ಕೆ.ಆರ್.ನಗರ(ಜಿಟೆಕ್ ಶಂಕರ್): ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿಗೆ 79 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಹೆಚ್.ಪಿ.ಪ್ರಶಾಂತ್ ಹೇಳಿದರು.
ಸಂಘದ ದಾಸ್ತಾನು ಮಳಿಗೆಯಲ್ಲಿ ಮಂಗಳವಾರ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ಸಂಘದ ವತಿಯಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸುಸ್ತಿ ಆಗದಂತೆ ನೋಡಿಕೊಳ್ಳಬೇಕು. ಷೇರುದಾರ ರೈತ ಸದಸ್ಯರು ಸಂಘದಿಂದ ದೊರೆಯುವ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಸಂಘದ ಏಳಿಗೆಗೆ ಸಹಕಾರ ನೀಡುವಂತೆ ಕೋರಿದರು.
ಸಂಘವು 1129 ಷೇರುದಾರ ಸದಸ್ಯರನ್ನು ಹೊಂದಿದ್ದು, ಸಂಘದ ವತಿಯಿಂದ ಕೆಸಿಸಿ ಸಾಲ 563.96 ಸಾವಿರ, ಮಧ್ಯಮಾವಧಿ ಸಾಲ 52.33, ಎಸ್.ಹೆಚ್.ಜಿ.ಲಿಂಕೇಜ್ ಸಾಲ 79.03 ಸಾವಿರ ಸೇರಿ ವಿವಿಧ ಯೋಜನೆಗಳಿಂದ ಒಟ್ಟು 705.71 ಲಕ್ಷ ರೂಗಳ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು 2026-27ನೇ ಸಾಲಿನಲ್ಲಿ 133 ಮಂದಿಗೆ 148.86 ಕೆಸಿಸಿ ಸಾಲ ವಿತರಣೆ ಮಾಡಲಾಗಿದೆಂದು ಹೇಳಿದರು.
ಸಂಘದ ವತಿಯಿಂದ 59 ಮಹಿಳಾ ಸ್ವ ಸಹಾಯ ಸಂಘಗಳನ್ನು ರಚಿಸಿ ಸಾಲ ವಿತರಿಸಲಾಗಿದ್ದು ಆದರೆ 3 ಮಹಿಳಾ ಸಂಘಗಳು ಸಾಲ ಮರು ಪಾವತಿ ಮಾಡದೆ ಸಂಘಕ್ಕೆ 25 ಸಾವಿರ ರೂಗಳು ನಷ್ಟದಲ್ಲಿದ್ದು ಸಂಘದ ಸಿಇಒ ಆ ಸಂಘಗಳಿಂದ ಮರು ಪಾವತಿಗೆ ಗಮನಹರಿಸಿ ಸಂಘದ ಉದ್ದಾರಕ್ಕೆ ಶ್ರಮಿಸಬೇಕು ಎಂದು ನುಡಿದರು.

2026-27ನೇ ಸಾಲಿನಲ್ಲಿ ಷೇರು ಬಂಡವಾಳ ಮತ್ತು ಠೇವಣಾತಿಗಳನ್ನು ಹೆಚ್ಚಿಸುವುದು, ಕೆಸಿಸಿ ಬೆಳೆ ಸಾಲವನ್ನು 8 ಕೋಟಿ ರೂಗಳಿಗೆ ಹೆಚ್ಚಿಸುವುದರ ಜತೆಗೆ ಗೊಬ್ಬರ, ಬಿತ್ತನೆ ಬೀಜ ವ್ಯಾಪರ ವ್ಯವಹಾರಗಳನ್ನು ಉನ್ನತೀಕರಿಸುವುದಲ್ಲದೆ ಸುಸ್ತಿ ಸಾಲಗಳನ್ನು ವಸೂಲಿಗೆ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ನೂತನ ಸಂಘದ ಕಟ್ಟಕ್ಕಾಗಿ ಎಂಡಿಸಿಸಿ ಬ್ಯಾಂಕ್ ನಿಂದ 16 ಲಕ್ಷ ಸಾಲ ಮಾಡಿ ನಿರ್ಮಾಣ ಮಾಡಿರುವುದರ ಜತೆಗೆ 10 ಲಕ್ಷ ಸಾಲ ತೀರಿಸಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್ ಪ್ರಸ್ತುತ ವಾರ್ಷಿಕ ಮಹಾ ಸಭೆ ಕೊನೆಯ ಸಭೆಯಾಗಿದ್ದು ಮುಂದಿನ ವಾರ್ಷಿಕ ಸಭೆಯೊಳಗೆ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತದೆ ಎಂದರು.
ಉಪಾಧ್ಯಕ್ಷ ಸೀನಯ್ಯ, ನಿರ್ದೇಶಕರಾದ ಎಂ.ಎಸ್.ಅನಂತ, ದಾಸೇಗೌಡ, ಸುಬ್ಬೇಗೌಡ, ಮಂಜುನಾಥ್, ಕುಚೇಲ, ಹೆಚ್.ಆರ್.ಗಿರೀಶ್, ಹೆಚ್.ಎಸ್.ಮಂಜುನಾಥ್, ಪಿ.ಎಸ್.ದೇವರಾಜು, ಸಿದ್ದಮ್ಮ, ರತ್ನಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಟಿ.ಉಮೇಶ್, ಸಂಘದ ಸಿಇಒ ಬಿ.ಎಸ್.ಜಯರಾಜ, ಸಹಾಯಕ ಹೆಚ್.ಸಿ.ಉಮೇಶ್, ಗುಮಾಸ್ತೆ ಕೆ.ಆರ್.ಸೌಮ್ಯ ಸೇರಿದಂತೆ ಷೇರುದಾರ ಸದಸ್ಯರು ಹಾಜರಿದ್ದರು.








