಿದ್ದಾನೆ.ಭರತನಾದ ಮೇಲೆ ಇದ್ದ ಹಲವಾರು ಆಲಂಕಾರಿಕರ (ಎಂದರೆ…..) ಕೃತಿಗಳು ಲುಪ್ತವಾಗಿವೆ. ರಾಮಶರ್ಮ ಎಂಬುವನು ಅಚ್ಯುತೋತ್ತರ ಎಂಬ ಗ್ರಂಥವನ್ನು …. ಗುರುವಿನ ಬಗೆಗೆ ಶಿಷ್ಯನಿಗಿದ್ದ ಗೌರವ ಆ ಮಹಾಕಾವ್ಯದ ಪದ್ಯಗಳಿಂದಲೇ ತಿಳಿದು ಬರುತ್ತದೆ.

“ರುಯ್ಯಕನು ವ್ಯಾಖ್ಯಾನ ಮಾಡುವಾಗ ಅವನ ಮುಖವು ಹಲ್ಲುಗಳ ಕಿರಣಗಳಿಂದ ವಾಗ್ದೇವಿಯ ಬಿಳುಪಾದ ರೇಶಿಮೆ ಬಟ್ಟೆಯ ಅಂಚನ್ನು ಆಕರ್ಷಿಸುವಂತೆ ತೋರುತ್ತಿತ್ತು. ಸಾರಸ್ವತಬೆಳಗಿನ ಭೂಮಿಯೇಆದ ರುಯ್ಯಕನು…..ಮುಳುಗುಹಾಕಿದ ಅನುಭವವನ್ನು ಪಡೆದನು” ಅಲಂಕಾರಸರ್ವಸ್ವದಲ್ಲಿ ಶ್ರೀಕಂಠಸ್ತವದ ಕೆಲವು ಪದ್ಯಗಳನ್ನು ಉದಾಹರಿಸಲಾಗಿದೆ. ಮುದ್ರಿತವಾಗಿರುವ ಸಾಹಿತ್ಯಮೀಮಾಂಸಾ ರುಯ್ಯಕನದೆ ಅಹುದೋ ಅಲ್ಲವೋ ಎಂಬ ಸಂಶಯವಿದೆ. ಅದರಲ್ಲಿ ವ್ಯಂಜನಾವೃತ್ತಿಯ ಪ್ರಸ್ತಾವವಿಲ್ಲ……ಎಂದು ಜಯರಥನು ಹೇಳಿದ್ದಾನೆ.

ಅಲಂಕಾರಸರ್ವಸ್ವದ ಕೆಲವು ಹಸ್ತಪ್ರತಿಗಳಲ್ಲಿ ಕೃತೀ ರಾಜಾನಕ ರುಯ್ಯಕಸ್ಯ ಎಂಬ ಸಮಾಪ್ತಿ ವಾಕ್ಯವಿದೆ. ರಾಜಾನಕ ಎಂಬುದು ಕಾಶ್ಮೀರ ಗ್ರಂಥಕಾರರ ವಿಶಿಷ್ಟ ಬಿರುದು. ರುಯ್ಯಕನು ಹಲವು ಗ್ರಂಥಗಳನ್ನು ರಚಿಸಿದ್ದರೂ…….ಸರ್ವಸ್ವವೂ ಆಗಿದೆ ಎಂಬುದು ವಿದ್ವದ್ವಿತ. ಅಲಂಕಾರ ಸರ್ವಸ್ವ: ಹೆಸರೇ ತಿಳಿಸುವಂತೆ ಈ ಗ್ರಂಥ ಅಲಂಕಾರಗಳ ನಿರೂಪಣೆಗಾಗಿ ರಚಿತವಾಯಿತು. ಮೊದಲು ಶಬ್ಧಾಲಂಕಾರ ಗಳನ್ನು ನಿರೂಪಿಸಿ ಅನಂತರ ಅರ್ಥಾಲಂಕಾರಗಳನ್ನು ನಿರೂಪಿಸಿದ್ದಾನೆ. ಪುನರುಕ್ತವಾದಾಭಾಸ, ಛೇಕಾನುಪ್ರಾಸ…… ಕಂಡಿತೋ ತಿಳಿಯದು.

ಅಲಂಕಾರ ಸರ್ವಸ್ವವನ್ನು ಕ್ರಿ.ಶ.೧೮೯೩ರಲ್ಲಿ ಜಯರಥನ ವಿಮರ್ಶಿನೀ ಎಂಬ ಟೀಕೆ ಯೊಡನೆ ಶ್ರೀದುರ್ಗಾಪ್ರಸಾದ್ ದ್ವಿವೇದಿ ಎಂಬುವರು ಕಾವ್ಯಮಾಲಾ ಸರಣಿಯಲ್ಲಿ ಪ್ರಕಟಿಸಿದ್ದರು. ಪ್ರಸಿದ್ಧ ಜರ್ಮನ್ ವಿದ್ವಾಂಸ ಯಾಕೋಬಿ…..ಈ ಸಂಸ್ಕರಣವನ್ನೇ ಬಳಸಿ ಕೊಂಡಿದ್ದಾನೆ.

ಅಲಂಕಾರ ಸರ್ವಸ್ವದ ವ್ಯಾಖ್ಯಾನಗಳು:-

ಅಲಂಕಾರ ಸರ್ವಸ್ವಕ್ಕೆ ಮೂರು ವ್ಯಾಖ್ಯಾನಗಳು ಮುದ್ರಿತವಾಗಿ ಲಭ್ಯವಾಗಿವೆ:-(1)ವಿಮರ್ಶಿನೀ: ಇದನ್ನು ಕಾಶ್ಮೀರದವನೇ ಆದ ಜಯರಥನು ಹದಿಮೂರನೇ ಶತಮಾನದಲ್ಲಿ………ಮಂತ್ರಿಯಾಗಿದ್ದನಂತೆ. (2)ವಿವೃತ್ತಿ: ಈ ವ್ಯಾಖ್ಯಾನವನ್ನು ಕೇರಳದ ಸಮುದ್ರಬಂಧನೆಂಬ ವಿದ್ವಾಂಸನು….. ಸೂಚಿಸಿದ್ದಾನೆ. (3)ಸಂಜೀವಿನೀ: ಹೊಯ್ಸಳರ ವಂಶದ ಮೂರನೆಯ ಬಲ್ಲಾಳನ ಆಸ್ಥಾನ ವಿದ್ವಾಂಸನೂ……ಎಂಬ ವ್ಯಾಖ್ಯಾನಗಳನ್ನು ರಚಿಸಿದನು. ಸಂಜೀವಿನಿಯು ಪ್ರಮೇಯ ಜಿಜ್ಞಾಸುಗಳಿಗೆ ಅತ್ಯಂತೋಪಕಾರಕ. ಒಂದೊಂದು ಅಲಂಕಾರದ…ಸಂಶಯವಿಲ್ಲ.

