LatestMysore

ಏ.23, ಜಿಲ್ಲಾ ಮಟ್ಟದ ಶ್ರೀ ಭಗೀರಥ ಜಯಂತೋತ್ಸವ ಅದ್ಧೂರಿ ಕಾರ್ಯಕ್ರಮ ಆಚರಣೆಗೆ ಸಿದ್ಧತೆ

ಭಗೀರಥ ಜಯಂತೋತ್ಸವ ಪೋಸ್ಟರ್ ಹಾಗೂ ಕರಪತ್ರಗಳ ಬಿಡುಗಡೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಜಿಲ್ಲಾ ಮಟ್ಟದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಏ.23ರ ಗುರುವಾರದಂದು ಮೈಸೂರಿನಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಹೇಳಿದರು.

ಪಟ್ಟಣದ ಉಪ್ಪಾರ ಶ್ರೀರಾಮ ಮಂದಿರದಲ್ಲಿ ಶ್ರೀ ಭಗೀರಥ ಜಯಂತೋತ್ಸವ ಕಾರ್ಯಕ್ರಮದ ಪೋಸ್ಟರ್ ಹಾಗೂ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಉಪ್ಪಾರ ಸಮಾಜದ ಮೂಲ ಕಸುಬಾದ ಉಪ್ಪು ತಯಾರಿಕೆಯನ್ನು ಬಿಂಬಿಸುವ ಉಪ್ಪಿನ ರಾಶಿ ಮತ್ತು ಗಂಗಾ ಕಳಸ ಪೂಜೆಯನ್ನು ಮಾಡಿ ಪುಷ್ಪಾರ್ಚನೆಯೊಂದಿಗೆ “ಶ್ರೀ ಭಗೀರಥ ಮಹರ್ಷಿ” ಅವರ ಭಾವಚಿತ್ರವನ್ನು ಭವ್ಯವಾಗಿ ಅಲಂಕೃತಗೊಂಡ ವಾಹನದಲ್ಲಿ ಪ್ರತಿಷ್ಠಾಪಿಸಿ ಸತ್ತಿಗೆ, ಸುರಿಪಾಣಿ, ಮಾರಿಕುಣಿತ, ಬೀಸು ಕಂಸಾಳೆ, ಡೊಳ್ಳು ವರಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೈಸೂರಿನ ಅರಮನೆ ಮುಂಭಾಗವಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರಕ್ಕೆ ಕರೆತರಲಾಗುವುದು. ಅಲ್ಲಿ ವೇದಿಕೆಯ ಕಾರ್ಯಕ್ರಮ ನಡೆಯಲಿದೆ ಎಂದರು.

ಸೂರ್ಯವಂಶ ಕ್ಷತ್ರಿಯರ ಅನುವಂಶಿಯರಾದ ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು ಲೋಕ ಕಲ್ಯಾಣಾರ್ಥವಾಗಿ ಮನುಕುಲದ ಉದ್ಧಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ. ಈ ಸಾಧನೆಯು ಭಗೀರಥ ಪ್ರಯತ್ನ ಎಂದು ಪ್ರಖ್ಯಾತಿ ಹೊಂದಿರುತ್ತದೆ. ಶ್ರೀ ಭಗೀರಥ ಮಹರ್ಷಿಯವರ ಜಯಂತಿಯನ್ನು ಸರ್ಕಾರದ ವತಿಯಿಂದ ರಾಜ್ಯಾದ್ಯಂತ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದೆ.

ಈ ಬಾರಿ ಜಿಲ್ಲಾ ಆಡಳಿತದೊಂದಿಗೆ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಕೈಜೋಡಿಸಿ ಮೈಸೂರು ಜಿಲ್ಲಾಮಟ್ಟದಲ್ಲಿ  ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು  ಏ.23ರ ಗುರುವಾರದಂದು ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಾಪುರ ನಾಗರಾಜು ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗದ ಭಗೀರಥ ಪೀಠದ ಡಾ. ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಹಾಗೂ ಮಳವಳ್ಳಿಯ ಅಯ್ಯನ ಸರಗೂರು ಮಠದ ಶ್ರೀ ಮಹದೇವಸ್ವಾಮಿಗಳು ವಹಿಸಲಿದ್ದು, ಸಚಿವರು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

admin
the authoradmin

Leave a Reply

Translate to any language you want