DasaraLatest

ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧವಾದ 12 ಆನೆಗಳ ಗಜಪಡೆ…  ಆ.26ಕ್ಕೆ ಗಜಪಯಣ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಇದೀಗ ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ 12 ಆನೆಗಳನ್ನೊಳಗೊಂಡ ಗಜಪಡೆಯನ್ನು ಸಿದ್ಧಗೊಳಿಸಲಾಗಿದ್ದು, ಆ.26ರಂದು ನಾಗರಹೊಳೆಯ ವೀರನ ಹೊಸಹಳ್ಳಿಯಲ್ಲಿ ಗಜಪಯಣ ದೊಂದಿಗೆ ಮೈಸೂರು ದಸರಾಕ್ಕೆ ಮುನ್ನುಡಿ ಬರೆಯಲಾಗುತ್ತದೆ.

ಕಳೆದ ಕೆಲವು ದಿನಗಳ ಹಿಂದೆಯೇ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಲ್ಲಿರುವ  ಸಾಕಾನೆ ಶಿಬಿರಗಳಿಗೆ  ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ, ಎಲ್ಲಾ ಆನೆಗಳ ಸ್ವಭಾವ ಮತ್ತು ಸಾಮರ್ಥ್ಯ ಪರೀಕ್ಷಿಸಿ ಸಮರ್ಥವಾಗಿರುವ 12 ಆನೆಗಳನ್ನು ಆಯ್ಕೆ ಮಾಡಿದ್ದರು.

ಇದೀಗ ಆ ಆನೆಗಳ ಪಟ್ಟಿಯನ್ನು  ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರು ಬಿಡುಗಡೆ ಮಾಡಿದ್ದು, ಇದುವರೆಗೆ ಅಂಬಾರಿ ಹೊರುತ್ತಿದ್ದ ಅಭಿಮನ್ಯು  ವಯಸ್ಸಿನ ಕಾರಣಕ್ಕೆ ದಸರಾದಿಂದ ಹೊರಗುಳಿದಿದ್ದರೆ, ಕಳೆದ ಬಾರಿ  ಎಲ್ಲರ ಗಮನಸೆಳೆದಿದ್ದ  ಭೀಮನನ್ನು ಮಸ್ತಿ ಕಾರಣದಿಂದ ಹೊರಗಿಡಲಾಗಿದೆ.

ಇನ್ನು ಈ ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಪಟ್ಟಿಯನ್ನು ನೋಡಿದ್ದೇ ಆದರೆ ಕೊಡಗಿನ ದುಬಾರೆಯ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ ಹಾಗೂ ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ, ಮತ್ತಿಗೋಡಿನ ಏಕಲವ್ಯ, ಶ್ರೀಕಂಠ ಮತ್ತು ದೊಡ್ಡಹರವೆ ರೂಪಾ, ರಾಮಾಪುರದ ಚೈತ್ರ ಆನೆಗಳು ಸ್ಥಾನಪಡೆದುಕೊಂಡಿವೆ

ಕಳೆದ ಕೆಲವು ವರ್ಷಗಳಿಂದ ದಸರಾ ಉತ್ಸವಗಳಲ್ಲಿ 14 ಆನೆಗಳನ್ನು ಕರೆತರಲಾಗಿತ್ತು. ಆದರೆ, ಈ ಬಾರಿ 12 ಆನೆಗಳನ್ನು ಮಾತ್ರ ಎರಡು ತಂಡವಾಗಿ ಕರೆತರಲಾಗುತ್ತಿದ್ದು, ಆ.26ರಂದು ನಡೆಯಲಿರುವ ಗಜಪಯಣದ ಮೂಲಕ ಮೊದಲ ತಂಡದಲ್ಲಿರುವ  ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಲಕ್ಷ್ಮೀ, ಕಾವೇರಿ ಆನೆಯನ್ನು ಮೈಸೂರಿಗೆ ಕರೆ ತರಲಾಗುತ್ತದೆ.