ಅಲಂಕಾರ ಸರ್ವಸ್ವದ ಪ್ರಭಾವ:ಮಮ್ಮಟನ ಕಾವ್ಯಪ್ರಕಾಶವನ್ನೂ….. ಎಂಬುದೇ ಸಂತೋಷವನ್ನು ತರುವಸಂಗತಿ. ರುಯ್ಯಕನ ಶಿಷ್ಯವಾತ್ಸಲ್ಯ: ರುಯ್ಯಕನ ಶಿಷ್ಯಮಂಖಕ ಶ್ರೀಕಂಠಚರಿತದಲ್ಲಿ ಒಂದು ವಿಶಿಷ್ಟ….. ಶಿಷ್ಯವಾತ್ಸಲ್ಯಕ್ಕೆ ದ್ಯೋತಕವಾಗಿದೆ. ಅಲಂಕಾರ ಸರ್ವಸ್ವದಲ್ಲಿ ಮಂಖಕನ ಪದ್ಯಗಳು ಇರಲಿಲ್ಲ. ಮಂಖಕನೇ ತನ್ನ ಪದ್ಯಗಳನ್ನು…..ಇದ್ದುವೆಂದು ನನ್ನ ಭಾವನೆ.

ಅಲಂಕಾರ ಸರ್ವಸ್ವದಲ್ಲಿ ವಿಮರ್ಶನಾ ನೈಪುಣ್ಯ: ರುಯ್ಯಕನು ಸಂಪ್ರದಾಯವನ್ನು ಗೌರವಿಸುವವನಾದರೂ ಸ್ವತಂತ್ರ ಚಿಂತನೆ ಉಳ್ಳವನು.ತನಗೆ ಸರಿಯೆಂದು ತೋರಿದ್ದನ್ನು ಅವನು ತರ್ಕಬದ್ಧವಾಗಿ, ಸೋದಾಹರಣವಾಗಿ, ಪ್ರತಿಪಾದಿಸಿದ್ದಾನೆ. ಉತ್ಪ್ರೇಕ್ಷೆ, ಸಮಾಸೋಕ್ತಿ, ಭಾವಿಕ….. ಶಬ್ಧಾಲಂಕಾರಗಳ ಸಂಕರವನ್ನು ಮಮ್ಮಟ ಒಪ್ಪಿಕೊಂಡಿದ್ದಾನೆ.

ರಾಜತಿ ತಟೀಯಮಭಿಹತ ದಾನವರಾ ಸಾತಿಪಾತಿ ಸಾರಾ ವನದಾ |

ಗಜತಾ ಯೂಥಮವಿರತದಾನವರಾ ಸಾತಿಪಾತಿ ಸಾರಾ ವನದಾ ||

ಎಂಬ ಪದ್ಯದಲ್ಲಿ ಯಮಕ ಮತ್ತು ಅನುಲೋಮಪ್ರತಿಲೋಮ ಎಂಬ ಎರಡು ಶಬ್ಧಾಲಂಕಾರಗಳ ಸಂಕರವೆಂದು ಅವನು ಉದಾಹರಿಸಿದ್ದಾನೆ. ಇದನ್ನು ರುಯ್ಯಕನು ಒಪ್ಪಿಲ್ಲ. ……….ಎಂದು ಪ್ರತಿಪಾದಿಸುತ್ತಾನೆ. ಇಷ್ಟು ಸೂಕ್ಷ್ಮವಾದ ವಿಮರ್ಶೆ ಅನ್ಯತ್ರ ದುರ್ಲಭ.

ಹೊಸದಾಗಿ ಪ್ರತಿಪಾದಿಸಿದ ಅಲಂಕಾರಗಳು: ಅಲಂಕಾರಗಳ ಸಂಖ್ಯೆ ಇಂತಿಷ್ಟೇ ಎಂದು ಹೇಳಲಾಗದು………ಎರಡು ವಸ್ತುಗಳ ವಿರೋಧ ವಿಕಲ್ಪ.”ನಮಂತು ಶಿರಾಂಸಿ ಧನೂಂಷಿ ವಾ” ಎಂಬುದು ಉದಾಹರಣೆ.ಶತ್ರುಗಳು ಬಿಲ್ಲುಗಳನ್ನಾದರೂ ಬಗ್ಗಿಸಲಿ……., ಈ ಅಲಂಕಾರವನ್ನೂ ಪ್ರಾಚೀನರು ಹೇಳಿಲ್ಲ. ಭರತನು ನಾಲ್ಕೇ ಅಲಂಕಾರಗಳನ್ನು ಹೇಳಿದ್ದನು. ವಿಷ್ಣು ಧರ್ಮೋತ್ತರ ಪುರಾಣ….. ಮುಂದಿನ ಆಲಂಕಾರಿಕರಿಗೆ ಮಾದರಿ.

ಸಂಸ್ಕೃತ ಭಾಷೆಯಲ್ಲಿರುವ ಉತ್ತಮ ಗ್ರಂಥಗಳೆಲ್ಲ ನಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಬರಲಿ ಎಂಬ ಆಸೆಯಿಂದ ಇದನ್ನು ಕನ್ನಡಿಸಿದ್ದೇನೆ. ಕನ್ನಡಿಗರು ಇದನ್ನು ಓದಿದರೆ ನನ್ನ ಶ್ರಮ ಸಾರ್ಥಕವಾಗುತ್ತದೆ.

ಕೃತಜ್ಞತೆ. ಅಲಂಕಾರ ಸರ್ವಸ್ವವನ್ನು ಅನುವಾದಿಸಿದ ಮೇಲೆ ಅದು ಬೆಳಕನ್ನು ಕಾಣುವುದು ಹೇಗೆಎಂದು ಚಿಂತಿಸುತ್ತಿದ್ದ ನನಗೆ ಅಭಯವನ್ನು ನೀಡಿ ಸಂವಹನದಲ್ಲಿ ಅದನ್ನು ಪ್ರಕಟಿಸುವ……  ಅಮೇರಿಕದ ಬೆಂಟನ್ವಿಲ್ ನಗರದಲ್ಲಿದ್ದಾಗ ಈ ಅನುವಾದ ಮಾಡಿದೆ. ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ನೀಡಿದ ನನ್ನ ಮಗಳು ಚಿ.ಸೌ.ಅನಿತಾ ಹಾಗು ಇವಳ ಪತಿ ಎ.ಎನ್. ಸತೀಶರಿಗೂ ನಾನು ಅಭಾರಿ. –ಎಚ್.ವಿ.ನಾಗರಾಜರಾವ್, 19.9.2011

ಪರಿವಿಡಿ

1.ಮಂಗಳ ಪದ್ಯ    2.ಭಾಮಹಾದಿಗಳ ಮತ  3.ರುದ್ರಟನ ಅಭಿಪ್ರಾಯ   4.ವಾಮನನ ಮತ 5.ಕುಂತಕನ ವಕ್ರೋಕ್ತಿ 6.ಭಟ್ಟನಾಯಕನ ಮತ 7.ಧ್ವನಿಕಾರಣ ಸಿದ್ಧಾಂತ  8.ವ್ಯಕ್ತಿವಿವೇಕ ಖಂಡನ  9.ಕಾವ್ಯಭೇದಗಳು 10.ಪೌನರುಕ್ತ್ಯ 11.ಪುನರುಕ್ತವದಾಭಾಸ          12.ಛೇಕಾನುಪ್ರಾಸ 13.ವೃತ್ತ್ಯನುಪ್ರಾಸ     14.ಯಮಕ  15. ಲಾಟಾನುಪ್ರಾಸ   16.ಚಿತ್ರ 17.ಉಪಮಾ   18.ಅನನ್ವಯ 19.ಉಪಮೇಯೋಪಮಾ 20.ಸ್ಮರಣಾಲಂಕಾರ 21.ರೂಪಕ   22.ಪರಿಣಾಮ 23.ಸಂದೇಹಾಲಂಕಾರ   24.ಭ್ರಾಂತಿಮಾನ್ 25.ಉಲ್ಲೇಖ          26.ಅಪಹ್ನುತಿ 27. ಉತ್ಪ್ರೇಕ್ಷಾ 28.ಅತಿಶಯೋಕ್ತಿ 29 .ತುಲ್ಯಯೋಗಿತಾ

