CrimeLatest

ಪತ್ನಿಯನ್ನು ಸ್ನೇಹಿತರಿಗೆ  ಮಾರಾಟ ಮಾಡಿ… ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿ

ಗುಜರಾತ್: ಕಾಲ ಕೆಟ್ಟೋಯ್ತಾ? ಜನರೇ ಕೆಟ್ಟೋದ್ರಾ? ಎಂದು ಪ್ರಶ್ನೆಕೇಳಿಕೊಳ್ಳುವ ಸಮಯ ಬಂದಿದೆ.. ಈ ಘಟನೆಯ ಬಗ್ಗೆ ಓದಿದ ಬಳಿಕ ಬಹಳಷ್ಟು ಜನಕ್ಕೆ ನಾವು ಯಾವ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎನಿಸದಿರದು.. ಇಲ್ಲೊಬ್ಬ ಪಾಪಿ ಗಂಡ ಮಾಡಿದ ಕೆಟ್ಟ ಕೆಲಸ ಪುರುಷ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುತ್ತಾ ಹೋದರೆ ಅಸಹ್ಯ ಹುಟ್ಟಿಸುವ ಪ್ರಕರಣವೊಂದು ಬೆಳಕಿಗೆ ಬರುತ್ತದೆ. ಅದು ಏನೆಂದರೆ   ಗುಜರಾತ್ ನ ಗಾಂಧಿನಗರದ ಪಲನ್‌ಪುರ ಪಶ್ಚಿಮ ಪೊಲೀಸ್ ಠಾಣೆಗೆ ಮೇ.11ರಂದು ಬಂದ  ವ್ಯಕ್ತಿಯೊಬ್ಬ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದನು.

ದೂರು ದಾಖಲಿಸಿಕೊಂಡ ಠಾಣೆಯ ಇನ್ಸ್ಪೆಕ್ಟರ್  ಆರ್. ಕೆ. ಪಟೇಲ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಆತ ನೀಡಿದ ದೂರಿನಂತೆ ಆಕೆ ಮೇ 10ರಂದು ಮನೆಯಿಂದ ನಾಪತ್ತೆಯಾಗಿದ್ದು ಹುಡುಕಿಕೊಡುವಂತೆ ತಿಳಿಸಿದ್ದರಿಂದ 26 ವರ್ಷದ ಆಕೆ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಾಗಿ ಅವಳ ಜಾಡು ಹಿಡಿಯುವುದು ಕಷ್ಟವಾಗಿತ್ತು. ಹೀಗಾಗಿ ದೂರು ನೀಡಲು ಬಂದ ಆಕೆಯ ಗಂಡನನ್ನೇ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದರು.

ಈ ನಡುವೆ ದೂರು ನೀಡಿದ ಆತನೇ ನಾಪತ್ತೆಯಾಗಿದ್ದನು. ಈ ಬಗ್ಗೆ ಆತನ ತಂದೆ ತಾಯಿ ದೂರು ನೀಡಿದ್ದರು. ಇದು ಪೊಲೀಸರಿಗೆ  ಅಚ್ಚರಿ ಮತ್ತು ಸವಾಲ್ ಆಗಿತ್ತು.  ಹೀಗಾಗಿ ಪೊಲೀಸರು ಹೆಂಡತಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ವ್ಯಕ್ತಿಯ ಹುಡುಕಾಟ ನಡೆಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ನೀಡಿದ ಮಾಹಿತಿ ಪೊಲೀಸರು ಬೆಚ್ಚಿ ಬೀಳುವಂತೆ ಮಾಡಿತ್ತು.

ಆಕೆಯನ್ನು ಆತ ಮದುವೆಯಾಗಿ 12 ವರ್ಷವಾಗಿತ್ತು. ಆದರೆ ಅವನಿಗೆ ಅವಳ ಮೇಲೆ ಪ್ರೀತಿ ಇರಲಿಲ್ಲ. ಹೀಗಾಗಿ ಬೇರೆ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಹೆಂಡತಿಗೆ ಕಿರುಕುಳ ನೀಡಿ ಅವಳಿಂದ ಡೈವರ್ಸ್ ಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಗೆಳೆಯರಿಂದ 50ಸಾವಿರ ಪಡೆದು ಅವಳನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದನು. ಅದರಂತೆ  ಇಬ್ಬರು ಗೆಳೆಯರು ಅವಳಿಗೆ ತಪ್ಪು ಮಾಹಿತಿ ನೀಡಿ ಮೇ.10ರಂದು ರಿಕ್ಷಾದಲ್ಲಿ ಅಪಾರ್ಟ್ ಮೆಂಟ್ ವೊಂದಕ್ಕೆ ಕರೆದೊಯ್ದು ಅಲ್ಲಿರಿಸಿಕೊಂಡು ಅತ್ಯಾಚಾರ ನಡೆಸಿದ್ದಾರೆ.

ಸುಮಾರು 7 ದಿನಗಳ ಕಾಲ ಕೂಡಿ ಹಾಕಿದ ಗೆಳೆಯರು ಅತ್ಯಾಚಾರ ಎಸಗಿ ಆ ನಂತರ ಹಳ್ಳಿಯೊಂದರ ಮಹಿಳೆಯನ್ನು ಸಂಪರ್ಕಿಸಿ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು. ಪೊಲೀಸರು ಆಕೆಯ ಪತಿಗೆ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಗೆಳೆಯರಿಗೆ ಮಾರಾಟ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದನು. ಅದರಂತೆ ಆತನ ಗೆಳೆಯರ ಹಿಂದೆ ಬಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಕೌನ್ಸಿಲಿಂಗ್ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply