LatestNews

ವಿದ್ಯಾರ್ಥಿಗಳು ಹೆಚ್ಚು ಮಾತನಾಡಿದಷ್ಟು ಹೊಸ ಆಲೋಚನೆಗಳು ಬರುತ್ತವೆ: ಡಾ.ಡಿ.ಜಿ.ಕೃಷ್ಣೆಗೌಡ

ಹಾಸನ: ವಿದ್ಯಾರ್ಥಿಗಳು ಹೆಚ್ಚು ಮಾತನಾಡಬೇಕು ಮೌನವಾಗಿರುವುದು ಅವರ ಲಕ್ಷಣವಲ್ಲ ಹೆಚ್ಚು ಹೆಚ್ಚು ಮಾತನಾಡಿದಷ್ಟು ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಡಿ. ಜಿ. ಕೃಷ್ಣೆಗೌಡ ಅವರು ಹೇಳಿದರು.

ಇತ್ತೀಚೆಗೆ ನಗರದ ಎಂ.ಜಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಕಾಲೇಜಿನ ಅಭಿವೃದ್ಧಿಯಲ್ಲಿ ಹಲವಾರು ವ್ಯಕ್ತಿಗಳ ಅಪಾರ ಶ್ರಮವಿದೆ ಕಾಲೇಜಿಗೆ 20 ವರ್ಷ ತುಂಬಿರುವ ಈ ಸುಸಂದರ್ಭದಲ್ಲಿ ಅವರ ಕೊಡುಗೆಯನ್ನು ನೆನೆಯುವುದು ನಮ್ಮ ಕರ್ತವ್ಯ.

ಹಾಸನದ ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಜಾರಿಗೆ ತಂದ ಪ್ರಥಮ ಕಾಲೇಜು ಇದಾಗಿದೆ. ಅಷ್ಟೇ ಅಲ್ಲದೇ, ಪತ್ರಿಕೋದ್ಯಮ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಮುನ್ನುಡಿ ಬರೆದ ಕಾಲೇಜು ಇದಾಗಿದ್ದು, ಬಹಳಷ್ಟು ಮೊದಲುಗಳಿಗೆ ಬುನಾದಿಯಾಗಿದೆ. ಸಂಸ್ಥೆಯನ್ನು ಕಟ್ಟುವುದು ಒಂದು ರೀತಿಯ  ಸವಾಲಾದರೆ, ಕಾಲೇಜನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ಒಂದು ರೀತಿಯ ಸವಾಲು ಎಂದು ಅಭಿಪ್ರಾಯಪಟ್ಟರು.

ಪಠ್ಯೇತರ ಚಟುವಟಿಕೆಗಳನ್ನು ಪಠ್ಯೇತರ ಚಟುವಟಿಕೆ ಎಂದು ಭಾವಿಸದೆ ಅದನ್ನು ಸಹಪಠ್ಯ ಚಟುವಟಿಕೆಗಳು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಮೂಲಜ್ಞಾನಕ್ಕೆ ಪೂರಕವಾಗಿ ಇವುಗಳು ಅಸ್ತಿತ್ವದಲ್ಲಿರಬೇಕು. ಶಿಕ್ಷಣದಿಂದ ಸ್ವಾತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಾಮರ್ಥ್ಯಕ್ಕೆ ಅನುಗುಣವಾದ ಮಾರ್ಗವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬೇಕು. ಸಹಪಠ್ಯ ಚಟುವಟಿಕೆಗಳಿಂದ ನಿಮ್ಮ ಸಾಮರ್ಥ್ಯದ ಅರಿವು ನಿಮಗಾಗುತ್ತದೆ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಅವರು ಮಾತನಾಡಿ ಹಾಸನದ ಕಾಲೇಜುಗಳ ಬೆಳವಣಿಗೆಗಳಿಗೆ ಸ್ಥಳೀಯ ರಾಜಕಾರಣಿಗಳ ಕೊಡುಗೆ ಅಪಾರ, ಎಲ್ಲರನ್ನು ಪ್ರೋತ್ಸಾಹಿಸುವ ಗುಣ ಇಲ್ಲಿನ ಮಣ್ಣಿಗೆ ಮತ್ತು ಜನರಿಗಿದೆ. ಇಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ.  ಸ್ವಾವಲಂಬನೆಯ ಬದುಕಿಗೆ ಶಿಕ್ಷಣ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಜ್ಞಾನಸಿರಿಯನ್ನು ಬಿಡುಗಡೆಗೊಳಿಸಲಾಯಿತು ಮತ್ತು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾದ ಡಾ. ಡಿ.ಜಿ. ಕೃಷ್ಣೇಗೌಡ ಅವರಿಗೆ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಮಿತಿಯ ಸಂಚಾಲಕರು ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಪುರುಷೋತ್ತಮ, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

 

admin
the authoradmin

Leave a Reply