30 .ದೀಪಕ 31.ಪ್ರತಿ ವಸ್ತೂಪಮಾ      33.ದೃಷ್ಟಾಂತ 33 .ನಿದರ್ಶನಾ    34 .ವ್ಯತಿರೇಕ 35.ಸಹೋಕ್ತಿ     36 .ವಿನೋಕ್ತಿ  37.ಸಮಾಸೋಕ್ತಿ  38.ಪರಿಕರ 39.ಶ್ಲೇಷ 40.ಅಪ್ರಸ್ತುತಪ್ರ ಶಂಸಾ 41 .ಅರ್ಥಾಂತರನ್ಯಾಸ 42.ಪರ್ಯಾಯೋಕ್ತ  43.ವ್ಯಾಜಸ್ತುತಿ      44.ಆಕ್ಷೇಪ 45.ವಿರೋಧ 46.ವಿಭಾವನಾ 47 .ವಿಶೇಷೋಕ್ತಿ  48.ಅತಿಶಯೋಕ್ತಿ 49.ಅಸಂಗತಿ 50.ವಿಷಮ 51.ಸಮ   52.ವಿಚಿತ್ರ 53.ಅಧಿಕ  54.ಅನ್ಯೋನ್ಯ 55.ವಿಶೇಷ   56.ವ್ಯಾಘಾತ 57 .ಕಾರಣಮಾಲಾ 58.ಏಕಾವಲೀ 59.ಮಾಲಾದೀಪಕ   60.ಸಾರಾಲಂಕಾರ

61.ಕಾವ್ಯಲಿಂಗ   62.ಅನುಮಾನಾಲಂಕಾರ 63.ಯಥಾಸಂಖ್ಯ   64.ಪರ್ಯಾಯ 65.ಪರಿವೃತ್ತಿ  66.ಪರಿಸಂಖ್ಯ 67 ಅರ್ಥಾಪತ್ತಿ    68.ವಿಕಲ್ಪ 69.ಸಮುಚ್ಚಯ    70.ಸಮಾಧಿ 71.ಸಮಾಹಿತ  72.ಪ್ರತ್ಯನೀಕ 73.ಪ್ರತೀಪ   74.ಮೀಲಿತ 75.ಸಾಮಾನ್ಯ 76.ತದ್ಗುಣ 77ಅತದ್ಗುಣ  78.ಉತ್ತರ 79.ಸೂಕ್ಷ್ಮ   80.ವ್ಯಾಜೋಕ್ತಿ81.ವಕ್ರೋಕ್ತಿ    82.ಸ್ವಭಾವೋಕ್ತಿ 83.ಭಾವಿಕ   84.ಉದಾತ್ತ 85.ರಸವದಲಂಕಾರ       86.ಪ್ರೇಯೋಲಂಕಾರ 87.ಊರ್ಜಸ್ವಿ  88.ಸಮಾಹಿತ 89.ಭಾವೋದಯಾಲಂಕಾರ   90.ಭಾವಸಂಧ್ಯಲಂಕಾರ

91.ಭಾವಶಬಲತಾಲಂಕಾರ    92.ಸಂಸೃಷ್ಟಿ 93.ಶಬ್ದಾಲಂಕಾರಸಂಸೃಷ್ಟಿ 94.ಅರ್ಥಾಲಂಕಾರಸಂಸೃಷ್ಟಿ 95ಉಭಯಸಂಸೃಷ್ಟಿ 96 .ಸಂಕರ 97.ಅಂಗಾಂಗಿಭಾವಸಂಕರ 98 ಸಂದೇಹಸಂಕರ 99.ಏಕವಾಚಕಾನುಪ್ರವೇಶಸಂಕರ     100.ಸಮಾಪ್ತಿ. 101.ಅಲಂಕಾರಸರ್ವಸ್ವದಲ್ಲಿರುವ ಪದ್ಯಗಳ ಅಕಾರಾದಿ, ಆಕರಸೂಚೀ 102.ಅಲಂಕಾರಸರ್ವಸ್ವದಲ್ಲಿ ಲಕ್ಷಿತವಾದ ಅಲಂಕಾರಗಳ ಅಕಾರಾದಿ ಪಟ್ಟಿ.

“ಅಲಂಕಾರಸರ್ವಸ್ವಮ್” ಪುಸ್ತಕದಲ್ಲಿ ಭರತ ಮುನಿಯ ನಾಟ್ಯಶಾಸ್ತ್ರಕ್ಕೆ ಪೂರಕ ಆಗುವಂಥ ಅಲಂಕಾರಿಕ ಪ್ರಾಶಸ್ತ್ಯಉಳ್ಳ ನೂರಾರು ವಿಷಯಗಳಿವೆ, ವಿಶೇಷಗಳಿವೆ, ಸಂಗ್ರಹಗಳಿವೆ, ಸಮಾಚಾರಗಳೂ ಇವೆ. ಎಲ್ಲಕ್ಕಿಂತ ಮಿಗಿಲಾಗಿ ಶಿಲ್ಪಕಲಾಶಾಸ್ತ್ರ ನೈಪುಣ್ಯಗಳಿಗೆ ಬೇಕಾಗುವ ಕೆಲವು ಅವಶ್ಯಕ ಮಾಹಿತಿ ಮತ್ತು ವಿದ್ವತ್ತುಗಳೂ ಇಲ್ಲಿವೆ. ಎಷ್ಟೋ ವರ್ಷಕ್ಕೊಮ್ಮೆ ಜರುಗುವ ರಥೋತ್ಸವ ಮಹೋತ್ಸವ ತೆಪ್ಪೋತ್ಸವ ಜಾತ್ರೋತ್ಸವ ಇದ್ದಂತೆ ಕನ್ನಡ ಸಾರಸ್ವತ ಲೋಕಕ್ಕೆ ಈ ಬಗೆಯ ಅಮೋಘ ಕೃತಿಗಳು ಅಪರೂಪಕ್ಕೊಮ್ಮೆ ಲೋಕಾರ್ಪಣೆ ಆಗುತ್ತವೆ.