ಇದಾದ  ನಂತರ ಎರಡನೇ ತಂಡ ಬರಲಿದ್ದು ಈ ತಂಡದಲ್ಲಿ  ಶ್ರೀಕಂಠ, ರೂಪಾ, ಚೈತ್ರಾ  ಇರಲಿದೆ. ಇನ್ನು ಮತ್ತಿಗೋಡಿನ ಭೀಮ ಮತ್ತು ದುಬಾರೆಯ ಹರ್ಷನನ್ನು ಮೀಸಲು ಆನೆಗಳಾಗಿ ಇರಿಸಿಕೊಳ್ಳಲಾಗಿದೆ.

ಈ ಬಾರಿ ಯಾವ ಆನೆ ಅಂಬಾರಿ ಹೊರಲಿದೆ ಎಂಬುದು ಮುಂದೆ ಗೊತ್ತಾಗಲಿದೆ. ಸದ್ಯ  ಧನಂಜಯ, ಮಹೇಂದ್ರ ಮತ್ತು ಪ್ರಶಾಂತ ಆನೆಗಳಿಗೆ ಅಂಬಾರಿ ಹೊರುವ ಸಾಮರ್ಥ್ಯವಿದ್ದು, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಸಾಧ್ಯತೆಗಳಿದೆ.

ಜನಮನಸೆಳೆದ  ಆನೆ ಭೀಮನಿಗೆ ಮದ ಇರುವುದರಿಂದ ಈ ಬಾರಿಯ ದಸರೆಗೆ ಕರೆತರಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಆದರೂ ಮೀಸಲು ಆನೆಯಾಗಿ ಇರಿಸಿಕೊಳ್ಳಲಾಗಿದ್ದು, 2ನೇ ತಂಡವನ್ನು ಮೈಸೂರಿಗೆ ಕರೆತರುವಷ್ಟರಲ್ಲಿ ಭೀಮನಿಗೆ ಮದ ಕಡಿಮೆಯಾದರೆ ಭೀಮನನ್ನು ಕರೆತರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷವೂ 11 ದಿನಗಳ ಕಾಲ ದಸರಾ ಉತ್ಸವ ನಡೆಯಲಿದ್ದು, ಇದಕ್ಕೆ ಎರಡು ತಿಂಗಳ ಮುಂಚಿತವಾಗಿಯೇ ಕಾಡಿನಿಂದ ಗಜಪಡೆಯನ್ನು ಮೈಸೂರಿಗೆ ಕರೆತಂದು ತಾಲೀಮು ನಡೆಸಲಾಗುತ್ತದೆ. ಗಜಪಡೆ ಮೈಸೂರು ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಮೈಸೂರಿಗೆ ದಸರಾ ಕಳೆ ಬರಲಿದೆ.

ಮೊದಲ ತಂಡ: ಧನಂಜಯ(45) ದುಬಾರೆ (ಕೊಡಗು), ಮಹೇಂದ್ರ(42) ಬಳ್ಳೇ (ನಾಗರಹೊಳೆ), ಏಕಲವ್ಯ(41) ಮತ್ತಿಗೋಡು (ಕೊಡಗು), ಪ್ರಶಾಂತ (54) ದುಬಾರೆ (ಕೊಡಗು), ಗೋಪಿ(43) ದುಬಾರೆ (ಕೊಡಗು) ಶ್ರೀರಾಮ (41) ದುಬಾರೆ (ಕೊಡಗು) ಸುಗ್ರೀವ(44) ದುಬಾರೆ (ಕೊಡಗು) ಲಕ್ಷ್ಮೀ(54) ಬಳ್ಳೆ (ನಾಗರಹೊಳೆ) ಕಾವೇರಿ(46) ದುಬಾರೆ(ಕೊಡಗು)

ಎರಡನೇ ತಂಡ: ರೂಪಾ(50) (ದೊಡ್ಡಹರವೆ), ಚೈತ್ರಾ(55) ರಾಮಪುರ (ಬಂಡೀಪುರ) ಶ್ರೀಕಂಠ(57) ಮತ್ತಿಗೋಡು(ನಾಗರಹೊಳೆ) ಮೀಸಲು ಆನೆಗಳು: ಭೀಮ(26) ಮತ್ತಿಗೋಡು(ಕೊಡಗು) ಹರ್ಷ(51) ದುಬಾರೆ(ಕೊಡಗು)

ದಸರಾ ಜಂಬೂಸವಾರಿಯಲ್ಲಿ 6ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಯೋ ನಿವೃತ್ತಿ

admin
the authoradmin

Leave a Reply