ArticlesLatest

ಆಷಾಢಕ್ಕೆ ಸಜ್ಜಾದ ಚಾಮುಂಡಿಬೆಟ್ಟ… ನೀವು ಬನ್ನಿ.. ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾಗಿ..

ಕಣ್ಣು ಹಾಯಿಸಿದುದ್ದಕ್ಕೂ ಹಸಿರಿನಿಂದ ಕಂಗೊಳಿಸುವ ವೃಕ್ಷರಾಶಿ, ಬೆಟ್ಟಕ್ಕೆ ಮುತ್ತಿಕ್ಕುತ್ತಿದೆಯೇನೋ ಎಂಬಂತೆ ಭಾಸವಾಗುವ ಮುಗಿಲು.. ಇದರಾಚೆಗೆ ಸಣ್ಣಗೆ ಜಿನುಗುವ ಮಳೆಯಲ್ಲಿ, ತಣ್ಣಗೆ ಬೀಸುವ ತಂಗಾಳಿಯಲ್ಲಿ ಹೆಜ್ಜೆ ಹಾಕುತ್ತಿದ್ದರೆ  ಮೈಮನಸ್ಸು ಹಗುರವಾಗಿ ತೇಲಿದ ಅನುಭವ ಆಗದಿರದು.. ಇಷ್ಟನ್ನು ಓದಿದ ಬಳಿಕ ನಿಮಗೆ ಇದ್ಯಾವ ತಾಣವೆಂಬುದು ಅರ್ಥವಾಗದಿರದು..

ನಗರದ ನಡುವಿನ ಜಂಜಾಟದಲ್ಲಿ ಇಂತಹದೊಂದು ಅನುಭವ ಸಿಗಬೇಕೆಂದರೆ ಅದು ಬೇರೆಲ್ಲೂ ಸಾಧ್ಯವಿಲ್ಲ. ಹೀಗಾಗಿ ನೀವು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮುಂಜಾನೆ ಬರಬೇಕಾಗುತ್ತದೆ. ಇದೀಗ ಆಷಾಢ ಬಂದಿದೆ ಹೀಗಾಗಿ ಗಿಡಮರಗಳೆಲ್ಲವೂ ಚಿಗುರಿ ಹಸಿರಿನಿಂದ ಕಂಗೊಳಿಸುವುದರೊಂದಿಗೆ ಇಡೀ ಬೆಟ್ಟ ಹಸಿರಾಗಿ ಭಕ್ತರ ಸ್ವಾಗತಕ್ಕೆ ಕಾದು ನಿಂತಂತೆ ಭಾಸವಾಗುತ್ತಿದೆ.

ಹಾಗೆನೋಡಿದರೆ  ಪ್ರತಿ ಆಷಾಢವೂ ಚಾಮುಂಡಿಬೆಟ್ಟಕ್ಕೆ ಹೊಸತನ, ಹೊಸಕಳೆನೀಡುತ್ತದೆ. ಬೇಸಿಗೆಯಲ್ಲಿ ಬಿರುಬಿಸಿಲಿಗೆ ಸಿಕ್ಕಿ ಸೊರಗಿ ಹೋದ ಗಿಡಮರಗಳು ಮುಂಗಾರು ಮಳೆಗೆ ಪುಳಕಿತಗೊಳ್ಳುವುದರಿಂದ ಇಡೀ ಬೆಟ್ಟ ಹಸಿರ ಸೀರೆಯುಟ್ಟು ನಿಂತ ಷೋಡಷಿಯಂತೆ ಗೋಚರಿಸುತ್ತದೆ ಈ ವೇಳೆಯಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲನ್ನೇರುತ್ತಾ ಸಾಗುವುದು ಎಲ್ಲಿಲ್ಲದ ಮಜಾ..

ವರ್ಷದ ಎಲ್ಲ ದಿನಗಳಲ್ಲಿಯೂ ಭಕ್ತರು ಚಾಮುಂಡಿಬೆಟ್ಟಕ್ಕೆ ಬಂದು ತಾಯಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ. ಆದರೆ ಆಷಾಢ ತಿಂಗಳಲ್ಲಿ  ಅದರಲ್ಲೂ ಆಷಾಢ ಶುಕ್ರವಾರ ತಾಯಿಯ ದರ್ಶನ ಪಡೆಯುವುದು ಪರಮ ಪುಣ್ಯವೆಂದು ಹೇಳಲಾಗುತ್ತದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಜು.17, 24, 31, ಆ.6 ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಂಭ್ರಮ.. ವ್ಯವಸ್ಥೆ ಹೇಗಿರಲಿದೆ?

ಇನ್ನು ಆಷಾಢ ತಿಂಗಳ ಪೂರ್ತಿ ಭಕ್ತರು, ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬರುತ್ತಾರೆಯಾದರೂ ಶುಕ್ರವಾರದಂದು ಮಾತ್ರ ಜನಜಾತ್ರೆಯೇ ನೆರೆಯುತ್ತದೆ. ಬಸ್ ಮೂಲಕ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವವರು ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಚಾಮುಂಡಿಬೆಟ್ಟದ  ಪಾದದಿಂದ ಸಾವಿರ ಮೆಟ್ಟಿಲುಗಳನ್ನೇರಿ ಚಾಮುಂಡಿಬೆಟ್ಟವನ್ನು ತಲುಪಿ ತಾಯಿಯ ದರ್ಶನ ಪಡೆಯುತ್ತಾರೆ.

ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯನ್ನು ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜತೆಗೆ ಹರಕೆ ಮಾಡಿಕೊಂಡವರು ಮೆಟ್ಟಲು ಹತ್ತಿ ಸಾಗುತ್ತಾರೆ.ಹೀಗೆ ಸಾಗುವವರು ಚಾಮುಂಡಿಬೆಟ್ಟದ ತಪ್ಪಲಿನ ಪಾದದ ಬಳಿಯಿಂದ ಪೂಜೆ ಸಲ್ಲಿಸಿ ಪ್ರತಿಮೆಟ್ಟಿಲಿಗೆ ಅರಿಶಿಣ ಕುಂಕುಮ ಹಚ್ಚಿ, ಹೂವಿಟ್ಟು, ಕರ್ಪೂರ ಹಚ್ಚಿ ಪೂಜೆ ಸಲ್ಲಿಸುತ್ತಾ ಮೆಟ್ಟಿಲೇರಿದರೆ ಹರಕೆ ಮಾಡಿಕೊಂಡವರು ಮಂಡಿಯಲ್ಲಿ ಮೆಟ್ಟಿಲು ಹತ್ತಿ ಹರಕೆ ತೀರಿಸುತ್ತಾರೆ.

ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯಗಳು ಈ ಬಾರಿ ಜು.17, 24,  31, ಆ.6 ಈ ನಾಲ್ಕು ಶುಕ್ರವಾರ ಮತ್ತು ಆ.4ರಂದು ವರ್ಧಂತ್ಯೋತ್ಸವ ನಡೆಯಲಿದೆ.   ಹೀಗಾಗಿ ಸಿದ್ಧತೆ ಚಾಮುಂಡಿಬೆಟ್ಟದಲ್ಲಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಭಕ್ತರು ಮೆಟ್ಟಿಲು ಹತ್ತಿಕೊಂಡು ಹೋಗಲು ಅನುಕೂಲವಾಗುವಂತೆ ಮೆಟ್ಟಿಲ ಎರಡು ಬದಿಯಲ್ಲಿದ್ದ ಕಾಡು, ಬಳ್ಳಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸುವುದರಿಂದ ಕಸದ ಸಮಸ್ಯೆ ಉದ್ಭವಿಸಲಿದೆ. ಪ್ಲಾಸ್ಟಿಕ್ ಚೀಲ, ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಭಕ್ತರು ಎಲ್ಲೆಂದರಲ್ಲಿ ಎಸೆಯದೆ ಕಸದ  ಬುಟ್ಟಿಗೆ ಹಾಕಿದರೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗಬಹುದು. ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆ ಕಾಪಾಡಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ.

ಭಕ್ತರ ಇಷ್ಟಾರ್ಥ ನೆರವೇರಿಸುವ ನಾಡದೇವತೆಯ ನೆಲೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬನ್ನಿ.. 

ಸ್ವಚ್ಛತೆಯ ಕಾಳಜಿ ಪ್ರತಿಯೊಬ್ಬ ಭಕ್ತರಲ್ಲಿ ಮೂಡಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರೂ ಚಾಮುಂಡಿಬೆಟ್ಟದ  ಪರಿಸರಕ್ಕೆ ತೊಂದರೆಯಾಗಲಾರದು. ಇದೆಲ್ಲದರ ನಡುವೆ ಪ್ಲಾಸ್ಟಿಕ್ ತಡೆಗೆ ತಿರುಪತಿ, ಗೋಪಾಲಸ್ವಾಮಿ ಬೆಟ್ಟದಲ್ಲಿರುವಂತೆ ಪ್ಲಾಸ್ಟಿಕ್ ತಪಾಸಣಾ ಕೇಂದ್ರವನ್ನು ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆ ಮಾಡಿ ಎಂಬ ಸಲಹೆಗಳು  ಕೇಳಿಬರುತ್ತಿವೆ.

ಅದು ಏನೇ ಇರಲಿ ಚಾಮುಂಡಿಬೆಟ್ಟಕ್ಕೆ ಹೋಗುವ ಭಕ್ತರು ಸ್ವಚ್ಛತೆ ಕಾಪಾಡುವತ್ತ ಆದ್ಯತೆ ನೀಡುವ ಮೂಲಕ ಸುಂದರ ಪರಿಸರವನ್ನು ಉಳಿಸುವ ಪ್ರಯತ್ನವಾಗಲಿ.. ಹಾಗೆಯೇ ಇದುವರೆಗೆ ಮುಂಜಾನೆ ಸುಂದರ ಕ್ಷಣಗಳನ್ನು ಚಾಮುಂಡಿಬೆಟ್ಟದಲ್ಲಿ ಕಳೆದಿಲ್ಲವೋ ಅಂಥವರು ಒಮ್ಮೆ ಬಂದು ಹೋದರೆ ಆ ಸುಂದರ ಕ್ಷಣಗಳು ಮನದಲ್ಲಿ ಅಚ್ಚೊತ್ತಿದಂತೆ ಉಳಿಯುವುದರಲ್ಲಿ ಎರಡು ಮಾತಿಲ್ಲ.

B M Lavakumar

admin
the authoradmin

Leave a Reply