ಕನ್ನಡ ಕಲಾಕ್ಷೇತ್ರದ ವಿದ್ವಾಂಸರ ಅಥವ ನಿಪುಣರ ವರ್ಗಕ್ಕೆ ಅರ್ಥವಾಗುವ ಹಾಗೂ ಅಗತ್ಯವಿರುವ ಇಂತಹ ಹೊತ್ತಗೆಯು ಕೇವಲ ಜನಪ್ರಿಯತೆಯಲ್ಲಿ ವಿಫಲವಾದರೂ ವಿದ್ವತ್ ಪ್ರತಿಭೆಯಲ್ಲಿ ಖಂಡಿತವಾಗಿ ಉತ್ತುಂಗ ವಿಜಯ ಸಾಧಿಸುತ್ತದೆ. ಏಕೆಂದರೆ ನಮ್ಮ ಕನ್ನಡ ಓದುಗರು ಜನಪ್ರಿಯತೆ ಮತ್ತು ವಿದ್ವತ್ಪ್ರತಿಭೆ ಎರಡನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳುವ ಬುದ್ಧಿವಂತರು. ಆದ್ದರಿಂದ ಇಂಥದ್ದೊಂದು ಉತ್ತಮ ಗ್ರಂಥವನ್ನ ಮನಸಾರೆ ಸ್ವಾಗತಿಸುತ್ತಾರೆ ಮಾತ್ರವಲ್ಲ, ಇದರ ಅನುವಾದಕರನ್ನೂ ಹೃತ್ಪೂರ್ವಕವಾಗಿ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ವಿಶ್ವಾಸ ನನಗಿದೆ. ಹೀಗಾದಾಗ ಮಾತ್ರ ಕೃತಿಯ ಸೋಲೂ ಗೆಲುವೂ ನಗಣ್ಯವಾಗಿ ಕರ್ತೃವು ಸ್ತುತ್ಯಾರ್ಹ ಆಗುತ್ತಾನೆ, ಎಂಬುದೇ ನನ್ನ  ಅಚಲ ನಿಲುವು…?!

– ಕುಮಾರಕವಿ ಬಿ.ಎನ್.ನಟರಾಜ 21.5.2012

88 ಸತ್ಯಜಿತ್ ರಾಯ್, ಶ್ಯಾಮ್ ಬೆನಗಲ್ ರಿಗೂ ಕರ್ನಾಟಕದ ಸೆಳೆತ

ಪ್ರಕಟಿತ ಲೇಖನದ ಬಗ್ಗೆ ನಟ ಶಂಕರನಾಗ್ ಪ್ರತಿಕ್ರಿಯೆಗೆ ತಕ್ಕಂತೆ ಸಾಹಿತಿ ಕುಮಾರಕವಿ ರವರ ಪ್ರತಿಧ್ವನಿ ಲೇಖನದ ಶೀರ್ಷಿಕೆ “ಶೋಭಿಸದ ಅಭಿಪ್ರಾಯ” ಈ ಕೆಳಕಂಡಂತೆ ಪ್ರಕಟಿತ:

ಶೋಭಿಸದ ಅಭಿಪ್ರಾಯ

ದಿ.11.3.88ರ ಶುಕ್ರವಾರದ ಚಿತ್ರಪ್ರಭ ಸಂಚಿಕೆಯ “ಸತ್ಯಜಿತ್ ರಾಯ್, ಶ್ಯಾಮ್ ಬೆನಗಲ್ರಿಗೂ ಕರ್ನಾಟಕದ ಸೆಳೆತ” ಎಂಬ ಬರಹದಡಿಯ ಲೇಖನದಲ್ಲಿ ನಟ ಶಂಕರನಾಗ್ ರವರು ಹೇಳಿದ: “ರೀಮೇಕ್ ಚಿತ್ರಗಳಿಗೂ ಸರ್ಕಾರವು ಸಹಾಯಧನ ನೀಡಿದಲ್ಲಿ ರಾಜ್ಯದ ಚಲನಚಿತ್ರ ಚಟುವಟಿಕೆ ಹೆಚ್ಚುವುದು. ಇವು ಡಬ್ಬಿಂಗ್ ಚಿತ್ರಗಳಂತಲ್ಲದೆ ಪೂರ್ಣವಾಗಿ ಬೇರೆಯೇ ಚಿತ್ರ ತಯಾರಿಕೆಯಾದ್ದರಿಂದ ಉತ್ತೇಜನಕ್ಕೆ ಅರ್ಹ” ಎಂಬ ಅಭಿಪ್ರಾಯ ಸರಿಯಲ್ಲ. ಅದರಲ್ಲೂ ಶಂಕರನಾಗ್ ರಂಥ ಧೀಮಂತನಟ ಹಾಗು ಕನ್ನಡಕ್ಕಾಗಿ ಕೈಎತ್ತುವ ಇಂತಹವರು ಈ ಥರದ ಹೇಳಿಕೆಯನ್ನು ನೀಡಬಾರದಿತ್ತು.

ಪರೋಕ್ಷವಾಗಿ ರೀಮೇಕ್ ಚಿತ್ರಗಳಿಗೆ ಉತ್ತೇಜನ ನೀಡುತ್ತಿರುವ ಇವರಿಗೆ ಏಕೆ ಬಂತೋ ಈ ಬುದ್ಧಿ?! ಪ್ರೌಢ ಸ್ಥಾನದಲ್ಲಿ ಇರುವವರೊಬ್ಬರು ತುಸು ಗಂಭೀರ ವಾಗಿ ಚಿಂತಿಸದೇ ಪಕ್ಕದಲ್ಲೇ ಇರುವ ಓರ್ವ ಹಿತಶತ್ರುವಿನ ಬಗ್ಗೆಯೇ ಹೀಗೆಲ್ಲ ಪ್ರಚಾರ ಮಾಡುತ್ತಾ ಹೊರಟರೆ ಈಗಾಗಲೇ ಹದಗೆಟ್ಟಿರುವ ಕನ್ನಡ ಚಿತ್ರೋದ್ಯಮದ ಪಾಡೇನು? ದೊಡ್ಡ ಮನಸ್ಸು ಮಾಡಿ ಉತ್ತರಿಸಬೇಕು ಬುದ್ಧಿ ಜೀವಿಗಳಾದ ಶಂಕರನಾಗ್.

ಈ ರೀಮೇಕ್ ಚಿತ್ರಗಳ ಹಾವಳಿ ಯಿಂದಾಗಿ ಕನ್ನಡ ಚಿತ್ರಗಳಿಗೆ ಮತ್ತು ಕನ್ನಡಿಗರಿಗೆ ಆಗುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನಷ್ಟ, ಅನಾಹುತ ಹಾಗೂ ಆಘಾತಗಳು ಅಪಾರ. ರೀಮೇಕ್ ಭೂತಗಳಿಂದಾಗಿ ಕನ್ನಡ ಚಿತ್ರಾಭಿಮಾನಿಗಳಿಗೆ ವಿಶೇಷವಾಗಿ ಅಪ್ಪಟ ಕನ್ನಡ ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಆಗುತ್ತಿರುವ ಕಷ್ಟ-ನಷ್ಟ ವರ್ಣಿಸಲು ಅಸಾಧ್ಯ. ನಮ್ಮಲ್ಲೇ ಸ್ವಂತಿಕೆಗೂ ಪ್ರತಿಭೆಗೂ ಕೊರತೆ ಇಲ್ಲದಿರುವಾಗ ಅಂದರೆ, ಕಲಾವಿದರೂ ಸಾಹಿತಿಗಳೂ ಕನ್ನಡ ಚಿತ್ರರಂಗದಲ್ಲೇ ತುಂಬಿ ತುಳುಕುತ್ತಿರುವಾಗ; ದಾಸ್ಯಕ್ಕಿಂತಲೂ ಹೀನಾಯವಾದ “ಎಂಜಲು ಸಂಸ್ಕೃತಿ”ಯನ್ನ ಎರವಲು ಪಡೆಯುವ ಈ ದುರ್ಬುದ್ಧಿಯಾದರೂ ಏಕೆಬೇಕು? ಎಂಬುದನ್ನು ಕನ್ನಡಿಗರಾರೇ ಆಗಿರಲಿ ಮರೆಯಬಾರದು.

