DasaraLatest

ಮೈಸೂರು ಅರಮನೆಗೆ ದಸರಾ ಆನೆಗಳು ಬಂದಾಯ್ತು.. ಅರಮನೆ ನಗರಿಗೆ ಕಳೆಕಟ್ಟಲಿದೆ ದಸರಾ ಸಂಭ್ರಮ..  

ಮೈಸೂರು: ಗಜಪಡೆಗಳು ಅರಮನೆ ಆವರಣ ಪ್ರವೇಶಿಸುವುದರೊಂದಿಗೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಹೊಸ ಕಳೆ ಬಂದಿದೆ. ಅಷ್ಟೇ ಅಲ್ಲದೆ ದಸರಾ ದಿನನಿತ್ಯ ತಾಲೀಮು ನಡೆಯುವುದರೊಂದಿಗೆ ಇಡೀ ನಗರದಲ್ಲಿ ದಸರಾ ಸಂಭ್ರಮ ಮನೆ ಮಾಡಲಿದೆ..

ಈಗಾಗಲೇ ವಿವಿಧ ಕ್ಯಾಂಪ್‌ಗಳಿಂದ ಮೈಸೂರಿಗೆ ಬಂದಿರುವ ಮೊದಲ ಹಂತದ 9 ಆನೆಗಳ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಶುಕ್ರವಾರ ಸ್ವಾಗತಿಸಲಾಗಿದೆ. ಶುಕ್ರವಾರ ಬೆಳಗ್ಗೆ 9.52ರಿಂದ 10.19ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.

ಕಾಲ್ನಡಿಗೆಯಲ್ಲಿ ಅರಣ್ಯ ಭವನದಿಂದ ಹೊರಟ ಆನೆಗಳು 9.50ಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದು ಸಾಲಾಗಿ ನಿಂತವು. ಧನಂಜಯ, ಮಹೇಂದ್ರ, ಏಕಲವ್ಯ, ಶ್ರೀಕಂಠ, ಪ್ರಶಾಂತ, ಶ್ರೀರಾಮ, ಗೋಪಿ, ಕಾವೇರಿ ಹಾಗೂ ಲಕ್ಷ್ಮೀ ಆನೆಗಳಿಗೆ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ಧೀಕ್ಷಿತ್, ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಆನೆಗಳ ಪಾದ ತೊಳೆದು, ಕುಂಕುಮ, ಹರಿಸಿಣ ಹಚ್ಚಿ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಪೂಜೆಯ ಬಳಿಕ ನಗರ ಪೊಲೀಸ್ ವಾದ್ಯದವರು ಸಂಗೀತ ನುಡಿಸಿದರು. ಇದೇ ವೇಳೆ ಪೊಲೀಸ್ ಇಲಾಖೆ ವತಿಯಿಂದ ಗಜಪಡೆ ಮತ್ತು ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಗಣ್ಯರು ಆನೆಗಳಿಗೆ ಪುಷ್ಪವೃಷ್ಟಿ ಗೈದು ಅರಮನೆ ಅಂಗಳಕ್ಕೆ ಸ್ವಾಗತಿಸಿದರು.

ಗಜಪಡೆಯ ಅರಮನೆ ಪ್ರವೇಶ ಕಾರ್ಯಕ್ರಮಕ್ಕೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ದ್ವಾರದ ಬಳಿ ಸ್ವಾಗತಿಸಿದ ಬಳಿಕ ಪೂರ್ಣಕುಂಭ ಸ್ವಾಗತ, ಮಂಗಳವಾದ್ಯ, ಯದುಕುಮಾರ್ ನೇತೃತ್ವದ ತಂಡ ನಾದಸ್ವರ ಸ್ಯಾಕ್ಸೋಪೋನ್ ನುಡಿಸುತ್ತ ಮುಂದೆ ಸಾಗಿದರೆ ಅವರನ್ನೇ ಹಿಂಬಾಲಿಸಿದ ಆನೆಗಳು ಅರಮನೆಯತ್ತ ಹೆಜ್ಜೆ ಹಾಕಿದವು. ಗಜಪಡೆಗೆ ಅಶ್ವಾರೋಹಿ ಪಡೆ, ಪೊಲೀಸ್ ಬ್ಯಾಂಡ್, ಗಾರುಡಿ ಗೊಂಬೆ, ಚಂಡೆ, ಕಂಸಾಳೆ, ಪಟ ಕುಣಿತ, ಚಿಲಿಪಿಲಿ ಗೊಂಬೆ, ಸೇರಿದಂತೆ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಬಳಿಕ ಅರಮನೆ ಮುಂಭಾಗಕ್ಕೆ ತೆರಳಿದ ಆನೆಗಳಿಗೆ ಸಂಪ್ರದಾಯದಂತೆ ಅರಮನೆ ಮಂಡಳಿಯಿಂದ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ದಸರಾ ಮಹೋತ್ಸವದ ಚಟುವಟಿಕೆಯಲ್ಲಿ ತೊಡಗುವ ಅಧಿಕಾರಿಗಳಿಗೆ ಫಲತಾಂಬೂಲ ನೀಡಲಾಯಿತು. ಮಾವುತರು, ಕಾವಾಡಿಗಳಿಗೆ ದಿನನಿತ್ಯದ ಪದಾರ್ಥಗಳು ಸೇರಿ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು.

