ಮಂಡ್ಯ: ಹಳೆದ್ವೇಷದ ಹಿನ್ನಲೆಯಲ್ಲಿ ಬಾರ್ ನಲ್ಲಿ ಕ್ಯಾಷಿಯರ್ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದ್ದು ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ಳೂರು ಪಟ್ಟಣದ ಅರಣಿ ರಸ್ತೆಯಲ್ಲಿರುವ ಎಸ್ ಆರ್ ಕಂಫರ್ಟ್ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಚರಣ್ ಕಬ್ಬಿಣದ ರಾಡ್ ನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸೇರಿದವರು. ಇವರ ಮೇಲೆ ಚಬ್ಬನಹಳ್ಳಿ ಗ್ರಾಮದ ಪ್ರಕಾಶ್ ಮತ್ತು ಆತನ ಸ್ನೇಹಿತ ಸೇರಿ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ. ಗಾಯಗೊಂಡ ಚರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚರಣ್ ತಂದೆ ಸೋಮಶೇಖರ್ ನೀಡಿದ ದೂರಿನ ಮೇರೆಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಬ್ಬನಹಳ್ಳಿ ಗ್ರಾಮದ ಪ್ರಕಾಶ್ ಹಳೆ ದ್ವೇಷದ ಹಿನ್ನಲೆಯಲ್ಲಿ ಮಾನಸಿಕ ಹಿಂಸೆಯನ್ನು ನೀಡಿದ್ದಲ್ಲದೆ, ಏಕಾಏಕಿ ನನ್ನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೇ ಮಾಡಿದ್ದಾನೆ ಮತ್ತು ನನ್ನ ತಂದೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆಯನ್ನು ಹಾಕಿದ್ದು ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡಬೇಕೆಂದು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