ಕಡೆಯದಾಗಿ ನನ್ನ ಸಲಹೆ: ಕನ್ನಡದ ಪ್ರತಿಯೊಂದು ರೀಮೇಕ್ ಚಿತ್ರದ ಸ್ಥಾನದಲ್ಲೂ ಬೇರೆಯೇ ಆದ ಕನ್ನಡದ್ದೇ ಹೊಚ್ಚ ಹೊಸಾ ಚಲನಚಿತ್ರ ನಿರ್ಮಾಣ ಕೈಗೊಂಡಾಗ ಮಾತ್ರ ಅಳಿದು ಹೋಗುತ್ತಿರುವ ಅದೆಷ್ಟೋ ಕನ್ನಡ ಕಲಾವಿದರೂ ಕನ್ನಡ ಸಾಹಿತಿಗಳೂ ಬದುಕುಳಿದು ಬೆಳೆದಾರು!

– ಕುಮಾರಕವಿ ಬಿ.ಎನ್.ನಟರಾಜ

ಕನ್ನಡಪ್ರಭ “ಚಿತ್ರಪ್ರಭ” ಶುಕ್ರವಾರ ಸಂಚಿಕೆ

25.3.1988 ಪತ್ರಪ್ರಭ ಶೀರ್ಷಿಕೆ ಪುಟ-2.

 

89 ಕೃತಿ : ಶೋಧನ

ಕರ್ತೃ : ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ)

ಕನ್ನಡ ಸಂಸ್ಕೃತ ಹಾಗೂ ಇಂಗ್ಲಿಷ್ ಮೂರೂ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದು ಹಿಡಿತ ಸಾಧಿಸಿದ ಕೆಲವೇ ಕನ್ನಡ ಸಾಹಿತಿಗಳಲ್ಲಿ ಅಗ್ರಗಣ್ಯ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ). ಮೈಸೂರು ವಿಶ್ವ ವಿದ್ಯಾನಿಲಯದ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಉತ್ತಮ ಪ್ರಾಧ್ಯಾಪಕರಲ್ಲಿ ಇವರೂ ಒಬ್ಬರು. ದೇಜಗೌ, ಹಾಮಾನಾ, ಸಿಪಿಕೆ ಜೀಶಂಪ ತಿಪ್ಪೇರುದ್ರಸ್ವಾಮಿ ಇಂಥಹ

ದಿಗ್ಗಜರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅದೃಷ್ಟವಂತರು ಎಂಬ ನಾಣ್ಣುಡಿ ಇವತ್ತಿಗೂ ಸತ್ಯ.ಇದಕ್ಕೆ ಉದಾಹರಣೆ: ಆಲನಹಳ್ಳಿಕೃಷ್ಣ,  ನಾಗತಿಹಳ್ಳಿಚಂದ್ರಶೇಖರ ಮುಂತಾದ ಅನೇಕ ಜನಪ್ರಿಯ ವ್ಯಕ್ತಿಶಕ್ತಿಗಳು.

“ಶೋಧನ” ಕೃತಿಯ ಕರ್ತೃ ಸಿಪಿಕೆ ರವರು ಸಧ್ಯದಲ್ಲೆ 200ಕ್ಕು ಹೆಚ್ಚಿನ ಪುಸ್ತಕಗಳನ್ನು ಬರೆದು ಪ್ರಕಟಿಸುವ ದಾಖಲೆ ನಿರ್ಮಿಸುವತ್ತ ಸಾಗುತ್ತಿದ್ದಾರೆ ಎಂಬುದು ಸಂತಸದ ವಿಷಯ. ನನ್ನ ಎರಡು ಪುಸ್ತಕಗಳಿಗೂ ಇವರದೇ ಮುನ್ನುಡಿ ಇದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನಂತಹ ಹೊಸಬರ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ ನೂರಾರು ಬರಹಗಾರರ ಪುಸ್ತಕಗಳಿಗೆ ಮುನ್ನುಡಿ, ಹಿನ್ನುಡಿ, ಬೆನ್ನುಡಿ, ಚೆನ್ನುಡಿಗಳನ್ನು ತುಂಬು ಹೃದಯದಿಂದ ಬರೆದುಕೊಡುವ ಮೂಲಕ ಬೆಂಬಲಿಸಿದ್ದಾರೆ ಹಾರೈಸಿದ್ದಾರೆ.

ಇಷ್ಟಿದ್ದರೂ ತಮ್ಮ ಮನದಲ್ಲಿ ಏನಾದರೊಂದು ಮಂಥನ ಮಾಡುವ ಸಂ- ಶೋಧನಾತಜ್ಞ, ನಿರ್ಲಿಪ್ತ ಸ್ವಭಾವದ ಶಾಂತಮೂರ್ತಿ, ಸರಳ ಸಜ್ಜನಿಕೆಯ ಸುಗುಣವಂತ. ಸದಾ ತಮ್ಮದೇ ಚಿಂತನಾ ಲೋಕದಲ್ಲಿ ವಿಹರಿಸುತ್ತಾರೆ! ಕನ್ನಡ ಕಾವ್ಯಮೀಮಾಂಸೆ ಸೇರಿದಂತೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ಇವರ ಬರಹ ಶೈಲಿ, ಮನನ ಪ್ರಸ್ತುತಿ; ಅಮೋಘ ಅದ್ಭುತ!

‘ಶೋಧನ’ ಹೊತ್ತಗೆಯಲ್ಲಿ ಒಟ್ಟಾರೆ ಇಪ್ಪತ್ತು ಟಿಪ್ಪಣಿಗಳಿದ್ದು ಪುಸ್ತಕವು “ಸಂಶೋಧನೆಯ ವರ್ಗಕ್ಕೆ ಸೇರುತ್ತದೆ” ಎಂಬುದಾಗಿ ಸ್ವಯಂ ಸಿಪಿಕೆಯವರೇ ತಮ್ಮ ಈ ಕೃತಿಯೊಳಗೆ ಹೇಳಿಕೊಂಡಿದ್ದಾರೆ. ಯಾವುದೇ ಅಂತೇಕಂತೆ ಇದರಲ್ಲಿಲ್ಲ, ಅಡಗೂಲಜ್ಜಿ ಕಥೆಯಂತು ಇಲ್ಲವೇ ಇಲ್ಲ, ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿಲ್ಲ, ಅಪ್ಪಟ ಸಂಶೋಧನೆ ಮೂಲಕ ಅಚ್ಚ ಕನ್ನಡದಲ್ಲಿ ಸ್ವಚ್ಛ ಪದಗಳನ್ನು ಬಳಸಿರುವ ಈ ಪುಸ್ತಕದ ಬರಹಗಳು ಗಾಂಭೀರ್ಯವನ್ನು ಕಾಯ್ದು ಕೊಂಡಿವೆ.