ಆಗಸ್ಟ್ 26ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಆಗಮಿಸಿ ನಗರದ ಅರಣ್ಯಭವನದ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆಗೆ ಸಂಪ್ರದಾಯದಂತೆ ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ವತಿಯಿಂದ ಬೀಳ್ಕೊಡಲಾಯಿತು. ಸಿಸಿಎಫ್ ಎಸ್.ಎಸ್.ರವಿಶಂಕರ್, ಡಿಸಿಎಫ್ ಐ.ಬಿ.ಪ್ರಭುಗೌಡ ಹಾಗೂ ಇನ್ನಿತರ ಅಧಿಕಾರಿಗಳು ಗಜಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ನಂತರ ಅರಣ್ಯ ಭವನದಿಂದ ಹೊರಟ ಆನೆಗಳು ಕಾಲ್ನಡಿಗೆಯಲ್ಲಿ ಅಶೋಕಪುರಂ ರಸ್ತೆ, ಬಲ್ಲಾಳ್ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದವು. ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆನೆಗಳ ಗಾಂಭಿರ್ಯ ನಡಿಗೆಯನ್ವನು ರಸ್ತೆಯ ಇಕ್ಕೆಲಗಳಲ್ಲಿದ್ದ ಸಾರ್ವಜನಿಕರು ಕಣ್ತುಂಬಿಕೊಂಡರು. ಕೆಲವರು ಮೊಬೈಲ್‌ನಲ್ಲಿ ಆನೆಗಳ ವೈಯ್ಯಾರ ಸೆರೆ ಹಿಡಿದರು.

ಈ ಬಾರಿಯ ಗಜಪಡೆಯಲ್ಲಿ ಕ್ಯಾಪ್ಟನ್ ಅಭಿಮನ್ಯುವಿನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿಯಾಗಿದ್ದರಿಂದ ಇನ್ನು ಮುಂದೆ ವೀರ ಅಭಿಮನ್ಯು ದಸರಾ ಭಾಗವಾಗುವುದಿಲ್ಲ. ಕಳೆದ 6 ವರ್ಷಗಳಿಂದ ಗಜಪಡಲೋಓಒಓಓ ಅನುಪಸ್ಥಿತಿ ಕಾಡಿತು.

ಅರಣ್ಯ ಭವನದಿಂದ ಅರಮನೆ ವರೆಗೆ ಎಲ್ಲ ಆನೆಗಳು ವಾಹನಗಳ ಗದ್ದಲಕ್ಕೆ ಬೆಚ್ಚದೆ ಶಾಂತ ರೀತಿಯಲ್ಲೆ ಹೆಜ್ಜೆ ಹಾಕಿದವು.  ಆದರೆ, ಅರಮನೆ ಆವರಣದಲ್ಲಿ ಗಜಪಡೆ ಸ್ವಾಗತ ಕಾರ್ಯಕ್ರಮ ವೇಳೆ  ಕಲಾತಂಡಗಳ ಶಬ್ದಕ್ಕೆ ಶ್ರೀರಾಮ ಆನೆ ಬೆಚ್ಚಿ ಹಿಂದೆ ತಿರುಗಿತು. ಈ ವೇಳೆ ಆತನ ಮಾವುತ ಮತ್ತು ಕಾವಾಡಿ ಅದನ್ನು ಸಮಾಧಾನ ಪಡಿಸಿದರು. ಶ್ರೀಕಂಠ ಕೂಡ ಸ್ವಲ್ಪ ಗಲಿಬಿಲಿಯಾಗಿದ್ದು ಕಂಡು ಬಂತು.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಮೊದಲ ತಂಡದ 9  ಆನೆಗಳನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಬರ ಮಾಡಿಕೊಳ್ಳಲಾಗಿದೆ. ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಆನೆ ಆಯ್ಕೆ ಮಾಡಲಾಗುವುದು. ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಕರೆತರುವ ಸಂಬಂಧ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದೆಂದು ತಿಳಿಸಿದ್ದಾರೆ.

 

admin
the authoradmin

ನಿಮ್ಮದೊಂದು ಉತ್ತರ