ಇಲ್ಲಿನ ಬಹುತೇಕ ಬರವಣಿಗೆ ವಿಮರ್ಶಾತ್ಮಕವಾಗಿದ್ದು ಸೂಕ್ಷ್ಮವಾಗಿಯೂ ಸಂಕ್ಷಿಪ್ತವಾಗಿಯೂ ಮೂಡಿಬಂದಿದೆ. ಈ ಕಾರಣಕ್ಕೆ ಎಲ್ಲವೂ ಮೌಲ್ಯಯುತ ಅನಿಸುತ್ತದೆ. ನಾಳೆ ಕಾಲಕ್ಕೆ ಐಚ್ಛಿಕ ಕನ್ನಡ ವಿಷಯದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ, ಪಿ.ಎಚ್‌ಡಿ. ಸಂಶೋಧನಾಅಭ್ಯರ್ಥಿ ಹಾಗೂ ಕನ್ನಡ ಪಂಡಿತ(ಜ್ಞ)ರಿಗೆ ಬಹುಕಾಲದವರೆಗೆ ಬೆಲೆಬಾಳುತ್ತವೆ. ಇದೇ ಈಗ ಇದರಲ್ಲಿನ ಗಮನಾರ್ಹ ಅಂಶ.

ಹಳಗನ್ನಡ ಪದ್ಯಗಳಲ್ಲಿ ಕಂಡುಬರುವ ಕೇವಲ ಒಂದು ಪದವನ್ನೆತ್ತಿಕೊಂಡು ಅದರ ಹಿ(ಮು)ನ್ನೆಲೆ ಚರಿತ್ರೆಯನ್ನ ಅಥವ ಆಒಂದು ನಿರ್ಧಿಷ್ಟ ಪದದ ಹಿಂದುಮುಂದಿನ ಇತಿಹಾಸ ಕೆದಕುವುದು ಕಷ್ಟಸಾಧ್ಯ. ಜತಗೆ ಈ ಪದದ ಬಗ್ಗೆ ಹಿಂದಿನ ಕಾಲದಿಂದಲೂ ಯಾರ್ಯಾರು ಹೇಗೆಲ್ಲ ಉಪಯೋಗಿಸಿಕೊಂಡರು, ಈ ಕಾಲದಲ್ಲಿ ಹೇಗೆ ಉಪಯೋಗಿಸಿ ಕೊಳ್ಳುತ್ತಿದ್ದಾರೆ.

ಆ ಒಂದು ಪದಕ್ಕೆ ಆಗ ಏನೇನು ಅರ್ಥೈಸಿಕೊಂಡರು, ಈಗ ಏನೇನು ಅರ್ಥೈಸಿಕೊಳ್ಳುತ್ತಿದ್ದಾರೆ, ಎಂಬುವ ಬಗ್ಗೆಲ್ಲ ಪೂರ್ಣ ಮಾಹಿತಿ ಇದೆ. ಇಂಥ ಕ್ಲಿಷ್ಟತೆಗಳ ಪುನರ್ವಿಮರ್ಶೆ ಮಾಡುವುದು ಸುಲಭದ ಮಾತಲ್ಲ. ಈ ಕೈಂಕರ್ಯವು ಎಲ್ಲರಿಗೂ ಸಾಧ್ಯವಾಗಲ್ಲ. ಸದಾ ಎಲ್ಲರ(ಕೃತಿಯ) ಬಗ್ಗೆ ಏನೋ ಒಂದಷ್ಟು ಟೀಕೆ ಟಿಪ್ಪಣಿ ಮಾಡಿ, ತೆಪ್ಪಗೆ ಇದ್ದುಬಿಡುವಷ್ಟು ಸಾಮಾನ್ಯ ಕೆಲಸವಲ್ಲ! ಇಂತಹ ಒಂದು ಮಹತ್ವದ ಕಾರ್ಯವನ್ನು ಡಾ.ಸಿ.ಪಿ.ಕೆ.ಯವರು ಸಂಕ್ಷಿಪ್ತ ರೂಪದಲ್ಲಿ ಬರೆದಿರುವುದಲ್ಲದೇ ಬಲು ಸೊಗಸಾಗಿ ಮೂಡಿಸುವುದರಲ್ಲಿ ಯಶಸ್ವಿ ಆಗಿದ್ದಾರೆ.

ಈ ಮಹಾಕೃತಿಯ ಬಗ್ಗೆ ಬೇರಾರೇ ಆದರೂ ಪ್ರಾಮಾಣಿಕವಾಗಿ ಮತ್ತೊಮ್ಮೆ ಇನ್ನೊಂದು  ವಿಮರ್ಶೆಗೆ ಅಥವ ತೀಕ್ಷ್ಣ ಪ್ರತಿಕ್ರಿಯೆಗೆ ಒಂದುವೇಳೆ ಪಂಥಾಹ್ವಾನ ನೀಡಿದರೂ ಸ್ವೀಕರಿಸುವ ಧಾಟಿಯಲ್ಲಿ ಸವಾಲ್ ಹಾಕುವಂತಿವೆ, ಈ ಪುಸ್ತಕದ ಟಿಪ್ಪಣಿಗಳು?!

– ಕುಮಾರಕವಿ ಬಿ.ಎನ್. ನಟರಾಜ್

ಮೈವಿವಿ ಅಂಚೆ ತೆರಪಿನ ಶಿಕ್ಷಣ ಸಂಸ್ಥೆ

ಮಾನಸಗಂಗೋತ್ರಿ, ಮೈಸೂರು-೬

ಆಗಸ್ಟ್ 1979 ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ .

90 ಕೃತಿ : ಅರಳಿದ ಮೊಗ್ಗುಗಳು

(ಕವನ ಸಂಕಲನ)

ಸಂಪಾದಕರು : ಕುಮಾರಕವಿ ನಟರಾಜ

ಪ್ರಕಾಶಕರು: ಯುವಶಕ್ತಿ ಪ್ರಕಾಶನ, ಮೈಸೂರು-10

124 ಪುಟಗಳು, ಬೆಲೆ 13 ರೂ.,

ಮೊದಲ ಮುದ್ರಣ 1984

ಪುಸ್ತಕ ವಿಮರ್ಶಕ : ಸಿದ್ಧರಾಜ ಪೂಜಾರಿ

ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿನ ಯುವ ಪ್ರತಿಭೆಗಳನ್ನು ಆಯ್ದು ಅವರ ಕವನಗಳನ್ನು ಈ ಪುಸ್ತಿಕೆಯಲ್ಲಿ ಪ್ರಕಟಿಸಲಾಗಿದೆ. ಕುಮಾರಕವಿಯವರ ಸಂಪಾದಕೀಯದಲ್ಲಿನ “ರಾಷ್ಟ್ರಕವಿ ಬರೆದುದೆಲ್ಲವೂ ಶ್ರೇಷ್ಠವೇನಲ್ಲ, ಬಡಬೋರೇಗೌಡ ಬರೆದುದೆಲ್ಲವೂ ನಿಕೃಷ್ಟವೇನಲ್ಲ” ಮಾತುಗಳನ್ನು ಅವಲೋಕಿಸುತ್ತ ಈ ಸಂಕಲನದ ಸಾಧಕ ಬಾಧಕಗಳನ್ನು ಚರ್ಚಿಸ ಬಹುದಾಗಿದೆ. ಎಲ್ಲರೂ ಒಪ್ಪತಕ್ಕ ಈ ಮಾತುಗಳನ್ನು ಲಕ್ಷ್ಯ ದಲ್ಲಿಟ್ಟುಕೊಂಡೇ ನಾನೂ ಈ ಸಂಕಲನ ಓದಿದೆ, ನನ್ನ ಕಾವ್ಯ ಕುರಿತಾದ ಚಿಂತನೆ ಇನ್ನೂ ಜಾಗೃತವಾಯಿತು.

ಮೊದಲು ‘ಕಾವ್ಯ’ ಎಂದರೇನು? ಎಂಬುದನ್ನು ಅವಲೋಕಿಸೋಣ.”ಕಾವ್ಯವು ಕವಿಯ ಸಂವೇದನೆಗಳಲ್ಲಿ ಅಮೂರ್ತರೂಪದಲ್ಲಿ ಇರುತ್ತದೆ. ಆಯಾಯ ಕವಿಯು ಕವನ ರೂಪದಲ್ಲಿ ಅದನ್ನು ಅಭಿವ್ಯಕ್ತಿಸಿದಾಗ ಅದಕ್ಕೆ ಅನುಭವದ ಮೂರ್ತತೆ ದೊರೆಯುತ್ತದೆ, ಅದೇ ಕಾವ್ಯ ಸಹೃದಯಿಯ ಕಾವ್ಯಾನುಭವದಲ್ಲಿ ಸಂಭವಿಸುತ್ತದೆ. ” ಅಂದಮೇಲೆ ತೀ.ನಂ.ಶ್ರೀ. ಹೇಳುವಂತೆ: “ಕಾವ್ಯ ಅಂದರೆ ಏನೆಂಬುದು ಅನುಭವಕ್ಕೆ ಮಾತ್ರ ಗೊತ್ತು, ಅದನ್ನು ಬಾಯಿಮಾತಿನಿಂದ ಹೇಳುವುದು ಮಾತ್ರ ಅಸಾಧ್ಯ”.

ವಿಷಯ ಹೀಗಿರುವಾಗ ಯಾವುದೇ ಕವನದ ಸಫಲತೆಯು ಅದು ಉಂಟುಮಾಡ ಬಹುದಾದ ‘ಕಾವ್ಯಾನುಭವದ ತೀವ್ರತೆ’ಯನ್ನು ಅವಲಂಬಿಸಿದೆ. ಇದರರ್ಥ ಕವಿಯ ಗ್ರಾಹಕ ಶಕ್ತಿ ಪ್ರಬಲವಾಗಿರುವಂತೆ ಆತನ ಅನುಭವ- ಸಂವೇದನೆಗಳಲ್ಲೂ ತೀವ್ರತೆ ಇರಬೇಕು. ನಂತರ ಅವುಗಳ ಸಹಜ ಅಭಿವ್ಯಕ್ತಿಗೆ ಭಾಷಾಜ್ಞಾನದ ಹೆಚ್ಚಿನಅರಿವು ಅತ್ಯಗತ್ಯ. ಅರಳಿದ ಮೊಗ್ಗುಗಳು ಸಂಪಾದಕರೇ ಹೇಳುವಂತೆ:ಯಾರೂ ಹುಟ್ಟಿನಿಂದಲೇ ಕವಿಗಳಲ್ಲ. ಅಂದರೆ ಉತ್ತಮ ಕಾವ್ಯ ಹೊರಬರಲು ಕಾವ್ಯಾಭ್ಯಾಸದ ಅಗತ್ಯತೆ ಅನಿವಾರ್ಯವಾಗುತ್ತದೆ. ಈ ದಿಶೆಯಲ್ಲಿ ಪ್ರಯತ್ನವೂ ಸಹ ಅವಶ್ಯಕವೆಂದಾಯಿತು.

ಇಲ್ಲಿಯ ಕವನಗಳನ್ನು ಓದಿದಾಗ ಬಹಳಷ್ಟು ಕವಿಗಳಲ್ಲಿ ಈ ಅಭ್ಯಾಸದ ಕೊರತೆ ಎದ್ದು ತೋರುತ್ತದೆ. ಇಲ್ಲಿಯ ಕಾವ್ಯ ವಸ್ತುವಿನ ವೈವಿಧ್ಯತೆ ಗಮನಿಸಿದಾಗ ಚೆನ್ನುಡಿಕಾರರಂತೆ ಯಾರಿಗಾದರೂ ವಿಸ್ಮಯವಾಗುತ್ತದೆ. ತಮ್ಮ ಇಡೀ ಅನುಭವವನ್ನು ಕಾವ್ಯ ಮಾಧ್ಯಮಕ್ಕೆ ತೊಡಗಿಸುವಾಗ ಭಾಷೆಯು ಕೃತಕವಾಗಿ ಕಾಡುತ್ತದೆ.  ಸಹೃದಯಿಗಳ ಕಾವ್ಯಾನುಭವದಲ್ಲಿ ಕಾವ್ಯ ಸಂಭವಿಸಲು ತಿಣುಕಾಡುತ್ತದೆ.

ಇಲ್ಲಿಯ ಬಹುತೇಕ ಕವಿಗಳು ಈದಿಶೆಯತ್ತ ಎಚ್ಚರಿಕೆ ವಹಿಸ ಬೇಕಾಗಿರುವುದರಿಂದ ಮೇಲಿನ ಮಾತುಗಳನ್ನು ಸ್ವಲ್ಪವಿವರವಾಗಿ ಬರೆದಿರುವೆ. ಇಲ್ಲಿಯ ಎಲ್ಲಾ ಕವಿಗಳಲ್ಲಿರುವ ಬರಹದ ಉತ್ಸಾಹಕ್ಕೆ ಈ ಮಾತುಗಳು ಪೋಷಕವಾದರೆ ಅವರವರ ಭವಿಷ್ಯ ಭರವಸೆದಾಯಕ ಆಗಬಲ್ಲುದು.

ಸಂಕಲನದ ಎಲ್ಲ ಕವಿತೆಗಳನ್ನು ಸಂತೋಷದಿಂದ ಓದಿ ಈ ಪ್ರಾಮಾಣಿಕ ನಿರ್ಧಾರಕ್ಕೆ ಬಂದಿರುವೆ. ಛಂದಸ್ಸು, ಅಲಂಕಾರ, ಪ್ರತೀಕ, ಇತ್ಯಾದಿಗಳು ಕಾವ್ಯದ ಶರೀರವಾದರೆ ಅದರಿಂದ ವೇದ್ಯವಾಗುವ ರಸ, ಧ್ವನಿ, ಇತ್ಯಾದಿಗಳು ಕಾವ್ಯದ ಆತ್ಮವಾಗುತ್ತವೆ. ಕೆಲವರಿಗೆ ಕಾವ್ಯ ಶರೀರದ ಬಗ್ಗೆ ಸ್ಪಷ್ಟ ಅಭ್ಯಾಸವಿದೆ. ಆದರೆ ಅನುಭವದ ಸಹಜತೆಯಿಲ್ಲದೆ ರಸ ಮತ್ತು ಧ್ವನಿಗಳು ಪರಿಣಾಮಕಾರಿಯಾಗಿ ವೇದ್ಯವಾಗುವುದಿಲ್ಲ.

ಕೆಲವರಿಗೆ ತಾವು ಹೇಳಹೊರಟ ವಿಷಯಗಳಿಗೆ ಸರಿಯಾದ ಶಬ್ಧಗಳು ದೊರೆಯದೆ ಕಾವ್ಯವು ಗೊಂದಲಕ್ಕೆ ಈಡುಮಾಡುತ್ತದೆ. ಉದಾಹರಣೆಗೆ ಒಂದು ಕವನ ತೆಗೆದುಕೊಳ್ಳೋಣ. ‘ನಿರಾಸೆ’ ಕವಿತೆಯ ತಲೆಬರಹ, ಇದು ವ್ಯಕ್ತಪಡಿಸುವ ಭಾವನೆಯೆಂದರೆ ‘ಅಸಹಾಯಕತೆ’. ಈ ಅಸಹಾಯ ಕತೆಗಾಗಿ ಕವಿಗೆ ನಿರಾಸೆಯಾಗಿದೆ. ಆದ್ದರಿಂದ ಕವನದ ತಲೆಬರಹ ‘ಅಸಹಾಯಕತೆ’ ಎಂದಾಗಿದ್ದರೆ ಚೆನ್ನಾಗಿತ್ತು ಎಂದೆನಿಸುತ್ತದೆ.

ಸಂಕಲನದ ಹೆಗ್ಗಳಿಕೆ ಎಂದರೆ ಎಲ್ಲ ಕವಿಗಳ ಆಶಯ ಅಥವಾ ಕಾಳಜಿ ಗಮನಾರ್ಹವಾಗಿವೆ. ಸಧ್ಯದ ವ್ಯವಸ್ಥೆಯಲ್ಲಿ ಇರಬಹುದಾದ ಆತಂಕ, ಸಂದಿಗ್ಧತೆಗಳನ್ನು ಅರಿತವರಾಗಿದ್ದಾರೆ. ಎಲ್ಲರೂ ನೊಂದುಕೊಳ್ಳುತ್ತಾರೆ, ಮರುಗುತ್ತಾರೆ, ಪ್ರತಿಭಟಿಸುತ್ತಾರೆ, ಸಿಡಿದೇಳುತ್ತಾರೆ. ಈ ಸಂಕಲನವು ಯಾವುದೇ ಸಾಹಿತ್ಯಕ ತತ್ವಗಳಿಗೆ ಬದ್ಧವಾಗಿಲ್ಲ. ಹೀಗಾಗಿ ಅನೇಕ ಕವಿಗಳು ಯಾವುದೇ ವಿಷಯದ ಮೇಲೆ ನಿಸ್ಸಂಕೋಚವಾಗಿ ಬರೆದಿದ್ದಾರೆ.

ಈ ಎಲ್ಲ ಕವನಗಳನ್ನು ಒಂದೆಡೆಗೆ ಸೇರಿಸಿ ಸಂಪಾದಿಸುವ ಕೆಲಸ ಅತ್ಯಂತ ಪರಿಶ್ರಮದ್ದಾಗಿದೆ. ಆದರೆ, ಆ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೇಯಸ್ಸು ಕುಮಾರಕವಿಗಳಿಗೆ ಇದೆ. ಪ್ರಕಾಶಕ ಬಿ.ಬಸವರಾಜು ವಿನೀತರಾಗಿ ಹೇಳುವ ಮಾತು ಹೃದ್ಯವಾಗಿದೆ ‘ಸಂಪೂರ್ಣ ತೃಪ್ತಿ ಇಲ್ಲದಿದ್ದರೂ ಕೆಲವಾರು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದ ಸಮಾಧಾನ ನಮಗಿದೆ’ ಎಂದು ಪ್ರಕಾಶಕರು ಹೇಳಿಕೊಂಡಿದ್ದರಲ್ಲಿ ಅತಿಶಯೋಕ್ತಿ ಏನಿಲ್ಲ. ಸ್ವತಃ ಕವಿಗಳಾದ ಸಂಪಾದಕ ಮತ್ತು ಪ್ರಕಾಶಕ ಈರ್ವರೂ “ಅರಳಿದಮೊಗ್ಗುಗಳು” ಕವನ ಸಂಕಲನದ ಇತಿಮತಿಗಳನ್ನು ಅರಿತವರಾಗಿದ್ದಾರೆ.

ಇಂಥ ಸಂಕಲನವನ್ನು ಹೊರತರುವದು ಎಷ್ಟುಕಷ್ಟವೋ ಇದಕ್ಕೆ ವಿಮರ್ಶೆ ಬರೆವುದು ಅಷ್ಟೇಕಷ್ಟದ ಕೆಲಸ! ಏಕೆಂದರೆ ಇಲ್ಲಿರುವ ಬೇರೆಬೇರೆ ಧೋರಣೆಯ ೮೪ ಕವಿಗಳ ೮೪ ಕವನಗಳನ್ನು ವಿಮರ್ಶಿಸುವುದು ಕಷ್ಟದ ಕೆಲಸವಲ್ಲದೆ ಮತ್ತೇನು? ಆದರೂ ಎಲ್ಲ ಕವನಗಳನ್ನೂ ಓದಿದ ನಂತರ ಮೇಲಿನ ಸಾಮಾನ್ಯ ನಿರ್ಧಾರಗಳಿಗೆ ಬರಲೇಬೇಕಾಯಿತು. ಯುವಶಕ್ತಿ ಪ್ರಕಾಶನದ ಬಿ.ಬಸವರಾಜುರವರ ಕಾರ್ಯ ಶ್ಲಾಘನೀಯವಾಗಿದೆ. ಇವರ ಪ್ರೋತ್ಸಾಹದಿಂದ ೮೪ ಯುವ ಪ್ರತಿಭೆಗಳು ಸಾರಸ್ವತ ಲೋಕದಲ್ಲಿ ಬೆಳಗುತ್ತಿರಲಿ ಎಂದು ಆಶಿಸುವೆ.

ಸಿದ್ಧರಾಜ ಪೂಜಾರಿ

“ಧಡಲ್ ಬಾಜಿ” ವಾರಪತ್ರಿಕೆ ವಿಶೇಷ ಸಂಚಿಕೆ ಪುಟ-5. ರಬಕವಿ ಜಮಖಂಡಿ 31.1.1985 ಗುರುವಾರ.

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು  ಕೃತಿಗಳ ಪರಿಚಯ.. ಭಾಗ-17

 

admin
the authoradmin

ನಿಮ್ಮದೊಂದು ಉತ್ತರ